ತುಮಕೂರು: ಸಮ ಸಮಾಜದೊಂದಿಗೆ ಸಮಾನತೆಗೆ ಸ್ಪಷ್ಟ ಭಾಷ್ಯ ಬರೆದ, ಜಗತ್ತಿನಲ್ಲೇ ಅತ್ಯುತ್ತಮ ಸಂವಿಧಾನ ರೂಪಿಸಿಕೊಟ್ಟ ಡಾ. ಬಿ ಆರ್ ಅಂಬೇಡ್ಕರ್ ಅವರ ಜನ್ಮ ದಿನದಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಾಜಿ ಉಪ ಮುಖ್ಯಮಂತ್ರಿ ಡಾ ಜಿ. ಪರಮೇಶ್ವರ್ ಅತ್ಯಂತ ಬೇಸರದ ಸಂಗತಿಯೊಂದನ್ನು ವಿಷಾದದ ದನಿಯಲ್ಲಿ ಹೊರಹಾಕಿದ್ದಾರೆ.
ಮಾಜಿ ಸಚಿವ, ಶಾಸಕ, ಉಪ ಮುಖ್ಯಮಂತ್ರಿಯೇ ಆಗಿದ್ದರೂ ದೇಗುಲದೊಳಗೆ ನನ್ನನ್ನು ಸೇರಿಸುವುದಿಲ್ಲ ದಲಿತ ಎಂಬ ಕಾರಣಕ್ಕೆ ದೇವಸ್ಥಾನ ಪ್ರವೇಶ ಪಡೆಯದಿರುವುದಕ್ಕೆ ನೇರವಾಗಿ ಸಾಕ್ಷಿಯಾಗಿರುವೆ ಎಂದು ಪರಮೇಶ್ವರ್ ಬೇಸರ ವ್ತಕ್ತಪಡಿಸಿದ್ದಾರೆ.
ದಲಿತ ಎಂಬ ಕಾರಣಕ್ಕೆ ದೇವಸ್ಥಾನದೊಳಗೆ ಬಿಟ್ಟುಕೊಳ್ಳಲ್ಲ ಎಂದಿರುವ ಪರಮೇಶ್ವರ್ ಅವರು ತಮ್ಮ ಅಪಾರ ಬೇಸರ ಹೊರ ಹಾಕಿದರು. ಕೊರಟಗೆರೆ ಪಟ್ಟಣದ ಪಂಚಾಯಿತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ʻದೇವಸ್ಥಾನಕ್ಕೆ ಹೋದ್ರೆ ಸ್ವಲ್ಪ ಅಲ್ಲೇ ನಿಂತುಕೊಳ್ಳಿ ಅಂತಾರೆ! ಅಲ್ಲೇ ನಿಲ್ಲಿ ಎಂದು ಮಂಗಳಾರತಿ ತಟ್ಟೆ ತಂದು ಬಿಡ್ತಾರೆ. ದೇಗುಲದೊಳಗೆ ಬಂದು ಬಿಡ್ತೀನಿ ಅಂತಾ ಹೀಗೆ ಮಾಡ್ತಾರೆ. ಇಂಥ ಪರಿಸ್ಥಿತಿ ಈಗಲೂ ಸಮಾಜದಲ್ಲಿದೆʼ ಎಂದು ಕಾರ್ಯಕ್ರಮದಲ್ಲಿ ಬೇಸರ ವ್ಯಕ್ತಪಡಿಸಿದರು.