ಸಂಘಟಿತ ಕಾರ್ಮಿಕರ ದೃಷ್ಟಿಕೋನ ಬದಲಾಗಬೇಕಿದೆ

ನಿರುದ್ಯೋಗ, ಬಡತನ, ಹಸಿವು ದುಡಿಯುವ ವರ್ಗಗಳಲ್ಲಿ ಹೊಸ ಚಿಂತನೆಗಳನ್ನು ಮೂಡಿಸಬೇಕಿದೆ

ನಾ ದಿವಾಕರ

ನರೇಂದ್ರ ಮೋದಿ ಸರ್ಕಾರ 2022-23ರ ಆಯವ್ಯಯ ಪತ್ರ ಮಂಡಿಸುವ ವೇಳೆ ಘೋಷಿಸಿರುವ ಉತ್ಪಾದನೆ ಪ್ರೇರಿತ ಉತ್ತೇಜನ (ಪಿಎಲ್‌ಐ) ಯೋಜನೆಯಡಿ ದೇಶದಲ್ಲಿ 60 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಬಹುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ. ಈ 60 ಲಕ್ಷ ಹೊಸ ಉದ್ಯೋಗಗಳು ಆತ್ಮನಿರ್ಭರ ಭಾರತದ ಗುರಿಯನ್ನು ತಲುಪಲು ಸಹಾಯ ಮಾಡುತ್ತದೆ ಎಂಬ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ.  ಡಿಸೆಂಬರ 2021ರ ವೇಳೆಗೆ ಭಾರತದಲ್ಲಿ 53 ದಶಲಕ್ಷ ನಿರುದ್ಯೋಗಿಗಳಿರುವುದಾಗಿ ಸಿಎಂಐಇ ಸಂಸ್ಥೆ ತನ್ನ ಸಮೀಕ್ಷೆಯಲ್ಲಿ ಹೇಳಿದೆ. ಇವರ ಪೈಕಿ 35 ದಶಲಕ್ಷ ಜನರು, ಅಂದಾಜು ಎಂಟು ದಶಲಕ್ಷ ಮಹಿಳೆಯರನ್ನೂ ಸೇರಿದಂತೆ, ಉದ್ಯೋಗವನ್ನು ಅರಸುತ್ತಿರುವುದಾಗಿ ಸಮೀಕ್ಷೆಯಲ್ಲಿ ಹೇಳಲಾಗಿದೆ. ಏತನ್ಮಧ್ಯೆ ಮಾರ್ಚ್‌ 2021ಕ್ಕೆ ಹೋಲಿಸಿದರೆ ನಿರುದ್ಯೋಗ ದರ ಶೇ 6.57ಕ್ಕೆ ಕುಸಿದಿದೆ.  ಇದರ ನಡುವೆಯೇ ಲಕ್ಷಾಂತರ ಜನರ ಜೀವನೋಪಾಯದ ಆಧಾರವಾಗಿರುವ ಸಾರ್ವಜನಿಕ ಉದ್ದಿಮೆಗಳನ್ನು ನಗದೀಕರಣಕ್ಕೊಳಪಡಿಸುವ (ಕಾರ್ಪೋರೇಟೀಕರಣದ ಮತ್ತೊಂದು ಹೆಸರು) ಮೂಲಕ ಕೇಂದ್ರ ಸರ್ಕಾರ ಆರು ಲಕ್ಷ ಕೋಟಿ ರೂ ಸಂಗ್ರಹ ಮಾಡಲು ಸಜ್ಜಾಗಿದೆ.

ಎನ್‌ಎಸ್‌ಎಸ್‌ಒ 2019ರ ಸಮೀಕ್ಷೆಯ ಪ್ರಕಾರ 2017-18ರಲ್ಲಿ ನಿರುದ್ಯೋಗ ದರ ಶೇ 6.1ರಷ್ಟಿತ್ತು. ಇದು ಹಿಂದಿನ ನಾಲ್ಕು ದಶಕಗಳಿಗೆ ಹೋಲಿಸಿದರೆ ಅತ್ಯಂತ ಹೆಚ್ಚಿನ ಪ್ರಮಾಣವಾಗಿತ್ತು. ಕಳೆದ ಹಲವು ವರ್ಷಗಳ ಸಮೀಕ್ಷೆಗಳನ್ನು ಗಮನಿಸಿದರೆ, ಭಾರತದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿದ್ದು, ದುಡಿಮೆಯ ಕ್ಷೇತ್ರದಲ್ಲಿ ಕಾರ್ಮಿಕರ ಭಾಗವಹಿಸುವಿಕೆಯ ಪ್ರಮಾಣ ಕುಸಿದೆ. ಮಾರ್ಚ್‌ 2020ರಲ್ಲಿ ಮೊದಲ ಲಾಕ್‌ಡೌನ್‌ ಹೇರಿದಾಗ ಅನೌಪಚಾರಿಕ ವಲಯದಿಂದ ಕೋಟ್ಯಂತರ ವಲಸೆ ಕಾರ್ಮಿಕರು ಹಲವು ನಿರ್ಬಂಧಗಳಿಗೊಳಪಟ್ಟು, ಅತ್ತಿತ್ತ ಚಲಿಸದಂತಾದರು. ಈ ಸಂದರ್ಭದಲ್ಲಿ ಉಂಟಾದ ಕಾರ್ಮಿಕರ ವಲಸೆ ಚಾರಿತ್ರಿಕವಷ್ಟೇ ಅಲ್ಲದೆ, ಕಾರ್ಮಿಕರಿಗೆ ಆದಾಯ ಅಲಭ್ಯತೆ, ಆಹಾರದ ಕೊರತೆ ಮತ್ತು ಅನಿಶ್ಚಿತ ಭವಿಷ್ಯದ ಆತಂಕಗಳನ್ನು ಎದುರಿಸಬೇಕಾಯಿತು. ಸಂಸತ್ತಿನಲ್ಲಿ ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಸಂತೋಷ್‌ ಕುಮಾರ್‌ ಗಂಗ್ವಾರ್‌ ನೀಡಿದ ಮಾಹಿತಿಯ ಅನುಸಾರ ವಿವಿಧ ರಾಜ್ಯಗಳಿಂದ ಕನಿಷ್ಟ ಒಂದು ಕೋಟಿ ಕಾರ್ಮಿಕರು ತಮ್ಮ ಸ್ವಗ್ರಾಮಗಳಿಗೆ ಹಿಂದಿರುಗಿದ್ದರು. ಆದರೆ ಈ ಸಮಯದಲ್ಲಿ ಉದ್ಯೋಗ ಮತ್ತು ಜೀವ ಕಳೆದುಕೊಂಡ ವಲಸೆ ಕಾರ್ಮಿಕರ ಬಗ್ಗೆ ಕೇಂದ್ರ ಸರ್ಕಾರದ ಬಳಿ ಯಾವುದೇ ಮಾಹಿತಿ ಇರಲಿಲ್ಲ.

ಈ ವರ್ಷದ ಫೆಬ್ರವರಿಯಲ್ಲಿ ಸಿಎಂಐಇ ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದ ನಿರುದ್ಯೋಗ ದರ ಶೇ 8.10ರಷ್ಟಿದ್ದು, ಮೇ 2021ರಲ್ಲಿ ಕೋವಿದ್‌ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಕಂಡುಬಂದಿದ್ದ ಶೇ 12ಕ್ಕೆ ಹೋಲಿಸಿದರೆ ಸಾಕಷ್ಟು ಸುಧಾರಣೆಯಾಗಿದೆ ಎಂದು ಹೇಳಬಹುದು. ಜಾಗತಿಕ ಮಟ್ಟದಲ್ಲಿ ಶೇ 60ರಷ್ಟು ಉದ್ಯೋಗಾಕಾಂಕ್ಷಿಗಳು ಅಥವಾ ಉದ್ಯೋಗಿಗಳಿದ್ದರೆ ಭಾರತದಲ್ಲಿ ಇದು ಶೇ 40ರಷ್ಟಿರುವುದಾಗಿ ವರದಿಯಲ್ಲಿ ಹೇಳಲಾಗಿದೆ. 20 ರಿಂದ 30 ವಯೋಮಾನದವರಲ್ಲಿ ಕನಿಷ್ಟ ಹತ್ತು ವರ್ಷದ ಶಿಕ್ಷಣ ಪಡೆದವರ ಪೈಕಿ ಶೇ 26ರಷ್ಟು ಜನರು ಉದ್ಯೋಗರಹಿತರಾಗಿದ್ದಾರೆ. ಸಿಎಂಐಇ ಮಾಹಿತಿಯ ಅನುಸಾರ ಭಾರತದ ಅನೌಪಚಾರಿಕ ವಲಯದಲ್ಲಿ, ಗುತ್ತಿಗೆ ಕಾರ್ಮಿಕ ಕ್ಷೇತ್ರದಲ್ಲಿ  ಮಿಲಿಯಾಂತರ ಉದ್ಯೋಗಗಳ ಲಭ್ಯತೆ ಇದ್ದರೂ ಕೇವಲ ಶೇ 5ರಷ್ಟು ಮಾತ್ರ ಕೌಶಲ್ಯವುಳ್ಳವರಾಗಿದ್ದಾರೆ. ಜರ್ಮನಿಯಲ್ಲಿ ಈ ಕೌಶಲ್ಯದ ಪ್ರಮಾಣ ಶೇ 75ರಷ್ಟಿದ್ದರೆ, ದಕ್ಷಿಣ ಕೊರಿಯಾದಲ್ಲಿ ಶೇ 96ರಷ್ಟಿದೆ. ಕೋವಿದ್‌ ನಂತರದ ಮತ್ತೊಂದು ಬೆಳವಣಿಗೆ ಎಂದರೆ ಭಾರತದಲ್ಲಿ ಮಹಿಳಾ ಉದ್ಯೋಗಿಗಳ ಪ್ರಮಾಣ 2005ರಲ್ಲಿ ಶೇ 35ರಷ್ಟಿದ್ದುದು 2022ರಲ್ಲಿ ಶೇ 21ಕ್ಕೆ ಕುಸಿದಿದೆ. ಕೋವಿದ್‌ ನಂತರದ ಆರ್ಥಿಕ ಚೇತರಿಕೆಯ ಫಲಾನುಭವಿಗಳು ಪುರುಷ ಕಾರ್ಮಿಕರೇ ಹೆಚ್ಚಾಗಿದ್ದಾರೆ.

ಔಪಚಾರಿಕ ವಲಯದಲ್ಲಿನ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಸರ್ಕಾರಗಳು ಹಲವು ಯೋಜನೆಗಳನ್ನು ಹಮ್ಮಿಕೊಂಡರೂ, ಒಟ್ಟು ಉದ್ಯೋಗದಲ್ಲಿ ಶೇ 15ರಷ್ಟನ್ನು ಮಾತ್ರ ಈ ವಲಯದಲ್ಲಿ ಕಾಣಬಹುದಾಗಿದೆ. ಶೇ 85ರಷ್ಟು ಅನೌಪಚಾರಿಕ ವಲಯದ ಉದ್ಯೋಗಗಳ ಪೈಕಿ ಕೃಷಿ ಆಧಾರಿತ ದುಡಿಮೆ, ಚಿಲ್ಲರೆ ವ್ಯಾಪಾರ ಮತ್ತು ಕೆಲವೇ ಸಹಾಯಕರನ್ನೊಳಗೊಂಡ ಸಣ್ಣಪುಟ್ಟ ಅಂಗಡಿ ಮುಗ್ಗಟ್ಟುಗಳು ಹೆಚ್ಚಿನ ಪ್ರಮಾಣದಲ್ಲಿವೆ.  ಬೀದಿ ಬದಿ ವ್ಯಾಪಾರಿಗಳು, ತಳ್ಳುಗಾಡಿ ವ್ಯಾಪಾರಿಗಳು, ರಸ್ತೆಬದಿಯ ಪೆಟ್ಟಿಗೆ ಅಂಗಡಿಗಳು ಈ ವ್ಯಾಪ್ತಿಗೊಳಪಡುತ್ತಾರೆ. ಹಾಗಾಗಿಯೇ ಭಾರತದಲ್ಲಿ ಕಾರ್ಮಿಕರ ಭಾಗವಹಿಸುವಿಕೆಯ ಪ್ರಮಾಣ ಕಡಿಮೆ ಇದೆ. ಕಡಿಮೆ ಉತ್ಪಾದಕೀಯತೆಯ ಕ್ಷೇತ್ರಗಳಿಂದ ಕಾರ್ಮಿಕರು ಹೆಚ್ಚಿನ ಉತ್ಪಾದಕೀಯತೆಯ ವಲಯಗಳಿಗೆ ಚಲನೆ ಪಡೆಯುವುದು ಯಾವುದೇ ದೇಶದ ಆರ್ಥಿಕ ಪ್ರಗತಿ ಮತ್ತು ಸಮೃದ್ಧಿಯನ್ನು ಅಳೆಯುವ ಒಂದು ಪ್ರಧಾನ ಮಾನದಂಡವಾಗಿರುತ್ತದೆ. ಭಾರತದ ಕೃಷಿ ವಲಯದಲ್ಲಿ 12 ಕೋಟಿ ಕಾರ್ಮಿಕರು ಈ ಕೆಳಹಂತದಲ್ಲಿದ್ದಾರೆ. ಕೋವಿದ್‌ ಲಾಕ್‌ಡೌನ್‌ ಸಂದರ್ಭದಲ್ಲಿ ದುಡಿಮೆಯ ಅನ್ಯ ಆಯ್ಕೆಗಳಿಲ್ಲದೆ ಕೋಟ್ಯಂತರ ವಲಸೆ ಕಾರ್ಮಿಕರು ತಮ್ಮ ಗ್ರಾಮಗಳಿಗೆ ಹಿಂದಿರುಗಿದರೇ ಹೊರತು, ತಮ್ಮ ಸ್ವಗ್ರಾಮಗಳಲ್ಲಿ ಉದ್ಯೋಗಾವಕಾಶಗಳಿವೆ ಎಂಬ ಭರವಸೆಯಿಂದಲ್ಲ. ಹೀಗೆ ಹಿಂದಿರುಗಿದ ಕಾರ್ಮಿಕರ ಪೈಕಿ ಕನಿಷ್ಠ ಒಂದು ಕೋಟಿ ಜನರು ನಗರಗಳಿಗೆ ಮರಳಿ ಬಂದಿಲ್ಲ, ಹೊರತಾಗಿ ಕೃಷಿ ಉದ್ಯೋಗಗಳಲ್ಲೇ ತೊಡಗಿದ್ದಾರೆ. ಹಾಗಾಗಿಯೇ ಈಗ ಭಾರತದಲ್ಲಿ ಕೃಷಿ ವಲಯದಲ್ಲಿ ಕಡಿಮೆ ಉತ್ಪಾದಕೀಯತೆ ಇದ್ದರೂ ಹೆಚ್ಚಿನ ಉದ್ಯೋಗಗಳು ಕಂಡುಬರುತ್ತಿವೆ. ಈ ಜನತೆಗೆ ನಗರಗಳಲ್ಲಿ ಲಭ್ಯವಿರುವ ಉದ್ಯೋಗಗಳು ಅನೌಪಚಾರಿಕ ವಲಯದಲ್ಲೇ ಆದರೂ, ಹೆಚ್ಚು ಆದಾಯದ ಒದಗಿಸುವುದರಿಂದ ಆಕರ್ಷಣೀಯವಾಗಿರುತ್ತವೆ.

ನವ ಉದಾರವಾದ ಮತ್ತು ಹಣಕಾಸು ಬಂಡವಾಳದ ಯುಗದಲ್ಲಿ, ಡಿಜಿಟಲೀಕರಣದ ಮೂಲಕ ಸರ್ಕಾರಗಳು ಉದ್ಯೋಗ ಸೃಷ್ಟಿಯಲ್ಲಿ ತೊಡಗುವುದಿಲ್ಲ. ಬದಲಾಗಿ ಉದ್ಯೋಗಾವಕಾಶಗಳು ಹೆಚ್ಚಾಗಿರುವ ಔದ್ಯಮಿಕ ಮತ್ತು ಔದ್ಯೋಗಿಕ ವಲಯಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತವೆ. ಅನೌಪಚಾರಿಕ ವಲಯದ ಉದ್ಯೋಗಗಳನ್ನು ಹೆಚ್ಚಿಸುವ ಸಲುವಾಗಿ ಸೇವಾ ವಲಯದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಗೆ ಪ್ರೋತ್ಸಾಹ ನೀಡುತ್ತವೆ. ತನ್ಮೂಲಕ ನಗರೀಕರಣ ಪ್ರಕ್ರಿಯೆ ಹೆಚ್ಚಾಗಿ, ಸಾರಿಗೆ, ಸಂಚಾರ, ಆಧುನಿಕ ಮಾರುಕಟ್ಟೆ ಸಾಧನಗಳು, ರಿಯಲ್‌ ಎಸ್ಟೇಟ್‌ ವಸತಿ ಸಮುಚ್ಚಯಗಳು ಹೆಚ್ಚಾಗತೊಡಗುತ್ತವೆ. ಈ ಕ್ಷೇತ್ರಗಳಲ್ಲಿ ಅತಿ ಹೆಚ್ಚಿನ ಅನೌಪಚಾರಿಕ ಕಾರ್ಯಕ್ಷೇತ್ರಗಳನ್ನು ಗುರುತಿಸಬಹುದು. ಇಂದಿಗೂ ಸಹ ವಲಸೆ ಕಾರ್ಮಿಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ವಸತಿ ಸಮುಚ್ಚಯಗಳಲ್ಲಿ, ಷಾಪಿಂಗ್‌ ಮಾಲ್‌ಗಳಲ್ಲಿ, ಆಧುನಿಕ ಕಾರ್ಯಕ್ಷೇತ್ರಗಳಲ್ಲಿ ಮತ್ತು ಕಚೇರಿಗಳಲ್ಲಿ ಭದ್ರತಾ ಸಿಬ್ಬಂದಿಯ ರೂಪದಲ್ಲೇ ದೊರೆಯುತ್ತವೆ. ಇವೆಲ್ಲವೂ ಹೊರಗುತ್ತಿಗೆ ನೌಕರಿಯಾಗಿದ್ದು, ಅನಿಶ್ಚಿತತೆಯಿಂದ ಕೂಡಿರುತ್ತವೆ. ಅನೇಕ ಪದವೀಧರರೂ ಈ ನೌಕರಿಯಲ್ಲಿರುವುದನ್ನು ಗಮನಿಸಿದರೆ, ಉದ್ಯೋಗ ಮಾರುಕಟ್ಟೆಯ ನೈಜ ಸ್ಥಿತಿ ಅರಿವಾಗುತ್ತದೆ.

ಇದೇ ವೇಳೆ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ವಲಯಗಳನ್ನು ಸರ್ಕಾರದ ನಿರ್ವಹಣೆಯಿಂದ ಮುಕ್ತಗೊಳಿಸಿ ಖಾಸಗಿ ಬಂಡವಳಿಗರಿಗೆ ಹೆಚ್ಚಿನ ಉತ್ತೇಜನ ನೀಡುತ್ತವೆ. ಕೇಂದ್ರ ಸರ್ಕಾರ ರೂಪಿಸಿರುವ ಮತ್ತು ರಾಜ್ಯ ಸರ್ಕಾರ ಅತಿ ಅವಸರದಲ್ಲಿ ಜಾರಿಗೊಳಿಸಿರುವ ಹೊಸ ಶಿಕ್ಷಣ ನೀತಿಯ ಮೂಲ ಉದ್ದೇಶವೇ ಇದಾಗಿದೆ. ಇದರ ನೇರ ಪರಿಣಾಮವನ್ನು ಬೋಧಕ ಮತ್ತು ಬೋಧಕೇತರ ಉದ್ಯೋಗ ನಷ್ಟದಲ್ಲಿ ಗುರುತಿಸಬಹುದಾಗಿದೆ. ಪ್ರಾಥಮಿಕ ಶಿಕ್ಷಣದಿಂದ ಅತ್ಯುನ್ನತ ಅಧ್ಯಯನ ಕ್ಷೇತ್ರದವರೆಗಿನ ಶೈಕ್ಷಣಿಕ ವಲಯವನ್ನು ವಾಣಿಜ್ಯೀಕರಣಗೊಳಿಸಿ, ಕಾರ್ಪೋರೇಟ್‌ ಬಂಡವಾಳಿಗರಿಗೆ ಒಪ್ಪಿಸುವ ಮೂಲಕ ಶೈಕ್ಷಣಿಕ ಮಾರುಕಟ್ಟೆಯಲ್ಲಿ ಹೆಚ್ಚು ತಾತ್ಕಾಲಿಕ ಹುದ್ದೆಗಳನ್ನು, ಹೊರಗುತ್ತಿಗೆ ನೌಕರಿಗಳನ್ನು ಮತ್ತು ಮಾರುಕಟ್ಟೆಗೆ ಹೊರೆಯಾಗದಂತಹ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುತ್ತದೆ. ಇದರೊಟ್ಟಿಗೆ ಡಿಜಿಟಲೀಕರಣ ಪ್ರಕ್ರಿಯೆಯಲ್ಲಿ ಆನ್‌ಲೈನ್‌ ತರಗತಿಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಮೂಲಕ ಬೋಧಕ ಸಿಬ್ಬಂದಿಯ ಪ್ರಮಾಣವನ್ನು ಕಡಿಮೆ ಮಾಡಲಾಗುತ್ತದೆ. ಆರೋಗ್ಯ ಕ್ಷೇತ್ರದಲ್ಲೂ ಖಾಸಗಿ ಬಂಡವಾಳ ಹೆಚ್ಚಿಸುವ ಮೂಲಕ ಗ್ರಾಮೀಣ ಪ್ರದೇಶಗಳ ಮತ್ತು ಪಟ್ಟಣಗಳ ಮೂಲ ಪ್ರಾಥಮಿಕ ಆರೋಗ್ಯ ಕ್ಷೇತ್ರದಲ್ಲಿ ಪೋಷಣೆ, ಶುಶ್ರೂಷಣೆ, ಕ್ಷೇತ್ರೀಯ ಕಾರ್ಯಗಳು, ಸರ್ಕಾರದ ಯೋಜನೆಗಳ ಅನುಷ್ಟಾನ ಇವೆಲ್ಲವನ್ನೂ ಹೊರಗುತ್ತಿಗೆಯ ಮೂಲಕ ಅಥವಾ ತಾತ್ಕಾಲಿಕ ನೇಮಕಾತಿಯ ಮೂಲಕ ನಿರ್ವಹಿಸಲಾಗುತ್ತದೆ.

ಈಗಾಗಲೇ ಶಿಕ್ಷಣ ಕ್ಷೇತ್ರದಲ್ಲಿ, ವಿವಿಧ ವಿಶ್ವವಿದ್ಯಾಲಯಗಳಲ್ಲಿ, ಅತಿಥಿ ಉಪನ್ಯಾಸಕರು ತಮ್ಮ ಸೇವೆಯನ್ನು ಖಾಯಂಗೊಳಿಸಲು, ವೇತನ ಹೆಚ್ಚಿಸಲು ಬೀದಿಗಿಳಿದು ಹೋರಾಡುತ್ತಿದ್ದಾರೆ. 1980ರಿಂದಲೇ ಆರಂಭವಾದ ಗುತ್ತಿಗೆ ಆಧಾರಿತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆಗೆ ಈ ಹೊಸ ಆಯಾಮ ನೀಡಲಾಗುತ್ತಿದ್ದು, ಹಲವು ವಿಶ್ವವಿದ್ಯಾಲಯಗಳಲ್ಲಿ, ಶಿಕ್ಷಣ ಇಲಾಖೆಯಲ್ಲಿ ಕಾರ್ಪೋರೇಟ್‌ ನಿಯಂತ್ರಣದಲ್ಲಿರುವ ಹೊರಗುತ್ತಿಗೆ ಕಂಪನಿಗಳ ಮೂಲಕ ನೇಮಿಸಿಕೊಳ್ಳಲಾಗುತ್ತಿದೆ. ಇದರಿಂದ ಖಾಯಂ ಮತ್ತು ತಾತ್ಕಾಲಿಕ/ಗುತ್ತಿಗೆ ಸಿಬ್ಬಂದಿಯ ನಡುವೆ ವೇತನ ತಾರತಮ್ಯ ಹೆಚ್ಚಾಗುವುದೇ ಅಲ್ಲದೆ ಹೊರಗುತ್ತಿಗೆ ಕಂಪನಿಗಳು ಸೂಕ್ತ  ಶೈಕ್ಷಣಿಕ ಅರ್ಹತಾ ಮಾನದಂಡಗಳನ್ನು ಅನುಸರಿಸಿದೆಯೇ ನೌಕರಿ ನೀಡುವ ಸಾಧ್ಯತೆಗಳೂ ಇರುತ್ತವೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ 27 ಸಾವಿರ ಬೋಧಕ ಹುದ್ದೆಗಳಿಗೆ, ಇನ್ನೂ 3000 ಹೆಚ್ಚುವರಿ ಶಿಕ್ಷಕರನ್ನು ಒಂದು ವರ್ಷದ ಅವಧಿಗೆ ಗುತ್ತಿಗೆಯ ಮೇಲೆ ನೇಮಿಸಿಕೊಳ್ಳುವುದಾಗಿ ರಾಜ್ಯ ಶಿಕ್ಷಣ ಸಚಿವರು ಇತ್ತೀಚೆಗೆ ಹೇಳಿದ್ದಾರೆ.  ಪೂರ್ಣಾವಧಿ ಬೋಧನೆಯ ಕೆಲಸ ನಿರ್ವಹಿಸುವ ಪ್ರಾಥಮಿಕ ಶಿಕ್ಷಕರಿಗೆ ಮಾಸಿಕ 7500 ಅಥವ ಪ್ರೌಢಶಾಲಾ ಶಿಕ್ಷಕರಿಗೆ 8000 ವೇತನ ನೀಡುವುದಾಗಿ ಹೇಳಿದ್ದಾರೆ.

ಬಡವರು, ಕೆಳಮಧ್ಯಮ ವರ್ಗಗಳು ಮತ್ತು ಗ್ರಾಮೀಣ ಭಾಗದಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ದಾಖಲಾಗುತ್ತಾರೆ. 15 ಸಾವಿರ ಖಾಯಂ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಹೇಳುತ್ತಲೇ ಹೊರಗುತ್ತಿಗೆಯ ಮೇಲೆ ಶಿಕ್ಷಕರನ್ನು ನೇಮಿಸುವುದು ಸರ್ಕಾರದ ಜನವಿರೋಧಿ ಧೋರಣೆಯ ಸಂಕೇತವೇ ಆಗಿದೆ. ಈಗಿರುವ ಅತಿಥಿ ಉಪನ್ಯಾಸಕರು ಮತ್ತು ಶಿಕ್ಷಕರನ್ನು ಖಾಯಂಗೊಳಿಸಬೇಕೇಂಬ ಕೂಗು ಗಟ್ಟಿಯಾಗುತ್ತಿರುವ ಸಂದರ್ಭದಲ್ಲೇ ಶಿಕ್ಷಣ ಇಲಾಖೆ ಮತ್ತು ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿರುವುದು ಸ್ಪಷ್ಟ. ಸರ್ಕಾರಿ ಶಾಲೆಗಳನ್ನು ದುರ್ಬಲಗೊಳಿಸಿ ಖಾಸಗಿ ಶಾಲೆಗಳಿಗೆ ಮತ್ತು ಟ್ಯೂಷನ್‌ಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಮೂಲಕ ಶಾಲಾಕಾಲೇಜು ಕೊಠಡಿಯ ಪ್ರಾಮುಖ್ಯತೆಯನ್ನೇ ಕಡಿಮೆ ಮಾಡುವ ಒಂದು ಹುನ್ನಾರವನ್ನೂ ಈ ಆಡಳಿತ ನೀತಿಗಳಲ್ಲಿ ಮತ್ತು ಹೊಸ ಶಿಕ್ಷಣ ನೀತಿಯಲ್ಲಿ ಗುರುತಿಸಬಹುದು. ಅಷ್ಟೇ ಅಲ್ಲದೆ ಹೊಸ ಶಿಕ್ಷಣ ನೀತಿಯ ನೂತನ ಪದವಿ ವ್ಯಾಸಂಗ ಪದ್ಧತಿಯಿಂದ ಹೆಚ್ಚಿನ ಶಿಕ್ಷಣಾರ್ಥಿಗಳು ತಮ್ಮ ಮೂಲ ಕೌಟುಂಬಿಕ ಕಸುಬುಗಳಿಗೆ, ಗ್ರಾಮೀಣ ಉದ್ಯೋಗಗಳಿಗೆ ಮರಳುವ ಸಾಧ್ಯತೆಗಳೂ, ತಳಸಮುದಾಯದ ಶಿಕ್ಷಣಾರ್ಥಿಗಳು ಮತ್ತು ಹೆಚ್ಚಾಗಿ ಮಹಿಳೆಯರು ಉನ್ನತ ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆಗಳೂ ಹೆಚ್ಚಾಗಿವೆ.

