- 58% ಮಹಿಳೆಯರ ಮೇಲೆ ದೌರ್ಜನ್ಯ
- 82ʼ9% ಪತಿಯಿಂದ ದೌರ್ಜನ್ಯ
- ಕರ್ನಾಟಕದಲ್ಲಿ ಮಹಿಳೆಯರು ಸೇಫ್ ಇಲ್ಲ ಎಂದ ವರದಿ
ಬೆಂಗಳೂರು: ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ಕರ್ನಾಟಕದಲ್ಲೇ ಹೆಚ್ಚು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಕೇಂದ್ರ ಸರ್ಕಾರವು 2019-21ರ ಅವಧಿಯಲ್ಲಿ ನಡೆಸಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ, ರಾಜ್ಯದ ಶೇ.58ರಷ್ಟು ವಿವಾಹಿತ ಮಹಿಳೆಯರು(18-49ರ ವಯೋಮಾನ) ತಮ್ಮ ಮೇಲೆ ಪತಿ ಯಿಂದ ದೈಹಿಕ, ಭಾವನಾತ್ಮಕ ಹಾಗೂ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿವೆ ಎಂದು ಹೇಳಿಕೊಂಡಿದ್ದಾರೆ. ಇನ್ನು ಪತಿಗೆ ಹೆದರಲ್ಲ ಎಂದು ಹೇಳಿಕೊಳ್ಳುವ ಮಹಿಳೆಯರು ಸಹ ಸಂಗಾತಿ ನೀಡುವ ಹಿಂಸೆಯನ್ನು ಅನುಭವಿಸುತ್ತಾರೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.
ಈ ಸಮೀಕ್ಷೆ ನೀಡಿರುವ ಮಾಹಿತಿಯ ಪ್ರಕಾರ, ಶೇ.48ರಷ್ಟು ಮಹಿಳೆಯರು ತಮ್ಮ ಗಂಡನಿಂದ ಹಿಂಸೆಗೆ ಒಳಗಾಗುತ್ತಿದ್ದಾರಂತೆ. ಹಲವಾರು ಮಹಿಳೆಯರನ್ನು ಸಮೀಕ್ಷೆಗೆ ಒಳಪಡಿಸಿದಾಗ ಈ ವಿಷಯ ಬಹಿರಂಗಗೊಂಡಿದೆ ಎಂದು ವರದಿ ಹೇಳಿದೆ.
ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು ತಮ್ಮ ಪತಿಯಿಂದ ಆಗುತ್ತಿರುವ ದೈಹಿಕ, ಲೈಂಗಿಕ ಮತ್ತು ಭಾವನಾತ್ಮವಾಗಿ ಕಿರುಕುಳಗಳ ಬಗ್ಗೆ ಹೇಳಿಕೊಂಡಿದ್ದಾರೆ. ಮದುವೆ ನಂತರದ ಆರಂಭದ ದಿನಗಳಲ್ಲಿಯೇ ಹಿಂಸೆ ಮತ್ತು ಕಿರುಕುಳ ನೀಡಲು ಪ್ರಾರಂಭವಾಗಿರುವ ಕುರಿತು ಈ ಮಹಿಳೆಯರು ಹೇಳಿಕೊಂಡಿದ್ದಾರೆ. ಇವುಗಳ ಆಧಾರದ ಮೇಲೆ ತಾಳೆ ಹಾಕಿದಾಗ ಕರ್ನಾಟಕ ಮೊದಲ ಸ್ಥಾನದಲ್ಲಿ ಇರುವುದು ತಿಳಿದುಬಂದಿದೆ.
ಇದನ್ನೂ ಓದಿ : ಮಹಿಳೆ: ನೆತ್ತಿಯ ಮೇಲೆ ಎಷ್ಟೊಂದು ನಿರ್ಬಂಧಗಳು
ಕರ್ನಾಟಕ ನಂ.1 ಕುಖ್ಯಾತಿ ಗಳಿಸಿದ್ದರೆ, ಎರಡನೇ ಸ್ಥಾನದಲ್ಲಿ ಬಿಹಾರ ಇದೆ. ಕರ್ನಾಟಕದಲ್ಲಿ ಶೇ.48ರಷ್ಟು ಮಹಿಳೆಯರು ಗಂಡನಿಂದ ಹಿಂಸೆ ಅನುಭವಿಸುತ್ತಿದ್ದರೆ, ಎರಡನೆಯ ಸ್ಥಾನದಲ್ಲಿ ಇರುವ ಇದರ ಸಂಖ್ಯೆ ಶೇ.43. ಲಕ್ಷದ್ವೀಪ ಕೊನೆಯ ಸ್ಥಾನದಲ್ಲಿದೆ. ಇಲ್ಲಿ ಅತಿ ಕಡಿಮೆ ವೈವಾಹಿಕ ಹಿಂಸಾಚಾರಗಳು ನಡೆಯುತ್ತಿವೆ ಎಂದು ಸಮೀಕ್ಷೆ ಹೇಳಿದೆ.
ಯಾವ ರೀತಿ ಹಲ್ಲೆ ನಡೆಯುತ್ತೆ? ಶೇ.22ರಷ್ಟು ಮಹಿಳೆಯರು ಮೂಗಿನ ಏಟುಗಳು, ಕಡಿತ ಸೇರಿದಂತೆ ಸಣ್ಣ ಪ್ರಮಾಣದ ನೋವುಗಳ ಬಗ್ಗೆ ಹೇಳಿಕೊಂಡಿದ್‌ದರೆ, ಶೇ.7ರಷ್ಟು ಮಹಿಳೆಯರು ಕಣ್ಣಿನ ಗಾಯ, ಉಳುಕು ಬಗ್ಗೆ ಹೇಳಿದ್ದಾರೆ. ಶೇ.6ರಷ್ಟು ಮಹಿಳೆಯರು ಆಳವಾದ ಗಾಯ, ಮೂಳೆ ಮುರಿತ ಮತ್ತು ಸುಟ್ಟ ಗಾಯಗಳಾಗಿರುವ ಬಗ್ಗೆ ನೋವು ಹಂಚಿಕೊಂಡಿದ್ದಾರೆ. ಶೇ.3ರಷ್ಟು ಮಹಿಳೆಯರು ಕೇವಲ ಸುಟ್ಟ ಗಾಯದ ಕಿರುಕುಳ ಬಗ್ಗೆ ಹೇಳಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ರೀತಿಯ ದೌರ್ಜನ್ಯಕ್ಕೆ ತಾವು ಒಳಗಾದಾಗ ಯಾರ ನೆರವನ್ನು ಪಡೆಯುತ್ತೇವೆ ಎಂಬ ಬಗ್ಗೆ ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ ಮಹಿಳೆಯರು ಹೇಳಿಕೊಂಡಿದ್ದಾರೆ. ಅವರ ಪೈಕಿ ಶೇ.58ರಷ್ಟು ಮಹಿಳೆಯರು ತವರು ಮನೆಯಿಂದ, ಶೇ.27ರಷ್ಟು ಮಂದಿ ಪತಿಯ ಕುಟುಂಬಸ್ಥರು, ಶೇ.18ರಷ್ಟು ಮಹಿಳೆಯರು ಸ್ನೇಹಿತರ ಸಹಾಯವನ್ನು ಪಡೆದುಕೊಳ್ಳುತ್ತಾರೆ. ಶೇ.9ರಷ್ಟು ಮಹಿಳೆಯರು ಇತರ ಸಂಘ ಮತ್ತು ಸಂಸ್ಥೆಗಳ ಸಹಾಯ ಕೇಳುವುದು ಬೆಳಕಿಗೆ ಬಂದಿದೆ.
ಪತಿ ಮಾತ್ರವಲ್ಲದೇ ತಮ್ಮ ಗೆಳೆಯನಿಂದಲೂ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಬಗ್ಗೆ ಸ್ತ್ರೀಯರು ಹೇಳಿಕೊಂಡಿದ್ದಾರೆ. ವಿವಾಹಿತರ ಪೈಕಿ ಶೇ.82.9ರಷ್ಟು ಪತಿಯಿಂದ ದೌರ್ಜನ್ಯಕ್ಕೆ ಒಳಗಾದರೆ, ಶೇ. 8.8ರಷ್ಟು ಮಾಜಿ ಪತಿ ಅಥವಾ ಸಂಗಾತಿ ಮತ್ತು ಶೇ.0.2ರಷ್ಟು ಮಹಿಳೆಯರು ಸ್ನೇಹಿತನಿಂದ ಹಾಗೂ ಶೇ. 0.1ರಷ್ಟು ಮಹಿಳೆಯರು ಮಾಜಿ ಗೆಳೆಯನಿಂದಲೂ ಹಿಂಸೆ ಅನುಭವಿಸಿರುವ ಕುರಿತು ದೂರುಗಳು ದಾಖಲಾಗಿವೆ.