ಅಮೆಝಾನ್ ಯೂನಿಯನ್ ಗೆಲುವು ಕಾರ್ಮಿಕರ ರಾಷ್ಟ್ರೀಯ ಅಭಿಯಾನ ಆರಂಭಿಸಿದೆ

ವಸಂತರಾಜ ಎನ್.ಕೆ.

ಅಮೆಝಾನ್ ನ ಸ್ಟೇಟೆನ್ ದ್ವೀಪದ JFK8 ಘಟಕದ ಕಾರ್ಮಿಕರು ಯೂನಿಯನ್ ಹೊಂದುವುದನ್ನು ಶೇ.60ಕ್ಕೂ ಹೆಚ್ಚು ಭಾರೀ ಬಹುಮತದಿಂದ ಬೆಂಬಲಿಸಿದ್ದಾರೆ. ಇದರಿಂದ ಯು.ಎಸ್ ನಲ್ಲಿರುವ ಅಮೆಝಾನ್ ನ ಸುಮಾರು 200 ಘಟಕಗಳ ಕಾರ್ಮಿಕರಲ್ಲಿ ಇದರಿಂದ ವಿದ್ಯುತ್ ಸಂಚಾರವಾಗಿದ್ದು, ಸ್ಟೇಟೆನ್ ದ್ವೀಪದ ಘಟಕದ ಕಾರ್ಮಿಕರು ಇದನ್ನು ಸಾಧಿಸುವುದು ಸಾಧ್ಯವಾದರೆ ನಮಗೆ ಯಾಕೆ ಸಾಧ್ಯವಿಲ್ಲವೆಂದು ಕೇಳುತ್ತಿದ್ದಾರೆ.  ಸ್ಟಾರ್ ಬಕ್ಸ್ ಎಂಬ ಯು.ಎಸ್ ನಲ್ಲಿ ಹಲವು ಘಟಕಗಳನ್ನು ಹೊಂದಿರುವ ಇನ್ನೊಂದು ದೈತ್ಯ ಕಂಪನಿಯಲ್ಲಿ ಇದೇ ಪ್ರಕ್ರಿಯೆ ಆರಂಭವಾಗಿದೆ. ನ್ಯೂಯಾರ್ಕಿನ ಬಫೆಲೊ ದಲ್ಲಿ ಸ್ಟಾರ್ ಬಕ್ಸ್ ಘಟಕದಲ್ಲಿ ಕಾರ್ಮಿಕರು ಯೂನಿಯನ್ ಬೇಕು ಎಂದು ಡಿಸೆಂಬರಿನಲ್ಲಷ್ಟೇ ಬಹುಮತದಿಂದ ಆಯ್ಕೆ ಮಾಡಿದ್ದು, ಕೆಲವೇ ತಿಂಗಳುಗಳಲ್ಲಿ 12ಕ್ಕೂ ಹೆಚ್ಚು ಘಟಕಗಳಲ್ಲಿ ಕಾರ್ಮಿಕರ ಯೂನಿಯನ್ ಕಟ್ಟುವುದನ್ನು ಬಹುಮತದಿಂದ ಬೆಂಬಲಿಸಿದ್ದಾರೆ.  ಕಾರ್ಮಿಕರು ಯು.ಎಸ್ ಕಾರ್ಪೊರೆಟ್  ಗಳ ಅತಿಯಾಸೆಯಿಂದ ಬೇಸತ್ತಿದ್ದಾರೆ, ಆಕ್ರೋಶಗೊಂಡಿದ್ದಾರೆ. ಒಂದು ಕಡೆ ಕೊವಿಡ್  ಅವಧಿಯಲ್ಲಿ ಬಿಕಟ್ಟನ್ನು ಪೂರ್ಣವಾಗಿ ಕಾರ್ಮಿಕರ ಮೇಲೆ ಹೊರಿಸಿ, ಇನ್ನೊಂದು ಕಡೆ ಸರಕಾರದ ವಿಶೇಷ ಕೊವಿಡ್ ಪ್ಯಾಕೇಜನ್ನು ಬಾಚಿಕೊಂಡದ್ದು ಇದಕ್ಕೆ ಕಾರಣವಾಗಿದೆ.  ಈ ಬೇಜವಾಬ್ದಾರ ಕಾರ್ಪೊರೆಟ್ ಏಕಾಧಿಕಾರವನ್ನು ಕಾರ್ಮಿಕರ ನಿಜವಾದ ಪ್ರಜಾಪ್ರಭುತ್ವದಿಂದ ಎದುರಿಸಬೇಕೆಂಬ ಛಲ ಬಂದಿದೆ.

