ವಸಂತರಾಜ ಎನ್.ಕೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನಾನು ನೋಡಿದ 12 ಫಿಲಂಗಳಲ್ಲಿ 6 ರಾಜಕೀಯ ಫಿಲಂಗಳು ಎನ್ನಬಹುದು. ನಾನು ನೋಡಿದ 6 ರಾಜಕೀಯ ಫಿಲಂಗಳ – “ದೆರ್ ಸಿ ನೋ ಇವಿಲ್”, “ಅಹದ್’ ಸ್ ನೀ”, “ಬ್ರದರ್ಸ್ ಕೀಪರ್”, “ಪ್ಯಾರಲಲ್ ಮದರ್ಸ್”, “ಬ್ಯಾಡ್ ಲಕ್ ಬ್ಯಾಂಗಿಂಗ್”, “ಮೆಮೊರಿಯ” – ಕುರಿತು ಕೆಲವು ಮಾತುಗಳು ಅದನ್ನು ಸ್ಪಷ್ಟ ಪಡಿಸಬಹುದು. “ದೆರ್ ಸಿ ನೋ ಇವಿಲ್” ಕುರಿತು ಭಾಗ-1ರಲ್ಲಿ ವಿವರವಾಗಿ ನಿರೂಪಿಸಲಾಗಿದೆ. ಈ ಎರಡನೆಯ ಭಾಗದಲ್ಲಿ “ಅಹದ್’ ಸ್ ನೀ”, “ಬ್ರದರ್ಸ್ ಕೀಪರ್” ನತ್ತು “ಪ್ಯಾರಲಲ್ ಮದರ್ಸ್” ಕುರಿತು ಕೆಲವು ಅನಿಸಿಕೆಗಳು.
‘‘ಅಹದ್ ಸ್ ನೀʼʼ (ಅಹದ್ ಳ ಮಂಡಿ)
ಇಸ್ರೇಲಿ ನಿರ್ದೇಶಕ ನದವ್ ಲಪಿದ್ ಅವರ ‘ಅಹದ್ ಸ್ ನೀ’ (ಅಹದ್ ಳ ಮಂಡಿ) ಸಹ ಪ್ರಭುತ್ವ ದಮನದ ಕುರಿತ ಫಿಲಂ. ಪ್ಯಾಲೆಸ್ಟೈನಿಯರ ಪ್ರಾಥಮಿಕ ಮಾನವ ಹಕ್ಕುಗಳ ದಮನ ಮತ್ತು ಅದನ್ನು ಮುಚ್ಚಿಡಲು ಎಲ್ಲರ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನ ಮಾಡುವ ಇಸ್ರೇಲಿ ಪ್ರಭುತ್ವದ ಕ್ರೌರ್ಯವನ್ನು ಈ ಫಿಲಂ ಕಣ್ಣಿಗೆ ರಾಚುವಂತೆ ‘ಆಕ್ರಮಣಕಾರಿಯಾಗಿ’ ಹೇಳುತ್ತದೆ. ಸುಮಾರು ನಲವತ್ತರ ವಯಸ್ಸಿನ ಫಿಲಂ ನಿರ್ಧೇಶಕನೊಬ್ಬ ತನ್ನ ಫಿಲಂ ನ್ನು ಪ್ರದರ್ಶಿಸಿ ಸಂಸ್ಕೃತಿ ಇಲಾಖೆಗೆ ಸಲ್ಲಿಸಲು ಬಹುದೂರದಿಂದ ಬಂದಿದ್ದಾನೆ. ಫಿಲಂ ಪ್ರದರ್ಶನದ ಆಹ್ವಾನ ಬಂದಾಗ ಆತ ಹೊಸ ಫಿಲಂನ ತಯಾರಿಯಲ್ಲಿ ಇರುತ್ತಾನೆ. ಆ ಫಿಲಂ 2018ರಲ್ಲಿ ಅಹದ್ ತಮಿಮಿ ಎಂಬ ಹದಿಹರೆಯದ ಪ್ಯಾಲೆಸ್ಟೈನಿ ಹುಡುಗಿಯು ದೌರ್ಜನ್ಯಗಳಿಗೆ ಪ್ರತಿಭಟಿಸಿ ಇಸ್ರೇಲಿ ಸೈನಿಕನ ಕೆನ್ನೆಗೆ ಬಾರಿಸಿದ ವಾಸ್ತವ ಘಟನೆಯ ಕುರಿತಾಗಿರುತ್ತದೆ. ಆಗ ಈ ವಿಡಿಯೊ ಜಾಗತಿಕವಾಗಿ ವೈರಲ್ ಆಗಿತ್ತು. ಇದರಿಂದ ಕೆಂಡಾಮಂಡಲವಾದ ಇಸ್ರೇಲಿ ಸಂಸದನೊಬ್ಬ ‘ಅಹದ್ ಳ ಮಂಡಿಗಾದರೂ ಗುಂಡು ಹೊಡೆದು ಎಂದೂ ನಡೆಯದಂತೆ ಮಾಡಬೇಕಿತ್ತು’ ಎಂಬ ಹೇಳಿಕೆಯಿಂದಲೇ ಈ ಫಿಲಂ ನ ಶೀರ್ಷಿಕೆ ಬಂದಿದೆಯೆಂದು ಗಮನಿಸಬಹುದು. ಹಲವು ತಿಂಗಳುಗಳ ಕಾಲ ಜೈಲುವಾಸ ಅನುಭವಿಸುವ ಅಹದ್, ಇಸ್ರೇಲಿ ಮಿಲಿಟರಿಯ ಅತಿರೇಕಗಳಿಂದ ಆಕ್ರೋಶಭರಿತರಾದ ಸಾವಿರಾರು ಹದಿಹರೆಯದ ಪ್ಯಾಲೆಸ್ಟೈನಿ ಮಕ್ಕಳ ಪ್ರತಿರೋಧದ ಪ್ರತೀಕವಾಗಿರುತ್ತಾಳೆ.
