ಹಿಂದಿಮೂಲ: ನಿಖಿಲ್ ಸಚನ್
ಕನ್ನಡಕ್ಕೆ: ಬೊಳುವಾರು ಮಹಮದ್ ಕುಂಞಿ
ನನ್ನ ಗೆಳೆಯನೊಬ್ಬ ಮುಸಲ್ಮಾನರಿಗಷ್ಟೇ ಹೆದರುತ್ತಿದ್ದ.
ಅಮೀರ್ ಖಾನ್, ಶಾರೂಕ್ ಖಾನ್, ಸಲ್ಮಾನ್ ಖಾನರೆಂದರೆ ಬಹಳ ಅಭಿಮಾನ ಗೆಳೆಯನಿಗೆ;
ಅವರಾರಿಗೂ ಹೆದರುತ್ತಿರಲಿಲ್ಲ;
ಕೇವಲ ಮುಸಲ್ಮಾನರಿಗಷ್ಟೇ ಹೆದರುತ್ತಿದ್ದ.
ಮಧುಬಾಲಾ, ನರ್ಗೀಸ್, ವಹೀದಾರನ್ನು ಗೆಳೆಯ ಆರಾಧಿಸುತ್ತಿದ್ದ.
ಅವರನ್ನು ಕಪ್ಪು ಬಿಳುಪು ಬಣ್ಣಗಳಲ್ಲಿ ಕಾಣಬಯಸುತ್ತಿದ್ದ.
ಮಮ್ತಾಜ್, ಶಬಾನಾ, ಫರೀದಾ, ಝೀನತ್ ಯಾರಿಗೂ ಹೆದರುತ್ತಿರಲಿಲ್ಲ.
ಕೇವಲ ಮುಸಲ್ಮಾನರಿಗಷ್ಟೇ ಹೆದರುತ್ತಿದ್ದ.
ಬೇಸರವಾದಾಗ ಮಹಮದ್ ರಫಿ ಹಾಡು ಆಲಿಸುತ್ತಿದ್ದ.
ಸಾಹಿರ್ ಕವನ ಓದುತ್ತಾ ಆನಂದಭಾಷ್ಪ ಸುರಿಸುತ್ತಿದ್ದ.
ಅವರಾರಿಗೂ ಗೆಳೆಯ ಹೆದರುತ್ತಿರಲಿಲ್ಲ.
ಕೇವಲ ಮುಸಲ್ಮಾನರಿಗಷ್ಟೇ ಹೆದರುತ್ತಿದ್ದ.
ಪ್ರತಿ ಜನವರಿ ಇಪ್ಪತ್ತಾರರಂದು ‘ಸಾರೇ ಜಹಾಂಸೆ’ ಹಾಡುತ್ತಿದ್ದ.
ಬಿಸ್ಮಿಲ್ಲಾ ಖಾನರ ಶೆಹನಾಯಿ, ಝಾಕೀರರ ತಬಲಾ ಕೇಳುತ್ತಿದ್ದ.
ಅವರಾರಿಗೂ ಗೆಳೆಯ ಹೆದರುತ್ತಿರಲಿಲ್ಲ.
ಕೇವಲ ಮುಸಲ್ಮಾನರಿಗಷ್ಟೇ ಹೆದರುತ್ತಿದ್ದ.
ಗೆಳೆಯ ಕ್ರಿಕೆಟ್ ಆಟವೆಂದರೆ ಎಲ್ಲವನ್ನೂ ಮರೆತುಬಿಡುತ್ತಿದ್ದ.
ಅಜರುದ್ದೀನ್ ಬ್ಯಾಟಿಂಗೆಂದರೆ ಎದ್ದು ಕುಣಿಯುತ್ತಿದ್ದ.
ಝಹೀರ್ ಖಾನ್, ಇರ್ಫಾನ್ ಅವರಾರಿಗೂ ಹೆದರುತ್ತಿರಲಿಲ್ಲ;
ಕೇವಲ ಮುಸಲ್ಮಾನರಿಗಷ್ಟೇ ಹೆದರುತ್ತಿದ್ದ.
ಗೆಳತಿಯ ಪ್ರೀತಿಯ ಅಮಲಿನಲ್ಲಿ ಗಾಲಿಬರ ಗಜಲ್ ಹಾಡುತ್ತಿದ್ದ
ಫೈಝರ ಶಾಹರೀ ಗುಣುಗುಣಿಸುತ್ತಿದ್ದ.
ಅವರಲ್ಲಿ ಯಾರಿಗೂ ಇವನು ಹೆದರುತ್ತಿರಲಿಲ್ಲ.
ಕೇವಲ ಮುಸಲ್ಮಾನರಿಗಷ್ಟೇ ಹೆದರುತ್ತಿದ್ದ.
ಅವನಿಗರಿವಿಲ್ಲದೇ ಪ್ರತಿಯೊಬ್ಬ ಮುಸ್ಲಿಮನನ್ನೂ ಪ್ರೀತಿಸುತ್ತಿದ್ದ.
ಅದರೆ, ಸುದ್ದಿಗಳು ಹಡೆದ ಭೂತಕ್ಕೆ ಬಲಿಯಾಗಿದ್ದ.
ಆದ್ದರಿಂದಲೇ ಮುಸಲ್ಮಾರ ಕೇರಿಗೆ ಹೋಗಲು ಹೆದರುತ್ತಿದ್ದ.
ಅವನಿಗರಿವಿಲ್ಲದೇ ಮುಸಲ್ಮಾನರೆಂದರೆ ಬಿಚ್ಚಿಬೀಳುತ್ತಿದ್ದ.