ಜಾತಿ ಮತ್ತು ಮತೀಯವಾದ ಅಂಬೇಡ್ಕರ್ ಚಿಂತನೆಗಳು

ಬಿ. ಶ್ರೀಪಾದ ಭಟ್

ಪೀಠಿಕೆ

2015ರಲ್ಲಿ ಮೋದಿ ಸರಕಾರವು ಪ್ರತಿವರ್ಷ ಮಾರ್ಚ್‌ 26ರಂದು ಸಂವಿಧಾನ ದಿನ ಆಚರಿಸಬೇಕೆಂದು ನಿರ್ಧರಿಸಿತು. ಇದು ಸ್ವಾಗತಾರ್ಹವೂ ಹೌದು. ಅದರೆ ಎಂತಹ ವೈರುದ್ಯವೆಂದರೆ ಈ ಸಂವಿಧಾನ ಅಚರಣೆಯು ನಾಮಕಾವಸ್ಥೆಗೆ ಸೀಮಿತಗೊಂಡು ಅದನ್ನು ಅಣಕಿಸುವಂತೆ ಬೀದಿ ಬೀದಿಗಳಲ್ಲಿ ಮುಸ್ಲಿಮರು, ದಲಿತರ ವಿರುದ್ಧ ಹಿಂಸಾತ್ಮಕ ಘಟನೆಗಳು ನಡೆಯುತ್ತಿವೆ. ಕಳೆದ ಎಂಟು ವರ್ಷಗಳಿಂದ ಇಲ್ಲಿನ ಸಮಾಜವನ್ನು ಮತೀಯವಾದೀಕರಣಗೊಳಿಸಿ, ಹಿಂದುತ್ವದ ರಾಷ್ಟ್ರೀಯವಾದದ ಮೂಲಕ ಮುಸ್ಲಿಮರು ಮತ್ತು ವಂಚಿತ ಸಮುದಾಯಗಳ ಮೇಲೆ ನಿರಂತರ ಹಲ್ಲೆ, ದಾಳಿ, ಹತ್ಯೆಗಳು ನಡೆಯುತ್ತಿದೆ. ಡಿಸೆಂಬರ್ 2021ರಲ್ಲಿ ನಡೆದ ಸಮಾವೇಶವೊಂದರಲ್ಲಿ ಭಾಗವಹಿಸಿ ಮಾತನಾಡಿದ ಪೂಜಾ ಶಕುನ್ ಪಾಂಡೆ ‘ನಮ್ಮಂತಹ 100 ಜನರು ಸೈನಿಕರಾಗಿ 2 ಮಿಲಿಯನ್ ಮುಸ್ಲಿಮರನ್ನು ಕೊಲೆ ಮಾಡಲು ಮಂದಾಗಬೇಕು. ಭಾರತವನ್ನು ರಕ್ಷಿಸಿ ಹಿಂದೂ ರಾಷ್ಟ್ರವನ್ನಾಗಿಸೋಣ’ ಎಂದು ಪ್ರಚೋದನಕಾರಿ ಭಾಷಣ ಮಾಡಿದರು. ಮುಸ್ಲಿಮರ ವಿರುದ್ಧ ಹಿಂಸೆಯನ್ನು ವೈಭವೀಕರಿಸುವ ಇಂತಹ ನೂರಾರು ಪ್ರಕರಣಗಳು ವರದಿಯಾಗಿವೆ. ಆದರೆ ಯಾರ ವಿರುದ್ಧವೂ ಕ್ರಮ ತೆಗೆದುಕೊಂಡಿಲ್ಲ. ಕೆಲವರ ವಿರುದ್ದ ಒಲ್ಲದ ಮನಸ್ಸಿನಿಂದ ಎಫ್.ಐ.ಆರ್. ದಾಖಲಿಸಿಕೊಂಡಿದ್ದಾರೆ. ಆದರೆ ಯಾರೊಬ್ಬರನ್ನೂ ಇದುವರೆಗೆ ಬಂಧಿಸಿಲ್ಲ. ಅಂಚಿನಲ್ಲಿರುವ ಈ ಪುಂಡು ಪೋಕರಿಗಳ ಗುಂಪುಗಳು ಈಗ ಕೇಂದ್ರಕ್ಕೆ ಬಂದಿವೆ. ಈ ಮತಾಂಧರಿಗೆ ಮುಸ್ಲಿಮರು ಮತ್ತು ದಲಿತರ ವಿರುದ್ಧ ಹಲ್ಲೆ ದೌರ್ಜನ್ಯ ನಡೆಸಲು ಮುಕ್ತ ವಾತಾವರಣ ಕಲ್ಪಿಸಲಾಗಿದೆ. ಗಾಂಧಿಯನ್ನು ಕೊಂದ ಭಾರತದ ಮೊದಲ ‘ಭಯೋತ್ಪಾದಕ ಸಂಘಟನೆ’ ಹಿಂದೂ ಮಹಾಸಭಾ ಇಂದು ಸಕ್ರಿಯವಾಗಿ ಕಾರ್ಯಾಚರಣೆಗೆ ಇಳಿದಿದೆ. ಮೋದಿ ಅಧಿಕಾರಕ್ಕೆ ಬಂದ ಕಳೆದ ಎಂಟು ವರ್ಷಗಳಲ್ಲಿ ಈ ಮತಾಂಧ ಗುಂಪುಗಳ ಸಂಖ್ಯೆ ಹೆಚ್ಚಾಗಿದೆ. ಅವರ ಪುಂಡಾಟಿಕೆ ಮತ್ತು ಮತೀಯವಾದವೂ ದಿನ ದಿನಕ್ಕೂ ಹೆಚ್ಚುತ್ತಿದೆ. ಇಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಸರಕಾರದ ಶಾಸಕರು, ಮಂತ್ರಿಗಳು ಸಹ ಮುಕ್ತವಾಗಿಯೇ ಮುಸ್ಲಿಮರಿಗೆ ಅವರ ಸ್ಥಾನವನ್ನು ತೋರಿಸಿಕೊಡುತ್ತೇವೆ ಎಂದು ಭಾಷಣ ಮಾಡುತ್ತಾರೆ, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಆದೇಶ ನೀಡುತ್ತಾರೆ. ಬಿಜೆಪಿ ಸರಕಾರಗಳು ಜಾರಿಗೊಳಿಸಿದ, ಜಾರಿಗೊಳಿಸಲಿರುವ ಮತಾಂತರ ನಿಷೇಧ ಕಾನೂನು, ಲವ್ ಜಿಹಾದ್ ವಿರುದ್ಧದ ಕಾನೂನು, ಗೋ ಹತ್ಯೆ ನಿಷೇಧದ ಕಾನೂನು, ಸಿಎಎ-ಎನ್‌ಆರ್‌ಸಿ ಮುಂತಾದವುಗಳು ಮುಸ್ಲಿಮರನ್ನು ಶಾಶ್ವತವಾಗಿ ಅಪರಾಧಿಗಳನ್ನಾಗಿಸುವ ಉದ್ದೇಶ ಹೊಂದಿವೆ. ಇಲ್ಲಿ ಈ ಪುಂಡರ ಗುಂಪು ಮತ್ತು ಬಿಜೆಪಿಯ ರಾಜಕಾರಣಿಗಳ ನಡುವಿನ ಈ ಮೈತ್ರಿಯ ಕಾರಣದಿಂದ ‘ಭಾರತದಲ್ಲಿ ಮುಸ್ಲಿಂ ಅಸ್ಮಿತೆಯೊಂದಿಗೆ ಬದುಕುವುದು ದುಸ್ಥರವಾಗಿದೆ’. ಮತ್ತು ದಲಿತರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಮುಸ್ಲಿಮರನ್ನು ಮತ್ತು ದಲಿತ, ಆದಿವಾಸಿಗಳನ್ನು ‘ಅನ್ಯರಾಗಿಸುವ’ (othering) ಈ ವ್ಯವಸ್ಥಿತ ಕಾಯಾಚರಣೆಯಿಂದಾಗಿ ಭಾರತವು ಇಂದು ನರಮೇಧದ ಬೆದರಿಕೆಯ ಅಪಾಯದಲ್ಲಿದೆ.