ಫಿಲಂ ಪ್ರದರ್ಶನ ಆಗುತ್ತಿದ್ಧಂತೆ ಹೊರಬಂದು ಸಂಸ್ಕೃತಿ ಇಲಾಖೆಯ ಮಹಿಳಾ ಅಧಿಕಾರಿಯ ಜತೆ ನಿರ್ದೇಶಕ ನಡೆಸುವ ಮಾತುಕತೆಯೇ ಫಿಲಂ ನ ದೊಡ್ಡ ಭಾಗವಾಗಿದೆ. ಫಿಲಂ ನಿರ್ಮಾಣದ ಪ್ರಕ್ರಿಯೆಯ, ಇಸ್ರೇಲಿ ಪ್ರಭುತ್ವದಿಂದ ಫಿಲಂ ಗಳ ಸೆನ್ಸಾರ್ ಮತ್ತು ಕಲಾವಿದರ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನದ, ಕಡ್ಡಾಯ ಮಿಲಿಟರಿ ಸೇವೆಯ ಅಸಹ್ಯ ಕ್ರೂರ ಅನುಭವಗಳ, ಜನರ ಮನಸ್ಸಿನ ಮಿಲಿಟರೀಕರಣದ, ಇಸ್ರೇಲಿ ರಾಷ್ಟ್ರವಾದದ ಟೊಳ್ಳುಗಳ – ಕುರಿತು ಆಕ್ರೋಶಭರಿತವಾದ ಈ ಸಂವಾದದ ಮೂಲಕವೇ ಫಿಲಂ ಹೇಳಬೇಕಾದ್ದನ್ನು ಬಹುಪಾಲು ಹೇಳುತ್ತದೆ. ಫಿಲಂ ಕುರಿತು ಪ್ರದರ್ಶನದ ನಂತರ ಮಾತನಾಡುವಾಗ ಫಿಲಂ ನಿರ್ದೇಶಕ ಯಾವ ವಿಷಯದ ಕುರಿತು ಮಾತನಾಡಬಹುದು, ಯಾವ ವಿಷಯಗಳ ಕುರಿತು ಮಾತನಾಡುವಂತಿಲ್ಲ ಎಂಬ ಆತನ ಆಕ್ರೋಶಕ್ಕೆ ಕಾರಣವಾದ ಸಂಸ್ಕೃತಿ ಇಲಾಖೆಗೆ ಕೊಡಬೇಕಾದ ಫಾರಂ ಕುರಿತು ಅವನ ಪ್ರತಿಕ್ರಿಯೆಯೇ ಈ ಸಂವಾದದ ಚರಮಬಿಂದು.