ಹೊಸ ಶಿಕ್ಷಣ ನೀತಿಯ ಅನುಷ್ಟಾನದಿಂದ ಒಂದರಿಂದ ಆರು ವರ್ಷದವರೆಗಿನ ಮಕ್ಕಳ ಪೋಷಣೆಯ ಜವಾಬ್ದಾರಿ ಹೊತ್ತಿರುವ, ದೇಶಾದ್ಯಂತ ಇರುವ, 13 ಲಕ್ಷ 77 ಸಾವಿರ ಅಂಗನವಾಡಿ ಶಿಕ್ಷಕಿಯರು, ಸಹಾಯಕ ಸಿಬ್ಬಂದಿ ಹೊಸ ಶಿಕ್ಷಣ ನೀತಿಯಿಂದ ತಮ್ಮ ನೌಕರಿ ಕಳೆದುಕೊಳ್ಳಲಿದ್ದಾರೆ. ಈಗಾಗಲೇ ಗೌರವಧನದ ರೂಪದಲ್ಲಿ ವೇತನ ಪಡೆಯುತ್ತಿರುವ ಈ ಸಿಬ್ಬಂದಿಯ ಕಾರ್ಯವ್ಯಾಪ್ತಿಯಿಂದ ಮೂರು ವರ್ಷದ ಮೇಲ್ಪಟ್ಟ ಮಕ್ಕಳು ಹೊರಗುಳಿಯುತ್ತಾರೆ. ಏಕೆಂದರೆ ಹೊಸ ಶಿಕ್ಷಣ ನೀತಿಯನ್ವಯ 3ನೆಯ ವರ್ಷದಿಂದೇ ಪ್ರಾಥಮಿಕ ಶಿಕ್ಷಣ ಆರಂಭವಾಗುತ್ತದೆ. ತಮ್ಮ ನೌಕರಿ ಕಳೆದುಕೊಳ್ಳುವ ಭೀತಿ ಎದುರಿಸುತ್ತಿರುವ ಲಕ್ಷಾಂತರ ಅಂಗನವಾಡಿ ಕಾರ್ಯಕರ್ತೆಯರು ಈಗಾಗಲೇ ಹೋರಾಟಗಳಲ್ಲಿ ತೊಡಗಿದ್ದಾರೆ. ಇವರೊಂದಿಗೆ ಕೋವಿದ್‌ ಸಂದರ್ಭದಲ್ಲಿ ಮುಂಚೂಣಿ ಕಾರ್ಯಕರ್ತೆಯರಾಗಿ ಕಾರ್ಯನಿರ್ವಹಿಸಿದ ಆರು ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರನ್ನು, ಪೂರ್ಣ ವೇತನವನ್ನೂ ನೀಡದೆ, ಕರ್ನಾಟಕ ಸರ್ಕಾರ ವಜಾ ಮಾಡಲಾಗಿದೆ. ಗುತ್ತಿಗೆ ಆಧಾರದ ಮೇಲೆ ನೌಕರಿ ಪಡೆದಿದ್ದ ಈ ಕಾರ್ಯಕರ್ತೆಯರು ಈಗ ತಮ್ಮ ಜೀವನೋಪಾಯಕ್ಕಾಗಿ ಪರದಾಡುವಂತಾಗಿದೆ. ಬಿಸಿಯೂಟ ಯೋಜನೆಯಡಿ ಅಡುಗೆ ಕೆಲಸ ಮಾಡುತ್ತಿದ್ದ, 60 ವರ್ಷಕ್ಕೂ ಮೇಲ್ಪಟ್ಟ 12 ಸಾವಿರ ಸಿಬ್ಬಂದಿಯನ್ನು ಕರ್ನಾಟಕ ಸರ್ಕಾರ ಯಾವುದೇ ನಿವೃತ್ತಿ ಸೌಲಭ್ಯಗಳನ್ನು ನೀಡದೆಯೇ ಏಕಾಏಕಿ ವಜಾ ಮಾಡಿದೆ.

ಗ್ರಾಮೀಣ ಪ್ರದೇಶದಲ್ಲಿ ಹೆಚ್ಚುವರಿಯಾಗಿರುವ ಮತ್ತು ಉದ್ಯೋಗಾವಕಾಶಗಳಿಲ್ಲದ ಲಕ್ಷಾಂತರ ಜನರು ನಗರ ಪ್ರದೇಶಗಳಿಗೆ ವಲಸೆ ಬರುವುದು ಪ್ರಸ್ತುತ ಸಂದರ್ಭದಲ್ಲಿ ಅನಿವಾರ್ಯವಾಗಿದೆ. ಈ ಸಂಖ್ಯೆಯಲ್ಲಿ ಇಂತಹ ಗುತ್ತಿಗೆ ನೌಕರರೂ ಸೇರುತ್ತಾರೆ. ಇವರೊಂದಿಗೆ ನಗರ ಪ್ರದೇಶಗಳಲ್ಲಿ ವ್ಯಾಸಂಗ ಮುಗಿಸಿ ನೌಕರಿ ಅರಸುವ ಲಕ್ಷಾಂತರ ಯುವಕ ಯುವತಿಯರು ತಮ್ಮ ಜೀವನೋಪಾಯದ ಮಾರ್ಗಗಳನ್ನು ಹುಡುಕುವಂತಾಗುತ್ತದೆ. ಡಿಜಿಟಲ್‌ ವೇದಿಕೆಗಳಲ್ಲಿ, ಸಾಫ್ಟ್‌ ವೇರ್‌ ಉದ್ಯಮಗಳ ಮೂಲಕ ಸೃಷ್ಟಿಯಾಗುವ ಲಕ್ಷಾಂತರ ಉದ್ಯೋಗಗಳು ಸುಶಿಕ್ಷಿತ ಹಿತವಲಯದವರ ಪಾಲಾಗುತ್ತದೆ. ನವ ಉದ್ಯಮ ಮತ್ತು ಕೌಶಲ್ಯಾಭಿವೃದ್ಧಿಯ ಯೋಜನೆಗಳ ಫಲಾನುಭವಿಗಳೂ ಬಹುಪಾಲು ಇವರೇ ಆಗಿರುತ್ತಾರೆ. ಇಲ್ಲಿ ಗ್ರಾಮೀಣ ಬಡಜನತೆ, ದಲಿತರು ಮತ್ತು ತಳಸಮುದಾಯದ ಬಡವರು, ಮಹಿಳೆಯರು ಉದ್ಯೋಗ ವಂಚಿತರಾಗುತ್ತಾರೆ. ಹತ್ತಾರು ವರ್ಷಗಳ ಕಾಲ ಒಂದು ನೌಕರಿಯನ್ನೇ ಅವಲಂಬಿಸಿ ಬದುಕು ಕಟ್ಟಿಕೊಂಡಿರುವ ಲಕ್ಷಾಂತರ ಜನರು ಮಾರುಕಟ್ಟೆ ನೀತಿಗಳಿಗೆ ಬಲಿಯಾಗಿ ಏಕಾಏಕಿ ನಿರ್ಗಗತಿಕರೋ, ನಿರ್ವಸತಿಕರೋ ಆಗಿಬಿಡುತ್ತಾರೆ. ಈ ಬೃಹತ್‌ ಜನಸಂಖ್ಯೆಯ ಶ್ರಮಜೀವಿಗಳು  ಕಟ್ಟಡ ಕಾಮಗಾರಿ, ಸಾರ್ವಜನಿಕ ಕಾಮಗಾರಿ, ಮನೆಗೆಲಸ ಮತ್ತಿತರ ಅನಿಶ್ಚಿತ ನೌಕರಿಗಳನ್ನೇ ಅವಲಂಬಿಸಿ ಬದುಕುವುದು ಅನಿವಾರ್ಯವಾಗುತ್ತದೆ. ಶೇ 95ರಷ್ಟು ಅಸಂಘಟತರಾಗಿರುವ ಈ ಶ್ರಮಜೀವಿಗಳ ಕಾಳಜಿ ಬಂಡವಾಳಶಾಹಿ ಆಡಳಿತ ವ್ಯವಸ್ಥೆ ಇರುವುದಿಲ್ಲ ಆದರೆ ಸಂಘಟಿತ ವಲಯದ ಕಾರ್ಮಿಕ ಸಂಘಟನೆಗಳಲ್ಲಿ ಈ ಶ್ರಮಜೀವಿಗಳ ಬಗ್ಗೆ ಕಾಳಜಿ ಮತ್ತು ಕಳಕಳಿ ಇರಲೇಬೇಕಲ್ಲವೇ ?

ಸಂಘಟಿತ ವಲಯದ ಕಾರ್ಮಿಕ ಸಂಘಟನೆಗಳಲ್ಲಿ ಮತ್ತು ಕಾರ್ಮಿಕರಲ್ಲಿ ವರ್ಗಪ್ರಜ್ಞೆ ಮೂಡದ ಹೊರತು ಇದನ್ನು ಅಪೇಕ್ಸಿಸಲಾಗುವುದಿಲ್ಲ.  ಮೇ ದಿನಾಚರಣೆಯ ಸಂದರ್ಭದಲ್ಲಿ ಈ ಪ್ರಶ್ನೆ ನಮ್ಮನ್ನು ಕಾಡಬೇಕಲ್ಲವೇ ?

