ಮೈಸೂರು ವಿವಿಯಿಂದ ಪುನೀತ್ ರಾಜಕುಮಾರ್‌ಗೆ ಮರಣೋತ್ತರ ಗೌರವ ಡಾಕ್ಟರೇಟ್‌ ಪ್ರಧಾನ

ಮೈಸೂರು: ಕರ್ನಾಟಕ ರತ್ನ, ದಿವಂಗತ ಪುನೀತ್ ರಾಜ್‌ಕುಮಾರ್‌ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯದ 102ನೇ ಘಟಿಕೋತ್ಸವದಲ್ಲಿ ಇಂದು ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಮೈಸೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್ ಅವರು ಪುನೀತ್ ರಾಜ್‌ಕುಮಾರ್ ಹೆಸರು ಹೇಳುತ್ತಿದ್ದಂತೆ ಇಡೀ ಸಭಾಂಗಣದಲ್ಲಿ ಚಪ್ಪಾಳೆ ಸದ್ದು ಕೇಳಿ ಬಂತು.

ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಹಾಲ್‍ನಲ್ಲಿ ನಡೆದ ಘಟಿಕೋತ್ಸವ ಸಮಾರಂಭ ಹಾಗೂ ಪದವಿ ಪ್ರದಾನ ಸಮಾರಂಭದಲ್ಲಿ ಮೂವರು ಸಾಧಕರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೌರವ ಡಾಕ್ಟರೇಟ್ ಪ್ರದಾನ ಮಾಡಿದರು.

ಮೊದಲಿಗೆ ಹಿರಿಯ ವಿಜ್ಞಾನಿ ಹಾಗೂ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ವಿಶ್ರಾಂತ ಮಹಾ ನಿರ್ದೇಶಕ ಡಾ.ವಾಸುದೇವ್ ಕಲ್ಕುಂಟೆ ಅತ್ರೆ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ನಂತರ ನಟ ಪುನೀತ್ ರಾಜ್‍ಕುಮಾರ್ ಪರವಾಗಿ ಪತ್ನಿ ಅಶ್ವಿನಿ ಅವರು ಗೌರವ ಡಾಕ್ಟರೇಟ್ ಸ್ವೀಕರಿಸಿದರು. ಈ ವೇಳೆ ಅವರು ಕೆಲಕಾಲ ಭಾವುಕಗೊಂಡರು. ಈ ಹಿಂದೆ ಪದ್ಮಭೂಷಣ ಡಾ.ರಾಜ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು 46 ವರ್ಷಗಳ ಹಿಂದೆ ಮೈಸೂರು ವಿಶ್ವವಿದ್ಯಾಲಯ ನೀಡಿತ್ತು ಎಂಬುದು ಸ್ಮರಣೀಯ. ನಂತರ ಜಾನಪದ ಮಹಾನ್ ಕಲಾವಿದ ಮಳವಳ್ಳಿ ಮಹಾದೇವಸ್ವಾಮಿ ಅವರಿಗೂ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಪುನೀತ್‌ ರಾಜಕುಮಾರ್‌ ಅವರಿಗೆ ಗೌರವ ಪ್ರಧಾನ ಸಮಾರಂಭದ ಸಮಯದಲ್ಲಿ ಎಲ್‌ಇಡಿ ಸ್ಕ್ರೀನ್‌ನಲ್ಲಿ ಪುನೀತ್ ಬಾಲ್ಯ, ಅವರು ಅಭಿನಯಿಸಿದ ಹಲವು ಚಿತ್ರಗಳ ತುಣುಕು ಪ್ರದರ್ಶಿಸಲಾಯಿತು.

ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ ಗೌರವ ಡಾಕ್ಟರೇಟ್ ಪದವಿ ಪ್ರದಾನ ವೇಳೆ ಇಡೀ ಡಾ.ರಾಜ್ ಕುಮಾರ್ ಕುಟುಂಬ ಹಾಜರಿತ್ತು. ಈ ವೇಳೆ ಭಾವುಕರಾಗಿದ್ದಾರೆ. ಗಣ್ಯರ ಸಾಲಿನಲ್ಲಿ ಕುಳಿತ್ತಿದ್ದ ಪುನೀತ್ ರಾಜ್ ಕುಮಾರ್ ಸಹೋದರಿಯರು, ಅಪ್ಪು ಪರವಾಗಿ ಅವರ ಪತ್ನಿ ಅಶ್ವಿನಿ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ಕೊಡುವಾಗ ಕಣ್ಣಲ್ಲಿ ನೀರು ತುಂಬಿಕೊಂಡಿದ್ದರು.

ಈ ಸಮಯದಲ್ಲಿ ರಾಜ್ ಕುಟುಂಬದಿಂದ ಎರಡು ಬಂಗಾರದ ಪದಕ ಘೋಷಣೆ ಮಾಡಿದ್ದು ಬಿಸಿನೆಸ್ ಮ್ಯಾನೆಜ್‌ಮೆಂಟ್‌ ಮತ್ತು ಲಲಿತಾಕಲಾ ವಿಭಾಗಕ್ಕೆ ಒಂದು ಚಿನ್ನದ ಪದಕ ಘೋಷಣೆಯಾಗಿದೆ. ಪಾರ್ವತಮ್ಮ ರಾಜ್‍ಕುಮಾರ್ ಹೆಸರಿನಲ್ಲಿ ಬಿಸಿನೆಸ್‌ ಮ್ಯಾನೆಜ್‌ಮೆಂಟ್‌ ವಿಭಾಗಕ್ಕೆ ಚಿನ್ನದ ಪದಕ. ಪುನೀತ್ ರಾಜ್‍ಕುಮಾರ್ ಹೆಸರಿನಲ್ಲಿ ಲಲಿತಾಕಲಾ ವಿಭಾಗಕ್ಕೆ ಚಿನ್ನದ ಪದಕ ನೀಡಲಾಗಿದ್ದು, ಎರಡು ಚಿನ್ನದ ಪದಕವನ್ನು ಅಶ್ವಿನಿ ಪುನೀತ್ ರಾಜ್‍ಕುಮಾರ್ ವಿತರಿಸಲಿದ್ದಾರೆ.

ನಟ ರಾಘವೇಂದ್ರ ರಾಜ್ ಕುಮಾರ್ ಮಾತನಾಡಿ, ‘ಜೀವನ ಒಂದು ಚಕ್ರ ಇದ್ದಂತೆ. ನಮ್ಮ ತಂದೆಗೂ ಇದೇ ವಿವಿಯಲ್ಲಿ ಗೌರವ ಡಾಕ್ಟರೇಟ್ ಕೊಟ್ಟಿದ್ದರು. ಇಂದು ನನ್ನ ತಮ್ಮನಿಗೂ ಇದೇ ವಿವಿಯಲ್ಲಿ ಗೌರವ ಡಾಕ್ಟರೇಟ್ ಸಿಕ್ಕಿದೆ. ನನಗೆ ಇದು ವೇದಿಕೆ ರೀತಿ ಕಾಣಿಸ್ತಿಲ್ಲ. ಸರಸ್ವತಿಯ ಮಂದಿರ ತರ ಕಾಣ್ತಿದೆ. ನಿಮ್ಮ ಕೆಲಸವನ್ನ ಶ್ರದ್ದೆಯಿಂದ ಮಾಡಿದ್ರೆ ಪ್ರಶಸ್ತಿಗಳು ಹುಡುಕಿ ಬರುತ್ತವೇ ಅಂತ ಪುನೀತ್ ಯಾವಾಗಲೂ ಹೇಳ್ತಿದ್ದ. ಹೂವಿನಿಂದ ನಾರು ಸ್ವರ್ಗ ಸೇರಿದಂತೆ ನನ್ನ ತಮ್ಮನಿಂದ ನಾನು ಸ್ವರ್ಗ ನೋಡುತ್ತಿದ್ದೇನೆ. ಈ ಗೌರವ ಡಾಕ್ಟರೇಟ್‌ ನಮ್ಮ ಕುಟುಂಬದ ಜವಾಬ್ದಾರಿಯನ್ನು ಹೆಚ್ಚಿಸಿದೆ. ಅಶ್ವಿನಿ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಮಾಜಿಕ ಸೇವೆ ಮುಂದುವರೆಸುತ್ತೇವೆ’ ಎಂದರು.

ಮೈಸೂರು ವಿವಿ 102ನೇ ಘಟಿಕೋತ್ಸವದ ಇದೇ ಸಂದರ್ಭದಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಭಾವನ 21ಚಿನ್ನದ ಪದಕ ಪಡೆದು ಸಂತಸ ಪಟ್ಟಿದ್ದಾರೆ. ವಿದ್ಯಾರ್ಥಿ‌ನಿ ಕೆಮಿಸ್ಟ್ರಿ ವಿಭಾಗದಲ್ಲಿ 21 ಚಿನ್ನದ ಪದಕ ಪಡೆದ ಪ್ರತಿಭಾನ್ವಿತೆ. ಪುನೀತ್ ರಾಜ್‍ಕುಮಾರ್ ಕುಟುಂಬದ ಆಶೀರ್ವಾದ ಪಡೆದ ಚಿನ್ನದ ಹುಡುಗಿ ಭಾವನ, ನಟ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪತ್ನಿ ಮಂಗಳ ರಾಜ್‌ಕುಮಾರ್ ಜೊತೆ ಸಂಭ್ರಮ ಹಂಚಿಕೊಂಡರು. ಚಿನ್ನದ ಹುಡುಗಿಗೆ  ರಾಜ್ ಕುಟುಂಬ ಅಭಿನಂದನೆ ಸಲ್ಲಿಸಿದೆ.

ಪ್ರೊ.ಜಿ.ಹೇಮಂತ್ ಕುಮಾರ್ ಅವರು ಪುನೀತ್ ಬಾಲ್ಯ, ನಟಿಸಿದ ಸಿನಿಮಾಗಳು, ಅವರ ಕುಟುಂಬದ ಕುರಿತು ವಿವರ ನೀಡಿದರು. ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ರಾಷ್ಟ್ರೀಯ ಮೌಲ್ಯಾಂಕ ಮತ್ತು ಮಾನ್ಯತಾ ಪರಿಷತ್ತಿನ ನಿರ್ದೇಶಕ ಡಾ.ಎಸ್.ಸಿ.ಶರ್ಮ, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಕುಲಸಚಿವ ಪ್ರೊ.ಆರ್.ಶಿವಪ್ಪ, ಎ.ಪಿ.ಜ್ಞಾನಪ್ರಕಾಶ್, ನಟ ರಾಘವೇಂದ್ರ ರಾಜ್ ಕುಮಾರ್ ಹಾಗೂ ಪತ್ನಿ, ನಟ ವಿನಯ್ ರಾಜ್ ಕುಮಾರ್, ರಾಜ್ ಕುಮಾರ್ ಮಗಳು ಲಕ್ಷ್ಮಿ ಗೋವಿಂದು ಹಾಗೂ ಮೊಮ್ಮಕ್ಕಳು ಸೇರಿದಂತೆ ಇತರರು ಹಾಜರಿದ್ದರು.

Donate Janashakthi Media

Leave a Reply

Your email address will not be published. Required fields are marked *