ದೈತ್ಯ ಕಂಪನಿ ಅಮೆಝಾನ್ ನ ಸ್ಟೇಟೆನ್ ದ್ವೀಪದ JFK8 ಎಂಬ ಘಟಕದ ಕಾರ್ಮಿಕರ ಯೂನಿಯನ್ ಗೆಲುವು ಕಾರ್ಮಿಕರ ರಾಷ್ಟ್ರೀಯ ಯು.ಎಸ್ ನಲ್ಲೊಂದು ಕಾರ್ಮಿಕರ ಅಭಿಯಾನ ಆರಂಭಿಸಿದೆಯೆಂದು ಸೆನೆಟರ್ ಬರ್ನಿ ಸ್ಯಾಂಡರ್ಸ್ ಎಂಬ ಪ್ರಗತಿಪರ ಡೆಮೊಕ್ರಾಟಿಕ್ ಸೆನೆಟರ್ ಹೇಳಿದ್ದಾರೆ. ಅಮೆಝಾನ್ ನ ಸ್ಟೇಟೆನ್ ದ್ವೀಪದ JFK8 ಘಟಕದ ಕಾರ್ಮಿಕರು ಯೂನಿಯನ್ ಹೊಂದುವುದನ್ನು ಶೇ.60ಕ್ಕೂ ಹೆಚ್ಚು ಭಾರೀ ಬಹುಮತದಿಂದ ಬೆಂಬಲಿಸಿದ್ದರ ಕುರಿತು ಅವರು ಉಲ್ಲೇಖಿಸುತ್ತಿದ್ದರು. ಯು.ಎಸ್ ನಲ್ಲಿರುವ ಅಮೆಝಾನ್ ನ ಸುಮಾರು 200 ಘಟಕಗಳ ಕಾರ್ಮಿಕರಲ್ಲಿ ಇದರಿಂದ ವಿದ್ಯುತ್ ಸಂಚಾರವಾಗಿದ್ದು, ಸ್ಟೇಟೆನ್ ದ್ವೀಪದ ಘಟಕದ ಕಾರ್ಮಿಕರು ಇದನ್ನು ಸಾಧಿಸುವುದು ಸಾಧ್ಯವಾದರೆ ನಮಗೆ ಯಾಕೆ ಸಾಧ್ಯವಿಲ್ಲವೆಂದು ಕೇಳುತ್ತಿದ್ದಾರೆ. ಯೂನಿಯನ್ ಆಯ್ಕೆಯ ಚುನಾವಣೆಗೆ ತಯಾರಾಗುತ್ತಿದ್ದಾರೆ.  ಸ್ಟೇಟೆನ್ ದ್ವೀಪದ ಘಟಕದ ಯೂನಿಯನ್ ಸಂಘಟಕರನ್ನು ಸಂಪರ್ಕಿಸುತ್ತಿದ್ದಾರೆ. ಇದು ಅಮೆಝಾನ್ ಒಡೆಯ ಶತಕೋಟ್ಯಾಧೀಶ ಜೆಫ್ ಬೆಝೋಸ್ ಮತ್ತು ಅದರ ನಿರ್ವಹಣಾ ಮಂಡಳಿಯನ್ನು ಕಂಗೆಡಿಸಿದೆ.

ಅಮೆಝಾನ್ ಒಡೆಯ ಶತಕೋಟ್ಯಾಧೀಶ ಜೆಫ್ ಬೆಝೋಸ್

ಇಷ್ಟು ಮಾತ್ರವಲ್ಲ ಸ್ಟಾರ್ ಬಕ್ಸ್ ಎಂಬ ಯು.ಎಸ್ ನಲ್ಲಿ ಹಲವು ಘಟಕಗಳನ್ನು ಹೊಂದಿರುವ ಇನ್ನೊಂದು ದೈತ್ಯ ಕಂಪನಿಯಲ್ಲಿ ಇದೇ ಪ್ರಕ್ರಿಯೆ ಆರಂಭವಾಗಿದ್ದು ಯು.ಎಸ್ ನ ಎಲ್ಲ ಶತಕೋಟ್ಯಾಧೀಶರ ನಿದ್ದೆಯನ್ನೂ ಕೆಡಿಸಿದೆ. ನ್ಯೂಯಾರ್ಕಿನ ಬಫೆಲೊ ದಲ್ಲಿ ಸ್ಟಾರ್ ಬಕ್ಸ್ ಘಟಕದಲ್ಲಿ ಕಾರ್ಮಿಕರು ಯೂನಿಯನ್ ಬೇಕು ಎಂದು ಡಿಸೆಂಬರಿನಲ್ಲಷ್ಟೇ ಬಹುಮತದಿಂದ ಆಯ್ಕೆ ಮಾಡಿದ್ದು, ಕೆಲವೇ ತಿಂಗಳುಗಳಲ್ಲಿ 12ಕ್ಕೂ ಹೆಚ್ಚು ಘಟಕಗಳಲ್ಲಿ ಕಾರ್ಮಿಕರ ಯೂನಿಯನ್ ಕಟ್ಟುವುದನ್ನು ಬಹುಮತದಿಂದ ಬೆಂಬಲಿಸಿದ್ದಾರೆ.  ಅಮೆರಿಕದ ಕಾರ್ಮಿಕ ಕಾನೂನುಗಳ ಪ್ರಕಾರ ಒಂದು ಕಂಪನಿ ಅಥವಾ ಘಟಕದಲ್ಲಿ ಯೂನಿಯನ್ ಮಾಡಬೇಕಾದರೆ ಕಾರ್ಮಿಕರಲ್ಲಿ ಅವರು ‘ಯೂನಿಯನ್ ಸೇರಲು ಬಯಸುತ್ತಾರಾ?’ ಎಂಬುದರ ಕುರಿತು ಗುಪ್ತ ಮತದಾನದ ಮೂಲಕ ಅಭಿಪ್ರಾಯ ಸಂಗ್ರಹ ಮಾಡಬೇಕು.  ಅದರಲ್ಲಿ “ಯೂನಿಯನ್ ಸೇರಲು ಬಯಸುವ” ಕುರಿತು ಬಹುಮತ ಬಂದರೆ ಯೂನಿಯನ್ ರಚಿಸಬಹುದು ಮತ್ತು ಅದನ್ನು NLRB (ನೇಶನಲ್ ಲೇಬರ್ ರಿಲೇಶನ್ಸ್ ಬೋರ್ಡ್) ರಿಜಿಸ್ಟರ್ ಮಾಡುತ್ತದೆ. ಆಗ ಮಾತ್ರ ಕಂಪನಿಯ ಜೊತೆಗೆ ಸಾಮೂಹಿಕ ಚೌಕಾಶಿ ಮಾಡುವ ಅವಕಾಶವಿರುತ್ತದೆ.