ಸ್ವತಂತ್ರ ಭಾರತದ ಕಾರ್ಮಿಕ ಚಳುವಳಿಗಳನ್ನು ಎರಡು ಮಜಲುಗಳಲ್ಲಿ ಕಾಣಬಹುದು. ಮೊದಲನೆಯದು ಸರ್ಕಾರಿ ಸ್ವಾಮ್ಯದ ಹಣಕಾಸು ಸಂಸ್ಥೆಗಳು, ವಾಣಿಜ್ಯ ಕೇಂದ್ರಗಳು, ಉತ್ಪಾದನಾ ವಲಯದ ಸಾರ್ವಜನಿಕ ಉದ್ದಿಮೆಗಳು ಮತ್ತು ಶೈಕ್ಷಣಿಕ ವಲಯದ ಸಂಸ್ಥೆಗಳು. ಎರಡನೆಯದು ಗ್ರಾಮೀಣ ಪ್ರದೇಶಗಳಲ್ಲಿನ ಕೃಷಿ ಕೂಲಿಕಾರರು, ಕಾರ್ಮಿಕರು ಮತ್ತು ಗ್ರಾಮೀಣ ದುಡಿಮೆಗಾರರು. ಈ ಎರಡೂ ವಲಯಗಳಲ್ಲಿನ ದುಡಿಮೆಗಾರರನ್ನು ಸ್ವಾತಂತ್ರ್ಯಪೂರ್ವದಿಂದಲೂ ಸಂಘಟಿಸುತ್ತಲೇ ಅವರ ಹಕ್ಕುಗಳಿಗಾಗಿ ಹೋರಾಡುತ್ತಾ ಬಂದಿರುವ ಸಂಘಟನೆಗಳು ಹಲವು. ಸಮಾಜವಾದಿ ಅರ್ಥವ್ಯವಸ್ಥೆಯನ್ನು ಸಾಧಿಸಿ ಕಾರ್ಮಿಕರಲ್ಲಿ ವರ್ಗಪ್ರಜ್ಞೆಯನ್ನು ಬೆಳೆಸುವ ಮೂಲಕ ಸಮತಾ ಸಮಾಜವನ್ನು ನಿರ್ಮಿಸುವ ಉದ್ದೇಶ ಹೊಂದಿರುವ ಎಡಪಂಥೀಯ ಕಾರ್ಮಿಕ ಸಂಘಟನೆಗಳಷ್ಟೇ ಪ್ರಬಲವಾಗಿ, ಬಂಡವಾಳಶಾಹಿ ಅರ್ಥವ್ಯವಸ್ಥೆಯನ್ನೇ ಪೋಷಿಸಿ, ಕೇವಲ ಸಾಮಾಜಿಕ ನ್ಯಾಯದ ಮೂಲಕ ಸಮತೋಲನ ಕಾಪಾಡಲಿಚ್ಚಿಸುವ ಕಾಂಗ್ರೆಸ್‌ನಂತಹ ಮಧ್ಯಪಂಥೀಯ ಸಂಘಟನೆಗಳು ಇವೆ. ಮತ್ತೊಂದೆಡೆ ವರ್ಗಪ್ರಜ್ಞೆಯ ಪರಿಕಲ್ಪನೆಯನ್ನೇ ಒಪ್ಪದೆ, ಮತಧರ್ಮಗಳ ಆಧಾರದಲ್ಲಿ ರಾಷ್ಟ್ರ ನಿರ್ಮಾಣ ಮಾಡುವ ಮತ್ತು ವರ್ಣಾಶ್ರಮ ಧರ್ಮದ ಜಾತಿ ವ್ಯವಸ್ಥೆಯನ್ನೂ ಯಥಾಸ್ಥಿತಿಯಲ್ಲಿ ಕಾಪಾಡುವ ಧೋರಣೆ ಹೊಂದಿದ ಬಲಪಂಥೀಯ ಸಂಘಟನೆಗಳೂ ಇವೆ.

ರೈಲು, ರಸ್ತೆ, ವಿಮಾನಯಾನ ಮತ್ತು ಕಡಲಸಾರಿಗೆ, ಬಂದರುಗಳು, ಹಣಕಾಸು ವಲಯ, ಉತ್ಪಾದನಾ ವಲಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಈ ಸಂಘಟನೆಗಳು ಭಾರತದ 31 ದಶಲಕ್ಷ ಕಾರ್ಮಿಕರನ್ನು ಪ್ರತಿನಿಧಿಸುತ್ತವೆ. ಇವರ ಪೈಕಿ 17.3 ದಶಲಕ್ಷ ಕಾರ್ಮಿಕರು ಸರ್ಕಾರಿ ಇಲಾಖೆಗಳಲ್ಲಿ ಅಥವಾ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಕಂಡುಬರುತ್ತಾರೆ. ಪ್ರಧಾನವಾಗಿ ಎಐಟಿಯುಸಿ, ಸಿಐಟಿಯು, ಎಐಸಿಸಿಟಿಯು, ಯುಟಿಯುಸಿ, ಹೆಚ್ಎಂಎಸ್‌ ಮತ್ತಿತರ ಸಂಘಟನೆಗಳು ಎಡಪಂಥೀಯ ಧೋರಣೆಯನ್ನು ಅನುಸರಿಸಿದರೆ ಸಂಘಪರಿವಾರದ ಗುಂಪಿಗೆ ಸೇರಿದ ಬಿಎಂಎಸ್‌ ಬಲಪಂಥೀಯ ಧೋರಣೆಯನ್ನೇ ಅನುಸರಿಸುತ್ತದೆ. ಐಎನ್‌ಟಿಯುಸಿ ಕಾಂಗ್ರೆಸ್‌ ಪಕ್ಷದ ಕಾರ್ಮಿಕ ಅಂಗವಾಗಿದ್ದು, ಪಕ್ಷದ ಹಿತಾಸಕ್ತಿಯನ್ನೇ ಪ್ರಧಾನವಾಗಿ ಪರಿಗಣಿಸುತ್ತಲೇ ಕಾರ್ಮಿಕರ ರಕ್ಷಣೆಗಾಗಿ ಹೋರಾಡುತ್ತದೆ. ಕಾರ್ಮಿಕರ ದುಡಿಮೆಯ ಹಕ್ಕುಗಳ ರಕ್ಷಣೆ, ನೌಕರಿ ಭದ್ರತೆ, ನಿವೃತ್ತಿ ನಂತರದ ಸೌಲಭ್ಯಗಳು ಮತ್ತು ಸೇವಾ ಕ್ಷೇತ್ರದ ಸವಲತ್ತುಗಳ ಬಗ್ಗೆ ಎಲ್ಲ ಕಾರ್ಮಿಕ ಸಂಘಟನೆಗಳೂ ಬಹುಪಾಲಿಗೆ ಒಂದೇ ಧೋರಣೆ ಹೊಂದಿರುವಂತೆ ಕಂಡರೂ, ಬಲಪಂಥೀಯ ಬಿಎಂಎಸ್‌ ಉದ್ಯಮಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ, ಕಾರ್ಮಿಕರ ಹಿತಾಸಕ್ತಿಯನ್ನು ಔದ್ಯಮಿಕ ಹಿತಾಸಕ್ತಿಗೆ ಧಕ್ಕೆಯಾಗದ ರೀತಿಯಲ್ಲಿ ಕಾಪಾಡಲು ಪ್ರಯತ್ನಿಸುತ್ತದೆ.

ಆಡಳಿತಾರೂಢ ಸರ್ಕಾರಗಳೊಂದಿಗೆ, ಪ್ರಭುತ್ವದ ಜನವಿರೋಧಿ ನೀತಿಗಳೊಂದಿಗೆ ಮತ್ತು ಉದ್ಯಮಿಗಳೊಂದಿಗೆ ರಾಜಿ ಮಾಡಿಕೊಳ್ಳುವುದರ ಮೂಲಕ ತಮ್ಮ ಸಂಘಟನಾತ್ಮಕ ಅಸ್ತಿತ್ವವನ್ನು ಕಾಪಾಡಿಕೊಂಡು, ಕಾರ್ಮಿಕರಲ್ಲಿ ರಾಜಕೀಯ ಪ್ರಜ್ಞೆ ಬೆಳೆಯದಂತೆ ಎಚ್ಚರವಹಿಸುವ ಬಿಜೆಪಿಯ ಬಿಎಂಎಸ್‌ ಮತ್ತು ಕಾಂಗ್ರೆಸ್‌ ಪಕ್ಷದ ಇಂಟಕ್‌ ದೇಶದ ಅತಿ ದೊಡ್ಡ ಕಾರ್ಮಿಕ ಸಂಘಟನೆಗಳಾಗಿವೆ. ಕಾರ್ಮಿಕರಲ್ಲಿ ವರ್ಗಪ್ರಜ್ಞೆ ಮೂಡಿಸುವುದರೊಂದಿಗೆ, ರಾಜಕೀಯ ಪ್ರಜ್ಞೆಯನ್ನೂ ಬೆಳೆಸಿ ಸಮ ಸಮಾಜದ ಕನಸುಗಳನ್ನು ಸಾಕಾರಗೊಳಿಸಲು, ದುಡಿಯುವ ವರ್ಗಗಳನ್ನು ಮುಂಚೂಣಿ ಕಾಲಾಳುಗಳಾಗಿ ತಯಾರು ಮಾಡುವ ಸದುದ್ದೇಶ ಹೊಂದಿರುವ ಎಡಪಂಥೀಯ ಕಾರ್ಮಿಕ ಸಂಘಟನೆಗಳು ಸಂಖ್ಯಾಬಲದಲ್ಲಿ ಕಡಿಮೆ ಇದ್ದರೂ, ಇಂದಿಗೂ ಸಹ ಹಲವು ಉದ್ದಿಮೆಗಳಲ್ಲಿ ಕಾರ್ಮಿಕರ ಪರ ದಿಟ್ಟ ಹೋರಾಟಗಳನ್ನು ನಡೆಸುತ್ತಿವೆ. ಅಷ್ಟೇ ಅಲ್ಲದೆ ಬೃಹತ್‌ ಕೈಗಾರಿಕೆಗಳಿಗಾಗಿ, ಉದ್ದಿಮೆಗಳಿಗಾಗಿ, ಹೆದ್ದಾರಿಗಳಿಗಾಗಿ ಭೂಮಿಯನ್ನು ಕಳೆದುಕೊಂಡು ಬೀದಿ ಪಾಲಾಗಿರುವ ಗ್ರಾಮೀಣ ಕೃಷಿಕರ ಪರವಾಗಿಯೂ ಎಡಪಂಥೀಯ ಕಾರ್ಮಿಕ ಸಂಘಟನೆಗಳು ಹೋರಾಟಗಳನ್ನು ರೂಪಿಸುತ್ತಿವೆ. ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಕಟ್ಟಡ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರು, ಕೃಷಿ ಕಾರ್ಮಿಕರು ಕಾರ್ಮಿಕ ಸಂಘಟನೆಗಳ ಒಂದು ಭಾಗವಾಗಿ ಇಂದು ತಮ್ಮ ಹಕ್ಕೊತ್ತಾಯಗಳಿಗಾಗಿ ಹೋರಾಡುತ್ತಿದ್ದಾರೆ.

