ಆನೇಕಲ್: ಭಾರತ ಉಳಿಸಿ-ಜನತೆಯನ್ನು ರಕ್ಷಿಸಿ ಎಂಬ ಘೋಷಣೆಯೊಂದಿಗೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್(ಸಿಐಟಿಯು) ಮತ್ತು ದೇಶದ ಎಲ್ಲಾ ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆಯಾದ ಜೆಸಿಟಿಯು ಕರೆಯ ಮೇರೆಗೆ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಮಾರ್ಚ್ 28-29ರಂದು ಹಮ್ಮಿಕೊಂಡಿದ್ದು, ಅದರ ಅಂಗವಾಗಿ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರು ಮೆರವಣಿಗೆ ನಡೆಸಿ ಬೆಂಬಲ ನೀಡುವಂತೆ ಮನವಿ ಮಾಡಿದರು.
ಸಿಐಟಿಯು ಸಂಘಟನೆಯ ನೂರಾರು ಜನ ಮುಖಂಡರು, ಕಾರ್ಯಕರ್ತರು ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ಮೆರವಣಿಗೆ ನಡೆಸಿ ಬಳಿಕ ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷರಿಗೆ ಮನವಿಪತ್ರವನ್ನು ನೀಡಿದರು.
ಇದನ್ನು ಓದಿ: ಭಾರತ ಉಳಿಸಿ-ಜನತೆಯನ್ನು ರಕ್ಷಿಸಿ: ಮಾರ್ಚ್ 28-29 ಅಖಿಲ ಭಾರತ ಸಾರ್ವತ್ರಿಕ ಮಹಾ ಮುಷ್ಕರ
ಈ ವೇಳೆ ಸಿಐಟಿಯು ಬೆಂಗಳೂರು ನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎನ್. ಮಂಜುನಾಥ್ ಮಾತನಾಡಿ, ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಸಾವಿರಾರು ಕಾರ್ಖಾನೆ ಹಾಗೂ ಕಂಪನಿಗಳಿಗೆ ಮುಷ್ಕರಕ್ಕೆ ಸಂಪೂರ್ಣ ಬೆಂಬಲ ನೀಡುವಂತೆ ಮನವಿ ಮಾಡಿದ್ದೇವೆ. ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷರ ಮೂಲಕ ಕಂಪನಿಗಳ ಮಾಲೀಕರಿಗೆ ಸಹಕಾರ ನೀಡುವಂತೆಯೂ ಮನವಿ ಮಾಡಲಾಗಿದೆ. ಇದರ ಅಂಗವಾಗಿ ಇಂದು ಕೈಗಾರಿಕಾ ಪ್ರದೇಶದಲ್ಲಿ ಮೆರವಣಿಗೆ ನಡೆಸಿ ಮನವಿ ಸಲ್ಲಿಸಲಾಗಿದೆ ಎಂದರು.
ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷ ಎ.ಪ್ರಸಾದ್ ಮಾತನಾಡಿ, ಈಗಾಗಲೇ ಕೊರೊನಾ ಕಾರಣದಿಂದ ಕಾರ್ಖಾನೆಗಳು ಹಾಗೂ ಕಂಪನಿಗಳು ಸಂಕಷ್ಟಕ್ಕೆ ಸಿಲುಕಿದ್ದು, ಕಾರ್ಮಿಕರಿಗಾಗಿ ಸಂಘಟನೆಗಳು ಕರೆಯಲಾಗಿರುವ ಮುಷ್ಕರಕ್ಕೆ ಬೊಮ್ಮಸಂದ್ರ ಹಾಗೂ ವೀರಸಂದ್ರ ಅತ್ತಿಬೆಲೆ ಜಿಗಣಿ ಕೈಗಾರಿಕಾ ಸಂಘ ಸಂಪೂರ್ಣ ಸಹಕಾರವನ್ನು ನೀಡಲಿದೆ. ಕಾರ್ಮಿಕರಿಗಾಗಿ ನಡೆಸುತ್ತಿರುವ ಈ ಹೋರಾಟದಲ್ಲಿ ಕಂಪನಿ ಮುಚ್ಚದೆ ಕಾರ್ಮಿಕರು ಹಾಗೂ ಕಂಪನಿಗಳ ಮಾಲೀಕರು ಸಂಪೂರ್ಣವಾಗಿ ಸಹಕಾರವನ್ನು ನೀಡಲಿದ್ದಾರೆ. ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಯಾವುದೇ ಕಂಪನಿ ಮಾಲೀಕರು ಹಾಗೂ ಕೈಗಾರಿಕಾ ಸಂಘದ ತಕರಾರು ಇಲ್ಲ ಎಂದರು.
ಬೊಮ್ಮಸಂದ್ರ ಕೈಗಾರಿಕಾ ಸಂಘದ ಖಜಾಂಚಿ ಸಂಜೀವ್ ಸಾವಂತ್, ಜಂಟಿ ಕಾರ್ಯದರ್ಶಿ ಮುರಳೀಧರ್, ವ್ಯವಸ್ಥಾಪಕ ಶಿವಕುಮಾರ್, ಸಿಐಟಿಯು ಬೆಂಗಳೂರು ನಗರ ಜಿಲಾ ಉಪಾಧ್ಯಕ್ಷ ಮಹದೇಶ್, ಎಐಟಿಯುಸಿ ಬೆಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷ ತೋಟಗೆರೆ, ತಾಲೂಕು ಮುಖಂಡ ಸುನೀಲ್, ಶಿವಕುಮಾರ್, ವಿಜಯ್ ಜಾದವ್ ಮತ್ತಿತರರು ಇದ್ದರು.