ಮಂಗಳೂರು: ಮೀನಿನ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಾಗಿ ಐವರು ಕಾರ್ಮಿಕರು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ವಿಶೇಷ ಆರ್ಥಿಕ ವಲಯ(ಎಸ್ಇಝೆಡ್) ವ್ಯಾಪ್ತಿಯ ಮೀನು ಕಾರ್ಖಾನೆಯಲ್ಲಿ ಮೀನು ತ್ಯಾಜ್ಯದ ಟ್ಯಾಂಕ್ ಶುಚಿಗೊಳಿಸುವಾಗ ಈ ಅವಘಡ ಸಂಭವಿಸಿದೆ.
ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಪಶ್ಚಿಮ ಬಂಗಾಳ ಮೂಲದ ಸಮೀರುಲ್ಲಾ ಇಸ್ಲಾಂ, ಉಮರ್ ಫಾರೂಕ್, ನಿಜಾಮುದ್ದೀನ್ ಸಾಜ್ ಸೇರಿ ಐವರು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಮಿರಾಜುಲ್ ಇಸ್ಲಾಂ, ಸರಾಫತ್ ಆಲಿ, ಅಜನ್ ಆಲಿ, ಕರೀಬ್ಉಲ್ಲಾ, ಅಫ್ತಲ್ ಮಲ್ಲಿಕ್ ಸೇರಿದಂತೆ ಹಲವು ಕಾರ್ಮಿಕರ ಸ್ಥಿತಿ ಗಂಭೀರವಾಗಿದೆ. ಅಸ್ವಸ್ಥ ಕಾರ್ಮಿಕರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮೀನು ಶುದ್ದೀಕರಿಸುವ ಬೃಹತ್ ಟ್ಯಾಂಕಿಗೆ ಇಳಿದಿದ್ದ ಪಶ್ಚಿಮ ಬಂಗಾಳದ ಮೂವರು ಕಾರ್ಮಿಕರು ಭಾನುವಾರ ರಾತ್ರಿ ಮೃತಪಟ್ಟಿದ್ದು, ಇಬ್ಬರು ಕಾರ್ಮಿಕರು ಸೋಮವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ದುರಂತ ನಡೆದ ಪ್ರದೇಶವು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಗೆ ಬರಲಿದ್ದು, ಸ್ಥಳಕ್ಕೆ ಡಿಸಿಪಿ ಹರಿರಾಂ ಶಂಕರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೀನು ಸಂಸ್ಕರಣ ಕಾರ್ಖಾನೆಯನ್ನು ಇದೀಗ ಬಂದ್ ಮಾಡಲಾಗಿದೆ.
ಕಾರ್ಮಿಕನೊಬ್ಬ ಮೀನಿನ ತ್ಯಾಜ್ಯದ ಟ್ಯಾಂಕ್ ಶುಚಿಗೊಳಿಸಲು ಕೆಳಗಿಳಿದ. ಈ ವೇಳೆ ಏಕಾಏಕಿ ಅಸ್ವಸ್ಥಗೊಂಡು ಬಿದ್ದ. ಕೂಡಲೇ ಆತನನ್ನು ರಕ್ಷಿಸಲು ಹೋದ 8 ಮಂದಿಯ ಉಸಿರಾಟವೂ ಏರುಪೇರಾಯಿತು. ಕಾರ್ಖಾನೆಗೆ ವಿವಿಧೆಡೆಯಿಂದ ಬರುವ ಮೀನಿನ ತ್ಯಾಜ್ಯವನ್ನು ಈ ಬೃಹತ್ ಟ್ಯಾಂಕ್ನಲ್ಲಿ ಮೊದಲು ಇರಿಸಿ, ಶುದ್ಧೀಕರಿಸಲಾಗುತ್ತಿತ್ತು. ಇದು ಸುಮಾರು 20 ಅಡಿ ಆಳವಾಗಿದೆ.
ಮೀನಿನ ತ್ಯಾಜ್ಯವನ್ನು ಸಂಸ್ಕರಿಸುವಾಗ ಬಳಕೆ ಮಾಡುವ ವಿಷಾನಿಲ ಸೋರಿಕೆಯಿಂದ ಈ ದುರ್ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಆದರೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ.