ಬೆಂಗಳೂರು: ವಿದ್ಯುತ್ ದರ ಏರಿಕೆ ವಿಚಾರಗಳು ಚಾಲ್ತಿ ಇರುವ ಪ್ರಸಕ್ತ ಸಂದರ್ಭದಲ್ಲಿ ದರ ಪರಿಷ್ಕರಣೆ ಮಾಡಲಾಗಿದ್ದು, ರಾಜ್ಯದ ಜನರಿಗೆ ವಿದ್ಯುತ್ ದರ ಏರಿಕೆಯ ಬಿಸಿ ತಾಕಲಿದೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ(ಕೆಇಆರ್ಸಿ) ಪ್ರತಿ ಯೂನಿಟ್ಗೆ 35 ಪೈಸೆ ಹೆಚ್ಚಳ ಮಾಡಿದೆ. ಏಪ್ರಿಲ್ 1 ರಿಂದಲೇ ಈ ಪರಿಷ್ಕೃತ ದರ ಜಾರಿಗೆ ಬರಲಿದೆ.
ಕಳೆದ ವರ್ಷ 30 ಪೈಸೆ ಹೆಚ್ಚಳ ಮಾಡಲಾಗಿತ್ತು. ಎಸ್ಕಾಂಗಳು 1 ರೂ. 85 ಪೈಸೆ ಹೆಚ್ಚಳಕ್ಕೆ ಮನವಿ ಸಲ್ಲಿಸಿದ್ದವು. ಸಾಧಕ ಬಾಧಕ ಪರಿಶೀಲಿಸಿ ಈ ಬಾರಿ ಬೆಸ್ಕಾಂ, ಚೆಸ್ಕಾಂ, ಮೆಸ್ಕಾಂ, ಜೆಸ್ಕಾಂ ಸೇರಿದಂತೆ ಹೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ಗೆ 35 ಪೈಸೆ ಹೆಚ್ಚಳ ಮಾಡಲಾಗಿದೆ.
ಇದನ್ನು ಓದಿ: ರಾಜ್ಯದ ಜನರಿಗೆ ಬೆಲೆ ಏರಿಕೆ ಬಿಸಿ: ವಿದ್ಯುತ್ ದರ ಮತ್ತಷ್ಟು ಹೆಚ್ಚಳ
ವಿದ್ಯುತ್ ದರ ಪರಿಷ್ಕರಣೆ ವಿಚಾರವನ್ನು ವಸಂತನನಗರದ ಕೆಇಆರ್ಸಿ ಕಚೇರಿಯಲ್ಲಿ ಅಧ್ಯಕ್ಷ ಮಂಜುನಾಥ್ ಸುದ್ದಿಗೋಷ್ಠಿ ಪ್ರಸ್ತಾಪಿಸಿ ಪ್ರತಿ ಯೂನಿಟ್ಗೆ 35 ಪೈಸೆ ಹೆಚ್ಚಳ ಮಾಡಿರುವುದಾಗಿ ತಿಳಿಸಿದ್ದಾರೆ.
ಆದರೆ ಎಲ್ಲ ಐದು ವಿದ್ಯುತ್ ಸರಬರಾಜು ಕಂಪನಿಯಲ್ಲಿ ನಿಗಧಿತ ಶುಲ್ಕವನ್ನು ಪ್ರತಿ ಕಿಲೋ ವ್ಯಾಟ್/ಕೆವಿಎಗೆ 10 ರೂ. ನಿಂದ 30 ರೂ. ನಿಗಧಿಮಾಡಿ, ಪ್ರತಿ ಯೂನಿಟ್ ನ ಸರಾಸರಿ ವಿದ್ಯುತ್ ದರವನ್ನು 35 ಪೈಸೆಗೆ ಏರಿಕೆ ಮಾಡಲು ಒಪ್ಪಿಗೆ ಸೂಚಿಸಿದೆ ಎಂದು ಕೆಇಆರ್ ಸಿ ಅಧ್ಯಕ್ಷರು ತಿಳಿಸಿದ್ದಾರೆ.
ಆದಾಯ ಕೊರತೆ ಸರಿದೂಗಿಸಲು ದರ ಏರಿಕೆ ಮಾಡಲಾಗಿದೆ. ಇಂಧನ ಶುಲ್ಕ ಕೇವಲ 5 ಪೈಸೆ ಹೆಚ್ಚಳ ಮಾಡಿದ್ದೇವೆ. ಈ ಬಾರಿ ಶೇಕಡಾ 4.33ರಷ್ಟು ದರ ಹೆಚ್ಚಳ ಮಾಡಲಾಗಿದೆ. ಸರಾಸರಿ ಪ್ರತಿ ಯೂನಿಟ್ಗೆ 35 ಪೈಸೆ ಹೆಚ್ಚಳ ಮಾಡಲಾಗಿದೆ. ಇಂಧನ ವೆಚ್ಚ ಸೇರಿ ಒಟ್ಟು 35 ಪೈಸೆ ಏರಿಕೆ ಮಾಡಲಾಗಿದೆ ಎಂದರು.
ಇದನ್ನು ಓದಿ: ವಿವಿಧ ಇಲಾಖೆಗಳಿಂದ ರೂ.12 ಸಾವಿರ ಕೋಟಿ ಬಾಕಿ – ಗ್ರಾಹಕರಿಗೆ ಮತ್ತೊಮ್ಮೆ ವಿದ್ಯುತ್ ದರ ಏರಿಕೆಯ ಬರೆ
ಸೂಕ್ಷ್ಮ ಹಾಗೂ ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ 1 ವರ್ಷದವರೆಗೆ ಮಾಸಿಕ ಇಂಧನ ಬಳಕೆಯಲ್ಲಿ ರಿಯಾಯಿತಿ ನೀಡಲಾಗುವುದು. ಇಂಧನ ಬಳಕೆಯಲ್ಲಿ ಪ್ರತಿ ಯೂನಿಟ್ಗೆ 50 ಪೈಸೆ ರಿಯಾಯಿತಿ ನೀಡಲಾಗುವುದು ಹಾಗೂ ಸೀಸನಲ್ ಇಂಡಸ್ಟ್ರೀಸ್-ಯೂನಿಟ್ಗೆ 1 ರೂ. ರಿಯಾಯಿತಿ ಇಂಧನ ದರ ಯೋಜನೆ ಮುಂದುವರಿಯಲಿದೆ. ವಿದ್ಯುತ್ ವಾಹನಗಳ ಚಾರ್ಜಿಂಗ್ಗೆ ದರ ಏರಿಕೆ ಇಲ್ಲ. ಹಾಲಿ ದರವೇ ಮುಂದುವರಿಯಲಿದೆ ಮಂಜುನಾಥ್ ಹೇಳಿದರು.
ವಿದ್ಯುತ್ ಶಕ್ತಿ ದರ ಏರಿಕೆಗೆ ಪ್ರಮುಖ ಕಾರಣಗಳನ್ನು ಕೆಇಆರ್ ಸಿ ನೀಡಿದೆ :
ಆರ್ಥಿಕ ವರ್ಷ 2022-23ರಲ್ಲಿ ಉಂಟಾಗುವ ಆದಾಯ ಕೊರತೆಯ ಮೊತ್ತ 2,159.48 ಕೋಟಿ ರೂ.ಗಳನ್ನು ಮರುಪಡೆಯಲು ದರ ಹೆಚ್ಚಳ ಅವಶ್ಯವಾಗಿದೆ. ಈ ಮೊತ್ತವು 2020-21ನೇ ಆರ್ಥಿಕ ವರ್ಷದ ಕೊರತೆಯ 1,700.49 ಕೋಟಿ ರೂ.ಗಳನ್ನು ಒಳಗೊಂಡಿರುತ್ತದೆ ಎಂದರು.
ಆರ್ಥಿಕ ವರ್ಷ 2020-21ನೇ ಸಾಲಿನ ಆದಾಯ ಕೊರತೆಯು ಪ್ರತಿ ಯೂನಿಟ್ ಗೆ 27 ಪೈಸೆಯಷ್ಟು ದರ ಹೆಚ್ಚಳಕ್ಕೆ ಕಾರಣವಾಗಿರುತ್ತದೆ. ಆದರೆ 2022-23ನೇ ಸಾಲಿನಲ್ಲಿ ಎಸ್ಕಾಂಗಳ ವಿದ್ಯುತ್ ಖರೀದಿ ವೆಚ್ಚ, ಕಾರ್ಯನಿರ್ವಹಣಾ ವೆಚ್ಚ ಹಾಗೂ ಪಡೆಯುವ ಸಾಲಗಳು ಯೂನಿಟ್ ಗೆ 8 ಪೈಸೆ ಹೆಚ್ಚಳಕ್ಕೆ ಕಾರಣವಾಗಿರುತ್ತದೆ.
