ಬೆಂಗಳೂರು: ಹಿಂದಿಯಲ್ಲಿ ಇತ್ತೀಚೆಗೆ ತೆರೆಕಂಡಿರುವ ದಿ ಕಾಶ್ಮೀರಿ ಫೈಲ್ಸ್ ಚಲನಚಿತ್ರದ ಮಧ್ಯೆ ಕಳೆದ ವಾರ ಬಿಡುಗಡೆಯಾದ ಅದ್ಭುತ ಪ್ರದರ್ಶನ ಕಾಣುತ್ತಿರುವ ಜೇಮ್ಸ್ ಚಿತ್ರವನ್ನು ಹಲವು ಚಿತ್ರಮಂದಿರಗಳಲ್ಲಿ ಎತ್ತಂಗಡಿ ಮಾಡಲಾಗುತ್ತಿದೆ ಎಂಬ ಆರೋಪಗಳಿವೆ.
ನಟ ಶಿವರಾಜ್ ಕುಮಾರ್ ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ರೇಸ್ವೀವ್ ನಿವಾಸದಲ್ಲಿ ಭೇಟಿ ಮಾಡಿ ‘ಜೇಮ್ಸ್’ ಸಿನಿಮಾದ ಕುರಿತಾಗಿ ಎದ್ದಿರುವ ಗೊಂದಲದ ಕುರಿತು ಮಾತನಾಡಿದ್ದಾರೆ.
ಕಾಶ್ಮೀರ್ ಫೈಲ್ಸ್ ಸಿನಿಮಾ ತೋರಿಸಲು ಹಾಗೂ ನಾಳೆ ಬಿಡುಗಡೆಯಾಗಲಿರುವ ಆರ್ಆರ್ಆರ್ ಸಿನಿಮಾಕ್ಕೆ ಚಿತ್ರಮಂದಿರಗಳನ್ನು ಒದಗಿಸಲು ಜೇಮ್ಸ್ ಕನ್ನಡ ಸಿನಿಮಾವನ್ನು ಎತ್ತಂಗಡಿ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.
ಇದನ್ನು ಓದಿ: ‘ಗುಜರಾತ್ ಫೈಲ್ಸ್’ ಸಿನಿಮಾ ಮಾಡುವೆ ಪ್ರಧಾನಿ ಸಹಕರಿಸಬೇಕು: ವಿನೋದ್ ಕಾಪ್ರಿ
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್ಕುಮಾರ್, ಜೇಮ್ಸ್ ಸಿನಿಮಾವನ್ನು ಕನ್ನಡ ಚಿತ್ರಪ್ರೇಮಿಗಳು ಮೆಚ್ಚಿಕೊಂಡಿದ್ದಾರೆ. ಯಾವ ಕಾರಣಕ್ಕೆ ಸಿನಿಮಾ ಥಿಯೇಟರ್ಗಳಿಂದ ಸಿನಿಮಾ ತಗೆಯುತ್ತಿದ್ದಾರೊ ಗೊತ್ತಿಲ್ಲ. ಕನ್ನಡ ಚಿತ್ರಗಳ ಪರವಾಗಿ ನಾವಿರುತ್ತೇವೆ ಎಂದರು.
ಸಮಸ್ಯೆ ಆಗಿರುವುದು ನಿಜ. ಮುಖ್ಯಮಂತ್ರಿಗಳ ಬಳಿ ಈ ಬಗ್ಗೆ ಚರ್ಚಿಸಿದ್ದೇವೆ. ಅವರು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಕನ್ನಡ ಚಿತ್ರ ಬಂದಾಗ ನಾನು ಎಲ್ಲಾ ಸಿನೆಮಾಗಳಿಗೂ ಬೆಂಬಲ ನೀಡುತ್ತೇನೆ, ಅದು ನನ್ನ ಕುಟುಂಬದ ಚಿತ್ರ ಎಂದಲ್ಲ, ಕನ್ನಡ ಸಿನೆಮಾ ಬಂದಾಗ ಒಗ್ಗಟ್ಟು ತೋರಿಸಬೇಕು. ಜೇಮ್ಸ್ ಪ್ರದರ್ಶನಕ್ಕೆ ಯಾವುದೇ ಸಮಸ್ಯೆಯಾಗಲು ಬಿಡುವುದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೂ ಭರವಸೆ ನೀಡಿದ್ದಾರೆ ಎಂದರು. ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ, ಗೀತಾ ಶಿವರಾಜ್ಕುಮಾರ್ ಇದ್ದರು.
ನಟ ಪುನೀತ್ ರಾಜಕುಮಾರ್ ಕೊನೆಯ ಚಿತ್ರ ‘ಜೇಮ್ಸ್’ ಸಿನಿಮಾಗೆ ಚಿತ್ರಮಂದಿರಗಳಿಂದ ಎತ್ತಂಗಡಿ ವಿಚಾರವಾಗಿ ಪುನೀತ್ ಅಭಿಮಾನಿಗಳು ಚಿತ್ರಮಂದಿರಗಳ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ.