ಕಾಂಗ್ರೆಸ್ ಮುಳುಗುತ್ತಿರುವ ಹಡಗು: ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಸಿ.ಎಂ. ಇಬ್ರಾಹಿಂ

ಬೆಂಗಳೂರು: ವಿಧಾನ ಪರಿಷತ್‌ ಸದಸ್ಯ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಘೋಷಷಿಸಿದ್ದಾರೆ. ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಜ್ಯ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯಗೆ ಕಳುಸುತ್ತಿದ್ದೇನೆ ಎಂದು ಹೇಳಿದ್ದಾರೆ.

ತಮ್ಮ ನಿವಾಸದಲ್ಲಿ ಇಂದು ಸುದ್ಧಿಗಾರರೊಂದಿಗೆ ಮಾತನಾಡಿದ ಸಿ.ಎಂ. ಇಬ್ರಾಹಿಂ ಎಂಎಲ್‌ಸಿ ಸ್ಥಾನಕ್ಕೂ ರಾಜೀನಾಮೆ ಕೊಡುತ್ತೇನೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ಪತ್ರ ಕಳಿಸುತ್ತೇನೆ. ಅವರು ಅದನ್ನು ಅಂಗೀಕಾರ ಮಾಡಬಹುದು ಎಂದರು.

ರಾಜ್ಯದ ದೃಷ್ಟಿಯಿಂದ ಹಾಗೂ ಸ್ವಾಭಿಮಾನದ ಕಾರಣಕ್ಕಾಗಿ ವಿಧಾನ ಪರಿಷತ್‌ ಸ್ಥಾನ ತ್ಯಜಿಸುವ ಹಾಗೂ ಕಾಂಗ್ರೆಸ್‌ ತೊರೆಯುವ ತೀರ್ಮಾನಕ್ಕೆ ಬಂದಿದ್ದೇನೆ. ಕಾಂಗ್ರೆಸ್‌ನಲ್ಲಿ ಸ್ವಾಭಿಮಾನ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌, ಸಿದ್ದರಾಮಯ್ಯ ಅವರಿಗೆ ಧನ್ಯವಾದ. ಕಾಂಗ್ರೆಸ್‌ನ ಕಾರ್ಯಕರ್ತರಿಗೂ ಧನ್ಯವಾದಗಳು ಎಂದು ಇಬ್ರಾಹಿಂ ಹೇಳಿದ್ದಾರೆ.

ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ, ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಎಚ್‌.ಡಿ. ರೇವಣ್ಣ ಜೊತೆ ಚರ್ಚೆ ಮಾಡಿ ಮುಂದಿನ ನಡೆಯನ್ನು ಪ್ರಕಟಿಸುತ್ತೇನೆ. ಮುಂದಿನ ಹೆಜ್ಜೆ ಏನೆಂಬುದನ್ನು ಇನ್ನೆರೆಡು ದಿನಗಳಲ್ಲಿ ತಿಳಿಸುತ್ತೇನೆ. ನಾನು ಸೈದ್ದಾಂತಿಕ ರಾಜಕಾರಣವನ್ನು ಮಾಡಿಕೊಂಡು ಬಂದವನು. ಜೆಡಿಎಸ್‌ನಲ್ಲಿ ನನ್ನ ಸಿದ್ಧಾಂತಕ್ಕೆ ಪೆಟ್ಟು ಬೀಳುವುದಿಲ್ಲ. ಜೆಡಿಎಸ್ ಜೊತೆಗಿನ ಮಾತುಕತೆಯ ಸಂದರ್ಭದಲ್ಲಿ ಯಾವುದೇ ಕರಾರು ಹಾಕುವುದಿಲ್ಲ ಎಂದು ಇಬ್ರಾಹಿಂ ಸ್ಪಷ್ಟಪಡಿಸಿದರು.

ಜೆಡಿಎಸ್‌ ಸೇರಬೇಕು ಎಂಬುದು ನನ್ನ ಇಚ್ಛೆ. ಜನರ ನಾಡಿ ಮಿಡಿತ ನನಗೆ ಗೊತ್ತಿದೆ. ಜೆಡಿಎಸ್ ನೂರಕ್ಕೆ ನೂರು ಅಧಿಕಾರಕ್ಕೆ ಬರುತ್ತೆ. ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದು ಮೊದಲೇ ಹೇಳಿದ್ದೆ. ಪಂಜಾಬ್‌ನಲ್ಲಿ ಆಗಿರುವುದು ಕರ್ನಾಟಕದಲ್ಲಿಯೂ ಆಗಲಿದೆ. ಇದರ ವಿರುದ್ಧ ಹೋರಾಟ ಮಣ್ಣಿನ ಮಕ್ಕಳಿಗೆ ಮಾತ್ರ ಸಾಧ್ಯ. ನಾನು ಹೆಜ್ಜೆ ಇಟ್ಟಲ್ಲಿ ದೇವರು ನನ್ನ ಕೈಬಿಟ್ಟಿಲ್ಲ ಎಂದು ಇಬ್ರಾಹಿಂ ಭವಿಷ್ಯ ನುಡಿದರು.

ರಾಜ್ಯದಲ್ಲಿ ಶೇ. 21ರಷ್ಟು ಮುಸ್ಲಿಮರು ಇದ್ದೇವೆ. ಆದರೆ 70 ವರ್ಷದಿಂದ ಯಾರಾದರೂ ಕೆಪಿಸಿಸಿ ಅಧ್ಯಕ್ಷ ಆಗಿದ್ದಾರಾ? ಪ್ರತಿಪಕ್ಷದ ನಾಯಕರಾಗಿದ್ದಾರಾ? ಎಂದು ಪ್ರಶ್ನಿಸಿದ ಸಿ.ಎಂ. ಇಬ್ರಾಹಿಂ, ಶೇ. 90ರಷ್ಟು ಮುಸ್ಲಿಮರ ಮತ ಪಡೆದುಕೊಂಡು ಗೌರವಯುತ ಸ್ಥಾನ ಬೇಡ, ಗೌರವಯುತವಾಗಿ ಮಾತನಾಡುವುದು ಬೇಡವೇ? ಎಂದು ಕಾಂಗ್ರೆಸ್‌ನ್ನು ಪ್ರಶ್ನಿಸಿದರು.

Donate Janashakthi Media

Leave a Reply

Your email address will not be published. Required fields are marked *