ಮತ್ತೊಂದೆಡೆ ಹಣಕಾಸು ವಲಯದಲ್ಲಿ, ಬ್ಯಾಂಕಿಂಗ್‌ ಮತ್ತು ವಿಮಾ ಕ್ಷೇತ್ರದಲ್ಲಿ ಎಡಪಂಥೀಯ ಸಂಘಟನೆಗಳು ತಮ್ಮದೇ ಅದ ಪ್ರಾಬಲ್ಯ ಹೊಂದಿದ್ದು, ಬ್ಯಾಂಕ್‌ ಖಾಸಗೀಕರಣದ ವಿರುದ್ಧ, ಎಲ್‌ಐಸಿ ಷೇರು ವಿಕ್ರಯದ ವಿರುದ್ಧ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ, ನಗದೀಕರಣದ ವಿರುದ್ಧ ರಾಷ್ಟ್ರವ್ಯಾಪಿ ಮುಷ್ಕರಗಳನ್ನು ನಡೆಸಿವೆ. ಮಾರ್ಚ್‌ 28ರಂದು ನಡೆದ ದೇಶವ್ಯಾಪಿ ಕಾರ್ಮಿಕ ಮುಷ್ಕರ ಚಾರಿತ್ರಿಕ ಎನಿಸಿಕೊಂಡಿದೆ. ಆದರೆ ನವ ಉದಾರವಾದಿ ಆರ್ಥಿಕ ನೀತಿಗಳನ್ನು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಜಾರಿಗೊಳಿಸುತ್ತಿರುವ ನರೇಂದ್ರ ಮೋದಿ ಸರ್ಕಾರ, ಲಾಭದಾಯಕ ಸಾರ್ವಜನಿಕ ಉದ್ದಿಮೆಗಳನ್ನೂ ಸಹ ನಗದೀಕರಣಗೊಳಿಸುವ ಮೂಲಕ, ಖಾಸಗಿ ಕಾರ್ಪೋರೇಟ್‌ ಬಂಡವಳಿಗರಿಗೆ ಒಪ್ಪಿಸಲು ಸಜ್ಜಾಗುತ್ತಿದೆ.  ರಸ್ತೆಗಳು, ರೈಲು ಮಾರ್ಗಗಳು, ವಿದ್ಯುತ್‌ ಪ್ರಸರಣ, ನೈಸರ್ಗಿಕ ಅನಿಲ ಪ್ರಸರಣ, ದೂರ ಸಂಪರ್ಕ, ಉಗ್ರಾಣಗಳು, ಗಣಿಗಾರಿಕೆ, ವಿಮಾನಯಾನ, ಬಂದರುಗಳು, ಮೀನುಗಾರಿಕೆ ಮತ್ತು ಕ್ರೀಡಾಂಗಣಗಳ ನಿರ್ವಹಣೆಯನ್ನು ನಗದೀಕರಿಸುವ ಮೂಲಕ ಆರು ಲಕ್ಷ ಕೋಟಿ ರೂಗಳನ್ನು ಸಂಗ್ರಹಿಸಲು ಕೇಂದ್ರ ಸರ್ಕಾರ ಮೂರು ವರ್ಷಗಳ ನೀಲನಕ್ಷೆಯನ್ನು ಸಿದ್ಧಪಡಿಸಿದೆ ಇದರೊಂದಿಗೆ 70 ವರ್ಷಗಳ ಕಾಲ ದೇಶದ ಪ್ರಗತಿಗೆ ಪೂರಕವಾಗಿದ್ದ ಸಾರ್ವಜನಿಕ ಉದ್ದಿಮೆಗಳನ್ನೂ ಸಹ ಕಾರ್ಪೋರೇಟೀಕರಣ ಪ್ರಕ್ರಿಯೆಗೊಳಪಡಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ಬಿಇಎಂಎಲ್‌, ಬಿಇಎಲ್‌, ಬಿಹೆಚ್‌ಇಎಲ್‌, ಹೆಚ್‌ಎಎಲ್‌, ಎನ್‌ಎಎಲ್‌, ಬಿಎಸ್‌ಎನ್‌ಎಲ್‌ ಮುಂತಾದ ಸಾರ್ವಜನಿಕ ಉದ್ದಿಮೆಗಳು ಕ್ರಮೇಣ ಅದಾನಿ, ಅಂಬಾನಿ, ಮಿಟ್ಟಲ್‌ ಅವರ ಸಾಮ್ರಾಜ್ಯದ ಒಂದು ಭಾಗವಾಗಲಿವೆ.

ಸಾರ್ವಜನಿಕ ಉದ್ಯೋಗ ಸೃಷ್ಟಿಸುವುದು ಪ್ರಭುತ್ವದ ಆದ್ಯತೆ ಮತ್ತು ಕರ್ತವ್ಯವೇ ಆದರೂ, ನವ ಉದಾರವಾದ ಮತ್ತು ಜಾಗತೀಕರಣ ನೀತಿಗಳು ವ್ಯತಿರಿಕ್ತವಾಗಿಯೇ ಜಾರಿಯಾಗುತ್ತವೆ. ಉದ್ಯೋಗ ಸೃಷ್ಟಿಸುವುದಾಗಲೀ, ಶಿಕ್ಷಣ ಆರೋಗ್ಯ ಮುಂತಾದ ಸಾರ್ವಜನಿಕ ಸೇವೆಗಳನ್ನು ಒದಗಿಸುವುದಾಗಲೀ ಸರ್ಕಾರದ ಕರ್ತವ್ಯ ಅಲ್ಲ ಎಂದು ಕೇಂದ್ರ ಸರ್ಕಾರ ಅಧಿಕೃತವಾಗಿಯೇ ಘೋಷಿಸಿದೆ. ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ಪ್ರಕ್ರಿಯೆ ಮೂರು ದಶಕಗಳ ಮುನ್ನವೇ ಆರಂಭವಾಗಿದ್ದು, ಈ ನಿಟ್ಟಿನಲ್ಲಿ ಅಗತ್ಯವಾದ ಎಲ್ಲ ತಂತ್ರಜ್ಞಾನದ ಅಳವಡಿಕೆಗಳನ್ನೂ, ಆಡಳಿತ ನೀತಿಗಳನ್ನೂ ಮತ್ತು ನಿರ್ವಹಣೆಯ ನೀಲನಕ್ಷೆಯನ್ನು ಸಿದ್ಧಪಡಿಸಲಾಗಿದೆ. ಬ್ಯಾಂಕ್‌ ಖಾಸಗೀಕರಣದ ವಿರುದ್ಧ ಎರಡು ದಶಕದ ಹಿಂದೆಯೇ ರೂಪುಗೊಳ್ಳಬೇಕಿದ್ದ ಕಾರ್ಮಿಕ ಸಂಘಟನೆಗಳ ಹೋರಾಟಗಳು ಕೇವಲ ಮುಷ್ಕರಗಳಿಗೆ ಸೀಮಿತವಾಗಿದ್ದು ದುರಂತ. ಬ್ಯಾಂಕ್‌ ರಾಷ್ಟ್ರೀಕರಣದ ಫಲಾನುಭವಿಗಳಾದ ರೈತರು, ಗ್ರಾಮೀಣ ಕುಶಲಕರ್ಮಿಗಳು,  ಗ್ರಾಮೀಣ ಆರ್ಥ ವ್ಯವಸ್ಥೆಯಲ್ಲಿ ಪ್ರಧಾನ ಪಾತ್ರ ವಹಿಸುವ ನಿರುದ್ಯೋಗಿ ಯುವ ಜನತೆ , ಆರ್ಥಿಕವಾಗಿ ಹಿಂದುಳಿದ ಕೆಳ ಮಧ್ಯಮ ವರ್ಗಗಳು ಮತ್ತು ನಗರಪ್ರದೇಶಗಳ ಸಣ್ಣ ವ್ಯಾಪಾರಿಗಳು, ಈ ವರ್ಗಗಳಿಂದ ಬ್ಯಾಂಕ್‌ ಖಾಸಗೀಕರಣದ ವಿರುದ್ಧ ಪ್ರಬಲ ವಿರೋಧ ವ್ಯಕ್ತವಾಗಬೇಕಿತ್ತು. ಆದರೆ ಬಂಡವಾಳಶಾಹಿ ಅಭಿವೃದ್ಧಿ ಪಥದ ಫಲಾನುಭವಿಗಳಾಗಿ ಹಿತವಲಯದಲ್ಲಿರುವ ಈ ಜನತೆ ಇಂದು ಖಾಸಗೀಕರಣ ಮತ್ತು ಕಾರ್ಪೋರೇಟೀಕರಣದ ಆರಾಧಕರಾಗಿದ್ದಾರೆ.

