ಭೋಪಾಲ್: ಮಧ್ಯಪ್ರದೇಶದ ವಿಧಾನಸಭೆ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಕಮಲ್ ನಾಥ್ ರಾಜೀನಾಮೆ ನೀಡಿದ್ದಾರೆ.
ಸದ್ಯ ಕಮಲ್ ನಾಥ್ ರಾಜೀನಾಮೆಯನ್ನು ಕಾಂಗ್ರೆಸ್ ಹೈಕಮಾಂಡ್ ಅಂಗೀಕರಿಸಿದೆ. ಅಲ್ಲದೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನಾಗಿ ಡಾ. ಗೋವಿಂದ ಸಿಂಗ್ ಅವರನ್ನು ನೇಮಕ ಮಾಡಿದೆ.
ಈ ಕುರಿತು ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಪತ್ರ ಬರೆದಿದ್ದು, ಅದರಲ್ಲಿ ಮಧ್ಯಪ್ರದೇಶದ ಕಾಂಗ್ರೆಸ್ ಪಕ್ಷದ ವಿರೋಧ ಪಕ್ಷದ ನಾಯಕನ ಸ್ಥಾನ ಹಾಗೂ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ನೀವು ನೀಡಿದ ರಾಜೀನಾಮೆಯನ್ನು ಹೈಕಮಾಂಡ್ ಅಂಗೀಕರಿಸಿದೆ. ಶಾಸಕಾಂಗ ಪಕ್ಷದ ನಾಯಕರಾಗಿ ನಿಮ್ಮ ಕೊಡುಗೆಯನ್ನು ತುಂಬು ಹೃದಯದಿಂದ ಅಭಿನಂದಿಸುತ್ತದೆ ಎಂದು ತಿಳಿಸಿದ್ದಾರೆ.
ಮುಂಬರುವ 2023ರ ವಿಧಾನಸಭಾ ಚುನಾವಣೆಯ ದೃಷ್ಟಿಯಲ್ಲಿರಿಸಿಕೊಂಡು ಕಾಂಗ್ರೆಸ್ ಹೈಕಮಾಂಡ್ ಈ ನಿರ್ಧಾರ ತೆಗೆದುಕೊಂಡಿದೆ. ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಕಮಲ್ ನಾಥ್ ಅವರೇ ಮುಂದುವರೆಯಲಿದ್ದಾರೆ ಎಂದು ಎಐಸಿಸಿಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.
ಇದೇ ವೇಳೆ ಡಾ. ಗೋವಿಂದ ಸಿಂಗ್ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನನ್ನಾಗಿ(ಸಿಎಲ್‍ಪಿ) ನೇಮಕ ಮಾಡಲಾಗಿದೆ ಎಂಬುದನ್ನು ವೇಣುಗೋಪಾಲ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಗೋವಿಂದ ಸಿಂಗ್ ಅವರು ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಲಹರ್ ಕ್ಷೇತ್ರದ ಶಾಸಕರಾಗಿದ್ದಾರೆ.