ಹೈದರಾಬಾದ್: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿ ಯುವಕರ ನಡುವೆ ಮುಖಾಮುಖಿ ಸಂವಾದಕ್ಕೆ ಅವಕಾಶ ನೀಡುವಂತೆ ಉಪಕುಲಪತಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಉಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ತೆಲಂಗಾಣ ಹೈಕೋರ್ಟ್ ವಜಾಗೊಳಿಸಿದೆ.
ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮೇ 7 ರಂದು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲು ಕಾರ್ಯಕ್ರಮವೊಂದು ಆಯೋಜಿಸಲಾಗಿತ್ತು.
ಅರ್ಜಿದಾರರ ಪ್ರಕಾರ ರಾಹುಲ್ ಗಾಂಧಿ ಮತ್ತು ವಿದ್ಯಾರ್ಥಿಗಳು ಮತ್ತು ನಿರುದ್ಯೋಗಿ ಯುವಕರ ನಡುವಿನ ಸಂವಾದ ರಾಜಕೀಯ ಲೇಪನವಿಲ್ಲದ ಕೇವಲ ಶೈಕ್ಷಣಿಕ ಚಟುವಟಿಕೆಗಳ ಸಂವಾದ ಎಂದು ಹೇಳಲಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.
ವಿಶ್ವವಿದ್ಯಾಲಯ ಆವರಣವನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳುವಂತಿಲ್ಲ. ರಾಜಕೀಯ ಘಟನೆಗಳಿಗೆ ಅನುಮತಿ ನೀಡುವುದು ವಿಶ್ವವಿದ್ಯಾನಿಲಯದ ಕಾರ್ಯಕಾರಿ ಮಂಡಳಿಯ 1591ಎಚ್ ಸಭೆಯ ನಿರ್ಣಯ ಸಂಖ್ಯೆ 6 ರ ಉಲ್ಲಂಘನೆಯಾಗಿದೆ ಎಂದು ತಿಳಿಸಿದೆ.
ಭಾರತೀಯ ಸಂವಿಧಾನದ 14ನೇ ವಿಧಿಯು ಧನಾತ್ಮಕ ಸಮಾನತೆಯೇ ಹೊರತು ನಕಾರಾತ್ಮಕ ಸಮಾನತೆಯಲ್ಲ. ಪ್ರತಿವಾದಿಗಳು ಇತರ ಚಟುವಟಿಕೆಗಳಿಗೆ ಅನುಮತಿ ನೀಡಿದ್ದಾರೆ ಎಂದು ಹೇಳಿರುವುದರಿಂದ, ಈ ನ್ಯಾಯಾಲಯವು ತನ್ನ ಕಾರ್ಯಕಾರಿ ಮಂಡಳಿಯ ನಿರ್ಣಯವನ್ನು ಉಲ್ಲಂಘಿಸಿ ಉದ್ದೇಶಿತ ಸಭೆಗೆ ಅನುಮತಿ ನೀಡುವುದಿಲ್ಲ ಎಂದು ನ್ಯಾಯಾಲಯದ ಹೇಳಿದೆ.