ಮಾನವೀಯ ಕಾರಿಡಾರ್​ಗಳನ್ನು ತೆರೆಯಲು-ಉಕ್ರೇನ್‌ನ 2 ನಗರಗಳಲ್ಲಿ ಕದನ ವಿರಾಮ ಘೋಷಿಸಿದ ರಷ್ಯಾ

ಕೀವ್: ಉಕ್ರೇನ್‍ನ 2 ನಗರಗಳಲ್ಲಿ ರಷ್ಯಾ ಕದನ ವಿರಾಮ ಘೋಷಿಸಿದೆ. ನಾಗರಿಕರಿಗೆ ಮಾನವೀಯ ಕಾರಿಡಾರ್​ಗಳನ್ನು ತೆರೆಯುವ ಉದ್ದೇಶದಿಂದ ರಷ್ಯಾವು ಕದನ ವಿರಾಮವನ್ನು ಘೋಷಿಸಿವೆ. ಈ ಕುರಿತು ರಷ್ಯಾದ ಮಾಧ್ಯಮ ಔಟ್ಲೆಟ್ ಸ್ಪುಟ್ನಿಕ್ ವರದಿಯನ್ನು ಎಎನ್​ಐ ಸುದ್ದಿಸಂಸ್ಥೆ ಉಲ್ಲೇಖಿಸಿದೆ. ಗ್ರೀನ್​ವಿಚ್ ಮೀನ್ ಟೈಮ್ ಸಮಯ 6ರಿಂದ (ಭಾರತೀಯ ಕಾಲಮಾನ ಬೆಳಗ್ಗೆ 11.30) ಕದನ ವಿರಾಮ ಘೋಷಿಸುವುದಾಗಿ ರಷ್ಯಾ ತಿಳಿಸಿದೆ.

ವರದಿಗಳ ಪ್ರಕಾರ ಉಕ್ರೇನ್‌ನ ಮರಿಯುಪೋಲ್, ವೊಲ್ನೋವಾಖಾ ನಿವಾಸಿಗಳಿಗೆ ಮಾನವೀಯ ಕಾರಿಡಾರ್‌ಗಳನ್ನು ತೆರೆಯಲಾಗುವುದು. ಉಕ್ರೇನ್ ಮೇಲೆ ದಾಳಿ ಮಾಡಿ, ಪ್ರಮುಖ ನಗರಗಳನ್ನು ವಶಪಡಿಸಿಕೊಂಡು ರಾಜಧಾನಿ ಕೀವ್ ನಗರಕ್ಕೆ ಮುತ್ತಿಗೆ ಹಾಕಿರುವ ರಷ್ಯಾ ಸೇನೆ ತಾತ್ಕಾಲಿಕ ಕದನ ವಿರಾಮ ಘೋಷಿಸಿದೆ.

ಈ ಮೂಲಕ ಮಾನವೀಯ ಪರಿಹಾರ ಕಾರ್ಯ ಕೈಗೊಳ್ಳಲು ಮತ್ತು ನಾಗರಿಕರು ನಗರದಿಂದ ಹೊರ ಹೋಗಲು ಸೇನೆ ಅವಕಾಶ ಮಾಡಿಕೊಟ್ಟಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 2.30ರಿಂದ ಈ ಎರಡೂ ನಗರಗಳಲ್ಲಿ ನಾಗರಿಕರನ್ನು ಸ್ಥಳಾಂತರ ಮಾಡಲು ಅವಕಾಶ ಕಲ್ಪಿಸಲಾಗಿದೆ.  ಆದರೆ, ಉಕ್ರೇನ್‌ನಲ್ಲಿ ಮಿಲಿಟರಿ ಕಾರ್ಯಾಚರಣೆ ವ್ಯಾಪಕವಾಗಿ ಮುಂದುವರಿಯಲಿದೆ ಎಂದೂ ರಷ್ಯಾದ ರಕ್ಷಣಾ ಇಲಾಖೆ ಸ್ಪಷ್ಟಪಡಿಸಿದೆ.

ರಷ್ಯಾ ಕೇವಲ ಮುಂದಿನ 6 ಗಂಟೆಗಳ ಕಾಲ ಕದನ ವಿರಾಮ ಘೋಷಣೆ ಮಾಡಿದೆ. ಕದನ ವಿರಾಮದ ನಂತರ ಮತ್ತಷ್ಟು ದಾಳಿ ನಡೆಯಲಿದೆ. ಭಾರತೀಯ ಕಾಲಮಾನಕ್ಕೆ ಅನ್ವಯವಾಗುವಂತೆ ಇಂದು ಸಂಜೆ 7:30ಕ್ಕೆ ಕದನ ವಿರಾಮ ಅಂತ್ಯವಾಗಲಿದೆ. ಇಂದು ರಾತ್ರಿ ಕ್ಷಿಪಣಿ ದಾಳಿ ಇನ್ನಷ್ಟು ತೀವ್ರವಾಗುವ ಸಾಧ್ಯತೆಯಿದೆ. ಖಾರ್ಕಿವ್‌, ಕೀವ್‌ ಸುಮಿ ಮೇಲೆ ಬಾಂಬ್‌ ದಾಳಿ ನಡೆಯುವ ಸಾಧ್ಯತೆಯಿದೆ.