ಇದನ್ನು ಓದಿ: ಬೆಂಗಳೂರು ಚಿತ್ರೋತ್ಸವದಲ್ಲಿ ನಾನು ನೋಡಿದ ರಾಜಕೀಯ ಫಿಲಂಗಳು – 1: ‘ದೆರ್ ಇಸ್ ನೋ ಇವಿಲ್’
ಫಿಲಂ ಕುರಿತು ಮಾತನಾಡುವಾಗ ಸಂಸ್ಕೃತಿ ಇಲಾಖೆಯ ನಿರ್ದೇಶನಗಳನ್ನು ಪಾಲಿಸಿದರೂ, ಆತ ಸಚಿವರಿಂದ ಅಧಿಕಾರಿಯ ವರೆಗಿನ ಸಂಸ್ಕೃತಿ ಇಲಾಖೆಯ ಅಭಿವ್ಯಕ್ತಿ ಸ್ವಾತಂತ್ರ್ಯದ ದಮನದ ಹೊಲಸು ವ್ಯವಸ್ಥೆಯನ್ನು ಬಯಲು ಮಾಡದಿರಲಾರ. ಈ ಕುರಿತು ಖಾಸಗಿ ಮಾತುಕತೆಯಲ್ಲಿ ಅಧಿಕಾರಿಯ ಬಾಯಿಂದ ಹೊರಡಿಸಿದ ಮಾತುಗಳ ರೆಕಾರ್ಡಿಂಗ್ ಬಳಸುವ ಆಯ್ಕೆಯನ್ನು ಮಾಡುತ್ತಾನೆ. ಆತನ ಅಭಿಪ್ರಾಯ, ಕಲಾಭಿವ್ಯಕ್ತಿ ಗಳ ಕುರಿತು ಸಹನಾಭೂತಿ ಮತ್ತು ಮೆಚ್ಚುಗೆಯಿರುವ ಆಕೆಗೆ ಅಪಾಯಕಾರಿಯಾಗಬಹುದಾದ ಆತನ ಈ ಆಯ್ಕೆ ‘ನೈತಿಕ’ವೆನಿಸದಿದ್ದರೂ ಅವನಿಗೆ ಸಂಸ್ಕೃತಿ ಇಲಾಖೆಯನ್ನು ಬಯಲು ಮಾಡುವುದು ಆದ್ಯತೆಯದ್ದಾಗಿರುತ್ತದೆ.
ಕಲಾಭಿವ್ಯಕ್ತಿಯ ಸ್ವಾತಂತ್ರ್ಯ ಮತ್ತು ತನ್ನ ತಾಯಿಯ ಭೌತಿಕ ಅವಸಾನಗಳ ವಿರುದ್ಧ ಆತನ ವಿಫಲ ಹೋರಾಟದ ಹತಾಶೆ ಇಡೀ ಫಿಲಂನ್ನು ಆವರಿಸಿಕೊಂಡಿದೆ. ಇಂದಿನ ಇಸ್ರೇಲಿನ (ಜಾಗತಿಕವಾಗಿಯೂ ಬಹುತೇಕ ಸಾಮಾನ್ಯೀಕರಿಸ ಬಹುದಾದ) ಪ್ರಭುತ್ವದ ಸಾಂಸ್ಕೃತಿಕ ಮತ್ತು ರಾಜಕೀಯ ದಮನ ಮತ್ತು ಅಪಪ್ರಚಾರಗಳಿಗೆ ಪ್ರತಿರೋಧ ಒಡ್ಡಬೇಕಾದ ನೈತಿಕ ಜವಾಬ್ದಾರಿಗೆ ಕಲಾವಿದರು ಸಿದ್ಧರಿದ್ದಾರೆಯೆ ಎಂಬ ಪ್ರಶ್ನೆಯನ್ನು ಈ ಫಿಲಂ ಪ್ರಬಲವಾಗಿ ಎತ್ತುತ್ತದೆ. ಹಿಂಸಾಚಾರ, ಅಧಿಕಾರ, ಫ್ಯಾಸಿಸಂ, ಸಿನೇಮಾ ಒಂದು ಕಡೆ; ಇನ್ನೊಂದು ಕಡೆ ಬಲಿಪಶುಗಳು, ದಮನಕಾರರು ಮತ್ತು ನೋಡುಗರ ನಡುವಿನ ನಿಕಟ ಸಂಬಂಧಗಳ ಕುರಿತು ಇಸ್ರೇಲಿನ ಸನ್ನಿವೇಶದಲ್ಲೂ ಜಾಗತಿಕವಾಗಿಯೂ ಸಂಕೀರ್ಣ ನಿರೂಪಣೆಯನ್ನು ‘ಅಹದ್ ಳ ಮಂಡಿ’ ನೀಡುತ್ತದೆ.