ದಲಿತರ ವಿರುದ್ಧ ಪ್ರತಿ 18 ನಿಮಿಷಕ್ಕೊಮ್ಮೆ ದೌರ್ಜನ್ಯ ನಡೆಯುತ್ತಿದೆ. ಶೇ.65 ಪ್ರಮಾಣದ ಆರೋಗ್ಯ ಕಾರ್ಯಕರ್ತರು ದಲಿತರ ವಾಸಿಸುವ ಸ್ಥಳಗಳಿಗೆ ಬೇಟಿ ನೀಡುವುದಿಲ್ಲ. ರಾಜಸ್ತಾನದಲ್ಲಿ ಶೇ.55, ಮದ್ಯಪ್ರದೇಶದಲ್ಲಿ ಶೇ.46.7, ಬಿಹಾರದಲ್ಲಿ ಶೇ.39.5, ಗುಜರಾತ್‌ನಲ್ಲಿ ಶೇ.34.8, ತೆಲಂಗಾಣದಲ್ಲಿ ಶೇ.31.1, ಉತ್ತರ ಪ್ರದೇಶದಲ್ಲಿ ಶೇ.28.2 ಪ್ರಮಾಣದಲ್ಲಿ ದಲಿತರ ಮೇಲೆ ಹಲ್ಲೆಗಳಾಗುತ್ತಿವೆ. ಇತರ ರಾಜ್ಯಗಳ ಸ್ಥಿತಿಯೂ ಸಹ ಇದಕ್ಕಿಂತ ಭಿನ್ನವಾಗಿಲ್ಲ. ಪರಿಶಿಷ್ಟ ಜಾತಿಯ 42,594, ಪರಿಶಿಷ್ಟ ಪಂಗಡದ 421, ಹಿಂದುಳಿದ ವರ್ಗಗಳ 431 ಜನರು ಮಾನ್ಯುವಲ್ ಸ್ಕೆವೆಂಜರ್ ವೃತ್ತಿಯಲ್ಲಿದ್ದಾರೆ. ಅವರ ಸರಾಸರಿ ಆಯಸ್ಸು 40 ವರ್ಷ ಮಾತ್ರ. 4, ಮಾರ್ಚ್‌ 2022ರ ಲೀಫ್‌ಲೆಟ್ ಅಂತರ್ಜಾಲ ಪತ್ರಿಕೆಯ ಅನುಸಾರ ಜಾಗತಿಕ ಮಟ್ಟದಲ್ಲಿ ಭಾರತದ ಹಸಿವಿನ ಸೂಚ್ಯಂಕ 101ನೆ ಸ್ಥಾನ, ಪ್ರಜಾಪ್ರಭುತ್ವದ ಸೂಚ್ಯಂಕ 46ನೆ ಸ್ಥಾನ, ಮಾಧ್ಯಮ ಸ್ವಾತಂತ್ರ್ಯ ಸೂಚ್ಯಂಕ 142ನೆ ಸ್ಥಾನ, ಲಿಂಗ ಅನುಪಾತದ ವ್ಯತ್ಯಾಸದ ಸೂಚ್ಯಂಕ 140ನೆ ಸ್ಥಾನದಲ್ಲಿದೆ. ‘ಉದಾರ ಪ್ರಜಾಪ್ರಭುತ್ವ ಸೂಚ್ಯಂಕ’ದಲ್ಲಿ 93ನೆ ಸ್ಥಾನ, ‘ಚುನಾವಣಾ ಪ್ರಜಾಪ್ರಭುತ್ವ ಸೂಚ್ಯಂಕ’ದಲ್ಲಿ 100ನೆ ಸ್ಥಾನ, ‘ಉದಾರ ಅಂಶ ಸೂಚ್ಯಂಕ’ದಲ್ಲಿ 69ನೆ ಸ್ಥಾನ, ‘ಸಮತಾವಾದ ಅಂಶ ಸೂಚ್ಯಂಕ’ದಲ್ಲಿ 114ನೆ ಸ್ಥಾನ, ‘ಭಾಗವಹಿಸುವಿಕೆ ಅಂಶ ಸೂಚ್ಯಂಕ’ದಲ್ಲಿ 85ನೆ ಸ್ಥಾನ, ‘ಆರ್ಥಿಕ ಸ್ವಾತಂತ್ರ್ಯ’ದಲ್ಲಿ 53.9 ಸ್ಥಾನದಲ್ಲಿದೆ ‘ಜಾಗತಿಕ ಮಟ್ಟದಲ್ಲಿ ಸ್ವಾತಂತ್ರ್ಯ’ದ ಕುರಿತು ನಡೆದ ಸಮೀಕ್ಷೆಯಲ್ಲಿ 2017ರಲ್ಲಿ ಭಾರತ 77 ಅಂಕ ಗಳಿಸಿ ಸ್ವಾತಂತ್ರ್ಯವಿರುವ ದೇಶ ಎಂದು ಕರೆಯಲ್ಪಟ್ಟರೆ, 2022ರ ಹೊತ್ತಿಗೆ ಅದು 66 ಅಂಕಗಳಿಗೆ ಕುಸಿದಿದೆ ಮತ್ತು ಸಂಪೂರ್ಣ ಸ್ಯಾತಂತ್ರ್ಯವಿಲ್ಲ ಎಂದು ಹೇಳಲಾಗಿದೆ.

ಸೆಪ್ಟೆಂಬರ್, 2, 2020ರ ಫಸ್ಟ್‌ ಪೋಸ್ಟ್ ಅಂತರ್ಜಾಲ ಪತ್ರಿಕೆಯ ವರದಿಯ ಪ್ರಕಾರ 2019ರ ವರದಿಯ ಅನುಸಾರ ಶೇ.14.2ರಷ್ಟಿರುವ ಮುಸ್ಲಿಂ ಜನಸಂಖ್ಯೆಯಲ್ಲಿ ಶೇ.16.6ರಷ್ಟು ಮುಸ್ಲಿಮರು ಅಪರಾಧಿಗಳೆಂದು ಶಿಕ್ಷೆಗೆ ಒಳಗಾಗಿದ್ದಾರೆ. ಶೇ.18.7ರಷ್ಟು ಮುಸ್ಲಿಮರು ವಿಚಾರಾಣಾಧೀನ ಖೈದಿಗಳಾಗಿ ಜೈಲಿನಲ್ಲಿದ್ದಾರೆ. ಶೇ. 35.8ರಷ್ಟು ಮುಸ್ಲಿಮರು ಇನ್ನೂ ವಿಚಾರಣೆಯಿಲ್ಲದೆ ಬಂಧನದಲ್ಲಿದ್ದಾರೆ. ದಲಿತರ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಶೇ. 16.6ರಷ್ಟು ಜನಸಂಖ್ಯೆಯಿರುವ ಪರಿಶಿಷ್ಟ ಜಾತಿಯ ಜನಸಂಖ್ಯೆಯಲ್ಲಿ ಶೇ. 21.7ರಷ್ಟು ದಲಿತರು ಅಪರಾಧಿಗಳೆಂದು ಶಿಕ್ಷೆಗೆ ಒಳಗಾಗಿದ್ದಾರೆ. ಶೇ. 21ರಷ್ಟು ದಲಿತರು ವಿಚಾರಾಣಾಧೀನ ಖೈದಿಗಳಾಗಿ ಜೈಲಿನಲ್ಲಿದ್ದಾರೆ. ಶೇ. 18.15ರಷ್ಟು ದಲಿತರು ಇನ್ನೂ ವಿಚಾರಣೆಯಿಲ್ಲದೆ ಬಂಧನದಲ್ಲಿದ್ದಾರೆ. ಶೇ. 8.6ರಷ್ಟು ಜನಸಂಖ್ಯೆಯಿರುವ ಪರಿಶಿಷ್ಟ ಪಂಗಡದ ಜನಸಂಖ್ಯೆಯಲ್ಲಿ ಶೇ. 13.6ರಷ್ಟು ಜನಸಂಖ್ಯೆ ಅಪರಾಧಿಗಳೆಂದು ಶಿಕ್ಷೆಗೆ ಒಳಗಾಗಿದ್ದಾರೆ. ಶೇ. 10.5ರಷ್ಟು ಜನಸಂಖ್ಯೆ ವಿಚಾರಾಣಾಧೀನ ಖೈದಿಗಳಾಗಿ ಜೈಲಿನಲ್ಲಿದ್ದಾರೆ. ಶೇ. 5.68ರಷ್ಟು ಜನಸಂಖ್ಯೆ ಇನ್ನೂ ವಿಚಾರಣೆಯಿಲ್ಲದೆ ಬಂಧನದಲ್ಲಿದ್ದಾರೆ. ಉತ್ತರ ಪ್ರದೇಶದಲ್ಲಿ 17,995, ಬಿಹಾರದಲ್ಲಿ 6843, ಪಂಜಾಬ್‌ನಲ್ಲಿ 6,831 ಪರಿಶಿಷ್ಟ ಜಾತಿಯ ಸಮುದಾಯದವರು ವಿಚಾರಣಾಧೀನ ಕೈದಿಗಳಾಗಿ ಜೈಲಿನಲ್ಲಿದ್ದಾರೆ. ಮದ್ಯ ಪ್ರದೇಶದಲ್ಲಿ 5,894, ಛತ್ತೀಸಘಡದಲ್ಲಿ 3,471, ಜಾರ್ಖಂಡ್‌ನಲ್ಲಿ 3336 ಪರಿಶಿಷ್ಟ ಪಂಗಡದ ಸಮುದಾಯದವರು ವಿಚಾರಣಾಧೀನ ಕೈದಿಗಳಾಗಿ ಜೈಲಿನಲ್ಲಿದ್ದಾರೆ. ಉತ್ತರ ಪ್ರದೇಶದಲ್ಲಿ 21,139, ಪಶ್ಚಿಮ ಬಂಗಾಳದಲ್ಲಿ 6032, ಬಿಹಾರದಲ್ಲಿ 4758 ಮುಸ್ಲಿಮರು ವಿಚಾರಣಾಧೀನ ಕೈದಿಗಳಾಗಿ ಜೈಲಿನಲ್ಲಿದ್ದಾರೆ.

ಈ ವಿಚಾರಣಾಧೀನ ಮುಸ್ಲಿಂ ದಲಿತ ಸಮುದಾಯದ ಕೈದಿಗಳಿಗೆ ಯಾವುದೇ ನ್ಯಾಯವಾದಿಯ ವಕಾಲತ್ತು ದೊರಕುವುದಿಲ್ಲ. ಅವರ ವಿರುದ್ದ ಆರೋಪವೂ ದಾಖಲಾಗುವುದಿಲ್ಲ. ವಿಚಾರಣೆಯೂ ಆರಂಭವಾಗುವುದಿಲ್ಲ. ಅವರಿಗೆ ಜಾಮೀನು ಸಹ ದೊರಕುವುದಿಲ್ಲ. ಯಾರ ಅಂಕೆಗೂ ನಿಲುಕದ ಪ್ರತಿಕ್ರಾಂತಿಯಲ್ಲಿ ಭಾರತ ಸಿಲುಕಿಕೊಂಡಿದೆ.

ಅಂಬೇಡ್ಕರ್ ಮತ್ತು ಮತೀಯವಾದ

04.11.1927ರಂದು ‘ಬಹಿಷ್ಕೃತ ಭಾರತ’ ಪತ್ರಿಕೆಗೆ ಬರೆದ ಸಂಪಾದಕೀಯದಲ್ಲಿ ಅಂಬೇಡ್ಕರ್ ಅವರು ಹೀಗೆ ಹೇಳುತ್ತಾರೆ. ‘ಹಿಂದೂ ಮಹಾಸಭಾದ ಹಿಪೋಕ್ರಸಿಯನ್ನು ಬಹಳಷ್ಟು ಜನ ಅನೇಕ ಬಾರಿ ನನ್ನ ಗಮನಕ್ಕೆ ತಂದರು. ವರ್ಣಾಶ್ರಮವನ್ನು ಯಥಾಸ್ಥಿಯಲ್ಲಿ ಮುಂದುವರೆಸಿಕೊಂಡು ಹೋಗುವುದರ ಮೂಲಕ ಹಿಂದೂ ಏಕತೆಯನ್ನು ಸಾಧಿಸುವುದು ಹಿಂದೂ ಮಹಾಸಭಾದ ಗುಂಪಿನ ಬಯಕೆಯಾಗಿತ್ತು. ಆದರೆ, ಅವರ ಈ ಕಸರತ್ತು ನಿರರ್ಥಕವಾದದ್ದು ಎಂದು ಅವರಿಗೆ ಅರ್ಥವಾಗದೇ ಹೋಗಿದ್ದು ಆಶ್ಚರ್ಯವಾಗುತ್ತದೆ. ಬೇರೆ ಧರ್ಮಕ್ಕೆ ಮತಾಂತರಗೊಂಡು ಈಗ ಹಿಂದೂಯಿಸಂಗೆ ಮರಳಿ ಬರಲು ಒಪ್ಪಿಕೊಂಡಿರುವ ಆ ದಡ್ಡ ಜನಗಳು ಹಿಂದೂ ಮಹಾಸಭಾದವರ ಅಸಮರ್ಥತೆಯನ್ನು ಅರ್ಥ ಮಾಡಿಕೊಂಡಿಲ್ಲ. ಆದರೆ ಈ ಮರಳಿ ಮತಾಂತರಗೊಂಡವರ ಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ. ಉದಾಹರಣೆಗೆ ಸ್ಪರ್ಶ ಹಿಂದೂ ಆಗಿದ್ದ ನಾಯ್ಡು ಕ್ರಿಶ್ಚಿಯಾನಿಟಿಗೆ ಮತಾಂತರ ಹೊಂದಿದ್ದ. ಆದರೆ ಮರಳಿ ಹಿಂದೂ ಧರ್ಮಕ್ಕೆ ಮತಾಂತರಗೊಂಡಾಗ ಆತನ ಸಂಬಂಧಿಕರು ಆತನನ್ನು ತಮ್ಮವನೆಂದು ಒಪ್ಪಿಕೊಳ್ಳಲಿಲ್ಲ. ಈ ಅವಮಾನದ ಸ್ಥಿತಿಯಿಂದ ರೋಸಿಹೋದ ನಾಯ್ಡು ಮರಳಿ ಕ್ರಿಶ್ಚಿಯಾನಿಟಿಗೆ ಮತಾಂತರಗೊಂಡ. ಮತ್ತೊಂದು ಉದಾಹರಣೆಯೆಂದರೆ ವಿಶ್ವಾಸ್ ಮತಾಂತರಕ್ಕೆ ಮೊದಲು ಅಸ್ಪೃಶ್ಯನಾಗಿದ್ದ. ನಂತರ ಕ್ರಿಶ್ಚಿಯಾನಿಟಿಗೆ ಮತಾಂತರಗೊಂಡ. ಹಿಂದೂ ಮಹಾಸಭಾದವರ ದುಷ್ಟತನದ ಪ್ರಚಾರಕ್ಕೆ ಬಲಿಯಾಗಿ ಮರಳಿ ಹಿಂದೂಯಿಸಂಗೆ ಮರಳಿದ, ಆದರೆ ಮತ್ತೆ ಅಸ್ಪೃಶ್ಯನಾಗಬೇಕಾಯಿತು. ಆತನಿಗೆ ಮತ್ತೆ ಬುದ್ಧಿ ಬಂದು ಮರಳಿ ಕ್ರಿಶ್ಚಿಯಾನಿಟಿಗೆ ಹೋಗುತ್ತಾನೆಂದು ಆಶಿಸೋಣ. ಕ್ರಿಶ್ಚಿಯಾನಿಟಿಗೆ ಮತಾಂತರಗೊಂಡ ಅಸ್ಪೃಶ್ಯರೆಲ್ಲರೂ ವಿಶ್ವಾಸನಿಂದ ಪಾಠ ಕಲಿಯುತ್ತಾರೆಂದು ನಾನು ನಂಬಿದ್ದೇನೆ.

