ಪ್ರೊ. ಸಿ.ಪಿ. ಚಂದ್ರಶೇಖರ್
ಕೃಪೆ: ಫ್ರಂಟ್ಲೈನ್ ಪಾಕ್ಷಿಕ – ಅನು: ಕೆ.ಎಂ. ನಾಗರಾಜ್
ರಾಜಪಕ್ಸೆ ಸರ್ಕಾರವು ಈಗ ಐಎಂಎಫ್ನೊಂದಿಗೆ ಮುಕ್ತ ಮಾತುಕತೆಗೆ ಮುಂದಾಗಿದೆ. ಒಂದು ವೇಳೆ ಐಎಂಎಫ್ನೊಂದಿಗೆ ಸಾಲದ ಒಪ್ಪಂದ ಮಾಡಿಕೊಂಡರೆ, ಜನ ಸಾಮಾನ್ಯರ ಮೇಲೆ ಹೆಚ್ಚು ಹೆಚ್ಚು ತೆರಿಗೆಗಳನ್ನು ಹೇರುವ ಮತ್ತು ಅವರಿಗೆ ದೊರಕಿಸಿದ ಸಬ್ಸಿಡಿಗಳನ್ನು ಕಡಿತಗೊಳಿಸುವ ಕ್ರಮಗಳನ್ನು, ಅಂದರೆ, ಜನರ ಸಂಕಷ್ಟಗಳನ್ನು ತೀವ್ರಗೊಳಿಸುವ ಕ್ರಮಗಳನ್ನು, ಅಳವಡಿಸಿಕೊಳ್ಳುವಂತೆ ಐಎಂಎಫ್ ಒತ್ತಾಯಿಸುವ ಸಾಧ್ಯತೆಯಿದೆ. ಸಮಸ್ಯೆಯೆಂದರೆ, ಈ ಎಲ್ಲ ಬಿಕ್ಕಟ್ಟುಗಳಿಂದ ಉಂಟಾದ ಅಡ್ಡ ಪರಿಣಾಮಗಳನ್ನು ತಗ್ಗಿಸುವುದು ಶ್ರೀಲಂಕಾದ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ವಿದೇಶಿ ವಿನಿಮಯ ಬಿಕ್ಕಟ್ಟೇ ಶ್ರೀಲಂಕಾ ಸರ್ಕಾರದ ಸಮಸ್ಯೆಯ ಕೇಂದ್ರಬಿಂದುವಾಗಿದೆ. ನೆರೆಯ ಪ್ರತಿಸ್ಪರ್ಧಿ ದೇಶಗಳಾದ ಚೀನಾ ಮತ್ತು ಭಾರತ ಮತ್ತು ಉಳಿದ ದೇಶಗಳು ತಮ್ಮ ತಮ್ಮ ಸಾಲಗಳ ಅವಧಿಯನ್ನು ವಿಸ್ತರಿಸದಿದ್ದರೆ ಮತ್ತು ತಮ್ಮ ನೆರವನ್ನು ಹೆಚ್ಚಿಸದಿದ್ದರೆ, ಶ್ರೀಲಂಕಾದ ಸಾರ್ವಭೌಮತ್ವವೇ ಹರಾಜಾಗಲಿದೆ.
ನಮ್ಮ ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾದ ಅರ್ಥವ್ಯವಸ್ಥೆಯು ಅವ್ಯವಸ್ಥೆಯತ್ತ ಸಾಗಿದೆ. ಅನೇಕ ಬಿಕ್ಕಟ್ಟುಗಳು ಶ್ರೀಲಂಕಾವನ್ನು ಪೀಡಿಸುತ್ತಿವೆ. ಕೋವಿಡ್-19 ಸಮಯದಲ್ಲಿ ತಲೆದೋರಿದ ವಿದೇಶಿ ವಿನಿಮಯ ಆದಾಯದ ತೀವ್ರ ಕುಸಿತ, ಹೊರ ದೇಶಗಳಿಂದ ಪಡೆದ ಬೃಹತ್ ಸಾಲದ ಕಂತುಗಳನ್ನೂ ಕಟ್ಟಲಾಗದಂತಹ ಆರ್ಥಿಕ ಮುಗ್ಗಟ್ಟು, ಬರಿದಾದ ವಿದೇಶಿ ವಿನಿಮಯ ಮೀಸಲು ಸಂಗ್ರಹ, ಮತ್ತು ಕೊನೆಯದಾಗಿ, ಉಕ್ರೇನ್ ಯುದ್ಧದ ಪರಿಣಾಮಗಳು ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟುಗಳನ್ನು ಉಲ್ಬಣಗೊಳಿಸಿವೆ. ಬಿಕ್ಕಟ್ಟನ್ನು ಉಲ್ಬಣಗೊಳಿಸಿದ ಮತ್ತೊಂದು ಮುಖ್ಯವಾದ ಅಂಶವೆಂದರೆ, ಶ್ರೀಲಂಕಾದ ರೂಪಾಯಿಯ ತೀವ್ರ ಅಪಮೌಲ್ಯ. ಅದೆಷ್ಟು ವೇಗವಾಗಿ ರೂಪಾಯಿ ಅಪಮೌಲ್ಯಗೊಂಡಿತು ಎಂದರೆ, ತಿಂಗಳ ಆರಂಭದಲ್ಲಿ ಒಂದು ಡಾಲರ್ಗೆ 200ರ ಮಟ್ಟದಲ್ಲಿದ್ದ ರೂಪಾಯಿ ಮಾರ್ಚ್ ಅಂತ್ಯದ ವೇಳೆಗೆ 300ಕ್ಕೆ ಕುಸಿದಿತ್ತು.
ಈ ಬಿಕ್ಕಟ್ಟಿನ ತಳದಲ್ಲಿ ಒಂದು ರಾಶಿ ನ್ಯೂನತೆಗಳು ಮತ್ತು ದೌರ್ಬಲ್ಯಗಳು ಇದ್ದವು. ಬೆಳೆಯುತ್ತಾ ಹೋದ ಈ ನ್ಯೂನತೆ-ದೌರ್ಬಲ್ಯಗಳು ಕೊರೊನಾ ಅವಧಿಯಲ್ಲಿ ಉಲ್ಬಣಗೊಂಡವು. ಕೊರೊನಾ ಸಾಂಕ್ರಾಮಿಕವು ಶ್ರೀಲಂಕಾದ ಪ್ರವಾಸೋದ್ಯಮ ಗಳಿಕೆ ಮತ್ತು ಅದರ ರಫ್ತು ಆದಾಯದ ಮೇಲೂ ಪ್ರತಿಕೂಲ ಪರಿಣಾಮ ಬೀರಿತು. ಪ್ರವಾಸೋದ್ಯಮದ ಮೂಲಕ 2018 ರಲ್ಲಿ 4.4 ಬಿಲಿಯನ್ ಡಾಲರ್ ಮತ್ತು 2019 ರಲ್ಲಿ 3.6 ಬಿಲಿಯನ್ ಡಾಲರ್ ಆದಾಯವನ್ನು ಶ್ರೀಲಂಕಾ ಗಳಿಸಿತ್ತು. ಈ ಆದಾಯವು 2020 ರಲ್ಲಿ ಕೇವಲ 682 ಮಿಲಿಯನ್ ಡಾಲರ್ಗಳಿಗೆ ಮತ್ತು 2021 ರಲ್ಲಿ 534 ಮಿಲಿಯನ್ ಡಾಲರ್ಗಳಿಗೆ ಇಳಿದಿತ್ತು. ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ನ ಅಂಕಿ-ಅಂಶಗಳ ಪ್ರಕಾರವೇ, ಅದರ ರಫ್ತು ಆದಾಯವು 2019 ರಲ್ಲಿ 11.9 ಬಿಲಿಯನ್ ಡಾಲರ್ಗಳಿಂದ 2020 ರಲ್ಲಿ 10 ಬಿಲಿಯನ್ ಡಾಲರ್ಗಳಿಗೆ ಇಳಿಯಿತು ಮತ್ತು 2021 ರಲ್ಲಿ 12.5 ಬಿಲಿಯನ್ ಡಾಲರ್ಗಳಿಗೆ ಏರಿತು. ಡಾಲರ್ ಆದಾಯದ ಇಳಿಕೆಯ ಒಟ್ಟು ಪರಿಣಾಮವಾಗಿ ಉಂಟಾದ ವಿದೇಶಿ ವಿನಿಮಯ ಬಿಕ್ಕಟ್ಟು ಶ್ರೀಲಂಕಾವನ್ನು ಬಹಳವಾಗಿ ಬಾಧಿಸುತ್ತಿದೆ. ಅದರ ಬಾಹ್ಯ ಸಾಲವೇ ಸುಮಾರು 51 ಬಿಲಿಯನ್ ಡಾಲರ್ಗಳಷ್ಟು ದೊಡ್ಡದಿದೆ. ಈ ಸಾಲದ ಪೈಕಿ, ಹಿಂದಿನ ಕೆಲವು ವರ್ಷಗಳಲ್ಲಿ ಮಾಡಿದ್ದ ಸಾಲವೇ ಅತಿ ಹೆಚ್ಚಿನ ಭಾಗವಾಗಿದೆ. 2004 ಮತ್ತು 2015 ರ ನಡುವೆ, ಹಿಂದಿನ ಮಹಿಂದಾ ರಾಜಪಕ್ಸೆ ಸರ್ಕಾರವು 14.06 ಬಿಲಿಯನ್ ಡಾಲರ್ ಸಾಲ ಪಡೆದಿತ್ತು. ಈ ಸಾಲಗಳ ಬಾಬ್ತು 2022 ರಲ್ಲಿ ತೀರಿಸಬೇಕಾದ ಮೊತ್ತವೇ 6.9 ಬಿಲಿಯನ್ ಡಾಲರ್ಗಳೆಂದು ಅಂದಾಜು ಮಾಡಲಾಗಿದೆ.
ಡಾಲರ್ ಆದಾಯದ ಇಳಿಕೆಯ ಜೊತೆಯಲ್ಲೇ ಹೊರಗಿನ ಸಾಲದ ಬಡ್ಡಿ ಮತ್ತು ಅಸಲು ತೀರುವಳಿಗಾಗಿ ದೊಡ್ಡ ಮೊತ್ತದ ವಿದೇಶಿ ವಿನಿಮಯವು ಹೊರಹರಿದ ಕಾರಣದಿಂದಾಗಿ, 2021 ರ ಜುಲೈ ಅಂತ್ಯದ ವೇಳೆಗೆ ವಿದೇಶಿ ವಿನಿಮಯ ಮೀಸಲು ಸಂಗ್ರಹವು 2.8 ಬಿಲಿಯನ್ ಡಾಲರ್ಗಳಿಗೆ ಇಳಿದಿತ್ತು. 2022 ವರ್ಷವು ಕೇವಲ 1.6 ಬಿಲಿಯನ್ ಡಾಲರ್ ವಿದೇಶೀ ವಿನಿಮಯ ಸಂಗ್ರಹದೊಂದಿಗೆ ಪ್ರಾರಂಭವಾಯಿತು. ಹಾಗಾಗಿ, ಶ್ರೀಲಂಕಾವು ವಿದೇಶಿ ವಿನಿಮಯದ ಬಿಕ್ಕಟ್ಟಿಗೆ ಒಳಗಾಗಿದೆ. ಪರಿಣಾಮವಾಗಿ, ಶ್ರೀಲಂಕಾದ ರೂಪಾಯಿ ಮೌಲ್ಯವು ಗಮನಾರ್ಹವಾಗಿ ಕುಸಿದಿದೆ.
