ನುಗ್ಗಿಕೇರಿ ಅಂಗಡಿ ಧ್ವಂಸ ಪ್ರಕರಣ : ನಾಲ್ವರು ಶ್ರೀರಾಮಸೇನಾ ಕಾರ್ಯಕರ್ತರ ಬಂಧನ

ಧಾರವಾಡ: ನುಗ್ಗಿಕೇರಿಯಲ್ಲಿ ಶನಿವಾರ ನಡೆದ ಮುಸ್ಲಿಮರಿಗೆ ಸೇರಿದ ಅಂಗಡಿಗಳ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಶನಿವಾರ ನುಗ್ಗಿಕೇರಿ ಆಂಜನೇಯ ದೇವಸ್ಥಾನದ ಆವರಣದಲ್ಲಿ ವ್ಯಾಪಾರ ಮಾಡುತ್ತಿದ್ದ ನಬೀಸಾಬ್ ಗೌಸುಸಾಬ್ ಕಿಲ್ಲೇದಾರ, ಮೆಹಬೂಬ್‌ಸಾಬ್ ಮುಜಾವರ್, ಶರೀಫ್ ತಡಕೋಡ ಇವರ ಅಂಗಡಿಗಳನ್ನು 8ರಿಂದ 10 ಜನರಿದ್ದ ಗುಂಪು ದ್ವಂಸಗೊಳಿಸಿತ್ತು.

10 ಮಂದಿ ಆರೋಪಿಗಳ ವಿರುದ್ಧ ಎಫ್ ಐಆರ್ ಸಲ್ಲಿಸಲಾಗಿದೆ. ಘಟನೆ ಬಗ್ಗೆ ಇಂಟರ್ ನೆಟ್ ನಲ್ಲಿ ದೊರೆತ ವಿಡಿಯೋ ದೃಶ್ಯಾವಳಿ ಮೂಲಕ ಕೆಲವು ಜನರಿಗೆ ಸಮನ್ಸ್ ನೀಡಿದ್ದೇವೆ. ವಿಚಾರಣೆಗಾಗಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಮೈಲಾರಪ್ಪ ಗುಡ್ಡಪ್ಪನವರ (27), ಮಹಾನಿಂಗ ಐಗಳಿ (26), ಚಿದಾನಂದ ಕಲಾಲ (25), ಕುಮಾರ ಕಟ್ಟಿಮನಿ (26) ಎಂಬುವವರನ್ನು ಗ್ರಾಮೀಣ ಠಾಣೆ ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ್ ತಿಳಿಸಿದ್ದಾರೆ.

ಮುಸ್ಲಿಂ ವ್ಯಾಪಾರಿಗಳಿಗೆ ನೆರವಿನ ಹಸ್ತ : ಶ್ರೀರಾಮಸೇನೆ ಕಾರ್ಯಕರ್ತರ ದಾಳಿಗೆ ಒಳಗಾದ ಕಲ್ಲಂಗಡಿ ಹಣ್ಣಿನ ವ್ಯಾಪಾರಿಗಳಿಗೆ ಜನಪರ ಸಂಘಟನೆಗಳು ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಸೇರಿದಂತೆ ಹಲವರು ಆರ್ಥಿಕ ಸಹಕಾರ ನೀಡಿ ಬೆಂಬಲಿಸಿದ್ದಾರೆ. ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಹಾಗೂ ರಾಜ್ಯ ಅಧ್ಯಕ್ಷ ಮೊಹಮ್ಮದ್ ನಲ್ಪಾಡ್ ನುಗ್ಗಿಕೇರಿಗೆ ಭೇಟಿ ನೀಡಿ ನಷ್ಟಕ್ಕೊಳಗಾದ ವ್ಯಾಪಾರಿಗಳಿಗೆ ಧೈರ್ಯ ತುಂಬಿದರು. ದಾಳಿಗೊಳಗಾದ ನಾಲ್ಕು ಅಂಗಡಿಗಳಿಗೆ ತಲಾ ₹25ಸಾವಿರ ಪರಿಹಾರ ನೀಡಿದರು. ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ವಿನೋದ ಅಸೂಟಿ, ಮಹಾನಗರ ಜಿಲ್ಲಾ ಅಧ್ಯಕ್ಷ ಇಮ್ರಾನ್ ಕಳ್ಳಿಮನಿ ಇದ್ದರು. ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ನೀಡಿದ ₹10ಸಾವಿರವನ್ನು ಪಕ್ಷದ ಕಾರ್ಯಕರ್ತರು ನಬೀಸಾಬ್‌ಗೆ ನೀಡಿದರು. ಲಡಾಯಿ ಪ್ರಕಾಶದನ ಬಸವರಾಜ ಸೂಳಿಬಾವಿ ₹2ಸಾವಿರ ನೆರವು ನೀಡಿದರು.

Donate Janashakthi Media

Leave a Reply

Your email address will not be published. Required fields are marked *