ಈ ಜನಸಮುದಾಯಗಳನ್ನು ತಲುಪುವ ಜವಾಬ್ದಾರಿ ಬ್ಯಾಂಕ್‌ ಮತ್ತು ವಿಮಾ ಕ್ಷೇತ್ರದ ಹಾಗೂ ಸಾರ್ವಜನಿಕ ಉದ್ದಿಮೆಗಳ ಕಾರ್ಮಿಕ ಸಂಘಟನೆಗಳ ಮೇಲಿತ್ತು. ನವ ಉದಾರವಾದ ಮತ್ತು ಹಣಕಾಸು ಬಂಡವಾಳದ ಜಾಗತೀಕರಣದಿಂದ ಹಾನಿಗೊಳಗಾಗುತ್ತಿರುವ ಜೀವನೋಪಾಯದ ಮಾರ್ಗಗಳನ್ನು ಗುರುತಿಸಿ, ಬಾಧಿತ ತಳಸಮುದಾಯದ ಜನರನ್ನು ತಲುಪುವ ದೂರದೃಷ್ಟಿ ಸಂಘಟಿತ ಕಾರ್ಮಿಕರಲ್ಲಿ ಇರಬೇಕಿತ್ತು. ಮಾರ್ಕ್ಸ್‌ವಾದದಿಂದ ಪ್ರಭಾವಿತವಾದ ಎಡಪಂಥೀಯ ಕಾರ್ಮಿಕ ಸಂಘಟನೆಗಳು ಕಾರ್ಖಾನೆ ಕಾರ್ಮಿಕರಲ್ಲಿ ಮತ್ತು ಬ್ಯಾಂಕಿಂಗ್‌, ವಿಮಾ ಕ್ಷೇತ್ರದ ಕಾರ್ಮಿಕರಲ್ಲಿ ವರ್ಗಪ್ರಜ್ಞೆಯನ್ನು ಬೆಳೆಸುವುದರಲ್ಲಿ ವಿಫಲವಾಗಿರುವುದೇ ಅಲ್ಲದೆ, ಕಾರ್ಮಿಕ ಹೋರಾಟಗಳನ್ನು ಆರ್ಥಿಕತೆಗೆ ಸೀಮಿತಗೊಳಿಸಿರುವುದರ ಪರಿಣಾಮವನ್ನು ಇಂದು ನಾವು ಎದುರಿಸುತ್ತಿದ್ದೇವೆ. ಬ್ಯಾಂಕ್‌ ರಾಷ್ಟ್ರೀಕರಣದ ಫಲಾನುಭವಿಗಳಾಗಿ, ಹಿತವಲಯದಲ್ಲಿ ನೆಲೆಗೊಂಡಿರುವ ಬ್ಯಾಂಕ್‌ ನೌಕರರಲ್ಲೂ ಸಹ ಕಾರ್ಪೋರೇಟ್‌ ಮಾರುಕಟ್ಟೆ ಪರ ಧೋರಣೆ ಇರುವುದನ್ನು ಗಮನಿಸಬಹುದು. ಹಾಗಾಗಿಯೇ ಕೆಂಬಾವುಟದಡಿ ತಮ್ಮ ಹಕ್ಕುಗಳಿಗಾಗಿ ಹೋರಾಡುವ ಈ ನೌಕರರು, ಚುನಾವಣೆಗಳ ಸಂದರ್ಭದಲ್ಲಿ ಕಾಂಗ್ರೆಸ್‌, ಬಿಜೆಪಿ ಅಥವಾ ಇತರ ಬಂಡವಳಿಗ ಪಕ್ಷಗಳೊಡನೆ ಗುರುತಿಸಿಕೊಳ್ಳುತ್ತಾರೆ. ಈ ವಾತಾವರಣಕ್ಕೆ ವ್ಯಕ್ತಿಗತ ನಿಲುವುಗಳಿಗಿಂತಲೂ, ಸಂಘಟನಾತ್ಮಕ ವೈಫಲ್ಯ ಕಾರಣ ಎಂಬ ಆತ್ಮಾವಲೋಕನ ಇಂದು ಅತ್ಯವಶ್ಯವಾಗಿದೆ.

ಹಣಕಾಸು ವಲಯದಲ್ಲೂ ಸಹ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಲ್ಲಿ ಹೊರಗುತ್ತಿಗೆ ನೌಕರರು ಹೆಚ್ಚಾಗಿದ್ದು, ಬ್ಯಾಂಕಿಂಗ್‌ ವಲಯದಲ್ಲೇ 41,177 ಹುದ್ದೆಗಳು ಖಾಲಿ ಉಳಿದಿವೆ. ಬ್ಯಾಂಕ್‌ ಖಾಸಗೀಕರಣ ಪ್ರಕ್ರಿಯೆ ಚುರುಕಾಗುತ್ತಿರುವಂತೆಲ್ಲಾ ಬ್ಯಾಂಕುಗಳ ವಿಲೀನವೂ ಮುಂದುವರೆಯಲಿದ್ದು, ಸಾವಿರಾರು ಬ್ಯಾಂಕ್‌ ಶಾಖೆಗಳನ್ನು ಮುಚ್ಚಲಾಗುತ್ತಿದೆ. ತಂತ್ರಜ್ಞಾನ ಆಧಾರಿತ ಬ್ಯಾಂಕಿಂಗ್‌ ವಹಿವಾಟುಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಮೂಲಕ ಬ್ಯಾಂಕಿಂಗ್‌ ವಲಯದಲ್ಲಿ ಭೌತಿಕ ಶ್ರಮದ ಅವಶ್ಯಕತೆಯನ್ನೂ ಕಡಿಮೆ ಮಾಡಲಾಗುತ್ತಿದೆ. 2025ರ ವೇಳೆಗೆ ಬ್ಯಾಂಕ್‌ ಖಾಸಗೀಕರಣ ಪ್ರಕ್ರಿಯೆ ಪೂರ್ಣಗೊಳ್ಳಲಿದ್ದು, ಆ ವೇಳೆಗೆ ರೈಲ್ವೆ ಇಲಾಖೆಯಲ್ಲೂ ಸಹ ಹಲವು ವಿಭಾಗಗಳನ್ನು ಕಾರ್ಪೋರೇಟೀಕರಣಕ್ಕೊಳಪಡಿಸುವ ಸಾಧ್ಯತೆಗಳಿವೆ. ರಸ್ತೆ ಮತ್ತು ರೈಲು ಸಾರಿಗೆ, ಕಡಲ ಸಾರಿಗೆ, ದೂರಸಂಪರ್ಕ, ಬ್ಯಾಂಕ್‌ ಮತ್ತು ವಿಮಾ ಕ್ಷೇತ್ರಗಳು ಸಂಪೂರ್ಣವಾಗಿ ಖಾಸಗೀಕರಣಗೊಂಡರೆ ಸಹಜವಾಗಿಯೇ ಉದ್ಯೋಗಾವಕಾಶಗಳು ಕ್ಷೀಣಿಸಲಿದ್ದು, ಸಂವಿಧಾನದತ್ತವಾಗಿ ಲಭ್ಯವಾಗಬೇಕಾದ ಮೀಸಲಾತಿ ಸೌಲಭ್ಯಗಳೂ ಇಲ್ಲವಾಗುತ್ತವೆ. ಇದು ತಳಸಮುದಾಯಗಳ ಪಾಲಿಗೆ ಆಘಾತಕಾರಿಯಾಗಲಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಭೂಮಿಯನ್ನು ಕಳೆದುಕೊಂಡು ನಗರಕ್ಕೆ ಬರುವ ಕೋಟ್ಯಂತರ ಜನರಿಗೆ ಉದ್ಯೋಗ ಸೃಷ್ಟಿಯಾಗುವುದು ಅನೌಪಚಾರಿಕ ವಲಯದಲ್ಲಿ. ಸೇವಾ ಭದ್ರತೆ ಇಲ್ಲದೆ, ನಿವೃತ್ತಿ ಸೌಲಭ್ಯಗಳಿಲ್ಲದೆ, ಖಾಯಂ ನೌಕರಿಯ ಭರವಸೆ ಇಲ್ಲದೆ ತಮ್ಮ ಜೀವನ ಮತ್ತು ಜೀವನೋಪಾಯದ ಮಾರ್ಗಗಳನ್ನು ಹುಡುಕಿಕೊಳ್ಳುವ ಅನಿವಾರ್ಯತೆ ಈ ಜನಸಮುದಾಯಗಳಿಗೆ ಎದುರಾಗುತ್ತದೆ. ಕಾರ್ಖಾನೆಗಳಲ್ಲಿ, ಉತ್ಪಾದನಾ ವಲಯದಲ್ಲಿ ನೌಕರಿ ಪಡೆಯುವ ಈ ಜನತೆಯ ಬದುಕು ಸಹ ಅನಿಶ್ಚಿತವಾಗಿಯೇ ಮುಂದುವರೆಯುತ್ತದೆ. ಏಕೆಂದರೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಕಾರ್ಮಿಕ ಸಂಹಿತೆಗಳು ಕಾರ್ಮಿಕರ ಮುಷ್ಕರದ ಹಕ್ಕನ್ನೂ, ಸಂಘಟನೆಯ ಹಕ್ಕನ್ನೂ ಕಸಿದುಕೊಳ್ಳಲಿವೆ. ಉದ್ಯಮಿಗಳಿಗೆ ತಮ್ಮ ಸ್ವೇಚ್ಚಾನುಸಾರ ಕಾರ್ಮಿಕರನ್ನು ನೇಮಿಸುವ-ವಜಾಮಾಡುವ ಹಕ್ಕು ನೀಡಲಾಗುತ್ತದೆ. ಈ ಅನಿಶ್ಚಿತತೆಯ ನಡುವೆಯೇ ಕಾರ್ಮಿಕರು ಸಂಘಟಿತರಾಗಿ ಹೋರಾಡಬೇಕಿದೆ. ಅನೌಪಚಾರಿಕ ವಲಯದ ಪೌರ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಸಾರ್ವಜನಿಕ ಕಾಮಗಾರಿ ನೌಕರರು ಬಹುಪಾಲು ಗುತ್ತಿಗೆದಾರರ ಹಿಡಿತದಲ್ಲಿರುವುದರಿಂದ ಈ ಕಾರ್ಮಿಕರನ್ನು ಸಂಘಟಿಸಲು ಹೆಚ್ಚಿನ ಪರಿಶ್ರಮ ಅಗತ್ಯವಿದೆ. ಬಹುರಾಷ್ಟ್ರೀಯ ಕಂಪನಿಗಳ ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರನ್ನು ವಿನಾಕಾರಣ ವಜಾ ಮಾಡುವ ಪ್ರಕರಣಗಳೂ ಹೆಚ್ಚಾಗುತ್ತಿದ್ದು, ಈ ಕಾರ್ಮಿಕರ ನೌಕರಿಯ ಹಕ್ಕುಗಳಿಗಾಗಿ ಹೋರಾಡಬೇಕಿದೆ.

