ಕೋವಿಡ್ ಲಸಿಕೆ: ಸುಪ್ರೀಂ ಕೋರ್ಟ್‌ಗೆ ಕೇಂದ್ರವು ಹೇಳಿದ ಎರಡು ಸುಳ್ಳುಗಳು

ಕೋವಿಡ್‌ ಲಸಿಕೆ ವಿಷಯಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಹಲವು ಗೊಂದಲಗಳು ಮತ್ತು ತಪ್ಪು ಮಾಹಿತಿಗಳು ಹಂಚಿಕೆಯಾಗುತ್ತಿವೆ. ಅಲ್ಲದೆ, ಇತ್ತೀಚಿಗೆ ಸವೋಚ್ಚ ನ್ಯಾಯಾಲಯವು ಕೋವಿಡ್‌ ಲಸಿಕೆಯನ್ನು ಕಡ್ಡಾಯಗೊಳಿಸುವಂತಿಲ್ಲ ಎಂದು ತಿಳಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರವು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಗಳಲ್ಲಿ ಎರಡು ಸುಳ್ಳುಗಳನ್ನು ಹೇಳಿದೆ ಎಂದು ದಿ ವೈರ್‌ ವೆಬ್‌ತಾಣದಲ್ಲಿ ಬನಜೋತ್‌ ಕೌರ್‌ ಸುದೀರ್ಘ ಲೇಖನವನ್ನು ಬರೆದಿದ್ದಾರೆ ಅದರ ಸಂಕ್ಷಿಪ್ತ ಸಾರಾಂಶ ಹೀಗಿವೆ;

ದೇಶದ  ಸರ್ವೋಚ್ಚ ನ್ಯಾಯಾಲಯ ಮೇ 2ರ ಆದೇಶದಲ್ಲಿ ಕೋವಿಡ್ ಲಸಿಕೆಯನ್ನು ಕಡ್ಡಾಯಗೊಳಿಸುವಂತಿಲ್ಲ ಎಂದು ಹೇಳಿದೆ. 115 ಪುಟಗಳ ಆದೇಶದಲ್ಲಿ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರವು ತಿಳಿಸಿದ ಪ್ರಮುಖ ಅಂಶಗಳಲ್ಲಿ ಎರಡು ಸುಳ್ಳುಗಳನ್ನು ಹೇಳಿದೆ ಎಂದು ದಿ ವೈರ್‌ ವೆಬ್‌ ತಾಣ ವರದಿ ಮಾಡಿದೆ.

ಅದನೇನೆಂದರೆ, ಅರ್ಜಿದಾರರಾಗಿದ್ದ ಮಕ್ಕಳ ತಜ್ಞ ಹಾಗೂ ಪ್ರತಿರಕ್ಷಣೆ ಕುರಿತು ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪಿನ (ಎನ್‌ಟಿಎಜಿಐ) ಮಾಜಿ ಸದಸ್ಯ ಜಾಕೋಬ್ ಪುಳಿಯೆಲ್ ಅವರು ಇತರ ವಿಷಯಗಳ ಜೊತೆಗೆ,ವಿವಿಧ ಲಸಿಕೆಗಳಿಗೆ ಅನುಮತಿ ನೀಡುವ ಸರಕಾರದ ನಿರ್ಧಾರಗಳು ಪಾರದರ್ಶಕವಾಗಿರಲಿಲ್ಲ ಮತ್ತು ಸಂಬಂಧಿತ ದತ್ತಾಂಶಗಳನ್ನು ಯಾವಾಗಲೂ ಎನ್‌ಟಿಎಜಿಐ ಮುಂದೆ ಇರಿಸಲಾಗಿರಲಿಲ್ಲ ಎಂದು ವಾದಿಸಿದ್ದರು.

ಎಲ್ಲ ಲಸಿಕೆಗಳು ಎನ್‌ಟಿಎಜಿಐ ಅನುಮತಿಯನ್ನು ಪಡೆದಿವೆ ಎಂದು ಭಾರತ ಸರಕಾರವು ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು. ಎನ್‌ಟಿಎಜಿಐ ಸಭೆಗಳ ‘ವಿವರವಾದ ’ ನಡಾವಳಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಲಾಗಿದೆ ಎಂದೂ ಕೇಂದ್ರದ ಪ್ರತಿನಿಧಿ ಸರ್ವೋಚ್ಚ ನ್ಯಾಯಾಲಯದಲ್ಲಿ ಹೇಳಿದ್ದರು.

ಎನ್‌ಟಿಎಜಿಐ ಸಭೆಗಳ ಯಾವುದೇ ನಡಾವಳಿಗಳನ್ನು ಉಭಯ ವೆಬ್ ಸೈಟ್‌ಗಳಲ್ಲಿ ಪ್ರಕಟಿಸಿರಲಿಲ್ಲ ಎನ್ನುವುದನ್ನು ದಿ ವೈರ್‌ ಸೈನ್ಸ್‌ ಬಯಲಿಗೆಳೆದಿದೆ. ಎರಡನೆಯದಾಗಿ ಎನ್‌ಟಿಎಜಿಐನ ಮೂವರು ಸದಸ್ಯರ ಅತ್ಯುನ್ನತ ಸಮಿತಿಯು ಮಕ್ಕಳಲ್ಲಿ ಕೊರ್ಬೆವ್ಯಾಕ್ಸ್ ಬಳಕೆಗೆ ಅನುಮತಿ ನೀಡಿರಲಿಲ್ಲ ಎನ್ನುವುದನ್ನು ಮುಳಿಯಿಲ್ ಮತ್ತು ಅವರ ಸಹಸದಸ್ಯರೋರ್ವರು ದೃಢಪಡಿಸಿದ್ದರು.