“ಬ್ರದರ್ಸ್ ಕೀಪರ್”
ಟರ್ಕಿಯ ಒಂದು ಹುಡುಗರ ಬೋರ್ಡಿಂಗ್ ಸ್ಕೂಲ್ ನ ಕ್ರೂರ ವ್ಯವಸ್ಥೆಯ ಅನಾವರಣದ ಕಥನವನ್ನು ಫೆರಿಟ್ ಕರಹನ್ ಅವರ “ಬ್ರದರ್ಸ್ ಕೀಪರ್” ಕಟ್ಟಿಕೊಡುತ್ತದೆ. ಟರ್ಕಿಯ ಹಿಮಾವೃತ್ತ ದುರ್ಗಮ ಪ್ರದೇಶದಲ್ಲಿ ಬಡ ಅಲ್ಪಸಂಖ್ಯಾತ ಕುರ್ದಿಶ್ ಹುಡುಗರ ಬೋರ್ಡಿಂಗ್ ಸ್ಕೂಲ್. ಅಲ್ಲಿ ಓದುತ್ತಿರುವ ಯೂಸುಫ್ ಮತ್ತು ಮೆಮೊ ಎಂಬ ರೂಂಮೇಟುಗಳೂ ಆತ್ಮೀಯ ಸ್ನೇಹಿತರೂ ಆದ ಇಬ್ಬರು ಹುಡುಗರ ಬವಣೆಗಳ ಸುತ್ತ ಕಥಾಹಂದರವನ್ನು ಹೆಣೆಯಲಾಗಿದೆ. ಮೆಮೊ ನಿಗೂಢವಾದ ಗಂಭೀರ ಅನಾರೋಗ್ಯಕ್ಕೆ ಗುರಿಯಾಗುತ್ತಾನೆ. ಅವನಿಗೆ ವೈದ್ಯಕೀಯ ಚಿಕಿತ್ಸೆ ಒದಗಿಸಲು ಯೂಸುಫ್ ಹೊರಟಾಗ ಸ್ಕೂಲಿನ ದಮನಕಾರಿ ಅಧಿಕಾರಶಾಹಿ ವ್ಯವಸ್ಥೆಯ ಹುಳುಕುಗಳು ನಿಧಾನವಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತವೆ. ಮೆಮೊ ನ ಅನಾರೋಗ್ಯದ ಗಂಭಿರತೆಯನ್ನು ನಿರ್ಲಕ್ಷಿಸಿ, ಎಲ್ಲದಕ್ಕೂ ‘ಶಿಸ್ತು’, ‘ತಪ್ಪು’, ‘ಶಿಕ್ಷೆ’ಗಳ ಸಮಾನ ಮಂತ್ರದಂಡವನ್ನು ಬಳಸುತ್ತಿರುವುದರಲ್ಲೇ ಮಗ್ನರಾಗಿರುವಾಗ, ಮೆಮೊ ನ ಪರಿಸ್ಥಿತಿ ಹದಗೆಡುತ್ತದೆ. ಅವನನ್ನು ಆಸ್ಪತ್ರೆಗೆ ಸೇರಿಸಲು ನಿರ್ಧರಿಸುವ ಹೊತ್ತಿಗೆ ಭಾರೀ ಹಿಮಪಾತದಿಂದ ಸ್ಕೂಲ್ ಕ್ಯಾಂಪಸ್ ಹೊರಜಗತ್ತಿನೊಂದಿಗೆ ಸಂಪರ್ಕ ಕಡಿದಿರುತ್ತದೆ. ಸಮಯ ಉರುಳಿದಂತೆ ಹತಾಶರಾಗಿ ಪ್ರಿನ್ಸಿಪಾಲರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಎಲ್ಲರೂ ಈ ಬಿಕ್ಕಟ್ಟಿಗೆ ಪರಸ್ಪರರನ್ನು ದೂರುವ, ಮೇಲಿಂದ ಕೆಳಗಿನವರಗಿರುವ ‘ಭ್ರಷ್ಟಾಚಾರ’, ಅದುಮಿಟ್ಟಿದ್ದ ದ್ವೇಷದ ಹುನ್ನಾರಗಳು, ಹುದುಗಿದ್ದ ಪಶ್ಚಾತ್ತಾಪಗಳೂ, ಬಚ್ಚಿಟ್ಟಿದ್ದ ಗುಟ್ಟುಗಳು ಹೊರಬರುತ್ತಾ ಹೋಗುತ್ತವೆ. ಮೆಮೊ ನ ನಿಗೂಢವಾದ ಗಂಭೀರ ಅನಾರೋಗ್ಯಕ್ಕೆ, ಅದು ಬಿಕ್ಕಟ್ಟಿನ ಸ್ವರೂಪ ಪಡೆಯುವುದಕ್ಕೆ ಹೆಚ್ಚು ಕಡಿಮೆ ಎಲ್ಲರ ಪಾತ್ರಗಳೂ ಬಯಲಾಗುವುದರೊಂದಿಗೆ ಇಡೀ ವ್ಯವಸ್ಥೆ ಬೆತ್ತಲಾಗಿರುತ್ತದೆ. ಇದು ಫಿಲಂ ನ ಕಥಾಹಂದರ.
