ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ತಿಂಗಳು ಮಂಡಿಸಿದ 2022-23ನೇ ಸಾಲಿನ ಆಯವ್ಯಯದಲ್ಲಿ ಅನೇಕ ಉತ್ಪನ್ನಗಳ ಮೇಲೆ ಆಮದು ಸುಂಕವನ್ನು ಹೆಚ್ಚಿಸಿದ್ದಾರೆ. ಇದರ ಪರಿಣಾಮ ಇಂದಿನಿಂದ ಅನೇಕ ವಸ್ತುಗಳ ಬೆಲೆಯಲ್ಲಿ ಏರಿಕೆ ಕಾಣಲಿದೆ. ಅಬಕಾರಿ ಸುಂಕವನ್ನು ಹೆಚ್ಚಿಸಿದ ಪರಿಣಾಮ ಕಚ್ಚಾ ವಸ್ತು, ಅವುಗಳಿಗೆ ಸಂಬಂಧಿಸಿದ ಉತ್ಪನ್ನಗಳ ಬೆಲೆಗಳು ಸಹ ಏರಿಕೆಯಾಗಲಿವೆ.
ಅಗತ್ಯವಿರುವ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯು ನೇರವಾಗಿ ಜನ ಸಾಮಾನ್ಯರಿಗೆ ತಟ್ಟಲಿದೆ. ಈಗಾಗಲೇ ಬೆಲೆ ಏರಿಕೆಯಿಂದ ಹೈರಾಣಾಗಿರುವ ಜನರು ಬೆಲೆ ಏರಿಕೆಯ ಹೊರೆಯನ್ನು ಮತ್ತಷ್ಟು ಹೆಚ್ಚಿಗೆ ಹೊತ್ತುಕೊಳ್ಳಬೇಕಾದ ಪರಿಸ್ಥತಿ ನಿರ್ಮಾಣವಾಗಲಿದೆ.
ಈಗಾಗಲೇ ಪೆಟ್ರೋಲ್, ಡಿಸೇಲ್, ಗ್ಯಾಸ್ ಸಿಲಿಂಡರ್ ದರ ನಿರಂತರ ಏರಿಕೆಯಿಂದಾಗಿ ಸಾಮಾನ್ಯ ಜನರು ಕಂಗೆಟ್ಟಿದ್ದಾರೆ. ಈ ಬೆಲೆ ಏರಿಕೆ ಹೊಟೇಲ್ ಊಟ, ತಿಂಡಿ ಮೇಲೂ ಆಗಿದೆ.
ಇದನ್ನು ಓದಿ: ನಾಳೆಯಿಂದಲೇ ಹೋಟೆಲ್ ಊಟ, ತಿಂಡಿ ದರ ಹೆಚ್ಚಳ
ಅದರೊಂದಿಗೆ, ಸೂಚಿತ ಔಷಧಗಳ ಮೇಲೆ ಕೇಂದ್ರ ಸರಕಾರವು ಶೇ. 10.7 ಅಧಿಕ ದರ ಏರಿಕೆಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ನೋವು ನಿವಾರಕಗಳು, ರೋಗ ನಿರೋಧಕಗಳು, ಸೋಂಕು ನಿವಾರಕಗಳು ಸೇರಿದಂತೆ ಇತರ ಅಗತ್ಯ ಔಷಧಗಳು ಏರಿಕೆಯಾಗಲಿವೆ. ಅಗತ್ಯ ಔಷಧಗಳ ರಾಷ್ಟ್ರೀಯ ಪಟ್ಟಿ (ಎನ್ಎಲ್ಇಎಂ)ಯಲ್ಲಿ 800 ಅಗತ್ಯ ಔಷಧಗಳಿವೆ.
ಇನ್ನು ಮನೆ ನಿರ್ಮಾಣ ಸಾಮಾಗ್ರಿಗಳ ಬೆಲೆ ಏರಿಕೆಯಾಗಿರುವದುರಿಂದ ಮನೆ ಖರೀದಿ ಮೇಲೆ ಶೇ 10-20 ರಷ್ಟು ಹೆಚ್ಚಳವಾಗಲಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್ ತೆರಿಗೆಯನ್ನು ಹೆಚ್ಚಿಸಿದೆ. ಏಪ್ರಿಲ್ 1 ರಿಂದ 10 ರಿಂದ 65 ರೂ.ವರೆಗೆ ದುಬಾರಿಯಾಗಲಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಸಣ್ಣ ವಾಹನಗಳಿಗೆ 10-15 ರೂ., ವಾಣಿಜ್ಯ ವಾಹನಗಳ ಟೋಲ್ ತೆರಿಗೆಯನ್ನು 65 ರೂ. ಹೆಚ್ಚಳವಾಗಲಿದೆ. ಅಂದರೆ ಇಲ್ಲಿವರೆಗೆ ಕಾರು ಮತ್ತು ಜೀಪ್ಗೆ 140 ರೂ. ಟೋಲ್ ಪಾವತಿಸುತ್ತಿದ್ದರೆ, ಇನ್ನು ಮುಂದೆ 155 ರೂ. ಪಾವತಿಸಬೇಕಾಗುತ್ತದೆ. ಹಲವು ಬಗೆಯ ವಾಹನಗಳಿಗೆ ಶೇ.10-15ರಷ್ಟು ಟೋಲ್ ತೆರಿಗೆ ಹೆಚ್ಚಿಸಲಾಗಿದೆ.