ಯು.ಎಸ್ ನ ಎರಡನೇ ಅತಿ ದೊಡ್ಡ ಸಂಖ್ಯೆಯ (8 ಲಕ್ಷ) ಕಾರ್ಮಿಕರನ್ನು ಹೊಂದಿರುವ ಮತ್ತು ಜಗತ್ತಿನ ಅತಿ ದೊಡ್ಡ ಇ-ವ್ಯಾಪಾರ ಕಂಪನಿ ಆಗಿರುವ ‘ಅಮೆಝಾನ್’ ತನ್ನ ಯಾವುದೇ ಘಟಕದಲ್ಲಿ ಯೂನಿಯನ್ ಸಂಘಟಿಸುವುದರ ವಿರುದ್ಧ ತೀವ್ರ ಕ್ರಮ ಕೈಗೊಳ್ಳುತ್ತಾ ಬಂದಿದೆ. ಯು.ಎಸ್ ನ ಅಲಬಾಮಾ ರಾಜ್ಯದ ಬೆಸ್ಸೆಮರ್ ನಲ್ಲಿರು ಅಮೆಝಾನ್ ನ್ ನ ಅತಿ ದೊಡ್ಡ  ಗೋದಾಮಿ (ವೇರ್ ಹೌಸ್) ನಲ್ಲಿ ಯೂನಿಯನ್ ಮಾಡುವುದರ ಕುರಿತು ನಡೆದ ಕಾರ್ಮಿಕರ ಅಭಿಪ್ರಾಯ ಸಂಗ್ರಹದಲ್ಲಿ  ಆ ಕಂಪನಿ ಕಾರ್ಮಿಕರ ಮೇಲೆ ಒತ್ತಡ ಮತ್ತು ದಮನಕಾರಿ ಕ್ರಮಗಳ ಮೂಲಕ ಯೂನಿಯನ್ ಗೆ ಸೇರುವುದಿಲ್ಲವೆಂಬ ಅಭಿಮತಕ್ಕೆ ಬಹುಮತ ಬರುವಂತೆ ಆ ಪ್ರಕ್ರಿಯೆಯನ್ನು ತಿರುಚಿತ್ತು. ಇದರ ವಿರುದ್ಧ ಯೂನಿಯನ್ NLRB ನಲ್ಲಿ ಫಿರ್ಯಾದು ಸಲ್ಲಿಸಿದ್ದು ಅದು ಎರಡನೆಯ ಮತದಾನಕ್ಕೆ ಆಜ್ಙೆ ಮಾಡಿತು. ಆದರೆ ಎರಡನೆಯ ಮತದಾನದಲ್ಲಿ ಕಾರ್ಮಿಕರು 875-993 ಮತಗಳಿಂದ ಹಿಂದಿದ್ದಾರೆ. ಆದರೆ 416 ಮತಗಳ ಸಿಂದುತ್ವವನ್ನು ಪ್ರಶ್ನಿಸಲಾಗಿದೆ. ಈ ಕುರಿತು ನಿರ್ಧಾರ NLRB ನ ಅಂಗಳದಲ್ಲಿದೆ.  ಸ್ಟೇಟೆನ್ ದ್ವೀಪದ ಘಟಕದಲ್ಲೂ ಅಮೆಝಾನ್ ಇಂತಹ ಎಲ್ಲ ಪ್ರಯತ್ನಗಳನ್ನು ಮಾಡಿತ್ತು. ಈಗ ಕಾರ್ಮಿಕರ ವಿಜಯವನ್ನು ಮುಕ್ತಮನಸ್ಸಿನಿಂದ ಸ್ವೀಕರಿಸಿಲ್ಲ. ಅದರ ವಿರುದ್ಧ NLRB ನಲ್ಲಿ ಫಿರ್ಯಾದು ಸಲ್ಲಿಸಿದೆ.

ಈ ಎಲ್ಲ ಹಿನ್ನೆಲೆಯಲ್ಲಿ ಸ್ಟೇಟೆನ್ ದ್ವೀಪದ ವ ಅಮೆಜಾನ್ ಘಟಕದ ಕಾರ್ಮಿಕರ ಯೂನಿಯನ್ ಗೆಲುವು ಗಮನಾರ್ಹವಾದುದು. ಕಾರ್ಮಿಕರು ಯು.ಎಸ್ ಕಾರ್ಪೊರೆಟ್  ಗಳ ಅತಿಯಾಸೆಯಿಂದ ಬೇಸತ್ತಿದ್ದಾರೆ, ಆಕ್ರೋಶಗೊಂಡಿದ್ದಾರೆ. ಒಂದು ಕಡೆ ಕೊವಿಡ್  ಅವಧಿಯಲ್ಲಿ ಬಿಕಟ್ಟನ್ನು ಪೂರ್ಣವಾಗಿ ಕಾರ್ಮಿಕರ ಮೇಲೆ ಹೊರಿಸಿ, ಇನ್ನೊಂದು ಕಡೆ ಸರಕಾರದ ವಿಶೇಷ ಕೊವಿಡ್ ಪ್ಯಾಕೇಜನ್ನು ಬಾಚಿಕೊಂಡದ್ದು ಈ ಬೇಜವಾಬ್ದಾರ ಕಾರ್ಪೊರೆಟ್ ಏಕಾಧಿಕಾರವನ್ನು ಕಾರ್ಮಿಕರ ನಿಜವಾದ ಪ್ರಜಾಪ್ರಭುತ್ವದಿಂದ ಎದುರಿಸಬೇಕೆಂಬ ಛಲ ಬಂದಿದೆ. ಜಗತ್ತಿಗೆಲ್ಲ ಮಾನವ ಹಕ್ಕುಗಳ ಪಾಠ ಮಾಡುವ ಯು.ಎಸ್ ಸರಕಾರ ಯೂನಿಯನ್ ಕಟ್ಟಿಕೊಂಡು ಸಾಮೂಹಿಕ ಚೌಕಾಶಿಯ ಮೂಲಭೂತ ಹಕ್ಕನ್ನು  ಕೊಡದಿರುವ ಕಾರ್ಮಿಕ-ವಿರೋಧಿ ಕಾರ್ಮಿಕ ಕಾನೂನುಗಳನ್ನು ಬದಲಾಯಿಸಲು ಹಿಂಜರಿಯುತ್ತಿರುವುದು ವಿರುದ‍್ಧ ಸಹ ಆಕ್ರೋಶ ತಿರುಗುತ್ತಿದೆ.