ಕಥನ ಶೈಲಿ ಕುತೂಹಲ ಕೆರಳಿಸುತ್ತಾ ಹೋಗುವ ಹಾಲಿವುಡ್ ಸಸ್ಪೆನ್ಸ್ ಮಾದರಿಯಲ್ಲಿ ಇದ್ದರೂ, ಅದರಲ್ಲಿ ಕಥನದ ಬೆಳವಣಿಗೆಯಲ್ಲದೆ ಹಲವು ಪದರಗಳು ಇವೆ. ಪ್ರಿನ್ಸಿಪಾಲರಿಂದ ಹಿಡಿದು ಮೆಮೊ-ಯೂಸುಫರ ವರೆಗೆ ಇರುವ ಹಲವು ಶ್ರೇಣಿಗಳಲ್ಲಿ ಪ್ರತಿ ಮೇಲಿನ ಶ್ರೇಣಿಯ ವ್ಯಕ್ತಿ ಕೆಳಗಿನ ಶ್ರೇಣಿಯ ವ್ಯಕ್ತಿಯನ್ನು ದಮನಿಸುವ ಶೋಷಿಸುವ ಯಾವ ಅವಕಾಶವನ್ನು ಬಿಟ್ಟು ಕೊಡದ ಸ್ಕೂಲಿನ ಕ್ರೂರ ಅಮಾನವೀಯ ಶ್ರೇಣಿಕೃತ ವ್ಯವಸ್ಥೆಯ ಚಿತ್ರಣವಿದೆ. ಈ ಶ್ರೇಣಿಕೃತ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳೂ ಭಾಗಿಗಳು. ‘ಮಾನಿಟರ್’ ಆಗಿರುವ ಹಿರಿಯ ವಿದ್ಯಾರ್ಥಿಗಳು, ಇತರ ಹಿರಿಯ ವಿದ್ಯಾರ್ಥಿಗಳು, ಕಿರಿಯ ವಿದ್ಯಾರ್ಥಿಗಳು, ಹಿರಿಯ-ಕಿರಿಯ ವಿದ್ಯಾರ್ಥಿಗಳೊಳಗೆ ‘ಜೋರಿನ’ ಮತ್ತು ‘ಪಾಪದ’ ವರು – ಹೀಗೆ ಈ ವ್ಯವಸ್ಥಿತ ದಮನ-ಶೋಷಣೆಯ ಕ್ರೂರ ಚಕ್ರ ಸಾಗುತ್ತದೆ. ‘ಶಿಸ್ತು’, ‘ತಪ್ಪು’, ‘ಶಿಕ್ಷೆ’ಗಳ ಮಂತ್ರದಂಡವೇ ಈ ವ್ಯವಸ್ಥೆಯನ್ನು ಕಾಪಿಡುತ್ತದೆ. ಮೆಮೊ ಅನಾರೋಗ್ಯ ಬಿಕ್ಕಟ್ಟಿನಲ್ಲಿ ಢಾಳಾಗಿ ಕಾಣುತ್ತದೆಯೆಂದು ಬಿಟ್ಟರೆ ಅದು ದೈನಂದಿನ ವಾಸ್ತವವೆಂಬುದನ್ನು ಫಿಲಂ ಪರಿಣಾಮಕಾರಿಯಾಗಿ ಹಿಡಿದಿಡುತ್ತದೆ.
ಹಿಮಪಾತವಾಗುತ್ತಿರುವ ವಾತಾವರಣದಲ್ಲಿ ವಾರಕ್ಕೊಮ್ಮೆ ಮಾತ್ರ ಕೆಲವೇ ನಿಮಿಷಗಳ ಬಿಸಿನೀರಿನ ಸ್ನಾನ, ಸ್ನಾನದ ಮನೆಯಲ್ಲಿ ಸಣ್ಣ ‘ತಪ್ಪು’, ‘ಅಶಿಸ್ತು’ ಜರುಗಿದರೂ ಕೊರೆಯುವ ತಣ್ಣೀರಿನ ಶಿಕ್ಷೆ, ಲಂಚ ಕೊಟ್ಟರೆ ಬಾಯ್ಲರ್ ರೂಮಿನಲ್ಲಿ ಬಿಸಿನೀರಿನ ಲಭ್ಯತೆ, ಶಿಕ್ಷಕರಿಂದ ಹುಡುಗರ ದುರ್ಬಳಕೆಯ ಅಪಾಯ, ಕ್ರೋಸಿನ್ ಮತ್ತು ಕೆಲವು ‘ಯಾರಿಗೂ ಏನೆಂದು ಗೊತ್ತಿಲ್ಲದ’ ಮಾತ್ರೆಗಳು ಬಿಟ್ಟರೆ ಇನ್ನೇನೂ ಇಲ್ಲದ ‘ಕಾಯಿಲೆ ರೂಮ್’ – ಇವೆಲ್ಲ ಟರ್ಕಿಯ ವ್ಯವಸ್ಥೆಗೆ ಸಹ ಹಿಡಿದ ಕನ್ನಡಿಗಳು. ಅಲ್ಪಸಂಖ್ಯಾತ ಕುರ್ದಿಶ್ ಹುಡುಗರಿಗೆ ಟರ್ಕಿ ಭಾಷೆಯಲ್ಲಿ ಶಿಕ್ಷಣ, ಕುರ್ದಿಶ್ ವಿದ್ಯಾರ್ಥಿಗಳು ತಮ್ಮ ಪ್ರಾಂತ್ಯವನ್ನು ಕುರ್ದೀಶ್ ಪ್ರಾಂತ್ಯವೆಂದು ಕರೆದರೆ ಶಿಕ್ಷಕಿ ಗದರಿಸಿ ಅದನ್ನು ಅದರ ಅಧಿಕೃತ’ ಹೆಸರಿನಿಂದ ಕರೆಯಲು ತಾಕೀತು ಮಾಡುವುದು, ಮೆಮೊ ಗೆ ಆದ ಅವಸ್ಥೆಯಿಂದ ಮತ್ತು ಸ್ಕೂಲ್ ನ ಕ್ರೂರ ವ್ಯವಸ್ಥೆಯಿಂದ ಆತಂಕಗೊಂಡ ಯೂಸುಫ್ ಮರಳಿ ಮನೆಗೆ ಹೋಗಲು ತವಕಿಸಿ ತಾಯಿಗೆ ಫೋನ್ ಮಾಡಿದಾಗ ಆಕೆ ‘ನಿನ್ನ ಓದು ನಮ್ಮ ಕುಟುಂಬದ ಏಕಮಾತ್ರ ಆಸರೆ’ ಎಂದಾಗ ಆತನ ಹತಾಶೆ – ಹೀಗೆ ಟರ್ಕಿಶ್ ಸಮಾಜಕ್ಕೂ ಫಿಲಂ ಕನ್ನಡಿ ಹಿಡಿಯುತ್ತದೆ. ಸ್ಕೂಲಿನ ಕ್ರೂರ ಅಮಾನವೀಯ ಶ್ರೇಣಿಕೃತ ವ್ಯವಸ್ಥೆ, ಅದನ್ನು ಕಾಪಿಡುವ ‘ಶಿಸ್ತು’, ‘ತಪ್ಪು’, ‘ಶಿಕ್ಷೆ’ಗಳ ಮಂತ್ರದಂಡ ಇವೆಲ್ಲ, ಟರ್ಕಿಯಲ್ಲಿ (ಮಾತ್ರವಲ್ಲ ಜಗತ್ತಿನ ಹೆಚ್ಚಿನ ದೇಶ/ಸಮಾಜಗಳಲ್ಲಿ) ಇರುವ ಕ್ರೂರ ಶೋಷಣೆ-ದಮನ ಚಕ್ರವಿರುವ ಸಮಾಜ ವ್ಯವಸ್ಥೆಯ ಮೈಕ್ರೋ-ರೂಪವೇ ಎಂದು ಫಿಲಂ ಮೆಲುದನಿಯಲ್ಲಿ ಹೇಳುವಂತಿದೆ. ಮಾತ್ರವಲ್ಲ, ಸ್ಕೂಲ್ ನ ವ್ಯವಸ್ಥೆ ಸಮಾಜದ ಇಂತಹ ವ್ಯವಸ್ಥೆಯನ್ನು ಸಹಜವೆಂದು ಕಣ್ಣು-ಬಾಯಿ ಮುಚ್ಚಿ ಒಪ್ಪಿಕೊಳ್ಳಲು ಭವಿಷ್ಯದ ಪ್ರಜೆಗಳನ್ನು ತಯಾರು ಮಾಡುವ ಮೈಕ್ರೋ ರೂಪ. ಶೋಷಕ ವ್ಯವಸ್ಥೆಯ ಎರಡು ರೂಪಗಳು .ಒಂದು ಇನ್ನೊಂದನ್ನು ಕಾಪಿಡುತ್ತದೆಯೆಂದೂ, ಭಾರೀ ಹಿಮಪಾತದಿಂದ ಸ್ಕೂಲ್ ಕ್ಯಾಂಪಸ್ ಹೊರಜಗತ್ತಿನೊಂದಿಗೆ ಸಂಪರ್ಕ ಕಡಿಯುವುದು ಈ ಕ್ರೂರ ವ್ಯವಸ್ಥೆಯಿಂದ ಮುಕ್ತಿ ಸಾಧ್ಯವೇ ಎಂದೂ “ಬ್ರದರ್ಸ್ ಕೀಪರ್” ಧ್ವನಿಸುತ್ತದೆ.
“ಪ್ಯಾರಲಲ್ ಮದರ್ಸ್’’
“ಪ್ಯಾರಲಲ್ ಮದರ್ಸ್’ ಪ್ರಸಿದ್ಧ ಸ್ಪಾನಿಷ್ ನಿರ್ದೇಶಕ ಪೆದ್ರೊ ಅಲ್ಮದೊವರ್ ಅವರ ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರ. ಇಬ್ಬರು ತುಂಬು ಗರ್ಭಿಣಿಯರು ಆಸ್ಪತ್ರೆಯಲ್ಲಿ ಒಂದೇ ಕೋಣೆಯಲ್ಲಿ ಹೆರಿಗೆಯ ಕ್ಷಣವನ್ನು ಎದುರು ನೋಡುತ್ತಿರುತ್ತಾರೆ. ಇಬ್ಬರೂ ಅವಿವಾಹಿತರಿದ್ದು ಆಕಸ್ಮಿಕವಾಗಿ ಗರ್ಭಿಣಿಯಾದವರು. ಒಬ್ಬಳು (ಜಾನಿಸ್) ಮಧ್ಯವಯಸ್ಸಿನವಳು. ಅವಳಿಗೆ ವಿಷಾದವಿಲ್ಲ. ಖುಷಿಯಿಂದ ಮಗುವಿನ ಬರವಿಗೆ ಕಾಯುತ್ತಾಳೆ. ಇನ್ನೊಬ್ಬಳು (ಅನಾ) ಹದಿಹರೆಯದವಳು.ಆಘಾತಕ್ಕೊಳಗಾಗಿದ್ಧಾಳೆ, ಭಯಭೀತಳಾಗಿದ್ದಾಳೆ, ಪಶ್ಚಾತ್ತಾಪ ಪಡುತ್ತಿದ್ದಾಳೆ. ಜಾನಿಸ್ ಅನಾ ಳನ್ನು ಸಮಾಧಾನಿಸಲು ಹುರಿದುಂಬಿಸಲು ಪ್ರಯತ್ನಿಸುತ್ತಾಳೆ. ಇಬ್ಬರ ನಡುವೆ ನಿಕಟ ಸಂಬಂಧ ಏರ್ಪಡುತ್ತದೆ. ಫಿಲಂ ನ ಶೀರ್ಷಿಕೆಗೆ ವ್ಯತಿರಿಕ್ತವಾಗಿ ಅವರ ಜೀವನರೇಖೆಗಳು ಸಮಾನಾಂತರವಾಗಿ ಹೋಗದೆ ಮುಂದೆನೂ ಆಗಾಗ ಸಂಧಿಸುತ್ತಿರುತ್ತವೆ. ಅವರ ಸಂಬಂಧ ಬೆಳೆಯುತ್ತಿರುತ್ತದೆ, ಸಂಕೀರ್ಣವಾಗುತ್ತಾ ಹೋಗುತ್ತದೆ. ಮಕ್ಕಳ ಅದಲು-ಬದಲು ಇತ್ಯಾದಿ ಬಾಲಿವುಡ್ ನ ಸರಣಿ ಆಕಸ್ಮಿಕಗಳ ಮೆಲೊಡ್ರಾಮದಂತೆ ಕಾಣುವ ಕಥಾ ಹಂದರದಲ್ಲಿ, ಹಲವು ಮಹಿಳೆಯರ, ಕೆಲವು ಪುರುಷರ ಹಲವು ಸಂಧಿಸುವ ಕಥನಗಳು ಇವೆ.
ಸ್ಪೈನಿನಲ್ಲಿ ಹಲವು ದಶಕಗಳ ಕಾಲ ಫ್ಯಾಸಿಸ್ಟರಿಂದ ವಿರೋಧಿಗಳ ಬೇಟೆ-ನರಮೇಧ, ನರಮೇಧಕ್ಕೊಳಗಾದ ತಮ್ಮ ತಾತ-ಮುತ್ತಾತರ ಶವ ಹುಡುಕಿಕೊಡಿ ಅಂತ ಜಾನಿಸ್ ನಂತೆ ನ್ಯಾಯ ಕೇಳುವವರರು, ಸಾಮೂಹಿಕ ಉತ್ಖನನ ಮಾಡಿ ಇಂತಹ ಶವ ಹುಡುಕುವ ಕೆಲಸಕ್ಕೆ ನೇಮಿಸಲಾದ ಜಾನಿಸ್ ಗೆಳೆಯ, ಗತವನ್ನು ಯಾಕೆ ಕೆದಕುವುದು ಎನ್ನುವ ಅನ್ನಾ, ಅನ್ನಾ ತಾಯಿ – ಹೀಗೆ ಹಲವು ಪದರಗಳನ್ನು ಆಯಾಮಗಳನ್ನು ಒಟ್ಟಿಗೆ ಹೆಣೆಯಲಾಗಿದೆ. ಗಂಡ-ಮಗಳು ಇಬ್ಬರಿಂದಲೂ ದೂರವಾಗಬೇಕಾಗಿ, ಕೊನೆಗೂ ಸಫಲ ನಟಿಯಾಗುವ ಅನ್ನಾಳ ತಾಯಿ, ಜಾನಿಸ್ ನ ಮ್ಯಾನೇಜರ್, ಅನ್ನಾಳ ಹಲವು ಸೋದರಿ ಸಂಬಂಧಿಗಳು – ಹೀಗೆ ಕಥನದುದ್ದಕ್ಕೂ ಕಂಡು ಬರುವ ಒಂಟಿ ತಾಯಂದಿರಿಗೂ ಫ್ಯಾಸಿಸ್ಟ್ ನರಮೇಧಕ್ಕೂ ಇರುವ ಸಂಬಂಧವನ್ನೂ ಕಥಾಹಂದರ ಸೂಚಿಸುತ್ತದೆ.
