ಬೆಂಗಳೂರು : ರಾಜಧಾನಿಯಲ್ಲಿ ದುರಾವಸ್ಥೆಯಲ್ಲಿದ ರಸ್ತೆ ಗುಂಡಿಗೆ ಬೈಕ್ ಸವಾರನೊಬ್ಬ ಸಾವನ್ನಪ್ಪಿರುವ ಘಟನೆ ಯಲಹಂಕ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎಂ.ಎಸ್. ಪಾಳ್ಯದ ಮುನೇಶ್ವರ ಲೇಔಟ್ನಲ್ಲಿ ಭಾನುವಾರ ರಾತ್ರಿ ರಸ್ತೆ ಗುಂಡಿಗೆ ಬಿದ್ದ ಪರಿಣಾಮ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾನೆ.
ಹಾವೇರಿ ಮೂಲದ ಅಶ್ವಿನ್ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ, ಪೋಷಕರಿಗೆ ಒಬ್ಬನೇ ಮಗ ಎಂದು ತಿಳಿದು ಬಂದಿದೆ. ಯಲಹಂಕ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮೃತನ ಪೋಷಕರು ಬಿಬಿಎಂಪಿ, ಜಲಮಂಡಳಿ ವಿರುದ್ಧ ದೂರು ದಾಖಲಿಸಿದ್ದಾರೆ.
ಘಟನೆಗೆ ಬಿಬಿಎಂಪಿ, ಜಲಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಅಶ್ವಿನ್ ಬಿದ್ದ ಜಾಗದಲ್ಲಿ ಆತನ ಸ್ನೇಹಿತರು ಕುಳಿತು ಪ್ರತಿಭಟಿಸಿದರು.
ಬೈಕ್ ಸವಾರ ಅಶ್ವಿನ್ ಹೆಲ್ಮೆಟ್ ಇಲ್ಲದೇ ಸವಾರಿ ಮಾಡಿರೋದು ಬೆಳಕಿಗೆ ಬಂದಿದೆ. ಎಫ್ಐಆರ್ನಲ್ಲಿ ಈ ಅಂಶ ಸೇರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮತ್ತೊಂದು ಎಫ್ಐಆರ್ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಉತ್ತರ ವಲಯ ಟ್ರಾಫಿಕ್ ಡಿಸಿಪಿ ಸವಿತಾ ತಿಳಿಸಿದ್ದಾರೆ.
ಬಿಬಿಎಂಪಿ ಆಯುಕ್ತ ಪ್ರತಿಕ್ರಿಯೆ
ಮೃತ ಯುವಕನ ಹೆಸರು ಅಶ್ವಿನ್ ಆಗಿದ್ದು, ಆತನಿಗೆ 27 ವರ್ಷ ವಯಸ್ಸಾಗಿತ್ತು. ಜಲಮಂಡಳಿ ಅಗೆದಿದ್ದ ರಸ್ತೆ ಗುಂಡಿಯಿಂದಾಗಿ ಅಪಘಾತ ಸಂಭವಿಸಿದೆ. ಘಟನೆಗೆ ಸಂಬಂಧ ಪಟ್ಟಂತೆ, ಜಲಮಂಡಳಿ, ಬೆಸ್ಕಾಂ ಸೇರಿದಂತೆ ಇದಕ್ಕೆ ಸಂಬಂಧಿಸಿದ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.
ಜಲಮಂಡಳಿ ಜೊತೆಗೆ ಬೆಸ್ಕಾಂ ಸೇರಿದಂತೆ ಇದಕ್ಕೆ ಸಂಬಂಧಿಸಿದ ಸಂಸ್ಥೆಗಳ ವಿರುದ್ಧವೂ ಐದು ಪ್ರಕರಣ ದಾಖಲು ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ದುರಂತದಲ್ಲಿ ಯುವಕ ಬಲಿಯಾಗಿದ್ದಾನೆ. ಇದು ಆಗಬಾರದಿತ್ತು. ಆದರೆ, ನಡೆದುಹೋಗಿದೆ. ಒಟ್ಟಿನಲ್ಲಿ ಜಲಮಂಡಳಿ ತಪ್ಪಿನಿಂದ ಇಂತಹ ಅನಾಹುತ ಆಗಿದೆ ಎಂದರು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬಿಬಿಎಂಪಿಗೆ ಮಾಹಿತಿ ನೀಡದೆ ರಸ್ತೆ ಅಗೆದಿದ್ದರಿಂದ ಇಂತಹ ಅನಾಹುತ ಆಗಿದೆ ಎಂದು ತಿಳಿಸಿದರು.
ಕಾನೂನಿನಲ್ಲಿ ಅವಶ್ಯಕತೆ ಇದ್ದರೆ ಪರಿಹಾರದ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.