ಈ ಒಂದು ಅಗಾಧ ಬಿಕ್ಕಟ್ಟಿಗೆ ಉತ್ತರವಾಗಿ, ಹೊರಗಿನ ಸಾಲ ತೀರಿಸುವಲ್ಲಿ ಸೋತಿದೆ ಎಂಬ ಕಳಂಕ ಹೊರಲು ಬಯಸದ ಸರ್ಕಾರವು ಕಳೆದ ಕೆಲವು ವರ್ಷಗಳಲ್ಲಿ ಆಮದುಗಳನ್ನು ಮೊಟಕುಗೊಳಿಸಿತು. ವಿದೇಶಿ ವಿನಿಮಯದ ಹೊರಹರಿವನ್ನು ತಡೆಯುವ ಸಲುವಾಗಿ 2020ರಲ್ಲಿ ಅನೇಕ ವಸ್ತುಗಳ ಮೇಲೆ ಆಮದು ನಿರ್ಬಂಧವನ್ನು ಶ್ರೀಲಂಕಾ ಘೋಷಿಸಿತು. ಮೋಟಾರು ಕಾರುಗಳಿಂದ ಹಿಡಿದು ರಸಗೊಬ್ಬರಗಳ ವರೆಗೆ, ಸಕ್ಕರೆಯಿಂದ ಹಿಡಿದು ಅರಿಶಿನದವರೆಗೆ ಹಲವು ಹತ್ತು ಸರಕುಗಳ ಆಮದನ್ನು ರಾಜಪಕ್ಸೆ ಸರ್ಕಾರವು ನಿರ್ಬಂಧಿಸಿತು. ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಆಮದು ನಿಷೇಧವು ಭಾರೀ ವಿವಾದ-ವಿರೋಧಗಳಿಗೆ ಒಳಗಾಯಿತು. ಗೊಬ್ಬರ ಆಮದು ನಿಷೇಧವನ್ನು, ಸಾವಯವ ಕೃಷಿಯ ಬಗ್ಗೆ ತಮ್ಮ ಸರ್ಕಾರವು ಹೊಂದಿರುವ ಬದ್ಧತೆಯ ಪ್ರತೀಕವೆಂದು ಸಮರ್ಥಿಸಲಾಯಿತು. ಆದರೆ, ವಿದೇಶಿ ವಿನಿಮಯದ ನೈಜ ಕೊರತೆಯಿಂದ ಪ್ರೇರಿತವಾಗಿದ್ದ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳ ಆಮದು ನಿಷೇಧವನ್ನು ನಂತರ ರದ್ದುಪಡಿಸಲಾಯಿತು, ಆದಾಗ್ಯೂ, ಮುಂಬರುವ ದಿನಗಳಲ್ಲಿ ಭತ್ತ ಮತ್ತು ಚಹಾದ ಉತ್ಪಾದನೆ ಇಳಿಕೆಯಾಗುವ ಸಂಭವವಿದೆ.
ತಯಾರಿಕಾ ಯಂತ್ರಗಳಿಂದ ಹಿಡಿದು ದಿನ ನಿತ್ಯದ ಬಳಕೆಯ ವಸ್ತುಗಳ ವರೆಗಿನ ಸರಕು ಸರಂಜಾಮುಗಳ ಪೂರೈಕೆಗಾಗಿ ಆಮದುಗಳನ್ನೇ ಅವಲಂಬಿಸಿದ ಒಂದು ದೇಶದಲ್ಲಿ ಆಮದುಗಳ ಮೇಲೆ ನಿರ್ಬಂಧ ಹೇರಿದ್ದರಿಂದಾಗಿ, ಇಂಧನದ ಪೂರೈಕೆಯಲ್ಲಿ ಕೊರತೆ ಉಂಟಾಯಿತು. ಪೆಟ್ರೋಲ್ ಬಂಕ್ಗಳ ಮುಂದೆ ಉದ್ದನೆಯ ಸರತಿ ಸಾಲುಗಳಲ್ಲಿ ನಿಂತ ವಾಹನ ಚಾಲಕರು ಪೆಟ್ರೋಲ್ಗಾಗಿ ಪರದಾಡುವಂತಾಯಿತು. ವಿದ್ಯುತ್ ಸರಬರಾಜನ್ನು ಕಡಿತಗೊಳಿಸಲಾಯಿತು. ಔಷಧಗಳ ಕೊರತೆಯಿಂದಾಗಿ ರೋಗಿಗಳು ಆತಂಕಕ್ಕೆ ಒಳಗಾದರು ಮತ್ತು ಆಸ್ಪತ್ರೆಗಳು ಅಸಹಾಯಕತೆಗೊಳಗಾದವು. ಹಾಲು, ಆಹಾರ ಮತ್ತು ಅಡುಗೆ ಅನಿಲದ ಕೊರತೆಯಿಂದಾಗಿ ಜನರು ಬಾಯಿ ಬಾಯಿ ಬಡಿದುಕೊಳ್ಳುವಂತಾಯಿತು. ಪ್ರಶ್ನೆ ಪತ್ರಿಕೆಗಳನ್ನು ಮುದ್ರಿಸಲು ಬಿಳಿ ಹಾಳೆಗಳು ಲಭ್ಯವಿಲ್ಲದ ಕಾರಣ ಪರೀಕ್ಷೆಗಳನ್ನು ಮುಂದೂಡಬೇಕಾಯಿತು ಮತ್ತು ಮುದ್ರಣ-ಕಾಗದದ ಕೊರತೆಯಿಂದಾಗಿ ವಾರ್ತಾಪತ್ರಿಕೆಗಳ ಮುದ್ರಣವನ್ನು ಕೈಬಿಡಲಾಯಿತು. ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಆಮದು ನಿಷೇಧದ ಪರಿಣಾಮವಾಗಿ ಕೃಷಿ ಉತ್ಪಾದನೆ ಇಳಿಯಿತು ಮತ್ತು ಆಹಾರ ಧಾನ್ಯಗಳ ಆಮದು ಹೆಚ್ಚಿತು. ದಿನ ನಿತ್ಯದ ಬಳಕೆಯ ವಸ್ತುಗಳ ಅಭಾವದಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಜನರ ಜೀವನವೇ ಅಲ್ಲೋಲ ಕಲ್ಲೋಲವಾಗಿದೆ. ಆಹಾರ ಗಲಭೆಗಳು ಸಂಭವಿಸಿದರೂ ಆಶ್ಚರ್ಯವಿಲ್ಲ ಎಂಬುದಾಗಿ ರಾಜಕೀಯ ವೀಕ್ಷಕರು ಅಭಿಪ್ರಾಯಪಡುತ್ತಾರೆ.
