ನಿತ್ಯಾನಂದಸ್ವಾಮಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರು ನೋಡಲು ತುಂಬಾ ಮುಗ್ದರಂತೆ ಕಾಣುತ್ತಿದ್ದಾರೆ. ಆದರೆ ಅವರು ತೊಟ್ಟಿರುವ ಮುಖವಾಡ ಆಗಾಗ ಕಳಚಿ ಬೀಳುತ್ತಿದ್ದು ಅವರ ನಿಜ ಬಣ್ಣ ಬಯಲಾಗುತ್ತಿರುತ್ತದೆ.
ಕಮಿಷನ್ ಸರ್ಕಾರ ಎಂದೇ ಚರ್ಚಿಸಲ್ಪಡುತ್ತಿರುವ ಬೊಮ್ಮಾಯಿ ನೇತೃತ್ವದ ಬಿಜೆಪಿ ಸಕಾರ ಭ್ರಷ್ಟಾಚಾರದಲ್ಲಿ ಮಿಂದೇಳುತ್ತಿದೆ. ಕರ್ನಾಟಕದ ಬಿಜೆಪಿ ಭ್ರಷ್ಟಾಚಾರದ ಬ್ರಹ್ಮಾಂಡವೇ ಆಗಿದೆ ಎಂದರೆ ತಪ್ಪಾಗದು 40 ಪರ್ಸೆಂಟ್ ಕಮಿಷನ್ ಕೇಳುವ ಈ ಸರ್ಕಾರ ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರನನ್ನು ಬಲಿ ಪಡೆದಿದೆ. ಕೊನೆಗೆ ಮಂತ್ರಿ ಈಶ್ವರಪ್ಪ ರಾಜಿನಾಮೆ ನೀಡಿ ಕೆಳಗೆ ಇಳಿದಿದ್ದಾರೆ. ಸರ್ಕಾರದ ಕೊಳಕುತನವನ್ನು ಮರೆಮಾಚಲು ನೆರವಾಗಿದ್ದಾರೆ. ಇದು ಗೋಮುಖ ವ್ಯಾರ್ಘನೊಬ್ಬನ ಆಡಳಿತ ವೈಖರಿ. ಪಿಎಸ್‌ಐ ನೇಮಕಾತಿ ವಿಚಾರದಲ್ಲೂ ಪ್ರತಿಯೊಬ್ಬ ಅಭ್ಯರ್ಥಿಯಿಂದ ತಲಾ 80 ಲಕ್ಷ ರೂ. ಹಣದ ಬೇಡಿಕೆ ಇಟ್ಟಿರುವುದು ಸಹ ಬೆಳಕಿಗೆ ಬಂದಿದೆ. ಒಂದಿಲ್ಲೊಂದು ಕ್ಷೇತ್ರದಲ್ಲಿ ಸರ್ಕಾರವೇ ಭ್ರಷ್ಟಾಚಾರದಲ್ಲಿ ತೊಡಗಿರುವುದನ್ನು ಗಮನಿಸಿದರೆ, ರಾಜ್ಯದಲ್ಲಿ ಒಂದು ಜನಪರವಾದ ನೆಮ್ಮದಿಯ ಆಡಳಿತ ನೀಡುವಲ್ಲಿ ಬೊಮ್ಮಾಯಿ ನೇತೃತ್ವದ ಬಿಜೆಪಿ ಸಂಪೂರ್ಣ ಅಸಮರ್ಥವಾಗಿದೆ ಎಂದು ರುಜುವಾತು ಆಗುತ್ತಿದೆ.
