ಕಲಬುರಗಿ: ಜಿಲ್ಲೆಯ ಆಳಂದದಲ್ಲಿ ಮಹಾಶಿವರಾತ್ರಿ ಅಂಗವಾಗಿ ಮಾರ್ಚ್ 1ರಂದು ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 167 ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಮಾರ್ಚ್ 5ರ ವರೆಗೂ ನಿಷೇಧಾಜ್ಞೆ ಮುಂದುವರಿಸಿ ಆದೇಶ ನೀಡಲಾಗಿದೆ.
ಹಿಂದೂಪರ ಕಾರ್ಯಕರ್ತರಿಂದ ಆಳಂದ ಚಲೋ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಮಾರ್ಚ್ 1ರಂದು ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ಶಿವಲಿಂಗಕ್ಕೆ ಪೂಜೆಗೆ ಆಗ್ರಹಿಸಿ, ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಶ್ರೀರಾಮ ಸೇನೆ ಹಾಗೂ ಬಿಜೆಪಿ ಮುಖಂಡರು ತೆರಳಿದ್ದರು. ಈ ವೇಳೆ ಗಂಭೀರ ಪ್ರಮಾಣದಲ್ಲಿ ಕಲ್ಲು ತೂರಾಟ ನಡೆದಿತ್ತು.
ಜಿಲ್ಲೆಗೆ ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರ, ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗೆ ಆಳಂದ ತಾಲೂಕು ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಶಿವಲಿಂಗಕ್ಕೆ ಪೂಜೆಯ ದಿನದಂದೆ ದರ್ಗಾದ ಸಂದಲ ಕೂಡಾ ಇದ್ದಿದ್ದರಿಂದ ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಲಾಗಿತ್ತು.
ಶಿವಲಿಂಗಕ್ಕೆ ಪೂಜೆ ವಿಚಾರದಲ್ಲಿ ಎರಡು ಕೋಮುಗಳ ನಡುವೆ ಘರ್ಷಣೆ ಉಂಟಾಗಿತ್ತು. ಹೀಗಾಗಿ, ದರ್ಗಾ ಸೇರಿದಂತೆ ಎಲ್ಲಡೆ ಪೊಲೀಸರ ನಿಯೋಜನೆ ಮಾಡಲಾಗಿದೆ. ದರ್ಗಾ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿನ ಅಂಗಡಿಗಳು ಬಂದ್ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲಡೆ ಬಿಗಿ ಪೊಲೀಸ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಕಲ್ಲು ತೂರಾಟ ಘಟನೆಯ ನಂತರದಲ್ಲಿ ಪೊಲೀಸ್ ಕಾರ್ಯಾಚರಣೆ ನಡೆದಿದ್ದು, ಈ ಸಂದರ್ಭದಲ್ಲಿ ಇಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ. ಮಾರ್ಚ್ 2 ಬೆಳಗ್ಗೆ 5 ಗಂಟೆಯಿಂದ ಪೊಲೀಸರು ಮನೆ ಮನೆಗಳಿಗೆ ನುಗ್ಗಿ ಮಹಿಳೆಯರನ್ನು ನಿಂದಿಸಿ, ಹಲವರನ್ನು ಬಂಧಿಸಿದ್ದಾರೆ. ಪೊಲೀಸರು ಏಕಾಏಕಿ ಮನೆಗೆ ನುಗ್ಗಿ ಮಕ್ಕಳನ್ನು ಬಂಧಿಸಿದಾಗ ಮಹಿಳೆಯರು, ವೃದ್ಧರು ಆತಂಕಗೊಂಡಿದ್ದಾರೆ. ಈ ವೇಳೆ ಮುಹಿನುದ್ದೀನ್ ಅನ್ಸಾರಿ ಅವರ ಪುತ್ರ ಫಾರೂಕ್ ಅನ್ಸಾರಿ ಫತುವುಲ್ಲಾ ಮತ್ತು ಖಂಬಾರ್ ಅನ್ಸಾರಿ ಮುಲ್ಲಾ ಅವರ ಪತ್ನಿ ಸುಫಿಯಾ ಬೇಗಮ್ ಎಂಬವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮುಸ್ಲಿಮರು ಹಿಂಸಾಚಾರಕ್ಕೆ ಸಿದ್ಧತೆ ನಡೆಸಿದ್ದಾರೆ ಎಂದು ಆರೋಪಿಸಿ ಪೊಲೀಸರು ಐದು ಪ್ರಕರಣಗಳನ್ನು ದಾಖಲಿಸಿದ್ದಾರೆ. “ಹಿಂಸಾಚಾರದ ಸಂದರ್ಭದಲ್ಲಿ ಮುಸ್ಲಿಮರು ಪ್ರತಿಕ್ರಿಯಿಸಲು ಸಿದ್ಧರಾಗಿದ್ದರು. ಅವರು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿ ಸಾರ್ವಜನಿಕವಾಗಿ ಪ್ರದರ್ಶಿಸಿದರು. ಪರಿಣಾಮವಾಗಿ ಕಲ್ಲು ತೂರಾಟ ಮತ್ತು ದಾಳಿಗೆ ಸಿದ್ಧತೆಗಾಗಿ ಪ್ರಕರಣಗಳನ್ನು ದಾಖಲಿಸಲಾಗಿದೆ” ಎಂದು ಡಿಎಸ್ಪಿ ಹಿರೇಮಠ ತಿಳಿಸಿದರು.
ಸದ್ಯ ನಿಷೇಧಾಜ್ಞೆ ಹಾಗೂ ಪೊಲೀಸರ ಬಂದೋಬಸ್ತ್ ನಡುವೆ ಪಟ್ಟಣದ ವಾತಾವರಣ ತಕ್ಕಮಟ್ಟಿಗೆ ಸುಧಾರಿಸಿದೆ ಎಂದು ಮಾಹಿತಿ ಲಭಿಸಿದೆ.
ಉದ್ವಿಗ್ನ ಪರಿಸ್ಥಿತಿ ಹಿನ್ನಲೆಯಲ್ಲಿ ಸಿ.ಆರ್.ಪಿ.ಸಿ ಕಾಯ್ದೆ-1973ರ ಕಲಂ 144, 144ಎ ಅನ್ವಯ ಆಳಂದ ತಾಲೂಕಿನಾದ್ಯಂತ ಜಾರಿಗೊಳಿಸಿದ್ದ ನಿಷೇಧಾಜ್ಞೆಯನ್ನು ಮಾರ್ಚ್ 5ರ ಬೆಳಗ್ಗೆ 6 ಗಂಟೆ ತನಕ ವಿಸ್ತರಿಸಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಆದೇಶ ಹೊರಡಿಸಿದ್ದಾರೆ.