ನವದೆಹಲಿ: ಕಳೆದ ಶನಿವಾರ ಹನುಮಾನ್ ಜಯಂತಿ ಮೆರವಣಿಗೆ ಸಂದರ್ಭ ಕೋಮು ಸಂಘರ್ಷಕ್ಕೆ ಸಾಕ್ಷಿಯಾಗಿದ್ದ ರಾಜಧಾನಿಯ ಜಹಾಂಗಿರ್‌ಪುರಿ ಪ್ರದೇಶದಲ್ಲಿ ಉತ್ತರ ದಿಲ್ಲಿ ಮುನಿಸಿಪಲ್ ಕಾರ್ಪೊರೇಷನ್(ಎನ್‌ಡಿಎಂಸಿ) ಇಂದು ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಂಡಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿದ್ದು, ತೆರವು ಕಾರ್ಯಾಚರಣೆ ನಿಲ್ಲಿಸಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ.
ಇದನ್ನು ಓದಿ: ದೆಹಲಿ ಹನುಮ ಜಯಂತಿ ಮೆರವಣಿಗೆ: ಕಲ್ಲು ತೂರಾಟ-14 ಮಂದಿ ಬಂಧನ
ಜಹಾಂಗಿರ್‌ಪುರಿ ಪ್ರದೇಶಕ್ಕೆ ಇಂದು 9 ಬುಲ್ಡೋಜರ್ ಗಳು ಆಗಮಿಸಿ ಬಿಜೆಪಿ ನಿಯಂತ್ರಣದ ಉತ್ತರ ದಿಲ್ಲಿ ಮುನಿಸಿಪಲ್ ಕಾರ್ಪೊರೇಷನ್ ಆದೇಶದಂತೆ ಭಾರೀ ಸಂಖ್ಯೆಯ ಪೊಲೀಸರ ಉಪಸ್ಥಿತಿಯಲ್ಲಿ ತೆರವು ಕಾರ್ಯಾಚರಣೆ ಆರಂಭಗೊಂಡಿತ್ತು. ಒತ್ತುವರಿ ತೆರವು ಕಾರ್ಯಾಚರಣೆ ಸಂಬಂಧ ‘ಯಥಾಸ್ಥಿತಿ’ ಕಾಯ್ದುಕೊಳ್ಳಬೇಕೆಂದು ಹಾಗೂ ಪ್ರಕರಣದ ವಿಚಾರಣೆಯನ್ನು ನಾಳೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ತೆರವು ಕಾರ್ಯಾಚರಣೆ ಬಗ್ಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ‘ಕಳೆದ 15 ವರ್ಷಗಳಿಂದ ನನ್ನ ಅಂಗಡಿಯು ಇಲ್ಲೇ ಇತ್ತು. ಅಕ್ರಮ ಕಟ್ಟಡದ ಬಗ್ಗೆ ಹಿಂದೆ ಯಾರೊಬ್ಬರೂ ಮಾತನಾಡಿರಲಿಲ್ಲ. ಎರಡು ಸಮುದಾಯಗಳ ನಡುವೆ ಹಿಂಸಾಚಾರ ನಡೆದ ನಂತರದಲ್ಲಿ ಇದು ನಡೆಯುತ್ತಿದೆ’ ಎಂದು ಜಹಾಂಗಿರ್‌ಪುರಿಯ ಸ್ಥಳೀಯರೊಬ್ಬರು ಕಣ್ಣೀರಾದರು.
ಇದನ್ನು ಓದಿ: ಜಹಾಂಗೀರ್ ಪುರಿ ಹಿಂಸಾಚಾರ-ಪೋಲೀಸ್ ಪಾತ್ರದ ಬಗ್ಗೆ ಸ್ವತಂತ್ರ ನಿಷ್ಪಕ್ಷಪಾತ ತನಿಖೆ ನಡೆಯಬೇಕು: ಬೃಂದಾ ಕಾರಟ್
ತೆರವು ಕಾರ್ಯಾಚರಣೆಯ ಬಗ್ಗೆ ನಿವಾಸಿಗಳು ಮುಂಚಿತವಾಗಿ ತಿಳಿಸಿರಲಿಲ್ಲ ಹಾಗೂ ಕೆಲವು ಜನರು ಮನೆಯಲ್ಲೂ ಇರಲಿಲ್ಲ ಎಂದು ವಕೀಲರು ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ. ಮಧ್ಯಾಹ್ನ 2ರವರೆಗೂ ಕಾರ್ಯಾಚರಣೆ ನಿಲ್ಲಿಸುವಂತೆ ಮತ್ತೊಂದು ಮನವಿ ಸಲ್ಲಿಸಲಾಗಿದೆ.
#WATCH | Anti-encroachment drive underway at Jahangirpuri area of Delhi by North Delhi Municipal Corporation pic.twitter.com/jZ76MOq9Le
— ANI (@ANI) April 20, 2022
ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ಅವರು ಜಹಾಂಗಿರ್‌ಪುರಿಯ ಗಲಭೆಕೋರರಿಗೆ ಸೇರಿದ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವಂತೆ ಕೋರಿ ಎನ್‌ಡಿಎಂಸಿ ಮೇಯರ್ ರಾಜಾ ಇಕ್ಬಾಲ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ಗಲಭೆಯಲ್ಲಿ ಭಾಗಿಯಾಗಿರುವವರಿಗೆ ಸ್ಥಳೀಯ ಶಾಸಕರ ರಕ್ಷಣೆ ಇರುವುದಾಗಿ ಗುಪ್ತಾ ಆರೋಪಿಸಿದ್ದರು. ಅದರ ಬೆನ್ನಲ್ಲೇ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲು ಮುಂದಾಗಿದೆ.
ಆದರೆ ಇದೊಂದು ‘ಸಾಮಾನ್ಯ ಕಾರ್ಯಾಚರಣೆ’ ಎಂದು ಉತ್ತರ ದಿಲ್ಲಿ ಮುನಿಸಿಪಲ್ ಕಾರ್ಪೊರೇಷನ್ ಮೇಯರ್ ರಾಜಾ ಇಕ್ಬಾಲ್ ಸಿಂಗ್ ಹೇಳಿದ್ದಾರೆ. ಆದರೆ ಬಿಜೆಪಿ ನಾಯಕನ ಪತ್ರದ ನಂತರ ಆರಂಭಗೊಂಡಿದ್ದ ಈ ಕಾರ್ಯಾಚರಣೆಯ ಹಿಂದೆ ರಾಜಕೀಯ ಉದ್ದೇಶಗಳಿವೆಯೇ ಎಂಬ ಬಲವಾದ ಸಂಶಯಗಳಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಒತ್ತುವರಿ ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಹಿಳಾ ಪೊಲೀಸರು ಸೇರಿದಂತೆ ಕನಿಷ್ಠ 400 ಸಿಬ್ಬಂದಿ ನಿಯೋಜಿಸುವಂತೆ ಎನ್‌ಡಿಎಂಸಿ ಅಧಿಕಾರಿಗಳು ದೆಹಲಿ ಪೊಲೀಸರಿಗೆ ಕೋರಿದ್ದರು. ತೆರವು ಕಾರ್ಯಾಚರಣೆಗಳಲ್ಲಿ ಬುಲ್ಡೋಜರ್‌ಗಳನ್ನು ಬಳಸಲಾಗಿದ್ದು, ಸುಪ್ರೀಂ ಕೋರ್ಟ್ ಆದೇಶ ತಲುಪಿದ ಕೂಡಲೇ ಕಾರ್ಯಾಚರಣೆ ನಿಲ್ಲಿಸಲಾಗುವುದು ಎಂದು ರಾಜಾ ಇಕ್ಬಾಲ್ ಸಿಂಗ್ ಹೇಳಿದ್ದಾರೆ.
ಆದೇಶದ ಅನುಷ್ಠಾನಕ್ಕಾಗಿ ನಾನು ಇಲ್ಲಿಗೆ ಬಂದಿರುವೆ: ಬೃಂದಾ ಕಾರಟ್
ಒತ್ತುವರಿ ಕಾರ್ಯಚಾರಣೆ ಸ್ಥಳಕ್ಕೆ ಭೇಟಿ ನೀಡಿದ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷದ ಪಾಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಅವರು ಅಕ್ರಮ ಒತ್ತುವರಿಯನ್ನು ಕೆಡವಲು ಮುಂದಾಗಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳಲು ಸುಪ್ರೀಂ ಕೋರ್ಟ್ ಆದೇಶ ನೀಡಿತು. ಆದೇಶದ ಅನುಷ್ಠಾನಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ನಾನು ಜಹಾಂಗೀರ್‌ಪುರದ ಜನರಿಗೆ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಮತ್ತು ಸುಪ್ರೀಂ ಕೋರ್ಟ್ ನ ಮುಂದಿನ ಆದೇಶಕ್ಕಾಗಿ ಕಾಯುವಂತೆ ಮನವಿ ಮಾಡುತ್ತೇನೆ. ಧ್ವಂಸ ಮಾಡುವ ಕಾರ್ಯಾಚರಣೆಗಳು ಸಂವಿಧಾನಕ್ಕೆ ವಿರುದ್ಧವಾಗಿತ್ತು. ಸುಪ್ರೀಂ ಆದೇಶದ ಪ್ರಕಾರ ಯಾವುದೇ ನೆಲಸಮ ಮಾಡುವಂತಿಲ್ಲ ಎಂದರು.
ಅಕ್ರಮವನ್ನು ತೆರವು ಕಾರ್ಯಾಚರಣೆಯ ಮೂಲಕ ಕಾನೂನು ಮತ್ತು ಸಂವಿಧಾನವನ್ನು ನೆಲಸಮಗೊಳಿಸಲಾಗುತ್ತಿದೆ. ಕನಿಷ್ಠ ಸುಪ್ರೀಂ ಕೋರ್ಟ್ ಮತ್ತು ಅದರ ಆದೇಶವನ್ನು ಬುಲ್ಡೋಜರ್ ಮಾಡಬಾರದು ಎಂದು ಬೃಂದಾ ಕಾರಟ್ ಹೇಳಿದರು.