ಬೊಮ್ಮಾಯಿ ಸರ್ಕಾರ ತನ್ನ ಆಡಳಿತಾತ್ಮಕ ವೈಫಲ್ಯವನ್ನು ಮರೆಮಾಚಲು ಕೋಮು ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುತ್ತಿದೆ. ರಾಜ್ಯದಲ್ಲಿ ಹಿಜಾಬ್, ಹಲಾಲ್ ಕಟ್, ಮುಸ್ಲಿಂ ವ್ಯಾಪಾರಸ್ಥರಿಗೆ ಜಾತ್ರೆಗಳಲ್ಲಿ ನಿಷೇಧ, ಅಜಾ಼ನ್ ಮತ್ತಿತ್ತರ ವಿಚಾರಗಳನ್ನು ಬಡಿದೆಬ್ಬಿಸಿ ಕೋಮು ಗಲಭೆಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಇದು ಬೊಮ್ಮಾಯಿ ಕೈಗೊಂಡಿರುವ ತಂತ್ರಗಾರಿಕೆ. ಗಲಭೆಗಳ ಮೂಲಕ ಜನರ ಗಮನ ಬೇರೆಡೆಗೆ ಸೆಳೆಯುತ್ತಿದ್ದಾರೆ.
ಕಳೆದ ಕೆಲವು ತಿಂಗಳ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಕರಾವಳಿ ಜಿಲ್ಲೆಗಳಲ್ಲಿ ಕೋಮು ಗಲಭೆ ಬುಗಿಲೆದ್ದಾಗ ‘ಪ್ರತಿಯೊಂದು ಕೃತಿಗೂ ಒಂದು ಕಾರಣ ಇದ್ದೇ ಇರುತ್ತದೆ’ ಎಂದು ಹೇಳುವ ಮೂಲಕ ಪುಂಡರು ನಡೆಸುತ್ತಿರುವ ಕೋಮು ಹಿಂಸಾಚಾರವನ್ನು ಬೆಂಬಲಿಸಿದ್ದರು. ಆದರೆ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಜರುಗಿದ ಕೋಮು ಗಲಭೆ ಸಂಧರ್ಭದಲ್ಲಿ ಮುಖ್ಯಮಂತ್ರಿಗಳು ಈ ರೀತಿ ಹೇಳಲಿಲ್ಲ.
ಹುಬ್ಬಳ್ಳಿಯಲ್ಲಿ ಜರುಗಿದ್ದು ಕೇವಲ ಮುಸ್ಲಿಂರವರಿಂದ ಜರುಗಿದ ದುಷ್ಕತ್ಯ ಎಂಬುದು ಬೊಮ್ಮಾಯಿರವರ ವಾದ. ಹಿಂದುಗಳ ಹಿಂಸಾಚಾರಕ್ಕೆ ಕಾರಣವಿರುತ್ತದೆ, ಆದರೆ ಮುಸ್ಲಿಂರಿಂದ ನಡೆಯುವ ಹಿಂಸಾಚಾರಕ್ಕೆ ಸಕಾರಣ ಇರುವುದಿಲ್ಲ ಎಂಬುದು ಬೊಮ್ಮಾಯಿರವರ ಅಭಿಪ್ರಾಯ. ಇದು ಶುದ್ಧ ತಪ್ಪು. ಇತ್ತೀಚೆಗೆ ಸ್ವಾಮಿಜಿಯೊಬ್ಬರು ಹೇಳಿದ ಮಾತು ಇಲ್ಲಿ ಉಲ್ಲೇಖಾರ್ಹವಾಗಿದೆ. ಅವರು ವ್ಯಕ್ತಪಡಿಸಿದ ಅಭಿಪ್ರಾಯ ಏನೆಂದರೆ “ಯಾವುದೇ ಹಿಂಸಾಚಾರ ಧರ್ಮವಾಗಲಾರದು.”
ಹಿಂಸಾಚಾರ ಸಮರ್ಥನೀಯವೇ ಅಲ್ಲ. ರಾಜಕೀಯ ಅಧಿಕಾರ ಉಳಿಸಿಕೊಳ್ಳಲು ನಡೆಸುವ ಹಿಂಸಾಚಾರ ಅಕ್ಷಮ್ಯವಾದುದು. ಬಸವರಾಜ ಬೊಮ್ಮಾಯಿಯವರು ಬಿಜೆಪಿ, ಆರೆಸ್ಸೆಸ್ ಕುಮ್ಮಕ್ಕಿನಿಂದ ಹಿಂಸೆಗೆ ಕುಮ್ಮಕ್ಕು ನೀಡುವುದು ಹಿಂದು ಧರ್ಮವಲ್ಲ. ಅದು ರಾಷ್ಟ್ರಕವಿ ಕುವೆಂಪುರವರ ಸಂದೇಶದಂತೆ ಸರ್ವ ಜನಾಂಗದ ಶಾಂತಿಯ ತೋಟವಾಗಿರಬೇಕು.
ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರ, ಕೇಂದ್ರದಲ್ಲಿ ಮೋದಿ ಸರ್ಕಾರ ಒಂದೇ ನಾಣ್ಯದ ಎರಡು ಮುಖಗಳು. ನಮ್ಮ ಜನಗಳಿಗೆ ಈ ಸರ್ಕಾರಗಳ ವಿಷಕಾರಿ ಸ್ವರೂಪ ಇನ್ನೂ ಅರ್ಥವಾಗದಿರುವದು ವಿಷಾದದ ಸಂಗತಿ. ಅವರು ಸಮಾಜಕ್ಕೆ ವಿಷ ಉಣಿಸುತ್ತಾರೆ. ನಮ್ಮ ಯುವಜನರು ತಿಳಿದೋ ತಿಳಿಯದೋ ಆರೆಸ್ಸೆಸ್ ವಿಷವನ್ನು ಸೇವಿಸುತ್ತಾರೆ. ಸರ್ಕಾರದ ಆರ್ಥಿಕ, ಸಾಮಾಜಿಕ ವೈಫಲ್ಯ ಮರೆಯಾಗುತ್ತಿದೆ. ಬಡತನ ಕಿತ್ತು ತಿನ್ನುವಂತಾದರೂ ನಿರುದ್ಯೋಗ ವ್ಯಾಪಕವಾಗಿ ಹರಡಿಕೊಂಡರೂ ಅದನ್ನು ಕಾಣದಂತವರಾಗುತ್ತಾರೆ. ಮುಸ್ಲಿಂ ಮತ್ತು ಇತರ ಕೋಮಿನ ಯುವಕರೂ ಸಹ ಪ್ರಚೋದನೆಗೆ ಒಳಗಾಗುತ್ತಾರೆ. ದ್ವೇಷವನ್ನು ಕಣ್ಣಿಗೆ ಮೆತ್ತಿಕೊಂಡವರಂತೆ ವರ್ತಿಸುತ್ತಾರೆ. ಜನತೆಯ ಆಕ್ರೋಶದಿಂದ ಸರ್ಕಾರ ಪಾರಾಗುತ್ತಿದೆ. ಬೊಮ್ಮಾಯಿ ಸರ್ಕಾರಕ್ಕೆ ಬೆಲೆ ಏರಿಕೆ ತಡೆಗಟ್ಟಲು ಸಾಧ್ಯವಾಗಿಲ್ಲ. ಅಸಂಘಟಿತ ವಲಯದ ಕಾರ್ಮಿಕರಿಗೆ ನ್ಯಾಯಬದ್ಧವಾದ ವೇತನ ನೀಡುವಲ್ಲಿ ವಿಫಲವಾಗಿದೆ. ರೈತರ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ನೀಡುವ ವಿಷಯದಲ್ಲಿ ಆಸಕ್ತಿ ಇಲ್ಲ. ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಲಾಗುತ್ತಿಲ್ಲ. ದಲಿತರ, ಮಹಿಳೆಯರ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಯುತ್ತಿರುವುದನ್ನು ತಡೆಯಲು ಈ ಸರ್ಕಾರ ಮುಂದಾಗುತ್ತಿಲ್ಲ. ಇಂತಹ ಸರ್ಕಾರದ ಮುಖವಾಡ ಕಳಚಿಹಾಕಬೇಕಾಗಿದೆ. ಬಿಜೆಪಿಯಿಂದ ಜನತೆ ಇನ್ನು ಮುಂದಾದರೂ ಮೋಸ ಹೋಗಬಾರದು.