ಎನ್‌ಟಿಎಜಿಐ ಕೊರ್ಬೆವ್ಯಾಕ್ಸ್ ಬಳಕೆಗೆ ಶಿಫಾರಸು ಮಾಡಿತ್ತು ಎಂಬ ಸರಕಾರದ ಹೇಳಿಕೆಯನ್ನು ನಂಬಿದ್ದ ಸರ್ವೋಚ್ಚ ನ್ಯಾಯಾಲಯವು ದಿ ವೈರ್‌ ಸೈನ್ಸ್‌ ನ ವರದಿಯನ್ನು ದಾಖಲಿಸಿಕೊಳ್ಳಲು ನಿರಾಕರಿಸಿತ್ತು. ಪ್ರತಿರಕ್ಷಣೆ ನಂತರದ ಪ್ರತಿಕೂಲ ಘಟನೆಗಳ (ಎಇಎಫ್‌ಐ) ಮೇಲೆ ನಿಗಾಯಿರಿಸುವ ವ್ಯವಸ್ಥೆಯು ಭಾರತದಲ್ಲಿ ಕೋವಿಡ್ ಪ್ರಕರಣಗಳಲ್ಲಿ ನಿಷ್ಕ್ರಿಯವಾಗಿತ್ತು ಎಂದೂ ವಾದಿಸಿದ್ದ ಪುಳಿಯೆಲ್, ಲಸಿಕೆ ನೀಡಿಕೆಯ ಬಳಿಕ ಸಾವುಗಳ ಕಾರಣಗಳನ್ನು ತಿಳಿಯಲು ನಡೆಸಲಾಗಿದ್ದ ತನಿಖೆಯು ಅಸ್ಪಷ್ಟವಾಗಿರುವುದರಿಂದ ಈ ವ್ಯವಸ್ಥೆಯು ಅಪಾರದರ್ಶಕವಾಗಿದೆ ಎಂದು ಹೇಳಿದ್ದರು. ಆದರೆ ನ್ಯಾಯಾಲಯವು ಈ ವಾದವನ್ನು ಪುರಸ್ಕರಿಸಿರಲಿಲ್ಲ.

ಸರಕಾರವು ತನ್ನ ಉತ್ತರದಲ್ಲಿ 2021, ನವೆಂಬರ್‌ 24ರವರೆಗೆ 119.38 ಕೋಟಿ ಡೋಸ್ ಲಸಿಕೆ ನೀಡಲಾಗಿದ್ದು, 2,116 ತೀವ್ರ ಸ್ವರೂಪದ ಅಡ್ಡ ಪರಿಣಾಮಗಳು ದಾಖಲಾಗಿದ್ದವು ಎಂದು ತಿಳಿಸಿತ್ತು. ನ್ಯಾಯಾಲಯದ ಆದೇಶದಂತೆ ಕೇಂದ್ರ ಆರೋಗ್ಯ ಸಚಿವಾಲಯದ ವೆಬ್‌ಸೈಟ್ ಅಡ್ಡ ಪರಿಣಾಮಗಳ ಪ್ರಕರಣದಲ್ಲಿ ಸಾವುಗಳ ವೌಲ್ಯಮಾಪನ ಫಲಿತಾಂಶಗಳನ್ನು ಒಳಗೊಂಡಿದೆ ಮತ್ತು ಸಾರ್ವಜನಿಕರು ಅಡ್ಡಪರಿಣಾಮಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಅಲ್ಲಿಂದ ಪಡೆದುಕೊಳ್ಳಬಹುದು ಎಂದೂ ಅದು ಹೇಳಿತ್ತು.

ಇದು ಸತ್ಯವಲ್ಲ. ಮೇ 5ರಂದು (ಇಂದು) ಬೆಳಿಗ್ಗೆ 7:30ಕ್ಕೆ ಇದ್ದಂತೆ ಕೇಂದ್ರ ಆರೋಗ್ಯ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಇಂತಹ ಯಾವುದೇ ಮಾಹಿತಿ ಇರಲಿಲ್ಲ.

ನ್ಯಾಯಾಲಯದಲ್ಲಿ ಸಲ್ಲಿಕೆಯಾದ ಪ್ರಮಾಣಪತ್ರಗಳಲ್ಲಿಯ ತಪ್ಪು ಮಾಹಿತಿಯು ಅದರ ದಾರಿಯನ್ನು ತಪ್ಪಿಸುತ್ತದೆ ಮತ್ತು ಅದರಲ್ಲಿ ಭಾಗಿಯಾಗಿರುವವರನ್ನು ಪ್ರಶ್ನಿಸುವುದನ್ನು ತಡೆಯುತ್ತದೆ ಮತ್ತು ಬಹುಶಃ ಸರಿಪಡಿಸುವ ಕ್ರಮವನ್ನು ಕೈಗೊಳ್ಳುವುದನ್ನು ಕೂಡ.

Donate Janashakthi Media

Leave a Reply

Your email address will not be published. Required fields are marked *