ಇದರೊಂದಿಗೆ ತಮ್ಮ ಭೂಮಿಯನ್ನೂ ಕಳೆದುಕೊಂಡು, ಸೂಕ್ತ ಪರಿಹಾರವನ್ನೂ ಪಡೆಯದೆ, ಉದ್ಯಮಿಗಳು ಭರವಸೆ ನೀಡಿದಂತೆ ನೌಕರಿಯನ್ನೂ ಗಳಿಸಲಾಗದೆ ಬೀದಿ ಪಾಲಾಗಿರುವ ಲಕ್ಷಾಂತರ ಗ್ರಾಮೀಣ ಜನರು ಇಂದು ದಾರಿಗಾಣದಂತಾಗಿದ್ದಾರೆ. ಪ್ರತಿರೋಧ, ಪ್ರತಿಭಟನೆ ಮತ್ತು ಮುಷ್ಕರಗಳತ್ತ ಕಣ್ಣೆತ್ತಿಯೂ ನೋಡದ ನಿರ್ದಾಕ್ಷೀಣ್ಯತೆ ಆಡಳಿತಾರೂಢ ಪಕ್ಷಗಳನ್ನು ಆವರಿಸಿದೆ. ಮುಷ್ಕರ ನಿರತ ಕಾರ್ಮಿಕರ, ರೈತರ ಅಹವಾಲುಗಳನ್ನು, ಅವರ ಕುಂದು ಕೊರತೆಗಳನ್ನು ಆಲಿಸಲೂ ಮುಂದಾಗದಂತಹ ನಿಷ್ಕ್ರಿಯ ಜನಪ್ರತಿನಿಧಿಗಳ ನಡುವೆ ಕಾರ್ಮಿಕರು, ಶ್ರಮಜೀವಿಗಳು ಸಿಲುಕಿದ್ದಾರೆ. ಭೂಹೀನ ಕೃಷಿಕರಿಂದ ಹಿಡಿದು ಅತಿಥಿ ಉಪನ್ಯಾಸಕರವರೆಗೆ ಲಕ್ಷಾಂತರ ಶ್ರಮಿಕರು ಇಂದು ತಮ್ಮ ಜೀವನೋಪಾಯಕ್ಕಾಗಿ ಪರದಾಡುವಂತಾಗಿದೆ. ಉನ್ನತ ಪದವಿ ಪಡೆದವರೂ ಸಹ ಪೌರ ಕಾರ್ಮಿಕ ಹುದ್ದೆಗೆ, ಕೆಳದರ್ಜೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿರುವುದು ಈ ಪರಿಸ್ಥಿತಿಯ ದ್ಯೋತಕವಾಗಿದೆ. ಬಂಡವಳಿಗರೇ ಸೃಷ್ಟಿಸುವ ಗುತ್ತಿಗೆದಾರರ ಸಾಮ್ರಾಜ್ಯದಲ್ಲಿ ಸಿಲುಕಿ ತಮ್ಮ ಜೀವನ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆಯನ್ನು ಕೆಳಸ್ತರದ ಶ್ರಮಜೀವಿಗಳು ಎದುರಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಸಂಘಟಿತ ಕಾರ್ಮಿಕರ ಜವಾಬ್ದಾರಿ ಏನು ? ಖಾಸಗಿ ಮತ್ತು ಸಾರ್ವಜನಿಕ ಉದ್ದಿಮೆಗಳಿಂದ ಬ್ಯಾಂಕಿಂಗ್‌ ವಿಮಾ ವಲಯದವರೆಗೆ ಚಾಚಿಕೊಂಡಿರುವ ಸಂಘಟಿತ ಕಾರ್ಮಿಕ ವರ್ಗ ಇಂದು ತನ್ನದೇ ಆದ ಹಿತವಲಯವನ್ನು ಸೃಷ್ಟಿಸಿಕೊಂಡಿದೆ. ಏಳು ದಶಕಗಳ ಅಭಿವೃದ್ಧಿಯ ಫಲಾನುಭವಿಗಳಾಗಿ, ಮಧ್ಯಮ ವರ್ಗಗಳಾಗಿ ರೂಪುಗೊಂಡಿರುವ ಈ ವರ್ಗದ ಒಂದು ಭಾಗವಾದರೂ ಇಂದು ತಮ್ಮ ಬೇರುಗಳನ್ನು ಮರುಶೋಧಿಸಬೇಕಿದೆ. ಶಿಕ್ಷಣ, ವಿದ್ಯಾರ್ಹತೆ ಮತ್ತು ಸುಭದ್ರ ಬದುಕಿನ ಅಡಿಪಾಯ ಹೊಂದಿರುವ ಒಂದು ಬೃಹತ್‌ ಕಾರ್ಮಿಕ ವಲಯ ಇಂದು ಅವಕಾಶವಂಚಿತ ಸಮುದಾಯಗಳತ್ತ ನೋಡಲೂ ಹಿಂಜರಿಯುತ್ತಿರುವುದು ಈ ಕಾಲದ ದುರಂತ. ತಮ್ಮ ಕಣ್ಣೆದುರಿನಲ್ಲೇ ನೆಲೆ ಕಳೆದುಕೊಳ್ಳುತ್ತಿರುವ ಶ್ರಮಿಕ ವರ್ಗಗಳತ್ತ ಗಮನಹರಿಸದೆ, ಕೇವಲ ತಮ್ಮ ಆರ್ಥಿಕ ಹಿತಾಸಕ್ತಿಗಳಿಗಾಗಿಯೇ ಹೋರಾಡುವ ಮನೋಭಾವದಿಂದ ಸುಶಿಕ್ಷಿತ, ಸುಸಂಘಟಿತ ಕಾರ್ಮಿಕರು ಹೊರಬರಬೇಕಿದೆ. ನಾವು ಸೃಷ್ಟಿಸಿಕೊಂಡಿರುವ ಹಿತವಲಯದ ಭೋಗ ಜೀವನದ ಹಿಂದೆ ಅಸಂಖ್ಯಾತ ಶ್ರಮಿಕರ ಬೆವರು ಹರಿದಿದೆ, ಇಂದಿಗೂ ಹರಿಯುತ್ತಿದೆ ಎಂಬ ಸಾಮಾನ್ಯ ಪ್ರಜ್ಞೆ ಸಂಘಟಿತ ಕಾರ್ಮಿಕರಲ್ಲಿ ಮೂಡಬೇಕಿದೆ. ತಳವರ್ಗಗಳ ನಿತ್ಯ ಬದುಕಿನ ಜಂಜಾಟವನ್ನು ಗಮನಿಸಿಯೂ ಗಮನಿಸದಂತೆ, ಅಧಿಕಾರ ರಾಜಕಾರಣದ ಹಿಂದೆ ಹೋಗುವ ಪ್ರವೃತ್ತಿಯಿಂದ ಸಂಘಟಿತ ಕಾರ್ಮಿಕ ವಲಯ ಹೊರಬರಬೇಕಿದೆ.

ಭಾರತದಲ್ಲಿ ಜಾತಿಯೇ ಒಂದು ವರ್ಗವಾಗಿ ಪರಿಣಮಿಸುತ್ತದೆ. ನಿಕೃಷ್ಟ ಬದುಕು ಸವೆಸುತ್ತಿರುವ ಶ್ರಮಜೀವಿಗಳು ಜಾತಿ ವ್ಯವಸ್ಥೆಯ ಶೋಷಣೆಯೊಂದಿಗೇ ಬಂಡವಾಳಿಗರ ಶೋಷಣೆಯನ್ನೂ  ಎದುರಿಸಬೇಕಾಗುತ್ತದೆ. ಈ ಎರಡು ಅಲಗಿನ ಖಡ್ಗ ಇಕ್ಕೆಲಗಳಲ್ಲೂ ಇದ್ದು, ಇನ್ನೂ ಮೊನಚಾಗುತ್ತಿರುವುದಕ್ಕೆ ನವ ಉದಾರವಾದದ ಆರ್ಥಿಕ ನೀತಿಗಳು ಕಾರಣವಾಗಿವೆ. ಜಾತಿ, ಮತ, ಧರ್ಮದ ಅಸ್ಮಿತೆಗಳು ಶ್ರಮಿಕ ವರ್ಗವನ್ನು ಅಡ್ಡಡ್ಡಲಾಗಿ ಸೀಳುತ್ತಿರುವ ಸಂದರ್ಭದಲ್ಲಿ, ಪ್ರಜಾಪ್ರಭುತ್ವ ಮತ್ತು ಸಮಸಮಾಜಕ್ಕಾಗಿ ಹೋರಾಡುತ್ತಿರುವ ಎಡಪಂಥೀಯ, ಪ್ರಗತಿಪರ ಕಾರ್ಮಿಕ ಸಂಘಟನೆಗಳು ಕಾರ್ಮಿಕರ ನಡುವೆ ವರ್ಗಪ್ರಜ್ಞೆಯನ್ನು ಬೆಳೆಸಲು ಇನ್ನಾದರೂ ಶ್ರಮಿಸಬೇಕಿದೆ. ತಾವು ನಿರ್ಮಿಸಿಕೊಂಡ ಹಿತವಲಯದ ಚೌಕಟ್ಟಿನಿಂದಾಚೆಗೂ ಒಂದು ದುರಂತ ಪ್ರಪಂಚ ಇದೆ ಎಂಬ ಕನಿಷ್ಠ ಸಾಮಾಜಿಕ ಪ್ರಜ್ಞೆ ಪ್ರತಿಯೊಬ್ಬ ಕಾರ್ಮಿಕನಲ್ಲೂ ಬೆಳೆಸಲು ಸಾದ್ಯವಾಗುವುದಾದರೆ, ಈ ವರ್ಗಪ್ರಜ್ಞೆಯನ್ನು ಮತ್ತು ಸಮೂಹ ಪ್ರಜ್ಞೆಯನ್ನು ಅಂತರ್ಗತಗೊಳಿಸುವಲ್ಲಿ ಕಾರ್ಮಿಕ ಸಂಘಟನೆಗಳು ಸಕ್ರಿಯ ಪಾತ್ರ ವಹಿಸಿದರೆ, ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆಯಾಗಿ ಮೇ ದಿನವನ್ನು ಆಚರಿಸುವುದು ಸಾರ್ಥಕವಾದೀತು.

Donate Janashakthi Media

Leave a Reply

Your email address will not be published. Required fields are marked *