ಸ್ಪೃಶ್ಯ ಹಿಂದೂಗಳು ಅಸ್ಪೃಶ್ಯರಿಗೆ ಅವರ ಆಯ್ಕೆಯ ಅನುಸಾರ ಸಂತೋಷಕರ ಜೀವನ ನಡೆಸಲು ಅವರು ಕೆಳಜಾತಿಯರೆಂಬ ಕಾರಣಕ್ಕೆ ಅನುವು ಮಾಡಿಕೊಡುವುದಿಲ್ಲ. ಹಿಂದೂಯಿಸಂ ಅನ್ನು ತೊರೆಯುವವರೆಗೂ ಅವರ ಪರಿಸ್ಥಿತಿ ಸುಧಾರಿಸುವುದಿಲ್ಲ. ತಮ್ಮ ಧರ್ಮವನ್ನು ಬಿಟ್ಟು ಮತಾಂತರಗೊಳ್ಳಿರೆಂದು ಹಿತವಚನ ಕೊಡುವುದರ ಹೊರತಾಗಿ ಮತ್ತೇನನ್ನು ತಾನೆ ಹೇಳಲು ಸಾಧ್ಯ?

ಹಿಂದೂ ಮಹಾಸಭಾವು ಬೇರೆ ಧರ್ಮಕ್ಕೆ ಮತಾಂತರಗೊಂಡ ಹಿಂದೂಗಳನ್ನು ಮರಳಿ ತಮ್ಮ ಧರ್ಮಕ್ಕೆ ಕರೆತಂದು ಹಿಂದೂಗಳ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆಂದಿದ್ದಾರೆ. ಆದರೆ ಇವರು ಹಿಂದೂಗಳು ಒಂದೇ ವರ್ಣದವರೆಂದು ಘೋಷಿಸಲು ಸಿದ್ಧರಿಲ್ಲ. ಕ್ರಿಶ್ಚಿಯಾನಿಟಿ, ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡವರೆಲ್ಲ ಕೆಳಜಾತಿಗೆ ಸೇರಿದವರು. ಹಿಂದೂ ಧರ್ಮದಲ್ಲಿ ಅವರು ಕೆಳ ವರ್ಣದವರೆಂದು ಅವಮಾನಿತರಾಗಿ ಕ್ರಿಶ್ಚಿಯಾನಿಟಿ, ಇಸ್ಲಾಂ ಧರ್ಮಗಳಲ್ಲಿ ಒಂದೇ ವರ್ಣದ ಕಾರಣಕ್ಕೆ ಆ ಧರ್ಮಕ್ಕೆ ಮತಾಂತರಗೊಂಡರು. ತಮಗೆ ಅವಕಾಶ ದೊರೆತಾಗಲೆಲ್ಲ ಬ್ರಾಹ್ಮಣೀಕರಣಗೊಂಡ ಜನರು ಬ್ರಾಹ್ಮಣ್ಯವನ್ನು ರಕ್ಷಿಸಲು ಪ್ರಯತ್ನಿಸುತ್ತಾರೆ’ ಎಂದು ಬಾಬಾ ಸಾಹೇಬರು ವಿವರಿಸುತ್ತಾರೆ.

17 ಡಿಸೆಂಬರ್ 1946ರಂದು ಸಂವಿಧಾನ ಸಭೆಯಲ್ಲಿನ ಚರ್ಚೆಯಲ್ಲಿ ನೆಹರೂ ಪ್ರಸ್ತಾಪಿಸಿದ ಉದ್ದೇಶಗಳ ಕುರಿತಾದ ಗೊತ್ತುವಳಿ ಕುರಿತಾದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅಂಬೇಡ್ಕರ್ ರವರು ‘ಇಂದು ಭಾರತವು ಯುದ್ಧವನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾದರೆ ಅದು ಬ್ರಿಟೀಷರ ವಿರುದ್ಧದ ಯುದ್ಧವಲ್ಲ. ಅದು ಮುಸ್ಲಿಮರ ಮೇಲೆ ನಡೆಯುವ ಯುದ್ಧ… ಬಲವಂತವಾಗಿ ಈ ಹಿಂದೂ-ಮುಸ್ಲಿಂ ಬಿಕ್ಕಟ್ಟನ್ನು ಪರಿಹರಿಸುತ್ತೇವೆ ಎನ್ನುವವರು ಮತ್ತೊಂದು ಯುದ್ಧದ ಮೂಲಕ ಪರಿಹರಿಸಿದಂತೆ… ಅದು ಮುಸ್ಲಿಮರನ್ನು ನಿಗ್ರಹಿಸುವಲ್ಲಿಗೆ ಪರ್ಯಾವಸಾನಗೊಳ್ಳುತ್ತದೆ…’ ಎಂದು ಎಚ್ಚರಿಸಿದ್ದರು. ಮುಂದುವರೆದು ‘ಈ ರಾಜಕೀಯ ಬಿಕ್ಕಟ್ಟುಗಳನ್ನು ಯುದ್ಧದ ಮೂಲಕ ಪರಿಹರಿಸುತ್ತೇನೆ ಎನ್ನುವ ಮಾತುಗಳನ್ನು ಕೇಳಿದಾಗ ನಾನು ಭಯಗೊಂಡಿದ್ದೇನೆ’ ಎಂದು ಹೇಳುತ್ತಾರೆ. ಆದರೆ 2014ರಿಂದ ಇಲ್ಲಿಯವರೆಗಿನ ಭಾರತದ ಈ ವಾತಾವರಣ ಕಂಡಿದ್ದರೆ ಅಂಬೇಡ್ಕರ್ ಮತ್ತಷ್ಟು ಭಯದಿಂದ ತತ್ತರಿಸುತ್ತಿದ್ದರು. ಅದೇ ಸಭೆಯಲ್ಲಿ ಮಾತನಾಡುತ್ತಾ ‘ಅಧಿಕಾರವನ್ನು ಕೊಡುವುದು ಸುಲಭ, ಆದರೆ ವಿವೇಕವನ್ನು ಕೊಡುವುದು ಕಷ್ಟ’ ಎಂದು ಹೇಳುತ್ತಾ ‘ಈ ಸ್ವಾಯುತ್ತತೆಯ ಅಧಿಕಾರವನ್ನು ವಿವೇಕದಿಂದ ಬಳಸಬೇಕು’ ಎಂದು ಎಚ್ಚರಿಸಿದ್ದರು.

