ನವದೆಹಲಿ: ಜವಹಾರ್ ಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್‌ಯು)ದಲ್ಲಿ ವಿದ್ಯಾರ್ಥಿ ಸಂಘಟನೆಗಳ ನಡುವೆ ಘರ್ಷಣೆ ಏರ್ಪಟ್ಟಿದೆ. ಕ್ಯಾಂಪಸಿನಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎಬಿವಿಪಿ ವಿದ್ಯಾರ್ಥಿಗಳ ವಿರುದ್ಧ ಇಂದು(ಏಪ್ರಿಲ್ 11) ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ವಿಶ್ವವಿದ್ಯಾಲಯದಲ್ಲಿ ಮಾಂಸಾಹಾರದ ವಿಚಾರವಾಗಿ ಭಾನುವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮತ್ತು ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳ ಕಾರ್ಯಕರ್ತರು ಪರಸ್ಪರ ಘರ್ಷಣೆ ನಡೆದಿತ್ತು. ಘಟನೆಯಲ್ಲಿ ವಿದ್ಯಾರ್ಥಿಗಳಿಗೆ ತೀವ್ರವಾಗಿ ಗಾಯಗಳಾಗಿವೆ. ಆರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಮಧ್ಯಾಹ್ನ 3:30ಕ್ಕೆ ಕಾವೇರಿ ಹಾಸ್ಟೆಲ್ ನಲ್ಲಿ ಮಾಂಸಹಾರ ಸೇವಿಸಕೂಡದೆಂದು ಎಬಿವಿಪಿ ವಿದ್ಯಾರ್ಥಿಗಳು ಆಕ್ಷೇಪ ಎತ್ತಿದ್ದು, ಇದು ಘರ್ಷಣೆಗೆ ಕಾರಣವಾಗಿದೆ ಎನ್ನಲಾಗಿದೆ. ಎಬಿವಿಪಿ ಸದಸ್ಯರು ಮೆಸ್ ಕಾರ್ಯದರ್ಶಿ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಹಾಸ್ಟೆಲ್‌ನಲ್ಲಿ ಮಾಂಸ ಭಕ್ಷ್ಯಗಳನ್ನು ನೀಡದಂತೆ ಸಿಬ್ಬಂದಿಯನ್ನು ತಡೆದಿದ್ದಾರೆ ಎಂದು ಜೆಎನ್‌ಯು ವಿದ್ಯಾರ್ಥಿ ಸಂಘವು ಆರೋಪಿಸಿದೆ.
ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಒಂದಾದ ಜೆಎನ್‌ಯುನಲ್ಲಿ ಭಾನುವಾರ ವಿದ್ಯಾರ್ಥಿಗಳ ಮಧ್ಯೆ ಘರ್ಷಣೆಗೆ ಸಂಭವಿಸಿತ್ತು. ಕ್ಯಾಂಪಸ್‌ನಲ್ಲಿರುವ ಹಾಸ್ಟೆಲ್‌ನಲ್ಲಿ ಎಬಿವಿಪಿ ಬಲವಂತವಾಗಿ ಮಾಂಸಾಹಾರವನ್ನು ನಿಷೇಧಿಸಿದೆ ಎಂದು ಎಡಪಂಥೀಯ ವಿದ್ಯಾರ್ಥಿ ಸಂಘಟನೆಯ ಸದಸ್ಯರು ಆರೋಪಿಸಿದ್ದರು.
ಜೆಎನ್‌ಯುಎಸ್‌ಯು, ಎಸ್‌ಎಫ್‌ಐ, ಡಿಎಸ್‌ಎಫ್ ಮತ್ತು ಎಐಎಸ್‌ಎ ಸದಸ್ಯರಾಗಿರುವ ವಿದ್ಯಾರ್ಥಿಗಳು ದೂರು ನೀಡಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಡಿಸಿಪಿ) ಮನೋಜ್ ಸಿ. ಹೇಳಿದ್ದಾರೆ. ದೂರು ಹಿನ್ನೆಲೆಯಲ್ಲಿ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು), 341 (ತಪ್ಪು ಸಂಯಮ), 509 (ಮಹಿಳೆಯರ ನಮ್ರತೆಯನ್ನು ಅವಮಾನಿಸುವ ಉದ್ದೇಶದಿಂದ ಮಾತು, ಸನ್ನೆ ಅಥವಾ ಕೃತ್ಯ) ಮತ್ತು 34ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ವಾಸ್ತವಿಕ ಅಥವಾ ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸಲು ಮತ್ತು ಅಪರಾಗಳನ್ನು ಗುರುತಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ, ಇದೇ ವೇಳೆ ಎಬಿವಿಪಿಗೆ ಸೇರಿದ ವಿದ್ಯಾರ್ಥಿಗಳೂ ಸಹ ದೂರು ನೀಡಿದ್ದಾರೆ ಸೂಕ್ತ ಕಾನೂನು ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಕುರಿತು ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶೆ ಘೋಷ್ ಟ್ವೀಟ್ ಮಾಡಿದ್ದು, ಎಬಿವಿಪಿ ಸದಸ್ಯರು ಮಾಂಸಹಾರ ಸೇವಿಸುವುದನ್ನು ತಡೆದು ಹಿಂಸಾಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳ ನಡುವೆ ಘರ್ಷಣೆ ಹಿನ್ನೆಲೆಯಲ್ಲಿ ಜೆಎನ್‌ಯು ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದ್ದು, ಕ್ಯಾಂಪಸಿನಲ್ಲಿ ಆಹಾರ ಸೇವನೆ ಕುರಿತು ಯಾವುದೇ ನಿರ್ಬಂಧವಿಲ್ಲ. ಅವರ ಆಹಾರ ಪದ್ಧತಿ ಅನುಸರಿಸಲು ಅಡ್ಡಿಯಿಲ್ಲ ಎಂದು ಸ್ಪಷ್ಟಪಡಿಸಿದೆ.