ಈ ಸಮಸ್ಯೆಗಳು ಒಂದನ್ನೊಂದು ಪೋಷಿಸಿ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿವೆ. ಸತತ ಕುಸಿತಕ್ಕೊಳಗಾದ ರೂಪಾಯಿ-ಮೌಲ್ಯವು ಆಮದು ವೆಚ್ಚವನ್ನು ಹೆಚ್ಚಿಸಿತು ಮತ್ತು ಹಣದುಬ್ಬರವನ್ನು ಹದಗೆಡಿಸಿತು. ವಿದೇಶಿ ವಿನಿಮಯ ಮೀಸಲು ಸಂಗ್ರಹವೂ ಬತ್ತಿಹೋಯಿತು. ಏಕೆಂದರೆ. ರಫ್ತುದಾರರು ಹೊರ ದೇಶಗಳಿಂದ ತಮಗೆ ಬರಬೇಕಾದ ಹಣವನ್ನು ತರಿಸಿಕೊಳ್ಳಲು ತಡ ಮಾಡುತ್ತಾರೆ. ರೂಪಾಯಿ ಮೌಲ್ಯವು ಸತತವಾಗಿ ಕುಸಿಯುತ್ತಿರುವ ಸಂದರ್ಭದಲ್ಲಿ ಹಣ ತರಿಸಿಕೊಳ್ಳುವುದು ತಡವಾದಷ್ಟೂ ರಫ್ತುದಾರರಿಗೆ ಲಾಭವಿದೆ. ವಿದೇಶಗಳಲ್ಲಿ ದುಡಿಯುತ್ತಿರುವ ಶ್ರೀಲಂಕಾ ಮೂಲದ ಕೆಲಸಗಾರರು ಸ್ವದೇಶದಲ್ಲಿರುವ ತಮ್ಮ ಬಂಧುಗಳಿಗೆ ಹಣ ಕಳುಹಿಸಲು ಅಧಿಕೃತ ಮಾರ್ಗದ ಬದಲಾಗಿ, ಅನೌಪಚಾರಿಕ ಹಣ ವರ್ಗಾವಣೆಯ ಮಾರ್ಗಗಳನ್ನು ಬಳಸಿಕೊಂಡು ‘ಕಪ್ಪು ಮಾರುಕಟ್ಟೆ’ಯ ಲಾಭ ಪಡೆಯಲು ಬಯಸುತ್ತಾರೆ. ಲಭ್ಯವಿರುವ ವಿದೇಶಿ ವಿನಿಮಯವನ್ನು ಬಳಸಿಕೊಳ್ಳುವ ಪ್ರಶ್ನೆ ಬಂದಾಗ, ವಿದೇಶಿ ಸಾಲ ಮರುಪಾವತಿಗಿಂತ ಹೆಚ್ಚಿನ ಆದ್ಯತೆಯನ್ನು ಕೊರತೆಗಳನ್ನು ನಿವಾರಿಸುವ ಆಮದುಗಳಿಗಾಗಿ ತಿರುಗಿಸಲಾಗುತ್ತಿದೆ. ಪರಿಸ್ಥಿತಿ ಎಷ್ಟು ಗಂಭೀರವಾಗಿದೆ ಎಂದರೆ, ವಿದೇಶಿ ಸಾಲ ಮರುಪಾವತಿಗಾಗಿ 500 ಮಿಲಿಯನ್ ಡಾಲರ್ ಹಂಚಿಕೆ ಮಾಡುವುದಾಗಿ ಸೆಂಟ್ರಲ್ ಬ್ಯಾಂಕ್ ಆಫ್ ಶ್ರೀಲಂಕಾ (ಸಿಬಿಎಸ್ಎಲ್) ಜನವರಿ 2022 ರಲ್ಲಿ ಘೋಷಿಸಿದಾಗ, ಸಾಲ ತೀರಿಸುವಲ್ಲಿ ಮುಖಭಂಗವಾದರೂ ಅಡ್ಡಿಯಿಲ್ಲ, ಅಷ್ಟೂ ಹಣವನ್ನು ಅವಶ್ಯ ಆಮದುಗಳಿಗಾಗಿಯೇ ಬಳಸಿಕೊಳ್ಳಬೇಕು ಎಂಬುದಾಗಿ ಶ್ರೀಲಂಕಾದ ಪ್ರಮುಖ ಅರ್ಥಶಾಸ್ತ್ರಜ್ಞರು ಸಿಬಿಎಸ್ಎಲ್ ಅನ್ನು ಆಗ್ರಹಿಸಿದ್ದರು.
ಕುಸಿಯುತ್ತಿರುವ ಕೃಷಿ ಉತ್ಪಾದನೆ ಹಾಗೂ ಲಾಭವಿಲ್ಲದ ಬೇಸಾಯ, ಬೇಡಿಕೆಯ ಕೊರತೆ ಹಾಗೂ ನಿರ್ಣಾಯಕ ಲಾಗುವಾಡುಗಳು ದುರ್ಲಭವಾದ ಕಾರಣದಿಂದಾಗಿ ಕೈಗಾರಿಕಾ ಘಟಕಗಳ ಪೂರ್ಣ ಸಾಮರ್ಥ್ಯದ ಬಳಕೆ ಸಾಧ್ಯವಾಗದೇ ಇರುವುದು ಮತ್ತು ಎರಡು ವರ್ಷಗಳಿಂದಲೂ ಸತತ ಇಳಿಕೆಯಾಗುತ್ತಿರುವ ಪ್ರವಾಸಿಗಳ ಸಂಖ್ಯೆ, ಇಂಥಹ ಕಾರಣಗಳಿಂದ ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ಆಳವಾಗುತ್ತಿದೆ. ಜೊತೆಗೆ, ಏರುತ್ತಿರುವ ಇಂಧನ ಬೆಲೆಗಳು ಮತ್ತು ತೀವ್ರವಾಗಿ ಕುಸಿಯುತ್ತಿರುವ ಕರೆನ್ಸಿ-ಮೌಲ್ಯ ಇವುಗಳ ಮೂಲಕ ಆಮದಾದ ಹಣದುಬ್ಬರವು ಲಾಗುವಾಡುಗಳ ಬೆಲೆಗಳನ್ನು ಕೈಗೆಟುಕಲಾರದಷ್ಟು ಮೇಲೆ ತಳ್ಳಿರುವುದರಿಂದಾಗಿ, ಲಾಗುವಾಡುಗಳ ಆ ಮಟ್ಟದ ಬೆಲೆಗಳಲ್ಲಿ ಉತ್ಪಾದಿಸಿದ ಸರಕು ಸೇವೆಗಳ ಬೆಲೆಗಳನ್ನು ಅನುಗುಣವಾದ ಪ್ರಮಾಣದಲ್ಲಿ ಏರಿಸುವುದು ಅಸಾಧ್ಯವೇ. ಕೊನೆಯದಾಗಿ, ವಿದೇಶಿ ಸಾಲ ಮಾಡಿದ ಖಾಸಗಿ ಕಂಪೆನಿ/ಸಂಸ್ಥೆಗಳು ತಮ್ಮ ಸಾಲದ ಸ್ವಲ್ಪ ಭಾಗವನ್ನಾದರೂ ಮರು ಪಾವತಿಸುವ ಸಾಧ್ಯತೆಗಳೂ ಕ್ಷೀಣಿಸುತ್ತಿವೆ, ಏಕೆಂದರೆ, ವಿದೇಶಿ ವಿನಿಮಯವು ಕೊಳ್ಳಲಾರದಷ್ಟು ಅತಿಯಾಗಿ ಶ್ರೀಲಂಕಾದ ಕರೆನ್ಸಿಯು ಅಪಮೌಲ್ಯಗೊಂಡಿದೆ. ಈ ಪ್ರವೃತ್ತಿಗಳು ದಿವಾಳಿಗಳ ಒಂದು ಅಲೆಯನ್ನೇ ಪ್ರಚೋದಿಸಬಹುದು. ಈ ಎಲ್ಲಾ ಸಂಕಷ್ಟಗಳೂ ಶ್ರೀಲಂಕಾವನ್ನು ಉಕ್ರೇನ್ ಯುದ್ಧ ಆರಂಭವಾಗುವ ಮೊದಲೇ ಬಾಧಿಸುತ್ತಿದ್ದವು. ಪರಿಸ್ಥಿತಿ ಈಗ ಮತ್ತಷ್ಟು ಹದಗೆಟ್ಟಿದೆ. ಏಕೆಂದರೆ, ರಷ್ಯಾ ಮತ್ತು ಉಕ್ರೇನ್ ಈ ಎರಡೂ ದೇಶಗಳೂ ಶ್ರೀಲಂಕಾದ ಪ್ರಮುಖ ವ್ಯಾಪಾರ ಪಾಲುದಾರರು ಮತ್ತು ಪ್ರವಾಸಿಗಳ ಒಂದು ದೊಡ್ಡ ಮೂಲವೂ ಹೌದು. ಈ ನಡುವೆ, ಮುಳುಗುತ್ತಿರುವ ತನ್ನ ಅರ್ಥವ್ಯವಸ್ಥೆಯನ್ನು ನೆರೆಯ ಚೀನಾ ಮತ್ತು ಭಾರತ ದೇಶಗಳ ಸಹಾಯದಿಂದ ಮೇಲೆತ್ತಲು ಶ್ರೀಲಂಕಾದ ಸರ್ಕಾರವು ತಿಣುಕಾಡುತ್ತಿದೆ. ಸಾಲಗಾರರ ಮೇಲೆ ಐಎಂಎಫ್ ವಿಧಿಸುವ ಷರತ್ತುಗಳ ಕಾರಣದಿಂದ ಐಎಂಎಫ್ನಿಂದ ದೂರವಿದ್ದ ಶ್ರೀಲಂಕಾ ಈಗ ಅದನ್ನೂ ಓಲೈಸಲಾರಂಭಿಸಿದೆ.
ಈ ಹಿಂದೆ ತನ್ನ ನೆರೆಯ ಎರಡೂ ದೇಶಗಳಿಂದಲೂ ಪಡೆಯುವ ಬೆಂಬಲವನ್ನು ಹೆಚ್ಚಿಸಿಕೊಳ್ಳಲು ಭಾರತ ಮತ್ತು ಚೀನಾ ದೇಶಗಳನ್ನು ಒಬ್ಬರ ವಿರುದ್ಧವಾಗಿ ಇನ್ನೊಬ್ಬರನ್ನು ಎತ್ತಿಕಟ್ಟಿ ಆಡಿಸುವಲ್ಲಿ ಶ್ರೀಲಂಕಾ ಯಶಸ್ವಿಯಾಗಿತ್ತು. ಒಟ್ಟಾರೆಯಾಗಿ ಹೇಳುವುದಾದರೆ, ಇತ್ತೀಚಿನವರೆಗೂ ಶ್ರೀಲಂಕಾವು ಭಾರತಕ್ಕಿಂತ ಚೀನಾದ ಕಡೆಗೇ ಹೆಚ್ಚು ವಾಲಿತ್ತು. ಚೀನಾದ ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ ಅಡಿಯಲ್ಲಿನ ಯೋಜನೆಗಳಿಂದ ಶ್ರೀಲಂಕಾ ಪ್ರಯೋಜನ ಪಡೆಯಿತು ಮತ್ತು ಚೀನಾದ ಕೇಂದ್ರ ಬ್ಯಾಂಕಿನೊಂದಿಗೆ ವಿದೇಶಿ ವಿನಿಮಯ ಅದಲು-ಬದಲು ಮಾಡಿಕೊಳ್ಳುವ ಒಂದು ದೊಡ್ಡ ದ್ವಿಪಕ್ಷೀಯ ವ್ಯವಸ್ಥೆಯನ್ನೂ ಮಾಡಿಕೊಂಡಿತ್ತು. ಈ ಸಹಾಯಕ್ಕೆ ಪ್ರತಿಯಾಗಿ ಶ್ರೀಲಂಕಾವು ಚೀನಾವನ್ನು ಬೆಂಬಲಿಸಿತ್ತು. ಹಾಗಾಗಿ, ಕೊಲಂಬೊ ಬಂದರಿನ ಪೂರ್ವ ಕಂಟೈನರ್ ಟರ್ಮಿನಲ್ಅನ್ನು ಅಭಿವೃದ್ಧಿಪಡಿಸಲು ಭಾರತ ಮತ್ತು ಜಪಾನ್ ಜೊತೆಗಿನ ತ್ರಿಪಕ್ಷೀಯ ಒಪ್ಪಂದವನ್ನು ರಾಜಪಕ್ಸೆ ಸರ್ಕಾರವು ರದ್ದುಗೊಳಿಸಿತು ಮತ್ತು ಇದೇ ಗುತ್ತಿಗೆಯನ್ನು ಚೀನಾ ಸರ್ಕಾರದ ಒಡೆತನದ ಚೀನಾ ಹಾರ್ಬರ್ ಎಂಜಿನಿಯರಿಂಗ್ ಕಂಪನಿಗೆ ಹಸ್ತಾಂತರಿಸಿತು. ಈ ಕೃತ್ಯವು ಭಾರತವನ್ನು ಅಸಮಾಧಾನಗೊಳಿಸಿತು. ಈ ಹಿಂದೆಯೂ ಸಹ ಶ್ರೀಲಂಕಾ ಸರ್ಕಾರವು ಇಂಥದ್ದೇ ಕೆಲವು ಕೃತ್ಯಗಳಲ್ಲಿ ತೊಡಗಿತ್ತು. ಆದ್ದರಿಂದ, ಭಾರತದ ಮುನಿಸನ್ನು ತಿಳಿಗೊಳಿಸುವ ಸಲುವಾಗಿ, ಮೂಲ ಬಂದರಿನ ಹತ್ತಿರವೇ ಇನ್ನೊಂದು ಟರ್ಮಿನಲ್ಅನ್ನು ನಿರ್ಮಿಸುವ ಗುತ್ತಿಗೆಯನ್ನು ಅದಾನಿ ಕಂಪೆನಿಗೆ ಶ್ರೀಲಂಕಾ ಒದಗಿಸಿತ್ತಾದರೂ, ಎರಡೂ ದೇಶಗಳ ನಡುವಿನ ಹಳೆಯ ಜಗಳಗಳು ಇನ್ನೂ ಬಗೆಹರಿದಿಲ್ಲ. 2017 ರಲ್ಲಿ ಶ್ರೀಲಂಕಾದ ಹಿಂದಿನ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ಹಿಂದಿನ ಮೋದಿ ಸರ್ಕಾರದೊಂದಿಗೆ ಸಹಿ ಹಾಕಿದ ತಿಳುವಳಿಕಾ ಒಡಂಬಡಿಕೆಯ ಆಧಾರದ ಮೇಲೆ ಭಾರತವು ದೇಶದಲ್ಲಿ ಪ್ರಾರಂಭಿಸಬೇಕಾಗಿರುವ ಹಲವಾರು ಯೋಜನೆಗಳ ಬಗ್ಗೆ ಶ್ರೀಲಂಕಾ ಸ್ವಲ್ಪವೂ ಉತ್ಸಾಹ ತೋರಿಸಿಲ್ಲ.
ಆದರೆ, ಈ ಪರಿಸ್ಥಿತಿ ಇತ್ತೀಚೆಗೆ ಬದಲಾಗುತ್ತಿದೆ ಎಂದು ತೋರುತ್ತದೆ. ಬೀಜಿಂಗ್ ಮತ್ತು ಕೊಲಂಬೊ ನಡುವೆ ಉದ್ವಿಗ್ನತೆ ಉಂಟಾಗಿರುವ ಸೂಚನೆಗಳಿವೆ. ಸಾವಯವ ಗೊಬ್ಬರವನ್ನು ಸರಬರಾಜು ಮಾಡುವಂತೆ ಚೀನಾದ ಒಂದು ಬಯೋಟೆಕ್ ಸಂಸ್ಥೆಯೊಂದಿಗಿನ ತನ್ನ ಕೋರಿಕೆಯನ್ನು ಶ್ರೀಲಂಕಾದ ಸರ್ಕಾರವು ರದ್ದುಗೊಳಿಸಿದೆ. ಶ್ರೀಲಂಕಾದ ಕೋರಿಕೆಯ ಮೇರೆಗೆ 20,000 ಟನ್ ಸಾವಯವ ಗೊಬ್ಬರ ಹೊತ್ತೊಯ್ದ ಚೀನಾದ ಹಡಗು ಶ್ರೀಲಂಕಾವನ್ನು ತಲುಪಿದ ನಂತರ, ಅದರಲ್ಲಿರುವ ಗೊಬ್ಬರವು ಬೆಳೆಗಳನ್ನು ನಾಶಪಡಿಸುವ ಬ್ಯಾಕ್ಟೀರಿಯಾದಿಂದ ಕೂಡಿದೆ ಎಂದು ಆರೋಪಿಸಿ ಅದನ್ನು ಹಡಗಿನಿಂದ ಇಳಿಸಲು ಶ್ರೀಲಂಕಾ ನಿರಾಕರಿಸಿತು. ಈ ವಿದ್ಯಮಾನದಲ್ಲಿ ಒಂದು ಅವಕಾಶವನ್ನು ಮನಗಂಡ ಭಾರತವು ಶ್ರೀಲಂಕಾದ ರೈತರ ಬೇಡಿಕೆಗಳನ್ನು ಪೂರೈಸಲು ನ್ಯಾನೋ ನೈಟ್ರೋಜನ್ ರಸಗೊಬ್ಬರವನ್ನು ತುರ್ತಾಗಿ ಸರಬರಾಜು ಮಾಡಿತು. ತನ್ನ ಕರಾವಳಿ ತೀರಕ್ಕೆ ಅತಿ ಸಮೀಪದಲ್ಲಿರುವ ಯೋಜನೆಗಳಲ್ಲಿ ಚೀನಾದ ಭಾಗೀದಾರಿಕೆಯ ಬಗ್ಗೆ ಭಾರತವು ಎತ್ತಿರುವ ಭದ್ರತಾ ಆಕ್ಷೇಪಣೆಗಳ ಕಾರಣದಿಂದಾಗಿ, ಉತ್ತರದ ಮೂರು ದ್ವೀಪಗಳಲ್ಲಿ ಸಿನೋ ಸೋಲಾರ್ ಹೈಬ್ರಿಡ್ ಟೆಕ್ನಾಲಜಿಯ ಹೈಬ್ರಿಡ್ ಇಂಧನ ವ್ಯವಸ್ಥೆಗಳ ಅಭಿವೃದ್ಧಿಯನ್ನು ಸ್ಥಗಿತಗೊಳಿಸಲು ಶ್ರೀಲಂಕಾ ನಿರ್ಧರಿಸಿದೆ. ಈ ಯೋಜನೆಗಳನ್ನು ತೃತೀಯ ವ್ಯಕ್ತಿಯ ಮಧ್ಯಪ್ರವೇಶದಿಂದಾಗಿ ಕೈಬಿಡಲಾಗಿದೆ ಎಂದು ಚೀನಾ ಆಕ್ಷೇಪಿಸಿದೆ. ಬದಲಿ ಯೋಜನೆಗಳನ್ನು ಈಗ ಭಾರತ ಕಾರ್ಯಗತಗೊಳಿಸುತ್ತಿದೆ. ಆದಾಗ್ಯೂ, ಶ್ರೀಲಂಕಾದ ಆಂತರಿಕ ಕೊರತೆಗಳನ್ನು ಕಡಿಮೆ ಮಾಡಲು, ಹಣದುಬ್ಬರವನ್ನು ತಗ್ಗಿಸಲು ಮತ್ತು ಶ್ರೀಲಂಕಾದ ವಿದೇಶಿ ವಿನಿಮಯ ಸಂಗ್ರಹವನ್ನು ಅದರ ಡಾಲರ್ ಗಳಿಕೆಯು ಚೇತರಿಸಿಕೊಂಡು ತನ್ನ ಮೊದಲಿನ ಸ್ಥಿತಿಗೆ ಮರಳುವವರೆಗೂ ಹೆಚ್ಚಿಸಲು ಚೀನಾ ಮತ್ತು ಭಾರತ ಎಷ್ಟೆಷ್ಟು ಬೆಂಬಲ ಒದಗಿಸುತ್ತವೆ ಎಂಬುದು ಸ್ಪಷ್ಟವಿಲ್ಲ. ಒಂದು ವೇಳೆ ಈ ಬೆಂಬಲವು ಅಸಮರ್ಪಕವಾದರೆ, ಶ್ರೀಲಂಕಾಗೆ ಉಳಿದ ಆಯ್ಕೆ ಎಂದರೆ, ಐಎಂಎಫ್ ಮಾತ್ರ. ಐಎಂಎಫ್ ವಿಧಿಸುವ ಷರತ್ತುಗಳಿಗೆ ಒಳಗಾಗುವುದರ ಬಗ್ಗೆ ಎಚ್ಚರಿಕೆ ವಹಿಸಿದ್ದ ರಾಜಪಕ್ಸೆ ಸರ್ಕಾರವು ಈಗ ಐಎಂಎಫ್ನೊಂದಿಗೆ ಮುಕ್ತ ಮಾತುಕತೆಗೆ ಮುಂದಾಗಿದೆ. ಒಂದು ವೇಳೆ ಐಎಂಎಫ್ನೊಂದಿಗೆ ಸಾಲದ ಒಪ್ಪಂದ ಮಾಡಿಕೊಂಡರೆ, ಜನ ಸಾಮಾನ್ಯರ ಮೇಲೆ ಹೆಚ್ಚು ಹೆಚ್ಚು ತೆರಿಗೆಗಳನ್ನು ಹೇರುವ ಮತ್ತು ಅವರಿಗೆ ದೊರಕಿಸಿದ ಸಬ್ಸಿಡಿಗಳನ್ನು ಕಡಿತಗೊಳಿಸುವ ಕ್ರಮಗಳನ್ನು, ಅಂದರೆ, ಜನರ ಸಂಕಷ್ಟಗಳನ್ನು ತೀವ್ರಗೊಳಿಸುವ ಕ್ರಮಗಳನ್ನು, ಅಳವಡಿಸಿಕೊಳ್ಳುವಂತೆ ಐಎಂಎಫ್ ಒತ್ತಾಯಿಸುವ ಸಾಧ್ಯತೆಯಿದೆ.