ಕಚ್ಚಾ ವಸ್ತುಗಳ ದುಬಾರಿ ಪೂರೈಕೆಯಿಂದಾಗಿ, ಕಂಪನಿಗಳ ಉತ್ಪಾದನಾ ವೆಚ್ಚವು ಹೆಚ್ಚಾಗುತ್ತದೆ ಮತ್ತು ಅದರ ನೇರ ಹೊರೆ ಗ್ರಾಹಕರ ಮೇಲೆ ಬೀಳುತ್ತದೆ. ಇದಲ್ಲದೇ ಕಂಪ್ರೆಸರ್ ನಲ್ಲಿ ಬಳಸುವ ಬಿಡಿಭಾಗಗಳ ಮೇಲೂ ಆಮದು ಸುಂಕವನ್ನು ಹೆಚ್ಚಿಸಲಾಗಿದ್ದು, ಇದರಿಂದ ರೆಫ್ರಿಜರೇಟರ್ ಗಳ ಬೆಲೆಯೂ ಹೆಚ್ಚಾಗಲಿದೆ.
ಅಲ್ಯೂಮಿನಿಯಂ ಅದಿರು ಮತ್ತು ಸಾಂದ್ರೀಕರಣದ ಮೇಲೆ ಶೇಕಡಾ 30 ರಷ್ಟು ಆಮದು ಸುಂಕವನ್ನು ಹೆಚ್ಚಿಸಲಾಗಿದೆ . ಇವುಗಳನ್ನು ಟಿವಿ, ಎಸಿ ಮತ್ತು ಫ್ರಿಡ್ಜ್ನ ಹಾರ್ಡ್ವೇರ್ ತಯಾರಿಕೆಯಲ್ಲಿ ಬಳಸಲಾಗುತ್ತದೆ.
ಎಲ್ಇಡಿ ಬಲ್ಬ್ಗಳನ್ನು ತಯಾರಿಸಲು ಬಳಸುವ ವಸ್ತುಗಳಿಗೆ ಮೂಲ ಕಸ್ಟಮ್ಸ್ ಸುಂಕ ಮತ್ತು ಶೇಕಡಾ 6 ಮರುಪಾವತಿ ಸುಂಕವನ್ನು ವಿಧಿಸಲಾಗುವುದು ಎಂದು ಸರ್ಕಾರ ಹೇಳಿದೆ. ಏಪ್ರಿಲ್ 1ರಿಂದ ಅದರ ಹೊಸ ನಿಯಮ ಜಾರಿಯಾದ ನಂತರ ಎಲ್ ಇಡಿ ಬಲ್ಬ್ ಗಳೂ ದುಬಾರಿಯಾಗಲಿವೆ.
ಬೆಳ್ಳಿಯ ಮೇಲಿನ ಆಮದು ಸುಂಕವನ್ನೂ ಬದಲಾಯಿಸಿದೆ ಇದರ ಪರಿಣಾಮ ಬೆಳ್ಳಿ ವಸ್ತು ಮಾತ್ರವಲ್ಲದೇ, ಉಕ್ಕಿನ ವಸ್ತುಗಳು ಕೂಡ ದುಬಾರಿ ಆಗಲಿದೆ.
ಹಲವು ಆಟೊಮೊಬೈಲ್ ಕಂಪನಿಗಳ ಕಾರು, ಎಸ್ಯುವಿ ದರಗಳು ಏಪ್ರಿಲ್ 1ರಿಂದ ಏರಿಕೆಯಾಗುತ್ತಿದೆ. ಟೊಯೊಟಾ ಜತೆಗೆ ಬಿಎಂಡಬ್ಲ್ಯು, ಆಡಿ, ಮರ್ಸಿಡಿಸ್ ಬೆಂಜ್ ಇತ್ಯಾದಿ ಐಷಾರಾಮಿ ಬ್ರ್ಯಾಂಡ್ಗಳ ಕಾರುಗಳ ದರ ಹೆಚ್ಚಲಿದೆ.