ಬೆಸೆಮರ್ ಘಟಕದಲ್ಲಿ ಎರಡು ಮತದಾನಗಳಲ್ಲೂ ನಿರ್ಣಾಯಕ ಬಹುಮತ ಸಾಧಿಸಲು ಸಾಧ‍್ಯವಾಗಲಿಲ್ಲ? ಭಾರೀ ಬಹುಮತವನ್ನು ಸ್ಟೇಟೆನ್ ದ್ವೀಪದ ಅಮೆಜಾನ್ ಘಟಕದಲ್ಲಿ ಕಾರ್ಮಿಕ ವಿಜಯ ಹೇಗೆ ಸಾಧ್ಯವಾಯಿತು? ಈ ಪ್ರಶ್ನೆಗಳತ್ತ ಈಗ ಕಾರ್ಮಿಕರ, ವಿಶ್ಲೇಷಕರ, ವೀಕ್ಷಕರ ಗಮನ ಹರಿದಿದೆ.

ಬೆಸೆಮರ್ ನಲ್ಲಿ ಹೋರಾಟವನ್ನು RWDSU (ರಿಟೈಲ್, ವೇರ್ ಹೌಸ್, ಡಿಪಾರ್ಟ್ ಮೆಂಟಲ್ ಸ್ಟೋರ್ ಯೂನಿಯನ್) ಎಂಬ ರಾಷ್ಟ್ರೀಯ ವ್ಯಾಪ್ತಿಯ ಯೂನಿಯನ್ ಮತ್ತು AFL-CIO ಎಂಬ ಎಲ್ಲ ಯೂನಿಯನ್ ಗಳ ಫೆಡರೇಶನ್ ನಡೆಸಿತು.  ಈ ಎರಡೂ ಸಂಘಟನೆಗಳು ಪ್ರಚಾರದಲ್ಲಿ ಯಾವುದೇ ಕೊರತೆ ಮಾಡಲಿಲ್ಲ. ಆದರೆ ಅದೇ ಮುಳುವಾಯಿತೇನೋ ಎಂದು ಹೇಳಲಾಗಿದೆ. ಒಂದು ಕಡೆ  ತೀವ್ರ ರಾಷ್ಟ್ರೀಯ ಪ್ರಚಾರದಿಂದಾಗಿ, ರಾಷ್ಟ್ರೀಯ ಮಾಧ್ಯಮಗಳಲ್ಲಿ ಗೊಂದಲಕಾರಿ ದಾರಿ ತಪ್ಪಿಸುವ ಕಾರ್ಮಿಕ ವಿರೋಧಿ ಪ್ರಚಾರಗಳು ಮತ್ತು ಅಮೆಝಾನ್ ನಿದ ಬಂದ ಕಾರ್ಮಿಕರನ್ನು ಬೆದರಿಸುವ ತೀಕ್ಷ್ಣ ಪ್ರತಿಕ್ರಿಯೆಗೆ ಪ್ರತಿರೋಧ ಒಡ್ಡುವಷ್ಟು ಶಕ್ತಿ ಸ್ಥಳೀಯ ಸಂಘಟಕರಿಗಿರಲಿಲ್ಲ. ಪ್ರಮುಖವಾಗಿ ‘ಹೊರಗಿನವರು ಬಂದು ತಮ್ಮ ಹಿತಾಸಕ್ತಿಗಳಿಗಗಾಗಿ ಈ ಘಟಕವನ್ನು ಮುಚ್ಚಲು ಕಾರ್ಮಿಕರನ್ನು  ಹೀಗೆ ಪ್ರಚೋದಿಸುತ್ತಿದ್ದಾರೆ’ ಎಂಬ ಪ್ರಚಾರ ಮಾಡಲಾಗಿತ್ತು. ರಾಷ್ಟ್ರೀಯ ಯೂನಿಯನ್ ಮತ್ತು AFL-CIO ಗಳ ಕುರಿತು ಕಾರ್ಮಿಕರಿಗೆ ಪೂರ್ಣ ವಿಶ್ವಾಸವಿರಲಿಲ್ಲ. ಸ್ಥಳೀಯವಾಗಿ ಕಾರ್ಮಿಕರ ಜತೆ ನೇರ ಸಂಪರ್ಕದಲ್ಲಿ ಮತ್ತು ಯೂನಿಯನ್ ಪರ ಅವರ ಮನವೊಲಿಸುವುದರಲ್ಲಿ ಸಹ ಬಹಳಷ್ಟು ಕೊರತೆಗಳಿದ್ದವು. ಬೆಸ್ಸೆಮರ್ ಅಮೆಜಾನ್ ಗೋದಾಮಿನ ಉದ್ಯೋಗಿಗಳಲ್ಲಿ ಸುಮಾರು ಶೇ. 