ಒಂದು ಕಡೆ ಫಿಲಂ ಮಹಿಳೆಯರ ಪ್ರೇಮ, ಕಾಮ, ಒಂಟಿ ತಾಯಂದಿರ ಧೈರ್ಯ-ಬವಣೆಗಳ ಹಾಗೂ ತಾಯಿ-ಮಕ್ಕಳ ಸಂಬಂಧ, ಹೆತ್ತವರು ಮಾತ್ರ ಮಕ್ಕಳ ಪಾಲಕರಾಗಬೇಕೆ ಎಂಬ ಪ್ರಶ್ನೆಗಳ ವೈಯಕ್ತಿಕ ನೆಲೆಗಳನ್ನು ಶೋಧಿಸುತ್ತದೆ. ಸ್ಪೈನಿನ ಐದು ದಶಕಗಳ ಫ್ಯಾಸಿಸ್ಟ್ ಕ್ರೌರ್ಯದ ಚರಿತ್ರೆ ವರ್ತಮಾನಕ್ಕೂ ಚಾಚಿಕೊಂಡಿರುವ ರಾಜಕೀಯ ಆಯಾಮವನ್ನು, ವೈಯಕ್ತಿಕ ಆಯಾಮವನ್ನು, ಸ್ಪೈನಿನ ಗತ, ವರ್ತಮಾನ, ಭವಿಷ್ಯಗಳನ್ನು ಒಂದೇ ಕಥನದಲ್ಲಿ ಹಿಂದೆ ಮುಂದೆ ಹೋಗುತ್ತಾ ಆರಾಮಾಗಿ ಫಿಲಂ ಹೆಣೆಯುತ್ತದೆ. ಗತಕಾಲದ ಅನ್ಯಾಯಗಳಿಗೆ ನ್ಯಾಯಕೊಡಿಸದೆ, ವರ್ತಮಾನವಾಗಲಿ, ಭವಿಷ್ಯವಾಗಲಿ ಶಾಂತಿಯುತವಾಗಲಿ ನ್ಯಾಯಯುತವಾಗಲಿ ಇರುವುದು ಸಾಧ್ಯವಿಲ್ಲವೆಂದು ಧ್ವನಿಸುತ್ತದೆ. ಇವೆಲ್ಲವನ್ನು ಮಕ್ಕಳ ಅದಲು-ಬದಲು ಇತ್ಯಾದಿ ಸರಣಿ ಆಕಸ್ಮಿಕಗಳ ಮೇಲೆ ಆಧರಿಸಿದ ಹೆಚ್ಚು ಕಡಿಮೆ ಕಾಲ್ಪನಿಕ ಜಗತ್ತಿನ ಮೇಲೆ ಆಧರಿಸಿ ಹೆಣೆಯಲಾಗಿದೆಯೆಂಬುದು ವಿಚಿತ್ರವೆನಿಸಬಹುದು. ಮತ್ತೆ ಮತ್ತೆ ಸಂಧಿಸುವ ಜೀವನರೇಖೆಯ ಮಹಿಳೆಯರನ್ನು ‘ಸಮಾನಾಂತರ ತಾಯಂದಿರು’ ಎಂದು ಕರೆಯುವಂತೆ, ನಮ್ಮ ಸಂಕೀರ್ಣ ಜಗತ್ತನ್ನು ಅರ್ಥ ಮಾಡಿಕೊಳ್ಳಲು ‘ಸಮಾನಾಂತರ’ ಜಗತ್ತುಗಳನ್ನು ಕಟ್ಟಿಕೊಳ್ಳಬೆಕೇನೋ ಎಂದು ಪೆದ್ರೊ ಅಲ್ಮದೊವರ್ ಸೂಚಿಸುವಂತಿದೆ.