ಆದರೆ ಸಂಘ ಪರಿವಾರವು ಅಂಬೇಡ್ಕರ್ ಅವರನ್ನು ತಮ್ಮ ಹಿಂದುತ್ವದ ಸಿದ್ದಾಂತದೊಳಗೆ ಜೀರ್ಣಿಸಿಕೊಳ್ಳಲು ಹರಸಾಹಸ ಮಾಡುತ್ತಿದೆ. 2003ರಲ್ಲಿ ವಿನಯ್ ಕಟಿಯಾರ್ ‘ಹೆಡಗೇವಾರ್ ತರಹ ಅಂಬೇಡ್ಕರ್ ಸಹ ಹಿಂದೂ ರಾಷ್ಟ್ರದ ಬೆಂಬಲಿಗರಾಗಿದ್ದರು’ ಎಂದು ಹೇಳಿದ್ದಾರೆ. 2015ರ ಅಂಬೇಡ್ಕರ್ 124ನೆ ಜನ್ಮ ದಿನಾಚರಣೆ ಸಂದರ್ಭದಲ್ಲಿ ಆರೆಸ್ಸಸ್ ಹಿಂದಿ ಮತ್ತು ಇಂಗ್ಲೀಷ್ ಎರಡೂ ಭಾಷೆಗಳಲ್ಲಿ ವಿಶೇಷಾಂಕಗಳನ್ನು ಪ್ರಕಟಿಸಿತು. ಪ್ರೊ.ಶಂಶುಲ್ ಇಸ್ಲಾಂ ಅವರು ‘ಅದರಲ್ಲಿನ ಒಂದು ಲೇಖನದಲ್ಲಿ ಆರೆಸ್ಸಸ್‌ನ ಜಂಟಿ ಕಾರ್ಯದರ್ಶಿ ಕೃಷ್ಣ ಗೋಪಾಲ್ ಅವರು ’ಅಸ್ಪೃಶ್ಯತೆಯು ಹಿಂದೂಯಿಸಂನ ಭಾಗವಲ್ಲ, ಅದು ಮುಸ್ಲಿಂ ಆಡಳಿತದಿಂದ ಹುಟ್ಟಿಕೊಂಡಿದೆ… ಅಂಬೇಡ್ಕರ್ ಅವರು 12-13 ನೂರು ವರ್ಷಗಳ ಹಿಂದೆ ಅಸ್ಪೃಶ್ಯತೆ ಆಚರಣೆಗೆ ಬಂದಿದೆ ಎಂದು ಹೇಳಿದ್ದರೆಂದು ಬರೆಯುತ್ತಾರೆ… ಆದರೆ ‘ಅಸ್ಪೃಶ್ಯರಿಗೆ ಗಾಂಧಿ ಮತ್ತು ಕಾಂಗ್ರೆಸ್ ಏನು ಮಾಡಿದೆ’ ಎನ್ನುವ ಲೇಖನದಲ್ಲಿ ‘ಹಿಂದೂಯಿಸಂ ಮತ್ತು ಸಾಮಾಜಿಕ ಒಗ್ಗೂಡುವಿಕೆ ಎಂದಿಗೂ ಹೊಂದಿಕೊಳ್ಳುವುದಿಲ್ಲ. ಹಿಂದೂಯಿಸಂನ ತತ್ವವು ಸಾಮಾಜಿಕ ಪ್ರತ್ಯೇಕತೆಯನ್ನು ಬೋಧಿಸುತ್ತದೆ. ಹಿಂದೂಗಳು ಒಂದಾಗಿ ಬಾಳಬೇಕೆಂದರೆ ಅವರು ಹಿಂದೂಯಿಸಂನ್ನು ತಿರಸ್ಕರಿಸಬೇಕು. ಹಿಂದೂಯಿಸಂನ್ನು ಉಲ್ಲಂಘಿಸದೆ ಒಂದಾಗಿರಲು ಸಾದ್ಯವಿಲ್ಲ. ಹಿಂದೂಗಳ ಒಗ್ಗಟ್ಟಿಗೆ ಹಿಂದೂಯಿಸಂ ಬಲು ದೊಡ್ಡ ಅಡ್ಡಿಯಾಗಿದೆ. ಹಿಂದೂಯಿಸಂ ಸಾಮಾಜಿಕ ಒಗ್ಗೂಡುವಿಕೆಗೆ ತಳಹದಿಯಾದ ಒಳಗೊಳ್ಳುವಿಕೆಯನ್ನು ಬೆಂಬಲಿಸುವುದಿಲ್ಲ, ಬದಲಿಗೆ ಅದು ವಿಭಜನೆಯನ್ನು ಪ್ರಚೋದಿಸುತ್ತದೆ’ ಎಂದು ವಿವರಿಸಿದ್ದಾರೆಂದು ಬರೆಯುತ್ತಾರೆ.

 

‘ರಿಡಲ್ಸ್ ಆಫ್ ಹಿಂದೂಯಿಸಂ’ ಕುರಿತು ಬರೆಯುತ್ತಾ ಅಂಬೇಡ್ಕರ್ ಅವರು ಇಂಡಿಯಾ ದೇಶವು ಪಾರ್ಸಿ, ಕ್ರಿಶ್ಚಿಯನ್, ಮುಸ್ಲಿಂ ಮತ್ತು ಹಿಂದೂಗಳಂತಹ ವಿಭಿನ್ನ ಸಮುದಾಯಗಳ ಒಂದು ಗುಚ್ಛ. ಈ ಕಮ್ಯೂನಿಟಿಗಳ ಮೂಲತತ್ವವು ವರ್ಣಬೇಧವನ್ನಾಧರಿಸಿದ ಜನಾಂಗ ನೀತಿಗಳಲ್ಲ. ಇದು ಧರ್ಮಗಳ ತಳಹದಿಯ ಮೇಲೆ ನಿಂತಿದೆ. ಇದು ಒಂದು ಪೊಳ್ಳುತನದ ನೋಟ ಮಾತ್ರ. ಆದರೆ ಒಬ್ಬ ಪಾರ್ಸಿ ಏಕೆ ಪಾರ್ಸಿ ಮಾತ್ರ? ಒಬ್ಬ ಕ್ರಿಶ್ಚಿಯನ್ ಏಕೆ ಕ್ರಿಶ್ಚಿಯನ್ ಮಾತ್ರ? ಒಬ್ಬ ಮುಸ್ಲಿಂ ಏಕೆ ಮುಸ್ಲಿಂ ಮಾತ್ರ? ಒಬ್ಬ ಹಿಂದೂ ಏಕೆ ಹಿಂದೂ ಮಾತ್ರ? ಎನ್ನುವುದು ಮಾತ್ರ ಕುತೂಹಲಕರ. ಆದರೆ ಪಾರ್ಸಿ, ಕ್ರಿಶ್ಚಿಯನ್, ಮಸ್ಲಿಂ ಕುರಿತಾಗಿ ಯಾವುದೇ ಜಿಜ್ಞಾಸೆಗಳಿಲ್ಲ. ನೀವು ಪಾರ್ಸಿಯನ್ನು ಯಾತಕ್ಕೆ ನಿನ್ನನ್ನು ಪಾರ್ಸಿ ಎಂದು ಕರೆದುಕೊಳ್ಳುತ್ತೀಯ ಎಂದು ಕೇಳಿ ನೋಡಿ. ಅದಕ್ಕೆ ಉತ್ತರಿಸಲು ಆತನಿಗೆ ಯಾವುದೇ ತೊಂದರೆಗಳಿಲ್ಲ. ತಾನು ಜರಾಷ್ಟ್ರರ ಅನುಯಾಯಿಯಾಗಿರುವುದರಿಂದ ತಾನು ಪಾರ್ಸಿ ಎಂದು ಹೇಳಿಕೊಳ್ಳುತ್ತಾನೆ. ಇದೇ ಪ್ರಶ್ನೆಯನ್ನು ಕ್ರಿಶ್ಚಿಯನ್ ಒಬ್ಬನಿಗೆ ಕೇಳಿ ನೋಡಿ. ಆತನಿಗೂ ಉತ್ತರಿಸಲು ಯಾವುದೇ ತೊಂದರೆಗಳಿಲ್ಲ. ತಾನು ಜೀಸಸ್ ಕ್ರಿಸ್ತನನ್ನು ನಂಬುತ್ತೇನೆ ಅದಕ್ಕೆ ಕ್ರಿಶ್ಚಿಯನ್ ಎಂದು ಉತ್ತರಿಸುತ್ತಾನೆ. ಇದೇ ಪ್ರಶ್ನೆಯನ್ನು ಮುಸ್ಲಿಂ ಒಬ್ಬನಿಗೆ ಕೇಳಿ. ಆತನೂ ಉತ್ತರಿಸಲು ಹಿಂಜರಿಯುವುದಿಲ್ಲ. ನಾನು ಇಸ್ಲಾಂ ಅನ್ನು ನಂಬುತ್ತೇನೆ ಹೀಗಾಗಿ ನಾನು ಮುಸ್ಲಿಂ ಎಂದು ಹೇಳುತ್ತಾನೆ.

ಈಗ ಇದೇ ಪ್ರಶ್ನೆಯನ್ನು ಹಿಂದೂ ಒಬ್ಬನಿಗೆ ಕೇಳಿ ನೋಡಿ. ಆತನು ದಿಗ್ಭ್ರಮೆಗೊಂಡು ಏನು ಉತ್ತರಿಸಬೇಕೆಂದು ತಿಳಿಯದೆ ಕಕ್ಕಾಬಿಕ್ಕಿಯಾಗುತ್ತಾನೆ.

ಒಂದು ವೇಳೆ ಹಿಂದೂ ಕಮ್ಯುನಿಟಿ ಆರಾಧಿಸುವ ದೇವರನ್ನೇ ನಾನು ಆರಾಧಿಸುತ್ತೇನೆ ಎಂದು ಉತ್ತರಿಸಿದರೆ ಅದು ಅರ್ಧಸತ್ಯ ಮಾತ್ರ. ಏಕೆಂದರೆ ಎಲ್ಲಾ ಹಿಂದೂಗಳೂ ಒಂದೇ ದೇವರನ್ನು ಪೂಜಿಸುವುದಿಲ್ಲ. ಕೆಲ ಹಿಂದೂಗಳು ಏಕರೂಪಿ ಸಂಸ್ಕೃತಿಯ ಆರಾಧಕರು, ಕೆಲವರು ಬಹುರೂಪಿ ಸಂಸ್ಕೃತಿಯ ಆರಾಧಕರು, ಮತ್ತೆ ಕೆಲವರು ಅದ್ವೈತವಾದಿಗಳು. ಏಕರೂಪಿ ಸಂಸ್ಕೃತಿಯ ಆರಾಧಕರು ಸಹ ಒಬ್ಬನೇ ದೇವರನ್ನು ಪೂಜಿಸುವುದಿಲ್ಲ. ಕೆಲವರು ವಿಷ್ಣುವನ್ನು, ಕೆಲವರು ಶಿವನನ್ನು, ಕೆಲವರು ರಾಮನನ್ನು, ಕೆಲವರು ಕೃಷ್ಣನನ್ನು ಪೂಜಿಸುತ್ತಾರೆ. ಕೆಲವರು ಗಂಡು ದೇವರನ್ನು ಪೂಜಿಸುವುದೇ ಇಲ್ಲ. ಅವರು ಹೆಣ್ಣು ದೇವತೆಯನ್ನು ಪೂಜಿಸುತ್ತಾರೆ. ಇವರೂ ಸಹ ವಿಭಿನ್ನ ದೇವತೆಗಳನ್ನು ಪೂಜಿಸುತ್ತಾರೆ. ಕೆಲವರು ಕಾಳಿ, ಕೆಲವರು ಪಾರ್ವತಿ, ಕೆಲವರು ಲಕ್ಷ್ಮಿಯನ್ನು ಪೂಜಿಸುತ್ತಾರೆ.

‘ನಾನು ಹಿಂದೂ ನಂಬಿಕೆಗಳನ್ನು ನಂಬುತ್ತೇನೆ, ಅದಕ್ಕಾಗಿ ನಾನು ಹಿಂದೂ’ ಎಂದು ಹೇಳಿದರೆ ಅದು ತಪ್ಪು ಉತ್ತರವಾಗುತ್ತದೆ. ಹಿಂದೂ ಧರ್ಮದಲ್ಲಿ ವ್ಯಕ್ತಿಯೊಬ್ಬನ ವೈಯುಕ್ತಿಕ ನಂಬಿಕೆಗಳು ಮತ್ತೊಬ್ಬನ ವೈಯುಕ್ತಿಕ ನಂಬಿಕೆಗಳಿಂದ ಸಂಪೂರ್ಣವಾಗಿ ಭಿನ್ನವಾಗಿರುತ್ತವೆ. ಉದಾಹರಣೆಗೆ ಕೆಲವು ಹಿಂದೂಗಳು ಎಲ್ಲಾ ಹಿಂದೂ ಶಾಸನಗಳನ್ನು ನಂಬಬೇಕು ಎಂದರೆ ಅದನ್ನು ಕೆಲವು ಹಿಂದೂಗಳು ಅಲ್ಲಗೆಳೆದು ತಂತ್ರ ಮಾರ್ಗವನ್ನು ಇದರಿಂದ ಹೊರಗಿಡಬೇಕು ಎನ್ನುತ್ತಾರೆ. ಮತ್ತೆ ಕೆಲವರು ವೇದಗಳನ್ನು ಮಾತ್ರ ನಂಬುತ್ತಾರೆ. ಆದರೆ ಇವರೆಡನ್ನೂ ನಂಬದ ಮತ್ತೊಂದು ಹಿಂದೂ ಗುಂಪು ಕರ್ಮ ಸಿದ್ಧಾಂತವನ್ನು ನಂಬುತ್ತದೆ. ಮತ್ತೊಂದು ಗುಂಪು ಪರಕಾಯಪ್ರವೇಶ ಸಿದ್ಧಾಂತವನ್ನು ನಂಬುತ್ತದೆ. ಒಂದು ಸಂಕೀರ್ಣ ಮತಸಿದ್ಧಾಂತಗಳ, ಧರ್ಮ ಸಿದ್ಧಾಂತಗಳ ಗೂಡು ಈ ಹಿಂದೂಯಿಸಂ.

‘ನಾನು ಹಿಂದೂ ಸಂಪ್ರದಾಯಗಳನ್ನು ನಂಬುತ್ತೇನೆ, ಅದಕ್ಕಾಗಿ ನಾನು ಹಿಂದೂ’ ಎಂದು ಹೇಳಿದರೆ ಅದೂ ಸಹ ತಪ್ಪು ಉತ್ತರವಾಗುತ್ತದೆ. ಏಕೆಂದರೆ ಎಲ್ಲಾ ಹಿಂದೂಗಳೂ ಒಂದೇ ಸಂಪ್ರದಾಯಗಳನ್ನು ಪಾಲಿಸುವುದಿಲ್ಲ. ಉತ್ತರ ಭಾರತದಲ್ಲಿ ಹತ್ತಿರದ ಸಂಬಂಧಿಗಳ ನಡುವಿನ ಮದುವೆಯನ್ನು ನಿಷೇಧಿಸಲಾಗಿದೆ. ಆದರೆ ದಕ್ಷಿಣದಲ್ಲಿ ಕಸಿನ್ಸ್‌ಗಳು ಪರಸ್ಪರ ಮದುವೆಯಾಗುವುದು ರೂಢಿಯಲ್ಲಿದೆ. ಕಟ್ಟುಪಾಡುಗಳ ಆಧಾರವಾಗಿ ಮಹಿಳೆಯ ಪರಿಶುದ್ಧತೆಯನ್ನು ತುಂಬಾ ಗೌರವಿಸುತ್ತಾರೆ, ಕೆಲವರಲ್ಲಿ ಇದಕ್ಕೆ ಅಷ್ಟೊಂದು ಒತ್ತು ನೀಡುವುದಿಲ್ಲ, ಮತ್ತೊಂದು ಗುಂಪು ತಮ್ಮ ಹೆಣ್ಣು ಮಕ್ಕಳನ್ನು ದೇವದಾಸಿ ಪದ್ಧತಿಯಂತೆ ಧಾರ್ಮಿಕ ವೇಶ್ಯಾವಾಟಿಕೆಗೆ ಸಮರ್ಪಿಸುತ್ತಾರೆ. ಒಂದು ಭೌಗೋಳಿಕ ಭಾಗದಲ್ಲಿ ಹಿಂದೂ ಮಹಿಳೆಯರು ಸಾರ್ವಜನಿಕವಾಗಿ ಯಾವುದೇ ಕಟ್ಟುಪಾಡುಗಳಿಲ್ಲದೆ ಓಡಾಡುತ್ತಿದ್ದರೆ ಮತ್ತೊಂದು ಭಾಗದಲ್ಲಿ ಮಹಿಳೆಯನ್ನು ಮನೆಯೊಳಗೆ ಬಂಧಿಸಿಡಲಾಗುತ್ತದೆ.

‘ನಾನು ಜಾತಿ ಪದ್ಧತಿಯನ್ನು ನಂಬುತ್ತೇನೆ, ಅದಕ್ಕಾಗಿ ನಾನು ಹಿಂದೂ’ ಎಂದು ಹೇಳಿದರೆ ಆ ಉತ್ತರವೂ ಅಷ್ಟೊಂದು ಸಮಾಧಾನಕರವಾಗಿರುವುದಿಲ್ಲ. ಪ್ರತಿಯೊಬ್ಬ ಹಿಂದೂ ತನ್ನ ಪಕ್ಕದ ಮನೆಯವನ ಸಂಪ್ರದಾಯಗಳ ಕುರಿತಾಗಿ ಅಷ್ಟೊಂದು ಆಸಕ್ತಿ ವಹಿಸುವುದಿಲ್ಲ ಎನ್ನುವುದು ನಿಜವಾದರೂ ಆದರೆ ಆ ಹಿಂದೂ ತನ್ನ ಪಕ್ಕದ ಮನೆಯವನ ಜೊತೆ ಏನು ತಿನ್ನಬೇಕು, ಆತನ ಕೈಯಿಂದ ನೀರನ್ನು ಪಡೆಯಬೇಕೆ ಎಂದು ಅರಿಯುವುದರಲ್ಲಿ ಆಸಕ್ತಿ ವಹಿಸುತ್ತಾನೆ ಎನ್ನುವುದೂ ಸಹ ನಿಜ. ಅಂದರೆ ಹಿಂದೂ ಧರ್ಮದಲ್ಲಿ ಜಾತಿ ಪದ್ಧತಿಯು ಒಂದು ಪ್ರಮುಖವಾದ ಆಚರಣೆಯಾಗಿದೆ ಮತ್ತು ಒಂದು ಅಂಗೀಕೃತ, ಐಡೆಂಟಿಟಿ ಜಾತಿಗೆ ಅವನು ಸೇರಿಲ್ಲವಾದರೆ ಅವನು ಹಿಂದೂ ಅಲ್ಲವೆಂದೇ ಪರಿಗಣಿಸಲಾಗುತ್ತದೆ. ಆದರೆ ಕೇವಲ ಜಾತಿಯನ್ನು ನಂಬುವುದರ ಆಧಾರದ ಮೇಲೆ ಮಾತ್ರ ಇದನ್ನು ಗುರುತಿಸಲು ಸಾಧ್ಯವಿಲ್ಲ. ಏಕೆಂದರೆ ಬಹುಪಾಲು ಮುಸ್ಲಿಮರು, ಬಹುಪಾಲು ಕ್ರಿಶ್ಚಿಯನ್ನರು ಊಟದ ಸಂದರ್ಭದಲ್ಲಿ ಅಲ್ಲವಾದರೂ ಅಂತರ್ಜಾತೀಯ ಮದುವೆಯ ಸಂದರ್ಭದಲ್ಲಿ ಜಾತಿಯನ್ನು ಪಾಲಿಸುತ್ತಾರೆ. ಅದರ ಆಧಾರದ ಮೇಲೆ ಅವರನ್ನು ಹಿಂದೂ ಎಂದು ಕರೆಯಲಾಗುವುದಿಲ್ಲ. ಎಲ್ಲಾ ಅಂಶಗಳನ್ನು ಒಳಗೊಂಡಿರಬೇಕಾಗಿರುತ್ತದೆ. ಅವನು ಹಿಂದೂ ಆಗಿರಬೇಕು ಮತ್ತು ಅವನು ಜಾತಿ ಪದ್ಧತಿಯನ್ನು ಪಾಲಿಸಬೇಕು. ಹಾಗಿದ್ದಲ್ಲಿ ಹಿಂದೂ ಅಂದರೆ ಯಾರು ಎನ್ನುವ ಪ್ರಶ್ನೆ ಎದುರಾಗುತ್ತದೆ. ಇನ್ನು ನಾವು ನಮ್ಮ ಇಂದಿನ ಸ್ಥಿತಿಗೆ ಮರಳಬೇಕಾಗುತ್ತದೆ.

ತನ್ನ ಧರ್ಮದ ಪ್ರಶ್ನೆ ಬಂದಾಗ ಪ್ರತಿಯೊಬ್ಬ ಹಿಂದೂವಿಗೂ ತುಂಬಾ ಕಸಿವಿಸಿ, ತೊಡಕುಂಟಾಗಬೇಕಾಗಿತ್ತು ಅಲ್ಲವೇ? ಪ್ರತಿ ಪಾರ್ಸಿ, ಕ್ರಿಶ್ಚಿಯನ್, ಮುಸ್ಲಿಂ ತುಂಬಾ ಸರಳವಾಗುವ ಧರ್ಮದ ಪ್ರಶ್ನೆ ಹಿಂದೂವಿಗೇಕೆ ತನ್ನ ಧರ್ಮದ ಸಂದರ್ಭದಲ್ಲಿ ಉತ್ತರಿಸಲಾಗದಷ್ಟು ಕಗ್ಗಂಟಾಗುತ್ತದೆ? ಈ ಧಾರ್ಮಿಕ ಗೊಂದಲಗಳಿಗೆ ಕಾರಣವೇನು ಎಂದು ಪ್ರತಿಯೊಬ್ಬ ಹಿಂದೂ ತನ್ನನ್ನು ತಾನು ಕೇಳಿಕೊಳ್ಳಬೇಕಾದಂತಹ ಕಾಲ ಇದು’ ಎಂದು ವಿವರವಾಗಿ ಈ ಹಿಂದುತ್ವದ ಟೊಳ್ಳುತನವನ್ನು ಬಿಚ್ಚಿಡುತ್ತಾರೆ.

(ರಿಡಲ್ಸ್ ಆಫ್ ಹಿಂದೂಯಿಸಂ- ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು, ಸಂಪುಟ 4)

ಬಾಬಾ ಸಾಹೇಬರನ್ನು ಹಿಂದೂಯಿಸಂಗೆ ಜೀರ್ಣೀಸಿಕೊಳ್ಳಲು ವಿಫಲ ಪ್ರಯತ್ನ ನಡೆಸಿರುವ ಆರೆಸ್ಸಸ್‌ನ ಚಿತಾವಣೆಗೆ ವ್ಯತಿರಿಕ್ತವಾಗಿ  ಡಾ.ಅಂಬೇಡ್ಕರ್ ‘ಹಿಂದೂ ರಾಜ್ ಜಾರಿಗೊಂಡರೆ ಈ ದೇಶಕ್ಕೆ ಬಲು ದೊಡ್ಡ ಅನಾಹುತವಾಗುತ್ತದೆ. ಸ್ವಾತಂತ್ರ್ಯ, ಸಮಾನತೆ, ಬಂದುತ್ವಕ್ಕೆ ಹಿಂದೂಯಿಸಂ ವಿಪತ್ಕಾರಿಯಾಗಿದೆ. ಪ್ರಜಾಪ್ರಭುತ್ವಕ್ಕೆ ಹೊಂದಿಕೊಳ್ಳುವುದಿಲ್ಲ. ಹಿಂದೂ ರಾಜ್ ನ್ನು ಯಾವುದೇ ಬೆಲೆ ತೆತ್ತಾದರೂ ಪ್ರತಿಬಂಧಿಸಬೇಕು’ ಎಂದು ಎಚ್ಚರಿಸುತ್ತಾರೆ. ಆದರೆ ಅಂಬೇಡ್ಕರ್ ಅವರ ಆತಂಕ ಇಂದು ನಿಜವಾಗಿದೆ. ಹಿಂದೂರಾಜ್ ಭಾರತದ ಬೀದಿಗಳಲ್ಲಿ ತನ್ನ ವಿಕೃತಿಯಿಂದ ಮೆರೆದಾಡುತ್ತಿದೆ. ಭಾರತ ನರಮೇಧಧ ಹೊಸ್ತಿಲಲ್ಲಿದೆ. ಅಂಬೇಡ್ಕರ್ ಪ್ರಕಾರ ಸಮಾಜದ ಸಂಪನ್ಮೂಲಗಳ ಮೇಲೆ ತನ್ನ ಯಜಮಾನಕೀಯವನ್ನು ಸ್ಥಾಪಿಸಲು ಹಿಂದೂ ಸವರ್ಣೀಯರು ಹಿಂದುತ್ವ ಸಿದ್ದಾಂತವನ್ನು ಬಳಸಿಕೊಳ್ಳುತ್ತಾರೆ. ಈ ಮೇಲ್ಜಾತಿ ಹಿಂದೂಗಳು ಅಪಾಯಕಾರಿ ನಾಯಕರು. ಶಿಕ್ಷಣ ಮತ್ತು ಸಂಪತ್ತಿನ ಮೇಲೆ ಏಕಸ್ವಾಮ್ಯತೆ ಸಾಧಿಸಿರುವ ಈ ಮೇಲ್ಜಾತಿಯವರು ರಾಜ್ಯವನ್ನು ಅತಿಕ್ರಮಿಸಿಕೊಳ್ಳುತ್ತಾರೆ ಎಂದು ವಿವರಿಸಿದ್ದರು.

ಪ್ರೊ. ಶಂಶುಲ್ ಇಸ್ಲಾಂ ‘ಪಾಕಿಸ್ತಾನ ಅಥವಾ ಭಾರತದ ವಿಭಜನೆ (1940) ಪುಸ್ತಕದಲ್ಲಿ ಅಂಬೇಡ್ಕರ್ ‘ಇದು ವಿಚಿತ್ರವೆನಿಸಬಹುದು, ಒಂದು ದೇಶ ವರ್ಸಸ್ ಎರಡು ದೇಶ ಎನ್ನುವ ವಿಚಾರಕ್ಕೆ ಸಂಬಂದಿಸಿದಂತೆ ಪರಸ್ಪರ ವಿರೋಧಿಸುವುದರ ಬದಲು ಸಾವರ್ಕರ್ ಮತ್ತು ಜಿನ್ನಾ ಇಬ್ಬರೂ ಅದನ್ನು ಸಮ್ಮತಿಸುತ್ತಾರೆ ಮತ್ತು ಒಂದು ಹಿಂದೂ, ಇನ್ನೊಂದು ಮುಸ್ಲಿಂ ಎರಡು ದೇಶಗಳಿವೆ ಎಂದು ಪ್ರತಿಪಾದಿಸುತ್ತಾರೆ. ಸಾವರ್ಕರ್ ನಿಲುವು ವಿಲಕ್ಷಣವಲ್ಲದಿದ್ದರೂ ತರ್ಕಹೀನವಾಗಿದೆ. ಮುಸ್ಲಿಮರು ಪ್ರತ್ಯೇಕ ರಾಷ್ಟ್ರವೆಂದು ಸಾವರ್ಕರ್ ಒಪ್ಪಿಕೊಳ್ಳುತ್ತಾರೆ’ ಎಂದು ಬರೆಯುತ್ತಾರೆ.

ಅಂಬೇಡ್ಕರ್ ಪ್ರಕಾರ ‘ಸಾವರ್ಕರ್ ಮುಸ್ಲಿಂ ದೇಶವನ್ನು ಹಿಂದೂ ದೇಶದ ಜೊತೆ ಸರಿ ಸಮಾನವಾಗಿ ಪರಿಗಣಿಸುವುದಿಲ್ಲ. ಅವರು ಹಿಂದೂ ರಾಷ್ಟ್ರವು ಪ್ರಾಬಲ್ಯ ದೇಶವಾಗಿಯೂ, ಮುಸ್ಲಿಂ ರಾಷ್ಟ್ರವು ಅದರ ಅಡಿಯಾಳಾಗಿರುವುದನ್ನು ಬಯಸುತ್ತಾರೆ’.

ಆದರೆ ಈ ಎಲ್ಲಾ ಚಾರಿತ್ರಿಕ ಸತ್ಯಗಳನ್ನು ಮರೆಮಾಚಿ ಅಂಬೇಡ್ಕರ್ ಅವರನ್ನು ಹಿಂದುತ್ವದ ಕುರಿತು ಮೃದು ಧೋರಣೆ ಹೊಂದಿದ್ದರು ಎನ್ನುವ ಮಿಥ್ ಸೃಷ್ಟಿಸುತ್ತಿದ್ದಾರೆ. ಇಂದು ಆರೆಸ್ಸಸ್ ಕೈಯಲ್ಲಿ ಅಧಿಕಾರವಿದೆ. ಶಿಕ್ಷಣ ಇಲಾಖೆಯಿದೆ. ಸಂಸ್ಕೃತಿ ಇಲಾಖೆಯಿದೆ. ಸಾರ್ವಜನಿಕ ಸಂಸ್ಥೆಗಳನ್ನು ಸಂಪೂರ್ಣವಾಗಿ ತನ್ನ ಹಿಂದುತ್ವ-ಬ್ರಾಹ್ಮಣ್ಯಶಾಹಿ ಸಿದ್ದಾಂತಕ್ಕೆ ದುರುಪಯೋಗಪಡಿಸಿಕೊಳ್ಳುತ್ತಿದೆ ಮತ್ತು ಇದಕ್ಕೆ ಅಂಬೇಡ್ಕರ್ ಲೆಗಸಿಯನ್ನು ಸಹ ತಿರುಚಲಾಗುತ್ತಿದೆ.

ಉಪ ಸಂಹಾರ

ಆಕ್ರಮಣಕಾರಿ ಹಿಂದೂಯಿಸಂ ಭಾರತೀಯ ರಾಷ್ಟ್ರಯವಾದದ ಛದ್ಮವೇಷ ಧರಿಸಿದೆ ಎಂದು ಹೇಳುವ ಅಂಬೇಡ್ಕರ್ ಬ್ರಿಟೀಷ್ ಆಡಳಿತ ವಿರುದ್ಧ ಸ್ವಾತಂತ್ರ್ಯ ಪಡೆಯಲು ಮಾತ್ರ ರಾಷ್ಟ್ರೀಯವಾದವನ್ನು ಬಳಸಿಕೊಂಡವರು ಬಹುಸಂಖ್ಯಾತ ಮತೀಯವಾದಕ್ಕೆ ಫಲವತ್ತಾದ ಭೂಮಿಯನ್ನು ಸೃಷ್ಟಿಸಿದರು ಎಂದು ಮಾರ್ಮಿಕವಾಗಿ ಹೇಳುತ್ತಾರೆ. ಡಿ. ರಾಜಾ ಅವರು ‘ರಾಷ್ಟ್ರೀಯತೆಯನ್ನು ಕುಟಿಲ ಸ್ವರೂಪದಲ್ಲಿ ಹೇರುವ ಹಿಂದುತ್ವದ ಶಕ್ತಿಗಳ ಕುರಿತು ನಾವು ಎಚ್ಚರದಿಂದ ಇರಬೇಕು, ವಂಚಿತ ಸಮುದಾಯಗಳು ಮತ್ತು ದುಡಿಯುವ ವರ್ಗಗಳು ಎಚ್ಚೆತ್ತುಕೊಂಡು ತಮ್ಮ ಹಕ್ಕುಗಳನ್ನು, ಸ್ವಾತಂತ್ರ್ಯವನ್ನು ಕೇಳಲು ಆರಂಭಿಸಿದಾಗ ಈ ಹಿಂದುತ್ವ ಶಕ್ತಿಗಳು ಈ ಪ್ರತಿರೋಧವು ರಾಷ್ಟ್ರೀಯವಾದಕ್ಕೆ ಕುತ್ತು ತರುತ್ತದೆ ಎಂದು ಆರೋಪಿಸಿ ಅದನ್ನು ಹತ್ತಿಕ್ಕುತ್ತದೆ’ ಎಂದು ಹೇಳುತ್ತಾರೆ.

ಇಂದು ತಳ ಸಮುದಾಯಗಳು, ದಲಿತರು ಮತ್ತು ದುಡಿಯುವ ವರ್ಗಗಳು ಒಂದಾಗಿ ಈ ಫ್ಯಾಸಿಸಂ ವಿರುದ್ಧ ಬೃಹತ್ತಾದ ಪ್ರತಿರೋಧವನ್ನು ರೂಪಿಸಬೇಕಾಗಿದೆ. ಅಂಬೇಡ್ಕರ್ ಅವರ ಘೋಷ ವಾಕ್ಯಗಳಾದ ‘ಶಿಕ್ಷಣ, ಸಂಘಟನೆ, ಹೋರಾಟ’ದ ಕ್ರಿಯಾರೂಪವಾಗಿ ಸಂವಿಧಾನ ಮತ್ತು ಬಹುತ್ವದ ತಳಹದಿಯಲ್ಲಿ ಕಟ್ಟಬೇಕಾಗಿದೆ.

Donate Janashakthi Media

Leave a Reply

Your email address will not be published. Required fields are marked *