ವ್ಯೂಹಾತ್ಮಕವಾಗಿ ಪ್ರಾಮುಖ್ಯತೆ ಪಡೆದಿರುವ ಮಾರಿಯುಪೋಲ್‌ ಮೇಲೆ ರಷ್ಯಾ ಕೆಲವು ದಿನಗಳಿಂದ ನಿರಂತರ ದಾಳಿ ಕೈಗೊಂಡಿತ್ತು. ರಷ್ಯಾದ ಪಡೆಗಳು ಮುತ್ತಿಗೆ ಹಾಕುತ್ತಿರುವಾಗ ಅದರ ವಿದ್ಯುತ್, ಆಹಾರ, ನೀರು ಮತ್ತು ಸಾರಿಗೆಯನ್ನು ಕಡಿತಗೊಳಿಸಿದ್ದವು. ಇದರಿಂದ ನಾಗರಿಕ ಪ್ರದೇಶಗಳ ಮೇಲೆ ರಷ್ಯಾ ಬಾಂಬ್‌ ದಾಳಿ ಮಾಡುತ್ತಿದೆ ಎಂದು ಟೀಕಿಸುತ್ತಿರುವ ಬೆನ್ನಲ್ಲೆ ರಷ್ಯಾ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಅಲ್ಪ ಅವಧಿಯವರೆಗೆ ಕದನ ವಿರಾಮ ಘೋಷಿಸಿದೆ.

ಕೀವ್ ಮತ್ತು ಖಾರ್ಕಿವ್ ಸೇರಿದಂತೆ ಉಕ್ರೇನ್​ನ ಹಲವು ಪ್ರಮುಖ ನಗರಗಳಲ್ಲಿ ಸಿಲುಕಿರುವ ಭಾರತ ಸೇರಿದಂತೆ ವಿವಿಧ ದೇಶಗಳ ವಿದ್ಯಾರ್ಥಿಗಳು ತಮ್ಮ ದೇಶಗಳಿಗೆ ಹಿಂದಿರುಗಲು ಇದರಿಂದ ತುಸು ಅವಕಾಶ ಸಿಕ್ಕಿದೆ. ಆದರೆ ಭಾರತದ ವಿಮಾನಗಳಿಗೆ ಉಕ್ರೇನ್ ವಾಯುಗಡಿ ಪ್ರವೇಶಿಸಲು ಅವಕಾಶ ಸಿಗುತ್ತದೆಯೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಉಕ್ರೇನ್​ನ ವಿವಿಧ ಪ್ರದೇಶಗಳಲ್ಲಿ ಇನ್ನೂ 2000 ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದಾರೆ ಎಂದು ಸರ್ಕಾರದ ಮೂಲಗಳು ಹೇಳಿವೆ. ಇದೀಗ ಭಾರತ ಸರ್ಕಾರವೂ ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಲು ನಿರ್ಧರಿಸಿದ್ದು, ಅಕ್ಕಪಕ್ಕದ ದೇಶಗಳಲ್ಲಿರುವ ರಾಯಭಾರ ಕಚೇರಿ ಸಿಬ್ಬಂದಿಯನ್ನು ಉಕ್ರೇನ್​ನಲ್ಲಿರುವ ಭಾರತೀಯರ ಸ್ಥಳಾಂತರ ನಿಯೋಜಿಸಲು ಮುಂದಾಗಿದೆ. ರಷ್ಯಾ ಗಡಿಯ ಮೂಲಕ ರಷ್ಯಾದ ದೇಶದ ಸಮೀಪದ ವಿಮಾನ ನಿಲ್ದಾಣಕ್ಕೆ ಭಾರತೀಯರನ್ನು ಅಲ್ಲಿಂದ ಸ್ವದೇಶಕ್ಕೆ ಕರೆತರುವ ಬಗ್ಗೆಯೂ ಪ್ರಯತ್ನಗಳು ತೀವ್ರಗೊಂಡಿವೆ.

ಭಾರತೀಯರಿಗೆ ರಷ್ಯಾ ದೇಶಕ್ಕೆ ಪ್ರವೇಶ ಕಲ್ಪಿಸಲು ರಷ್ಯಾ ಆಡಳಿತ ಸಮ್ಮತಿಸಿದ್ದು, ಸಂಘರ್ಷ ತೀವ್ರವಾಗಿರುವ ಪೂರ್ವ ಗಡಿಗೆ ತನ್ನ ಬಸ್​ಗಳನ್ನು ಕಳಿಸಿಕೊಟ್ಟಿದೆ. ರಷ್ಯಾದ ವಿಮಾನಗಳನ್ನೂ ಇದೀಗ ತೆರವು ಕಾರ್ಯಾಚರಣೆಗೆ ಬಳಸಿಕೊಳ್ಳಲು ಚಿಂತನೆ ನಡೆದಿದೆ. ಈ ಕಾರ್ಯಾಚರಣೆ ಯಶಸ್ವಿಯಾದರೆ ಇನ್ನೂ ಉಕ್ರೇನ್​ನಲ್ಲಿರುವ ಭಾರತದ ಮಕ್ಕಳು ಶೀಘ್ರ ಸ್ವದೇಶಕ್ಕೆ ಮರಳಲಿದ್ದಾರೆ. ರಷ್ಯಾ ಸಹಕರಿಸಲು ಸಿದ್ಧವಿರುವ ವಿಚಾರದ ಬಗ್ಗೆ ವಿಶ್ವಸಂಸ್ಥೆಯಲ್ಲಿರುವ ರಷ್ಯಾ ರಾಯಭಾರಿ ಮಾಹಿತಿ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *