ಜನಪರ ಹಕ್ಕೊತ್ತಾಯಕ್ಕಾಗಿ ನಡೆಯಲಿರುವ ಬೃಹತ್‌ ಹೋರಾಟಕ್ಕ ಏಳು ಪಕ್ಷಗಳ ಬೆಂಬಲ

ಬೆಂಗಳೂರು: ಭೂಸುಧಾರಣಾ ತಿದ್ದುಪಡಿ ಕಾಯ್ದೆ-2020, ಎಪಿಎಂಸಿ ತಿದ್ದುಪಡಿ ಕಾಯ್ದೆ-2020 ಹಾಗೂ ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ-2020, ಕಾರ್ಮಿಕ ಸಂಹಿತೆಗಳು ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ(ಎನ್ಇಪಿ)-2020 ವಾಪಾಸ್ಸು  ಪಡೆಯುವಂತೆ ಒತ್ತಾಯಿಸಿ ಮತ್ತು ರೈತರು, ಕೂಲಿಕಾರರು, ಕಾರ್ಮಿಕರು, ದಲಿತರು ಹಾಗೂ ಮಹಿಳೆಯರ ಹಿತ ರಕ್ಷಿಸುವಂತಹ ಹಕ್ಕೊತ್ತಾಯಗಳನ್ನು ಜಾರಿಗೊಳಿಸಬೇಕೆಂದು ಮಾರ್ಚ್‌ 21(ಸೋಮವಾರ)ರ ಬೃಹತ್‌ ವಿಧಾನಸೌಧ ಚಲೋ ಪ್ರತಿಭಟನಾ ಕಾರ್ಯಕ್ರಮಕ್ಕೆ ಏಳು ಪಕ್ಷಗಳು ಬೆಂಬಲ ಸೂಚಿಸಿವೆ.

ಜಂಟಿ ಹೇಳಿಕೆಯಯನ್ನು ಬಿಡುಗಡೆಗೊಳಿಸಿರುವ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಭಾರತ ಕಮ್ಯುನಿಸ್ಟ್ ಪಕ್ಷ-ಸಿಪಿಐ, ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್‌)-ಎಸ್‌ಯುಸಿಐ(ಸಿ), ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ, ಲೆನಿನ್‌ವಾದಿ -ಲಿಬರೇಷನ್)-ಸಿಪಿಐ(ಎಂಎಲ್‌), ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್-ಎಐಎಫ್‌ಬಿ, ಸ್ವರಾಜ್ ಇಂಡಿಯಾ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ- ಆರ್‌ಪಿಐ ಪಕ್ಷಗಳ ರಾಜ್ಯ ಮುಖಂಡರು ಸದರಿ ಕಾಯ್ದೆಗಳು ವಾಪಾಸು ಪಡೆಯದೇ ಜನವಿರೋಧಿ ನೀತಿಗಳನ್ನು ರಾಜ್ಯದ ಬಿಜೆಪಿ ಸರ್ಕಾರ ಮುಂದುವರೆಸಿಕೊಂಡು ಹೋಗುತ್ತಿದೆ ತಿಳಿಸಿದ್ದಾರೆ.

ದೇಶದಾದ್ಯಂತ ಮತ್ತು ವಿಶೇಷವಾಗಿ ದೆಹಲಿ ಸುತ್ತಮುತ್ತ ನಡೆದ ಮಿಲಿಯಾಂತರ ರೈತ-ಕಾರ್ಮಿಕರ ಸಮರಶೀಲ ಐತಿಹಾಸಿಕ ಹೋರಾಟದ ಒತ್ತಾಯಕ್ಕೆ ಮಣಿದು ಒಕ್ಕೂಟ ಸರಕಾರದ ಪ್ರಧಾನಮಂತ್ರಿ ಜಗತ್ತಿನ ಮುಂದೆ ಮಂಡಿಯೂರಿ ಕೈ ಮುಗಿದು ಲೂಟಿಕೋರ ಕಾರ್ಪೊರೇಟ್ ಕಂಪನಿಗಳ ಪರವಾದ ಕೃಷಿ ಕಾಯ್ದೆಗಳನ್ನು ವಾಪಾಸು ಪಡೆದರು. ಆದರೇ, ಕರ್ನಾಟಕ ಸರಕಾರ ಮಾತ್ರ ಜಾರಿಗೊಳಿಸಲು ಹೊರಟಿರುವ ರೈತ-ಕಾರ್ಮಿಕ-ಜನವಿರೋಧಿ ಕಾಯ್ದೆಗಳನ್ನು ವಾಪಸ್ಸು ಪಡೆಯದೆ ಹಠಮಾರಿ ಧೋರಣೆಯನ್ನು ಅನುಸರಿಸುತ್ತಿದೆ.

ಕೃಷಿಗೆ ಸಂಬಂಧಿಸಿದ ಕಾಯ್ದೆಗಳೊಂದಿಗೆ, ಕಾರ್ಮಿಕರು ಕಳೆದ ಒಂದು ಶತಮಾನದಿಂದ ಹೋರಾಡಿ ಗಳಿಸಿದ ಅವುಗಳ ಹಕ್ಕುಗಳನ್ನು ಮೊಟಕು ಮಾಡಿ ಕಾರ್ಪೋರೇಟ್ ಗುಲಾಮಿಕೆಗೆ ತೆರೆಯುವ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರಲು ಕ್ರಮವಹಿಸುತ್ತಿದೆ. ಅದೇ ರೀತಿ, ಬಡವರು, ದಲಿತರು ಶೂದ್ರರು ಮತ್ತು ಮಹಿಳೆಯರಿಗೆ ಶಿಕ್ಷಣ ನಿರಾಕರಿಸುವ, ಮತಾಂಧತೆಗೆ ಕುಮ್ಮಕ್ಕು ನೀಡುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ(2020) ಅನ್ನು ವ್ಯಾಪಕವಾಗಿ ಜಾರಿಗೊಳಿಸುತ್ತಿದೆ.

ಮೇಲಿನ ಎಲ್ಲಾ ಜನವಿರೋಧಿ ನೀತಿಗಳನ್ನು ವಾಪಸ್ಸಾತಿಗೆ ಆಗ್ರಹಿಸಿ ಸಂಯುಕ್ತ ಹೋರಾಟ-ಕರ್ನಾಟಕ ವತಿಯಿಂದ ಬೃಹತ್‌ ವಿಧಾನಸೌಧ ಪ್ರತಿಭಟನಾ ಧರಣಿ ಕಾರ್ಯಕ್ರಮ ನಡೆಯುತ್ತಿದೆ.

ಬಡತನ ಹಾಗೂ ನಿರುದ್ಯೋಗ ಮತ್ತು ಸಾಮಾಜಿಕ ಸಂಕಷ್ಟಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಸರ್ಕಾರದ ವೆಚ್ಚವನ್ನು ಕಡಿತಗೊಳಿಸಿ, ಜನರ ಒಳಿತಿಗಾಗಿ ಹಣವನ್ನು ಬಳಸುವ ಬದಲು ಶಾಸಕರ ಹಾಗೂ ಸಚಿವರ ವೇತನಗಳನ್ನು ಅತಿಯಾಗಿ ಹೆಚ್ಚಿಸಲು ಮತ್ತು ಕೋಮುವಾದ ಹಾಗೂ ಜಾತಿವಾದಕ್ಕೆ ಕುಮ್ಮಕ್ಕು ನೀಡಲು ದುರ್ಬಳಕೆ ಮಾಡಲಾಗುತ್ತಿದೆ. ಜನತೆಯ ಮೇಲೆ ಭಾರೀ ಸಾಲದ ಹೊರೆಯನ್ನು ಬಜೆಟ್ ಮೂಲಕ ಹೇರಲಾಗಿದೆ.

ಸಾರ್ವಜನಿಕ ರಂಗದ ಉದ್ದಿಮೆಗಳನ್ನು ಖಾಸಗೀಕರಿಸುವ ಕೆಲಸವು ಒಂದೆಡೆ ಉದ್ಯೋಗಾವಕಾಶಗಳನ್ನು ಕಡಿತಗೊಳಿಸಿದರೆ, ಸಾಮಾಜಿಕ ನ್ಯಾಯದ ಭಾಗವಾಗಿ ದಲಿತರು, ಹಿಂದುಳಿದವರು ಮಹಿಳೆಯರು ಮತ್ತಿತರೆ ಸಮುದಾಯಗಳಿಗೆ ದೊರೆಯುತ್ತಿದ್ದ ಮೀಸಲಾತಿಯನ್ನು ನಾಶ ಮಾಡಲಾಗುತ್ತಿದೆ.

ಇದರೊಂದಿಗೆ, ಈಗ ವಿವಾದಕ್ಕೆ ಕಾರಣವಾಗಿರುವ ಹಿಜಾಬ್ ವಿಚಾರವನ್ನು ದೇಶದ ಇತರೆ ರಾಜ್ಯಗಳ ಅನುಭವದಂತೆ ಅದನ್ನು ಸೌಹಾರ್ದಯುತವಾಗಿ ಪರಿಹರಿಸಿ ತಾರತಮ್ಯವಿಲ್ಲದ ಸಾರ್ವತ್ರಿಕ ಶಿಕ್ಷಣದ ಹಕ್ಕನ್ನು ಖಾತರಿಪಡಿಸದೇ ಮುಸ್ಲಿಂ ವಿದ್ಯಾರ್ಥಿನಿಯರು ಶಿಕ್ಷಣ ಮುಂದುವರೆಸಲಾಗದಂತಹ ದುಸ್ಥಿತಿ ನಿರ್ಮಿಸಿದೆ. ಅದೇ ರೀತಿ, ಜನತೆಯನ್ನು ಧರ್ಮದ ಹಾಗೂ ಜಾತಿಯ ಆಧಾರದಲ್ಲಿ ಒಡೆದಾಳಲು ನೆರವು ನೀಡುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆಯ ವಿಧೇಯಕವನ್ನು ಜಾರಿಗೊಳಿಸಲು ಮುಂದಾಗುತ್ತಿದೆ.

