ಮಾರ್ಚ್‌ 22ಕ್ಕೆ ಸುರತ್ಕಲ್ ಟೋಲ್‌ಗೇಟ್ ತೆರವಿಗೆ ಆಗ್ರಹಿಸಿ ಪಾದಯಾತ್ರೆ: ಮುನೀರ್‌ ಕಾಟಿಪಳ್ಳ

ಮುಲ್ಕಿ:  ಹೆಜಮಾಡಿ ಟೋಲ್ ಪ್ಲಾಜಾ ಆರಂಭಗೊಂಡ ತಕ್ಷಣ ತೆರವುಗೊಳಿಸುವ ಭರವಸೆ ನೀಡಿ  ತಾತ್ಕಾಲಿಕ ನೆಲೆಯಲ್ಲಿ ಆರಂಭಿಸಿರುವ ಸುರತ್ಕಲ್(ಎನ್ಐಟಿಕೆ) ಟೋಲ್‌ಗೇಟ್ ಹಲವು ಭರವಸೆಗಳ ಹೊರತಾಗಿಯೂ ಕಳೆದ ಆರು ವರ್ಷಗಳಿಂದಲೂ ಟೋಲ್ ಸಂಗ್ರಹ ಮಾಡಲಾಗುತ್ತಿದೆ.

ಇಂದು(ಮಾ.15) ನಡೆಸಲುದ್ದೇಶಿಸಿದ್ದ ʻಟೋಲ್‌ಗೇಟ್ ಚಲೋ ಪಾದಯಾತ್ರೆʼ ಮಾರ್ಚ್‌ 22 ರಂದು ನಡೆಯಲಿದೆ ಎಂದು ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಂಬತ್ತು ಕಿಲೋ ಮೀಟರ್ ಅಂತರದಲ್ಲಿ ಎರಡೆರಡು ಟೋಲ್‌ ಕೇಂದ್ರಗಳಲ್ಲಿ ಸುಂಕ ಪಾವತಿಸುವುದು ಪ್ರಾಯಾಣಿಕರಿಗೆ ದೊಡ್ಡ ಹೊರೆಯಾಗಿದ್ದು, ಹೆಜಮಾಡಿ ಟೋಲ್ ಕೇಂದ್ರದಿಂದ ಸುರತ್ಕಲ್ ಟೋಲ್ ಗೇಟ್ ವರಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಸಮಾನ ಮನಸ್ಕ ಸಂಘಟನೆಗಳು “ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ” ಯ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಂಡಿವೆ.

ಈ ಎಲ್ಲಾ ಹಿನ್ನಲೆಯಲ್ಲಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳು ಒಂದಾಗಿ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಸುರತ್ಕಲ್ ಟೋಲ್ ಕೇಂದ್ರ ತೆರವಿಗಾಗಿ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಿವೆ. ಮಾರ್ಚ್ 22ರಂದು ಹೆಜಮಾಡಿ ಟೋಲ್ ಕೇಂದ್ರದ ಸಮೀಪ ಪಾದಯಾತ್ರೆ ಚಾಲನೆಗೊಳ್ಳಲಿದ್ದು, ಎನ್ಐಟಿಕೆ ಮುಂಭಾಗದಲ್ಲಿರುವ ಸುರತ್ಕಲ್ ಟೋಲ್ ಕೇಂದ್ರದ ಮುಂಭಾಗ ಸಮಾರೋಪಗೊಳ್ಳಲಿದೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಅರವತ್ತಕ್ಕೂ ಹೆಚ್ಚು ಸಾಮಜಿಕ ಸಂಘ ಸಂಸ್ಥೆಗಳು, ಸಾರಿಗೆ ರಂಗದ ಯೂನಿಯನ್‌ಗಳು ಮತ್ತು ಅಪಾರ ಪ್ರಮಾಣದ ಸಾರ್ವಜನಿಕರು ಸಹ ಈ ಪಾದಯಾತ್ರೆಗೆ ಕೈ ಜೋಡಿಸಿದ್ದಾರೆ.

ಹಿಜಾಬ್ ತೀರ್ಪಿನ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಾದ್ಯಂದ ಸೆಕ್ಷನ್ 144 ಅಡಿ ಜಿಲ್ಲಾಡಳಿತ ನಿಷೇಧಾಜ್ಞೆ‌ ಹೇರಿರುವ ಹಿನ್ನೆಲೆಯಲ್ಲಿ ಈ ಹಿನ್ನೆಲೆಯಲ್ಲಿ ಇಂದು ಹೆಜಮಾಡಿ ಟೋಲ್‌ಗೇಟ್‌ನ ಪಾದಯಾತ್ರೆ ಆರಂಭದ ಸ್ಥಳದಲ್ಲಿ ಸಮಿತಿಯ ಮುಖಂಡರು ಹಾಗೂ ವಿವಿಧ ಸಂಘಟನೆಗಳ‌ ಮುಖಂಡರು ಸಭೆ ನಡೆಸಿ ಇಂದು ನಡೆಯಬೇಕಿದ್ದ ಪಾದಯಾತ್ರೆಯನ್ನು ಮುಂದೂಡಿದೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *