ನಾಟಕ: ಕೋವಿಗೊಂದು ಕನ್ನಡಕ
ಪ್ರದರ್ಶನ: 11 ಮೇ 2022 – ರಂಗ ಶಂಕರ – ಸಂಜೆ 7.30ಕ್ಕೆ
ಮೂಲ: ಸ್ಲಾವೋಮಿರ್ ಮ್ರೋಜೆ಼ಕ್ ರ ‘ಚಾರ್ಲಿ’
ರೂಪಾಂತರ ಮತ್ತು ನಿರ್ದೇಶನ: ವೆಂಕಟೇಶ್ ಪ್ರಸಾದ್
ಪ್ರಸ್ತುತಿ: ಬೆಂಗಳೂರು ಥಿಯೇಟರ್ ಕಲೆಕ್ಟಿವ್
ಕೋವಿ ಹಿಡಿದು ತನ್ನ ಶತೃವನ್ನು ಮುಗಿಸಲು ಹೊರಟ ಮುದುಕನೊಬ್ಬನಿಗೆ ಕಣ್ಣಿನ ದೃಷ್ಟಿಯೇ ಸರಿಯಿಲ್ಲ. ಶತೃವನ್ನು ಮುಗಿಸಲು ದೃಷ್ಟಿ ಸರಿಯಾಗಬೇಕು, ಹಾಗಾಗಿ ಆತನಿಗೊಂದು ಕನ್ನಡಕ ಬೇಕು. ಮೊಮ್ಮಗನೊಂದಿಗೆ ಕಣ್ಣಿನ ವೈದ್ಯನ ಬಳಿ ಬರುವ ಮುದುಕ ತನ್ನ ದೃಷ್ಟಿ ಸರಿಪಡಿಸಿಕೊಂಡನೇ? ನಿಜಕ್ಕೂ ಆತನ ಸಮಸ್ಯೆ ಕನ್ನಡಕದ್ದೇ? ಕನ್ನಡಕ ಆತನಿಗೆ ಬೇಕಿತ್ತೇ, ಆತನ ಶತೃವನ್ನು ಮುಗಿಸಲು ಬೇಕಾದ ಕೋವಿಗೇ ಕನ್ನಡಕ ಬೇಕಿತ್ತೇ? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವೇ ‘ಕೋವಿಗೊಂದು ಕನ್ನಡಕ’!
ಸ್ಲಾವೋಮೀರ್ ಮ್ರೊಝೆಕ್ ರ ‘ಚಾರ್ಲಿ’ ಒಂದು ಅಸಂಗತ, ವಿಡಂಬನಾತ್ಮಕ ನಾಟಕ. ಕಣ್ಣಿನ ದೃಷ್ಟಿ ಸರಿಯಿಲ್ಲದ ಮುದುಕನೊಬ್ಬ ತನ್ನ ಶತ್ರುವನ್ನು ಮುಗಿಸಲು ಕೋವಿ ಹಿಡಿದು ಹೋಗುವುದೇ ಒಂದು ರೂಪಕ. ತನ್ನ ಶತ್ರು ಯಾರು ಎನ್ನುವುದೇ ಗೊತ್ತಿಲ್ಲದೆಯೇ ಒಂದು ಅಮೂರ್ತ, ಕಾಲ್ಪನಿಕ ಶತ್ರುವನ್ನು ತಲೆಯಲ್ಲಿ ತುಂಬಿಕೊಂಡು ಅವರನ್ನು ಮುಗಿಸಬೇಕು ಎಂದು ಹೊರಡುವುದು ಜಗತ್ತಿನ ಹಲವಾರು ದೇಶಗಳಲ್ಲಿ ಕಂಡುಬಂದ ಸಂಗತಿ. ಮೂಲ ಕೃತಿ 1962ರಲ್ಲಿ ಬಂದಿತ್ತು, ಈ ನಾಟಕ ಓದಿದಾಗ ಹಲವು ಆಯಾಮಗಳಲ್ಲಿ ನಮ್ಮ ಸಮಾಜಕ್ಕೂ ಈ ನಾಟಕ ಹೊಂದಬಹುದೆಂದು ನಾನು ಕೈಗೆತ್ತಿಕೊಂಡೆ ಎನ್ನುತ್ತಾರೆ ವೆಂಕಟೇಶ್ ಪ್ರಸಾದ್.
ಮೂರೇ ಜನ ಪಾತ್ರಧಾರಿಗಳ ಕೋವಿಗೊಂಡು ಕನ್ನಡಕ ನಾಟಕವನ್ನು ಕೇವಲ ಭಾಷಾಂತರಿಸದೇ ಅದನ್ನು ಇಲ್ಲಿಗೆ ಹೊಂದುವ ಹಾಗೆ ರೂಪಾಂತರಿಸಲಾಗಿದೆ. ಹಲವು ಭಿನ್ನ ಸಂಸ್ಕೃತಿಗಳು, ಭಾಷೆಗಳು, ವಿಚಾರಗಳ ಜೊತೆ ನಾವು ಒಂದೇ ಎಂಬ ಸಾಮರಸ್ಯದಲ್ಲಿ ಬದುಕಬಹುದೇ ಅಥವಾ ನಾವು ಮತ್ತೆ ಅವರು ಎಂಬ ವೈರುಧ್ಯಗಳೇ ಪ್ರಧಾನವಾಗಬೇಕೆ ಎಂಬ ಪ್ರಶ್ನೆಯನ್ನು ನಾಟಕ ಹುಟ್ಟಿಸಲಿ.
ನಾಟಕದಲ್ಲಿ ಹಲವು ಪದರಗಳಿವೆ, ಜೊತೆಗೆ ವಿಡಂಬನೆಯ ಹಾಸ್ಯವೂ ಇದೆ. ಮನರಂಜನೆಯನ್ನು ಬಯಸಿ ಬಂದವರಿಗೆ ಮನರಂಜನೆ, ವಿಚಾರಗಳನ್ನು ಬಯಸಿ ಬಂದವರಿಗೆ ವಿಚಾರಗಳು ಸಿಗಬಹುದೆಂಬ ನಿರೀಕ್ಷೆ ನಾಟಕ ತಂಡದವರದು.
ರಂಗ ಶಾಸ್ತ್ರ: ನಿಶಾ ಅಬ್ದುಲ್ಲಾ
ರಂಗ ವಿನ್ಯಾಸ: ಶ್ರೀಧರ್ ಮೂರ್ತಿ
ಸಂಗೀತ ಸಂಯೋಜನೆ: ಉತ್ಥಾನ ಭಾರಿಘಾಟ್
ಬೆಳಕು ವಿನ್ಯಾಸ: ವಿನಯ್ ಚಂದ್ರ ಪಿ.
ನಿರ್ಮಾಣ ನಿರ್ವಹಣೆ: ಅರುಣ್ ಡಿ.ಟಿ, ಸುಷ್ಮ
ರಂಗದ ಮೇಲೆ: ವಿಜಯ್ ಕುಲ್ಕರ್ಣಿ, ರಾಗ್ ಅರಸ್, ಸುನಿಲ್ ಕುಮಾರ್ ವಿ.
ಭಿತ್ತಿಪತ್ರ ವಿನ್ಯಾಸ: ಸತೀಶ್ ಗಂಗಯ್ಯ