ರಾಜ್ಯ ಸರಕಾರದ ಈ ಎಲ್ಲಾ ದುರ್ನಡೆಗಳನ್ನು ಎಡ ಮತ್ತು ಜಾತ್ಯಾತೀತ ಪ್ರಜಾಸತ್ತಾತ್ಮಕ ಏಳು ಪಕ್ಷಗಳು ಬಲವಾಗಿ ಖಂಡಿಸಿವೆ. ಈ ಕೂಡಲೇ ಈ ಎಲ್ಲಾ ಲೂಟಿಕೋರ ಕಾರ್ಪೊರೇಟ್ ಕಂಪನಿಗಳ ಪರವಾದ, ಜನವಿರೋಧಿ ಕಾಯ್ದೆಗಳನ್ನು ವಾಪಾಸ್ಸು ಪಡೆಯುವಂತೆ ಒತ್ತಾಯಿಸಿದೆ.

ರಾಜ್ಯ ಸರಕಾರದ ವಿರುದ್ದ ನಡೆಯಲಿರುವ ಬೃಹತ್‌ ವಿಧಾನಸೌಧ ಪ್ರತಿಭಟನಾ ಮೆರವಣಿಗೆಯಲ್ಲಿ 50ಕ್ಕೂ ಅಧಿಕ ಎಡ-ಜಾತ್ಯಾತೀತ ಪ್ರಜಾಸತ್ತಾತ್ಮಕ ಸಂಘ-ಸಂಸ್ಥೆಗಳು ಒಗ್ಗೂಡಿ ರಚಿಸಿಕೊಂಡ ಸಂಯುಕ್ತ ಹೋರಾಟ – ಕರ್ನಾಟಕದಲ್ಲಿ ಜಂಟಿಯಾಗಿ ಭಾಗವಹಿಸಲಿದ್ದಾರೆ. ಜನಪರವಾದ ಪ್ರತಿಭಟನಾ ಧರಣಿ ಕಾರ್ಯಕ್ರಮಕ್ಕೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಏಳು ಪಕ್ಷಗಳ ರಾಜ್ಯ ಮುಖಂಡರು ತಿಳಿಸಿದ್ದಾರೆ.

ಏಳು ಪಕ್ಷಗಳ ರಾಜ್ಯ ಮುಖಂಡರಾದ, ಯು. ಬಸವರಾಜ, ರಾಜ್ಯ ಕಾರ್ಯದರ್ಶಿ, ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಸಾತಿ ಸುಂದರೇಶ್, ರಾಜ್ಯ ಕಾರ್ಯದರ್ಶಿ, ಭಾರತ ಕಮ್ಯುನಿಸ್ಟ್ ಪಕ್ಷ-ಸಿಪಿಐ, ಕೆ‌. ಉಮಾ, ರಾಜ್ಯ ಕಾರ್ಯದರ್ಶಿ, ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್‌)-ಎಸ್‌ಯುಸಿಐ(ಸಿ), ಕ್ಲಿಫ್ಟನ್ ರೋಜಾರಿಯೋ, ರಾಜ್ಯ ಕಾರ್ಯದರ್ಶಿ, ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ, ಲೆನಿನ್‌ವಾದಿ -ಲಿಬರೇಷನ್)-ಸಿಪಿಐ(ಎಂಎಲ್‌), ಜಿ.ಆರ್. ಶಿವಶಂಕರ್, ರಾಜ್ಯ ಕಾರ್ಯದರ್ಶಿ, ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್-ಎಐಎಫ್‌ಬಿ, ಚಾಮರಸ ಮಾಲೀ ಪಾಟೀಲ, ರಾಜ್ಯ ಅಧ್ಯಕ್ಷರು, ಸ್ವರಾಜ್ ಇಂಡಿಯಾ, ಮೋಹನ್ ರಾಜ್, ರಾಜ್ಯ ಅಧ್ಯಕ್ಷರು, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ-ಆರ್‌ಪಿಐ ಪ್ರಕಟಣೆಯನ್ನು ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *