ನವದೆಹಲಿ: ಕಳೆದ ತಿಂಗಳು ಕೋಮು ಗಲಭೆ ನಡೆದ ಜಹಾಂಗೀರ್ಪುರದಲ್ಲಿ ಇಂದು(ಮೇ 3) ಹಿಂದೂ–ಮುಸ್ಲಿಮರು ಒಟ್ಟಾಗಿ ಈದ್ ಆಚರಿಸುವ ಮೂಲಕ ಶಾಂತಿ ಮತ್ತು ಸಾಮರಸ್ಯದ ಸಂದೇಶ ಸಾರಿದರು. ಎರಡೂ ಧರ್ಮದ ಜನರು ಪರಸ್ಪರ ಸಿಹಿ ಹಂಚಿ, ಹಬ್ಬದ ಶುಭಾಶಯ ಕೋರಿದರು. ಭದ್ರತೆಯಲ್ಲಿ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿಗಳಿಗೂ ಸ್ಥಳೀಯರು ಸಿಹಿ ವಿತರಿಸಿದರು.
‘ಕಳೆದ ತಿಂಗಳು ಜಹಾಂಗೀರಪುರದ ಜನತೆ ಪಾಲಿಗೆ ಕಷ್ಟಕರವಾಗಿತ್ತು. ಈದ್ ಉಲ್ ಫಿತ್ರ್ ಸಂದರ್ಭದಲ್ಲಿ ಕುಶಲ್ ಚೌಕದಲ್ಲಿ ಎರಡೂ ಧರ್ಮದವರು ಸೇರಿ ಹಬ್ಬದ ಸಂಭ್ರಮ ಹಂಚಿಕೊಂಡಿದ್ದೇವೆ. ಈ ಮೂಲಕ ಶಾಂತಿ ಮತ್ತು ಸಾಮರಸ್ಯದ ಸಂದೇಶ ಸಾರಿದ್ದೇವೆ. ಇದು ಜಹಾಂಗೀರಪುರದ ಜನರು ಹೇಗೆ ಭಾವೈಕ್ಯತೆಯಿಂದ ಬದುಕುತ್ತಾರೆ ಮತ್ತು ಅವರವರ ಧರ್ಮವನ್ನು ಹೇಗೆ ಗೌರವಿಸುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಮುಸ್ಲಿಂ ಮುಖಂಡ ತಬ್ರೇಜ್ ಖಾನ್ ಹಾಗೂ ಹಿಂದೂ ಮುಖಂಡರಾದ ಇಂದ್ರಾಮಣಿ ತಿವಾರಿ ಹೇಳಿದರು.
ಈ ಪ್ರದೇಶದ ಜನ ಜೀವನ ಹಿಂದಿನ ಸ್ಥಿತಿಗೆ ಮರಳುವ ನಿರೀಕ್ಷೆ ಇದೆ ಎಂದು ತಬ್ರೇಜ್ ತಿಳಿಸಿದರು. ಈ ಪ್ರದೇಶಕ್ಕೆ ಸೂಕ್ತ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು.
ಕುಶಲ್ ಚೌಕ್ನಲ್ಲಿ ಮಸೀದಿ ಇರುವ ಕಡೆ ಹೊರತುಪಡಿಸಿ ಉಳಿದೆಡೆ ಮಳಿಗೆಗಳನ್ನು ಮತ್ತೆ ತೆರೆಯಲಾಗಿದೆ. ವ್ಯಾಪಾರಸ್ಥರು ಮತ್ತು ಗ್ರಾಹಕರು ವ್ಯಾಪಾರಕ್ಕೆ ಮರಳಿದ್ದಾರೆ.
ಕಳೆದ ಏಪ್ರಿಲ್ನಲ್ಲಿ ಹನುಮ ಜಯಂತಿ ಪ್ರಯುಕ್ತ ನಡೆದ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಘರ್ಷಣೆ ಸಂಭವಿಸಿತ್ತು. ಘಟನೆಯಲ್ಲಿ ಎಂಟು ಪೊಲೀಸರು ಮತ್ತು ಹಲವು ಸ್ಥಳೀಯ ನಿವಾಸಿಗಳು ಗಾಯಗೊಂಡಿದ್ದರು.