ವಾರಣಾಸಿಯಲ್ಲಿ ಮತಯಂತ್ರಗಳ ಕಳ್ಳತನ: ಎಸ್‌ಪಿ ನಾಯಕ ಅಖಿಲೇಶ್‌ ಯಾದವ್ ಗಂಭೀರ ಆರೋಪ

ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ದೇಶದ ಗಮನ ಸೆಳೆದಿದೆ. ಮತ ಎಣಿಕೆಗೆ ಕೇವಲ ಎರಡು ದಿನಗಳು ಬಾಕಿ ಇರುವಾಗಲೇ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್  ವಾರಾಣಸಿಯಲ್ಲಿ ವಿದ್ಯುನ್ಮಾನ ಮತ ಯಂತ್ರಗಳನ್ನು ಕಳ್ಳತನ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.‌

ವಾರಣಾಸಿಯ ಮತಗಟ್ಟೆಯಿಂದ ಮತಯಂತ್ರಗಳನ್ನು ಸಾಗಿಸುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿತ್ತು. ಸ್ಥಳೀಯ ಅಭ್ಯರ್ಥಿಗಳ ಗಮನಕ್ಕೆ ತಿಳಿಸಿದಂತೆ ಹಾಗೂ ಯಾವ ಭದ್ರತೆಗಳು ಇಲ್ಲದೆ, ಸಾಗಾಟ ಮಾಡುತ್ತಿದ್ದಾರೆ ಎಂದು ಅಖಿಲೇಶ್‌ ಯಾದವ್‌ ಆರೋಪಿಸಿದ್ದಾರೆ.

ಮತ ಎಣಿಕೆ ಸಂದರ್ಭದಲ್ಲಿ ಎಲ್ಲಾ ಕ್ಷೇತ್ರಗಳಿಗೆ ವೆಬ್‌ಕಾಸ್ಟಿಂಗ್‌ ಮಾಡಬೇಕು. ಅದಕ್ಕೆ ಸಂಬಂಧಿಸಿದ ಲಿಂಕ್‌ ಅನ್ನು ಚುನಾವಣಾ ಆಯೋಗ, ಮುಖ್ಯ ಚುನಾವಣಾ ಆಯುಕ್ತರು, ಮತಗಟ್ಟೆ ಅಧಿಕಾರಿಗಳು ಮತ್ತು ರಾಜಕೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಬೇಕು ಎಂದು ಸಮಾಜವಾದಿ ಪಕ್ಷವು ಒತ್ತಾಯಿಸಿದೆ.

ವಿದ್ಯುಮಾನ್ಮ ಮತಯಂತ್ರಗಳು ಸಿಕ್ಕಿಬಿದ್ದಿರುವ ಸುದ್ದಿ ರಾಜ್ಯದ ಪ್ರತಿಯೊಂದು ವಿಧಾನಸಭೆಗೂ ಎಚ್ಚರವಾಗಿರುವಂತೆ ಸಂದೇಶ ನೀಡುತ್ತಿದೆ. ಅಯೋಧ್ಯೆ ಮತ್ತು ವಾರಣಾಸಿ ಚುನಾವಣೆಗಳಲ್ಲಿ ಸಮಾಜವಾದಿ ಪಕ್ಷ ಗೆಲುವು ಸಾಧಿಸುತ್ತಿರುವುದರಿಂದ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ ಎಂದು ಹೇಳಿದ್ದಾರೆ.‌

ಬನಾರಸ್‌ನಲ್ಲಿ ಇವಿಎಂ ದುರ್ಬಳಕೆ ಆಗಿದೆ ಎಂಬ ಆರೋಪದ ಬಗ್ಗೆ ಉಲ್ಲೇಖಿಸಿರುವ ಅಖಿಲೇಶ್‌ ಯಾದವ್ ಯಾವ ಕಾರಣಕ್ಕಾಗಿ ಭದ್ರತೆ ಇಲ್ಲದೇ ಇವಿಎಂ ತೆಗೆದುಕೊಂಡು ಹೋಗುತ್ತಿದ್ದಾರೆ. ಇವಿಎಂ ತೆಗೆಯಬೇಕಾದರೆ ಅಭ್ಯರ್ಥಿಗೆ ತಿಳಿಸಬೇಕು. ಇದು ಪ್ರಜಾಪ್ರಭುತ್ವದ ಕೊನೆಯ ಹೋರಾಟ ಎಂದು ಹೇಳಿದ್ದಾರೆ.

ಈಗ ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯ ಎದುರಾಗಿದೆ. ಪ್ರಜಾಪ್ರಭುತ್ವವನ್ನು ಉಳಿಸಲು ಮತ ಎಣಿಕೆಯಲ್ಲಿ ಅಕ್ರಮ ಎಸಗುವ ಪ್ರಯತ್ನವನ್ನು ವಿಫಲಗೊಳಿಸಲು ಸಮಾಜವಾದಿ-ಮೈತ್ರಿಕೂಟದ ಎಲ್ಲಾ ಅಭ್ಯರ್ಥಿಗಳು ಮತ್ತು ಬೆಂಬಲಿಗರು ತಮ್ಮ ಕ್ಯಾಮರಾಗಳೊಂದಿಗೆ ಸಿದ್ಧರಾಗಿರಬೇಕು ಎಂದು ಹೇಳಿದರು. ಪ್ರಜಾಪ್ರಭುತ್ವ ಮತ್ತು ಭವಿಷ್ಯದ ರಕ್ಷಣೆಗಾಗಿ ಮತ ಎಣಿಕೆಯಲ್ಲಿ ಯುವಕರು ಸೈನಿಕರಾಗಬೇಕು ಎಂದು ಹೇಳಿದರು.

ಇವಿಎಂಗಳ ಮೇಲೆ ತೀವ್ರ ನಿಗಾ ಇರಿಸುವಂತೆ ಕಾರ್ಯಕರ್ತರನ್ನು ಕೇಳಿಕೊಂಡರು. ಸರ್ಕಾರ ಹೇಳಿದಂತೆ ಅಧಿಕಾರಿಗಳು ಮಾಡುತ್ತಾರೆ. ಇವಿಎಂಗಳನ್ನು ಭದ್ರತೆ ಇಲ್ಲದೆ ಇಡಲಾಗಿದೆ. ಬಿಜೆಪಿ ವಿರುದ್ಧ ಸಾರ್ವಜನಿಕರಲ್ಲಿ ಸಾಕಷ್ಟು ಅಸಮಾಧಾನವಿದೆ ಎಂದು ಹೇಳಿದರು.

ಜಿಲ್ಲಾ ಮ್ಯಾಜಿಸ್ಟ್ರೇಟ್‌ ಸ್ಪಷ್ಟನೆ

ಭದ್ರತೆ ಇಲ್ಲದೆ, ಸಾಗಣೆ ಮಾಡಲಾಗುತ್ತಿದ್ದ ಮತಯಂತ್ರಗಳ ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆ ವಾರಾಣಸಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಕೌಶಲ್‌ ರಾಜ್‌ ಶರ್ಮಾ, ಆ ಇವಿಎಂಗಳನ್ನು ಮತದಾನಕ್ಕಾಗಿ ಬಳಸಿಲ್ಲ. ಅವುಗಳನ್ನು ಕೇವಲ ತರಬೇತಿಗಾಗಿ ಬಳಸಲಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.

ಕೆಲವು ರಾಜಕೀಯ ಪಕ್ಷಗಳು ಸುಖಾಸುಮ್ಮನೆ ವದಂತಿಗಳನ್ನು ಹರಡುತ್ತಿವೆ ಎಂದು ಆರೋಪಿಸಿದ ಕೌಶಲ್ ರಾಜ್ ಶರ್ಮಾ, ಚುನಾವಣೆಯಲ್ಲಿ ಬಳಸಿದ ಮತಯಂತ್ರಗಳನ್ನು ಸಿಆರ್‌ಪಿಎಫ್ ಭದ್ರತೆ ಹಾಗೂ ಸಿಸಿಟಿವಿ ಕಣ್ಗಾವಲು ಇರುವ ಸೀಲ್‌ ಮಾಡಿರುವ ಸ್ಟ್ರಾಂಗ್‌ ರೂಂನಲ್ಲಿ ಇಡಲಾಗಿದೆ. ಸಿಸಿಟಿವಿ ದೃಶ್ಯಗಳನ್ನು ಎಲ್ಲ ರಾಜಕೀಯ ಪಕ್ಷಗಳ ನಾಯಕರು ವೀಕ್ಷಿಸುತ್ತಿರುತ್ತಾರೆ ಎಂದು ಹೇಳಿದ್ದಾರೆ.

ಜಿಲ್ಲಾ ಮ್ಯಾಜಿಸ್ಟ್ರೇಟ್‌ ಹೇಳಿಕೆಗೆ ತಿರುಗೇಟು ನೀಡಿದ ಅಖಿಲೇಶ್‌ ಯಾದವ್‌, ವಾರಣಾಸಿಯಲ್ಲಿ ನಾವು ಒಂದು ಟ್ರಕ್ ಅನ್ನು ಅಡ್ಡಗಟ್ಟಿ ಹಿಡಿದಿದ್ದೇವೆ. ಆದರೆ, ಎರಡು ಟ್ರಕ್‌ಗಳು ಪರಾರಿಯಾಗಿವೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಇಲ್ಲದಿದ್ದರೆ, ಇವಿಎಂ ಹೊಂದಿರುವ ಎರಡು ಟ್ರಕ್‌ಗಳು ಏಕೆ ಪರಾರಿಯಾದವು? ಅಭ್ಯರ್ಥಿಗಳ ಒಪ್ಪಿಗೆಯಿಲ್ಲದೇ ನೀವು ಯಾವುದೇ ಇವಿಎಂಗಳನ್ನು ಎಲ್ಲಿಗೂ ಸ್ಥಳಾಂತರಿಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉತ್ತರ ಪ್ರದೇಶದ 403 ಕ್ಷೇತ್ರಗಳಿಗೆ 7ನೇ ಹಾಗೂ ಕೊನೆಯ ಹಂತದ ಚುನಾವಣೆ ಸೋಮವಾರ ಮುಗಿದಿದೆ. ಮಾರ್ಚ್‌ 10ರಂದು ಎಲ್ಲಾ ಐದು ರಾಜ್ಯಗಳ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.

Donate Janashakthi Media

Leave a Reply

Your email address will not be published. Required fields are marked *