80ರಷ್ಟು ಕರಿಯರಾಗಿದ್ದು, ಅಮೆಜಾನ್ ನ  “ಗೊಂದಲ ಉಂಟು ಮಾಡುವ, ಜುಲುಮೆ, ಪ್ರತೀಕಾರದ ಬೆದರಿಕೆಗಳ”  ತೀವ್ರ ಕ್ರಮಗಳ ಅನಿರೀಕ್ಷಿತ ಪರಿಣಾಮಕಾರಿತನವು ಇಂದಿನ ಅದರಲ್ಲೂ ಕರಿಯರ ದಿನೇ ಹದಗೆಡುತ್ತಿರುವ ಅಭದ್ರ ಜೀವನೋಪಾಯದ ಪರಿಸ್ಥಿತಿಯ ಫಲ. ಅಲ್ಲದೆ ಅಲಬಾಮಾ ದಂತಹ ದಕ್ಷಿಣ ಪ್ರಾಂತ್ಯಗಳಲ್ಲಿ ಕಾರ್ಮಿಕರಲ್ಲಿ ವ್ಯಾಪಕವಾಗಿರುವ ಸಾಮಾನ್ಯ ಯೂನಿಯನ್-ವಿರೋಧಿ ಮತ್ತು ವರ್ಣಬೇಧದ ದಾಳಿಗಳಿಂದ ಜರ್ಝರಿತವಾದ ಕರಿಯರ ಆತಂಕದ ಧೋರಣೆಯೂ ಕಾರಣವಾಗಿತ್ತು.

ಸ್ಟೇಟೆನ್ ದ್ವೀಪದ ಅಮೆಜಾನ್ ಘಟಕದಲ್ಲಿ ಸ್ಥಳೀಯ ಸ್ವತಂತ್ರ ಯೂನಿಯನ್ ಪ್ರಚಾರ ಸಂಘಟನೆಗಳನ್ನು ನಡೆಸಿತು. ರಾಷ್ಟ್ರೀಯ ಪ್ರಚಾರವನ್ನು ಉದ್ದೇಶಪೂರ್ವಕವಾಗಿ ಹೆಚ್ಚಾಗಿ ಮಾಡಲಿಲ್ಲ. ಬದಲಾಗಿ ಕಾರ್ಮಿಕರ ಜತೆ ವ್ಯಾಪಕವಾದ ನೇರ ಸಂಪರ್ಕ ಸ್ಥಾಪಿಸಿ ಅವರ ಪ್ರಶ್ನೆಗಳನ್ನು ಉತ್ತರಿಸುವುದಕ್ಕೆ, ಗೊಂದಲಗಳನ್ನು ನಿವಾರಿಸುವುದಕ್ಕೆ, ಅಮೆಝಾನ್ ಬೆದರಿಕೆಗಳ ವಿರುದ್ಧ ಪ್ರತಿರೋಧ ಒಡ್ಡಲಿಕ್ಕೆ ಧೈರ್ಯತುಂಬುವುದಕ್ಕೆ ಸಾಧ್ಯವಾಯಿತು. ಯುವ ಮತ್ತು ಕರಿಯ ಕಾರ್ಮಿಕರನ್ನು ಒಳಗೊಳ್ಳಲು ವಿಶೇಷ ಪ್ರಯತ್ನಗಳನ್ನು ಮಾಡಲಾಯಿತು.  ನ್ಯೂಯಾರ್ಕಿನ ಚಾರಿತ್ರಿಕ ಯೂನಿಯನ್-ಪರ ಸಾಮಾನ್ಯ ಪ್ರಜ್ಞೆ ಸಹ ನೆರವಿಗೆ ಬಂತು ಎಂದು ಹೇಳಲಾಗಿದೆ.