ಸಮಸ್ಯೆಯೆಂದರೆ, ಈ ಎಲ್ಲ ಬಿಕ್ಕಟ್ಟುಗಳಿಂದ ಉಂಟಾದ ಅಡ್ಡ ಪರಿಣಾಮಗಳನ್ನು ತಗ್ಗಿಸುವುದು ಶ್ರೀಲಂಕಾದ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಏಕೆಂದರೆ, ಸ್ವತಃ ಅದರ ವಿತ್ತೀಯ ಪರಿಸ್ಥಿತಿಯೇ ಹದಗೆಟ್ಟಿದೆ. ಹಿಂದಿನ ಸಾಲಗಳು ಮತ್ತು ಹೊಸದಾಗಿ ಎತ್ತಿದ ಸಾಲಗಳ ಭಾರವು ಹೊರಲಾರದಷ್ಟಿದ್ದರೂ ಸಹ, ಪ್ರಸ್ತುತ ರಾಜಪಕ್ಸೆ ಸರ್ಕಾರವು 2019ರ ಡಿಸೆಂಬರ್ನಲ್ಲಿ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ದರವನ್ನು 15% ನಿಂದ 8%ಗೆ ಇಳಿಸಿತು. ಸರಕು-ಸೇವೆಗಳ ಮೇಲಿನ 2% ರಾಷ್ಟ್ರ ನಿರ್ಮಾಣ ತೆರಿಗೆಯನ್ನು ರದ್ದುಗೊಳಿಸಿತು. ಷೇರು ಮಾರುಕಟ್ಟೆ ಲಾಭಗಳ ಮೇಲಿನ ತೆರಿಗೆಯನ್ನು ರದ್ದುಗೊಳಿಸಿತು. ಇನ್ನೂ ಕೆಲವು ತೆರಿಗೆ ರಿಯಾಯಿತಿಗಳನ್ನೂ ಒದಗಿಸಿತು. ಈ ಎಲ್ಲ ತೆರಿಗೆ ಉಡುಗರೆಗಳಿಂದಾಗಿ ಶ್ರೀಲಂಕಾದ ಸರ್ಕಾರವು ವಾರ್ಷಿಕ ಜಿಡಿಪಿಯ 4%ಗೆ ಸಮನಾದ ಆದಾಯ ನಷ್ಟ ಅನುಭವಿಸಲಿದೆ ಎಂದು ಅಂದಾಜು ಮಾಡಲಾಗಿದೆ. ಕೋವಿಡ್ ನಂತರ ಶ್ರೀಲಂಕಾದ ಆದಾಯವು ಮತ್ತಷ್ಟು ಕುಸಿದಿದೆ. 2022ರ ಬಜೆಟ್ನಲ್ಲಿ ಸೂಪರ್-ಶ್ರೀಮಂತರ ಮೇಲೆ ವಿಧಿಸಿದ ಸರ್ಚಾರ್ಜ್ ಮತ್ತು ಕೆಲವು ದೋಷಗಳನ್ನು ಸರಿಪಡಿಸಲು ಮಾಡಿದ ಇತರ ಪ್ರಯತ್ನಗಳು ತುಂಬಾ ತಡವೂ ಹೌದು ಮತ್ತು ತುಂಬಾ ಕಡಿಮೆಯೂ ಹೌದು.
ಆದಾಗ್ಯೂ, ವಿದೇಶಿ ವಿನಿಮಯ ಬಿಕ್ಕಟ್ಟೇ ಶ್ರೀಲಂಕಾ ಸರ್ಕಾರದ ಸಮಸ್ಯೆಯ ಕೇಂದ್ರಬಿಂದುವಾಗಿದೆ. ನೆರೆಯ ಪ್ರತಿಸ್ಪರ್ಧಿ ದೇಶಗಳಾದ ಚೀನಾ ಮತ್ತು ಭಾರತ ಮತ್ತು ಉಳಿದ ದೇಶಗಳು ತಮ್ಮ ತಮ್ಮ ಸಾಲಗಳ ಅವಧಿಯನ್ನು ವಿಸ್ತರಿಸದಿದ್ದರೆ ಮತ್ತು ತಮ್ಮ ನೆರವನ್ನು ಹೆಚ್ಚಿಸದಿದ್ದರೆ, ಶ್ರೀಲಂಕಾದ ಸಾರ್ವಭೌಮತ್ವವೇ ಹರಾಜಾಗಲಿದೆ.