ಉಚಿತ ವಿದ್ಯುತ್ ಪೂರೈಕೆಗಾಗಿ ರಾಜ್ಯ ಸರ್ಕಾರ 13,637 ಸಹಾಯಧನ ನೀಡಬೇಕಿದೆ :
ಎಲೆಕ್ಟ್ರಿಕ್ ವಾಹನ ಬಳಕೆ ಪ್ರೋತ್ಸಾಹಿಸಲು ಬ್ಯಾಟರಿ ಚಾರ್ಜಿಂಗ್ ಸ್ಟೇಷನ್ ವಿದ್ಯುತ್ ಬಳಕೆಗೆ ಯೂನಿಟ್ಗೆ 5 ರೂ. ಹಿಂದೆ ನಿಗಧಿಪಡಿಸಿದ್ದನ್ನು ಮುಂದುವರೆಸಲಾಗಿದೆ. ರಾಜ್ಯದಲ್ಲಿ 10 ಎಚ್ಪಿಗಿಂತ ಕಡಿಮೆ ಸಾಮರ್ಥ್ಯದ 33.15 ಲಕ್ಷ ನೀರಾವರಿ ಪಂಪ್ ಸೆಟ್ ಗಳಿವೆ. ಇವುಗಳಿಗೆ ಉಚಿತ ವಿದ್ಯುತ್ ಪೂರೈಸಲು ರಾಜ್ಯ ಸರ್ಕಾರ 2022-23ನೇ ಸಾಲಿನಲ್ಲಿ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳಿಗೆ ಸರ್ಕಾರವು 13,019 ಕೋಟಿ ರೂ. ಸಹಾಯಧನ (ಸಬ್ಸೀಡಿ) ನೀಡಬೇಕಿದೆ.
26.39 ಲಕ್ಷ ಭಾಗ್ಯ ಜ್ಯೋತಿ ಹಾಗೂ ಕುಟೀರ ಜ್ಯೋತಿ ಸಂಪರ್ಕಕ್ಕೆ ಉಚಿತ ವಿದ್ಯುತ್ ಸರಬರಾಜು ಮಾಡಲು 618.04 ಕೋಟಿ ರೂ.ಗಳನ್ನು ಎಸ್ಕಾಂಗಳಿಗೆ ಸರ್ಕಾರ ಸಹಾಯಧನ ನೀಡಬೇಕಿದೆ.
ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಒಂದು ವರ್ಷದ ತನಕ ಮಾಸಿಕ ಇಂಧನ ಬಳಕೆಯಲ್ಲಿ ಪ್ರತಿ ಯೂನಿಟ್ ಗೆ 50 ಪೈಸೆ ರಿಯಾಯಿತಿ ನೀಡಲು ನಿರ್ಧರಿಸಿದೆ.
ಮಳೆಗಾಲದಲ್ಲಿ ಸಂಜೆಯ ಸಮಯದಲ್ಲಿ ಸಂಜೆ 4ರಿಂದ ರಾತ್ರಿ 10ಗಂಟೆವರೆಗೆ ವಿದ್ಯುತ್ ಬಳಕೆಗಾಗಿ ಸಂಜೆಯ ವಿದ್ಯುತ್ ದರ ಸಡಿಲಿಕೆಯನ್ನು ಮುಂದುವರಿಸಲಾಗಿದೆ. ಹೈಟೆನ್ಶನ್ ವಿದ್ಯುತ್ ಗ್ರಾಹಕರಿಗೆ ರಾತ್ರಿ 10ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆವರೆಗೆ ಬಳಸುವ ಎಲ್ಲಾ ಯೂನಿಟ್ ಗಳಿಗೆ ಪ್ರತಿ ಯೂನಿಟ್ 2ರೂ. ಪ್ರೋತ್ಸಾಹಧನವನ್ನು ಅನುಮತಿಸಿದೆ.
ಈಗಾಗಲೆ ರಾಜ್ಯದ ಜನರು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸಿಲಿಂಡರ್ ದರ ಸೇರಿದಂತೆ ಅತ್ಯಗತ್ಯವಾದ ಎಲ್ಲಾ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ. ಈ ನಡುವೆ ವಿದ್ಯುತ್ ದರವು ಏರಿಕೆ ಸೇರಿಕೊಂಡಿವೆ.