ಬೆಂಗಳೂರು: 60 ವರ್ಷ ವಯೋಮಾನ ನೆಪವೊಡ್ಡಿ 19 ವರ್ಷ ಸೇವೆ ಸಲ್ಲಿಸಿದ ಬಡ ಮಹಿಳೆಯರನ್ನು ನಿವೃತ್ತಿ ಹೆಸರಿನಲ್ಲಿ ಅಮಾನವೀಯವಾಗಿ ಬಿಡುಗಡೆ ಮಾಡಿರುವ ಕ್ರಮವನ್ನು ಖಂಡಿಸಿ ಅಕ್ಷರ ದಾಸೋಹ ನೌಕರರ ಸಂಘಟನೆಯ ಕಾರ್ಯಕರ್ತರು ಸಿಐಟಿಯು ನೇತೃತ್ವದಲ್ಲಿ ಇಂದು ಉಪನಿರ್ದೇಶಕರ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಇದನ್ನು ಓದಿ: 12 ಸಾವಿರ ಬಿಸಿಯೂಟ ನೌಕರರ ವಜಾ ವಿರೋಧಿಸಿ ರಾಜ್ಯದೆಲ್ಲೆಡೆ ಪ್ರತಿಭಟನೆ
60 ವರ್ಷದ ಬಿಸಿಯೂಟ ನೌಕರರನ್ನು ಕೆಲಸದಿಂದ ಬಿಡುಗಡೆಗೊಳಿಸುವಾಗ ನಿವೃತ್ತಿ ವೇತನ ಅಥವಾ ಇಡಿಗಂಟು ನೀಡಿ ಬಿಡುಗಡೆ ಮಾಡಬೇಕು. ಮಾರ್ಚ್ 31, 2022ಕ್ಕೆ ಬಿಸಿಯೂಟ ನೌಕರರನ್ನು ಬಿಡುಗಡೆಗೊಳಿಸಲು ಹೊರಡಿಸಿರುವ ಸುತ್ತೋಲೆಯನ್ನು ಬದಲಾಯಿಸಿ ಎಪ್ರಿಲ್ 10ಕ್ಕೆ ಮರು ಆದೇಶ ನಿಡಬೇಕು. ಬಜೆಟ್ಟಿನಲ್ಲಿ ಬಿಸಿಯೂಟ ನೌಕರರಿಗೆ ಹೆಚ್ಚಳ ಮಾಡಿದ 1000 ರೂ. ವೇತನವನ್ನು ಜನವರಿ 2022ರಿಂದ ಅನ್ವಯಿಸಿ ಜಾರಿ ಮಾಡಬೇಕು. ಬಿಸಿಯೂಟ ಯೋಜನೆಯನ್ನು ಖಾಯಂ ಮಾಡಬೇಕು. ಕೇಂದ್ರೀಕೃತ ಅಡುಗೆ ಕೇಂದ್ರ ಮಾದರಿಯನ್ನು ಕೈಬಿಡಬೇಕು. ಬೇಸಿಗೆ ಮತ್ತು ದಸರಾ ರಜೆಗಳ ವೇತನವನ್ನು ನೀಡಬೇಕು ಎಂದು ಆಗ್ರಹಿಸಿದರು.
ಬಿಸಿಯೂಟ ನೌಕರರನ್ನು ಖಾಯಂ ಮಾಡಿ ಶಾಸನಾತ್ಮಕ ಸವಲತ್ತುಗಳನ್ನು ಜಾರಿ ಮಾಡಬೇಕು. ಬಿಸಿಯೂಟ ನೌಕರರಿಗೆ ಪ್ರತಿ ತಿಂಗಳು 5 ನೇ ತಾರೀಖಿನ ಒಳಗೆ ವೇತನ ಪಾವತಿಯಾಗಬೇಕು. ಬಿಸಿಯೂಟ ನೌಕರರನ್ನು ನೇರವಾಗಿ ಶಿಕ್ಷಣ ಇಲಾಖೆಯಡಿಯಲ್ಲಿಯೇ ಮೇಲ್ವಿಚಾರಣೆ ನಡೆಸಬೇಕು. ಪ್ರತಿಶಾಲೆಯಲ್ಲಿ ಕನಿಷ್ಠ 2 ಜನ ಅಡುಗೆಯವರು ಇರಲೇಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯ ನೇತೃತ್ವವನ್ನು ಸಿಐಟಿಯು ರಾಜ್ಯಾಧ್ಯಕೆ ಎಸ್. ವರಲಕ್ಷ್ಮಿ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯಾಧ್ಯಕ್ಷೆ ಲಕ್ಷ್ಮೀದೇವಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೆಸ್ತಾ, ಸಿಐಟಿಯು ರಾಜ್ಯ ಮುಖಂಡರಾದ ಯಮುನಾ ಗಾಂವ್ಕರ್, ಲಕ್ಷ್ಮೀದೇವಮ್ಮ ಮತ್ತಿತರರು ವಹಿಸಿದ್ದರು.