ಇವೆರಡರಿಂದ ಮುಂದಿನ (ಸ್ಟೇಟೆನ್ ದ್ವೀಪದ ಇನ್ನೊಂದು ಅಮೆಜಾನ್ ಘಟಕದಲ್ಲಿ ಈಗಾಗಲೇ ಮುಂದಿನ ಮತದಾನಕ್ಕೆ ತಯಾರಿ ನಡೆದಿದೆ) ಕಾರ್ಮಿಕ ಯೂನಿಯನ್ ಅಭಿಯಾನಕ್ಕೆ ಯಾವ ಪಾಠಗಳನ್ನು ಕಲಿಯಬಹುದು?  ಕಾರ್ಮಿಕರ ಜತೆ ವ್ಯಾಪಕವಾದ ನೇರ ಸಂಪರ್ಕ ಸ್ಥಾಪಿಸುವುದು ಅತ್ಯಂತ ಪ್ರಮುಖ ಅಂಶ.  ಕಾರ್ಮಿಕರ ವರ್ಣ, ಲಿಂಗ, ವಯಸ್ಸು ಮುಂತಾದ ವಿಶಿಷ್ಟ ಅಂಶಗಳಿಗೆ ವಿಶೇಷ ಗಮನ ನೀಡಬೇಕು. ಸ್ಥಳೀಯವಾಗಿ ರಾಷ್ಟ್ರೀಯವಾಗಿ ಕಾರ್ಮಿಕರ ಹೋರಾಟವನ್ನು ಬೆಂಬಲಿಸಬಲ್ಲ ಇತರ ಸಮುದಾಯಗಳನ್ನು ಗುರುತಿಸಿ ಅಮೆಝಾನ್ ವಿರುದ್ಧ ಅವರ ಬೆಂಬಲ ಪಡೆಯಲು ಪ್ರಯತ್ನಿಸಬೇಕು. ಅಮೆಝಾನ್ ಕೇಂದ್ರಗಳಿರುವ ಸಮುದಾಯಗಳಿಗೆ ಅದು ತನ್ನ ಪ್ರಾಥಮಿಕ ಬಾಧ್ಯತೆಗಳನ್ನು ಪೂರೈಸುವುದಿಲ್ಲ. ಬದಲಿಗೆ ಹೆಚ್ಚಿಗೆ ಸವಲತ್ತುಗಳನ್ನು ರಿಯಾಯಿತಿಗಳನ್ನು ಪಡೆದುಕೊಳ್ಳಲು ಹವಣಿಸುತ್ತದೆ. ಖಾಸಗಿತನದ ಉಲ್ಲಂಘನೆ, ಇ-ವ್ಯಾಪಾರ ಕ್ಷೇತ್ರದಲ್ಲಿ ಏಕಸ್ವಾಮ್ಯಗಳಿಂದ ಸಂತ್ರಸ್ತರ ಸಾಮುದಾಯಿಕ ಬೆಂಬಲ ಸಹ ಪಡೆಯಲು ಪ್ರಯತ್ನಿಸಬೇಕು ಎನ್ನುತ್ತಾರೆ ಟ್ರೇಡ್ ಯೂನಿಯನ್ ಸಂಘಟಕ ಜಾನ್ ಕೇಸ್ ‘ಪೀಪಲ್ಸ್ ವರ್ಲ್ಡ್’ ಪತ್ರಿಕೆಯಲ್ಲಿ ಲೇಖನವೊಂದರಲ್ಲಿ.

Donate Janashakthi Media

Leave a Reply

Your email address will not be published. Required fields are marked *