ಬೆಂಗಳೂರು: ʻನಾವು ಜೀವಂತವಾಗಿ ಹಿಂತಿರುಗುತ್ತೇವೆ ಎಂಬ ಆಸೆಯನ್ನೇ ಬಿಟ್ಟಿದ್ದೇವೆ.’ ಇದು ಉಕ್ರೇನ್ನಲ್ಲಿ ಶೆಲ್ ದಾಳಿಗೆ ಬಲಿಯಾದ ಹಾವೇರಿಯ ನವೀನ್ ಸ್ನೇಹಿತ ಶ್ರೀಕಾಂತ್ ಅವರ ಅಳಲು. ‘ಯಾವ ಸಂದರ್ಭದಲ್ಲಾದರೂ ನಮ್ಮ ಮೇಲೆ ಬಾಂಬ್, ಶೆಲ್ ದಾಳಿ ನಡೆಯಬಹುದು. ಅಂತಿಮವಾಗಿ ನಡೆದುಕೊಂಡು ಬಂದೇ ರೈಲು ನಿಲ್ದಾಣ ಸೇರಿದ್ದೇವೆ. ಯಾವ ರೈಲು ಬರುತ್ತದೆ, ನಾವೆಲ್ಲಿಗೆ ಹೋಗುತ್ತೇವೆ ಎಂಬ ಕಲ್ಪನೆಯೂ ಇಲ್ಲದಂತಾಗಿದೆ. ಎಂದು ಅವರು ಹೇಳಿದರು.
ಬೆಂಗಳೂರಿನ ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿರುವ ಹರೀಶ್ ಅವರ ಸಹೋದರ ಶ್ರೀಕಾಂತ್ ಉಕ್ರೇನ್ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದರು. ಗೆಳೆಯ ನವೀನ್ ಅಗಲಿಕೆಯಿಂದ ತೀವ್ರ ಆತಂಕಕ್ಕೆ ಒಳಗಾಗಿರುವ ಅವರು, ಕುಟುಂಬ ಸದಸ್ಯರೊಂದಿಗೆ ತಮ್ಮ ಆತಂಕ ತೋಡಿಕೊಂಡಿದ್ದಾರೆ.
ಈಗಷ್ಟೇ ಸಾವಿರಕ್ಕೂ ಹೆಚ್ಚು ಭಾರತೀಯರು ರೈಲು ನಿಲ್ದಾಣಕ್ಕೆ ನಡೆದುಕೊಂಡೇ ಬಂದಿದ್ದೇವೆ. 250ಕ್ಕೂ ಹೆಚ್ಚು ಜನ ಕನ್ನಡಿಗರೇ ಇದ್ದೇವೆ. ವಿಪರೀತ ಮಂಜು ಬೀಳುತ್ತಿದೆ. ಚಳಿ ತಡೆಯಲು ಆಗುತ್ತಿಲ್ಲ. ಯಾವ ರೈಲು, ಬರುತ್ತದೆ. ಎಲ್ಲಿಗೆ ಹೋಗುತ್ತೇವೆ ಎಂಬುದೂ ಗೊತ್ತಿಲ್ಲ ಎಂದು ಧ್ವನಿ ಸಂದೇಶದಲ್ಲಿ ಹೇಳಿದ್ದಾರೆ.
ಇದಕ್ಕೂ ಮೊದಲು ಉಕ್ರೇನ್ನ ಬಂಕರ್ನಲ್ಲಿ ಜೀವ ಕೈಯಲ್ಲಿಟ್ಟುಕೊಂಡು ಮಾತನಾಡಿದ ಶ್ರೀಕಾಂತ್, ‘ಒಂದು ವೇಳೆ ಗುಂಡೇಟಿಗೆ ಸಾಯದಿದ್ದರೂ ಹೊಟ್ಟೆಗೆ ಊಟವಿಲ್ಲದೆ ಸಾಯುವುದು ಖಚಿತ’ ಎಂದಿದ್ದರು.
ನನ್ನ ಸ್ನೇಹಿತ ನವೀನ್ ಬಲಿಯಾದ ನಂತರ ನಮಗೆ ಕ್ಷಣ ಕ್ಷಣಕ್ಕೂ ಸಾವಿಗೆ ಹತ್ತಿರವಾಗುತ್ತಿದ್ದೇವೆ ಎನಿಸುತ್ತಿದೆ. ನಮ್ಮನ್ನ ರಕ್ಷಿಸೋಕೆ ಯಾರು ಬರುತ್ತಿಲ್ಲ. ಹೊರಜಗತ್ತಿನ ಸಂಪರ್ಕವೇ ಕಡಿದುಹೋಗುತ್ತಿದೆ. ಬರೀ ಶೆಲ್ ಹಾಗೂ ಬಾಂಬ್ ದಾಳಿಯ ಶಬ್ದ ಮಾತ್ರ ಕೇಳಿಸುತ್ತಿದೆ. ನಾವು ರಕ್ಷಣೆ ಪಡೆದಿರುವ ಬಂಕರ್ನಲ್ಲಿ ಆಹಾರ ದಾಸ್ತಾನು ಕರಗುತ್ತಿದೆ. ನಿನ್ನೆ ನಮಗಾಗಿ ಆಹಾರ ತರಲು ಹೋದ ನವೀನ್ ಶೆಲ್ ದಾಳಿಗೆ ಬಲಿಯಾದ ನಂತರ ನಾವು ನಿಂತಿರುವ ಜಗವೇ ಕುಸಿದುಬೀಳುತ್ತಿದೆ ಎಂಬ ಭಾವನೆ ನಮ್ಮಲಿದೆ ಎಂದಿದ್ದಾರೆ.
ಲೆಕ್ಕಕ್ಕೆ ಮಾತ್ರ ನವೀನ್ ಸಾವು ತೋರಿಸಲಾಗುತ್ತಿದೆ. ನನಗೆ ತಿಳಿದ ಮಟ್ಟಿಗೆ ಇನ್ನೂ ಹಲವರು ಅಮಾಯಕ ಭಾರತೀಯ ವಿದ್ಯಾರ್ಥಿಗಳು ಸಾವಿಗೀಡಾಗಿರುವ ಶಂಕೆಯಿದೆ. ಕೆಲವು ಸಾವು-ನೋವುಗಳನ್ನು ಮುಚ್ಚಿಡಲಾಗುತ್ತಿದೆ ಎಂಬ ಅನುಮಾನವೂ ಇದೆ ಎಂದು ಅವರ ಸಹೋದರನಿಗೆ ತಿಳಿಸಿದ್ದಾರೆ.
ನನ್ನ ಮಗ ಜೀವಂತವಾಗಿ ಬರಲಿಲ್ಲ… ಬೇರೆ ವಿದ್ಯಾರ್ಥಿಗಳನ್ನಾದರೂ ಕರೆ ತನ್ನಿ
ನನ್ನ ಮಗ ಬರೋದು ಯಾರಿಂದ ತಪ್ಪಿತು ಎಂದು ನನಗೆ ಗೊತ್ತಿಲ್ಲ. ನನ್ನ ಮಗ ಜೀವಂತವಾಗಿ ಬರಲಿಲ್ಲ, ಬೇರೆ ವಿದ್ಯಾರ್ಥಿಗಳನ್ನಾದರೂ ಕರೆ ತನ್ನಿ ಎಂದು ರಷ್ಯಾ ಷೆಲ್ ದಾಳಿಯಿಂದಾಗಿ ಉಕ್ರೇನ್ನಲ್ಲಿ ಮೃತ ಪಟ್ಟ ಹಾವೇರಿಯ ನವೀನ ಗ್ಯಾನಗೌಡರ ತಂದೆ ಶೇಖರಗೌಡರ ಹೇಳಿದರು. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನಿವಾಸದಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿಗಳು, ಮಾಜಿ ಮುಖ್ಯಮಂತ್ರಿ, ಹಾಲಿ ಮುಖ್ಯಮಂತ್ರಿ ಎಲ್ಲರೂ ನಮ್ಮ ಜೊತೆ ಮಾತಾಡಿದ್ದಾರೆ.