ನವದೆಹಲಿ: ಕಲಿಕೆಗಾಗಿ ಭಾರತೀಯ ವಿದ್ಯಾರ್ಥಿಗಳು ವಿದೇಶಗಳಿಗೆ ಈ ಹಿಂದಿನಿಂದಲೂ ಪ್ರವಾಸ ಕೈಗೊಳ್ಳತ್ತಿದ್ದಾರೆ. ಅದರಂತೆ, ವಿದೇಶಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಅಲ್ಲಿನ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಿ, ಭಾರತದಲ್ಲಿಯೂ ಉನ್ನತ ಹುದ್ದೆಗಳನ್ನು ಪಡೆದುಕೊಂಡಿದ್ದಾರೆ. ಭಾರತದಲ್ಲಿಯೂ ವ್ಯಾಸಂಗ ಮುಂದುವರೆಸುವವರೂ ಇದ್ದಾರೆ.
ಅದರಂತೆ, ಭಾರತೀಯ ವಿದ್ಯಾರ್ಥಿಗಳು ಪಾಕಿಸ್ತಾನದಲ್ಲಿಯೂ ವ್ಯಾಸಂಗ ಮಾಡಿದ್ದಾರೆ. ನಂತರದಲ್ಲಿ ಭಾರತದಲ್ಲಿಯೂ ವ್ಯಾಸಂಗ ಮುಂದುವರೆಸಿರುವುದು ಅಥವಾ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುವುದು ಇದೆ. ಸದ್ಯ ವಿಶ್ವವಿದ್ಯಾನಿಲಯ ಅನುದಾನ ಆಯೋಗ (ಯುಜಿಸಿ) ಮತ್ತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಭಾರತೀಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕಾಗಿ ಪಾಕಿಸ್ತಾನಕ್ಕೆ ಹೋಗಬೇಡಿ ಎಂದು ಎಚ್ಚರಿಸಿದೆ.
ಇದನ್ನು ಓದಿ: ಶಿಕ್ಷಣದಲ್ಲಿ ಮೀಸಲಾತಿ ನೀತಿ ಮತ್ತು ಮೋದಿ ಸರ್ಕಾರದ ವಂಚಕತನ
ಭಾರತೀಯ ವಿದ್ಯಾರ್ಥಿಗಳು ದೇಶದಲ್ಲಿ ಉಳಿದುಕೊಂಡಿದ್ದರೆ ಅಥವಾ ವಿದೇಶದಲ್ಲಿ ನೆಲೆಸಿದ್ದರೆ ಮತ್ತು ವಿದೇಶಕ್ಕೆ ತೆರಳಲು ಯೋಜಿಸುತ್ತಿದ್ದರೆ, ಪಾಕಿಸ್ತಾನಕ್ಕೆ ಹೋಗಬೇಡಿ ಎಂದು ಯುಜಿಸಿ ಮತ್ತು ಎಐಸಿಟಿಇ ಸಂಸ್ಥೆಗಳು ಒಟ್ಟಾಗಿ ಅಧಿಕೃತ ಸೂಚನೆ ಹೊರಡಿಸಿದೆ.
ಏಪ್ರಿಲ್ 22ರಂದು ಹೊರಡಿಸಲಾದ ಆದೇಶದ ಪ್ರಕಾರ “ಉನ್ನತ ಶಿಕ್ಷಣಕ್ಕಾಗಿ ಪಾಕಿಸ್ತಾನಕ್ಕೆ ಪ್ರಯಾಣಿಸದಂತೆ ಸಂಬಂಧಪಟ್ಟ ಎಲ್ಲರಿಗೂ ಸೂಚಿಸಲಾಗಿದೆ. ಪಾಕಿಸ್ತಾನದ ಯಾವುದೇ ಪದವಿ ಕಾಲೇಜು/ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಉದ್ದೇಶಿಸಿರುವ ಯಾವುದೇ ಭಾರತೀಯ ಪ್ರಜೆ/ಭಾರತದ ಸಾಗರೋತ್ತರ ಪ್ರಜೆಯು ಪಾಕಿಸ್ತಾನದಲ್ಲಿ ಪಡೆದ ಅಂತಹ ಶೈಕ್ಷಣಿಕ ಅರ್ಹತೆಗಳ (ಯಾವುದೇ ವಿಷಯದಲ್ಲಿ) ಭಾರತದಲ್ಲಿ ಉದ್ಯೋಗ ಅಥವಾ ಉನ್ನತ ವ್ಯಾಸಂಗವನ್ನು ಪಡೆಯಲು ಅರ್ಹರಾಗಿರುವುದಿಲ್ಲ” ಎಂದು ತಿಳಿಸಲಾಗಿದೆ.
ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್ ಮಾತನಾಡಿ, ‘ದೇಶದ ಹೊರಗೆ ಉನ್ನತ ಶಿಕ್ಷಣ ಪಡೆಯಲು ಬಯಸುವ ಭಾರತೀಯ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಯುಜಿಸಿ ಮತ್ತು ಎಐಸಿಟಿಇ ಇಂತಹ ಸಾರ್ವಜನಿಕ ಪ್ರಕಟಣೆಗಳನ್ನು ಹೊರಡಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ವಿದ್ಯಾರ್ಥಿಗಳು ವಿದೇಶಕ್ಕೆ ಹೋಗಿ ವ್ಯಾಸಂಗ ಮುಂದುವರಿಸಲಾಗದೆ ಹೇಗೆ ಸಂಕಷ್ಟ ಎದುರಿಸುತ್ತಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಉನ್ನತ ಶಿಕ್ಷಣ ಪಡೆಯುವ ವೇಳೆ ಅವರಿಗೆ ಯಾವುದೇ ರೀತಿಯ ಸಮಸ್ಯೆಗಳು ಬರಬಾರದು. ಹೀಗಾಗಿ ಈ ರೀತಿ ನೋಟಿಸ್ ನೀಡಲಾಗಿದೆ’ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳ ಶೇಕಡಾವಾರು ಪ್ರಮಾಣವು ಅತ್ಯಲ್ಪವಾಗಿದೆ. ಮಾಧ್ಯಮ ವರದಿಗಳ ಪ್ರಕಾರ ಸುಮಾರು 200 ಭಾರತೀಯ ವಿದ್ಯಾರ್ಥಿಗಳು, ಅವರಲ್ಲಿ ಹೆಚ್ಚಿನವರು ಜಮ್ಮು ಮತ್ತು ಕಾಶ್ಮೀರದವರು, 2020ರಲ್ಲಿ ಪಾಕಿಸ್ತಾನಿ ವಿಶ್ವವಿದ್ಯಾಲಯಗಳಿಗೆ ಪ್ರವೇಶ ಪಡೆದಿದ್ದಾರೆ. ಸದ್ಯದ ಸನ್ನಿವೇಶದಲ್ಲಿ ಎಷ್ಟು ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಪ್ರವೇಶ ಪಡೆದಿದ್ದಾರೆ ಎಂದು ಅಧಿಕೃತವಾಗಿ ತಿಳಿದು ಬಂದಿಲ್ಲ.