ಬೆಂಗಳೂರು : ಉಕ್ರೇನಿನಲ್ಲಿ ಸಿಲುಕಿಕೊಂಡಿರುವ ಭಾರತೀಯ ವಿದ್ಯಾರ್ಥಿಗಳನ್ನು ಭಾರತಕ್ಕೆ ವಾಪಸ್ ಕರೆತರುವ ತುರ್ತು ಕ್ರಮ ಕೈಗೊಳ್ಳಿ ಎಂದು ಎಐಡಿಎಸ್ಓ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಆಗ್ರಹಿಸಿದರು.
ಬುಧವಾರ ಸಂಜೆ ನಗರದ ಮೈಸೂರು ಬ್ಯಾಂಕ್ ವೃತ್ತದ ಬಳಿ ನಡೆದ ಶ್ರದ್ಧಾಂಜಲಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ವಿದ್ಯಾರ್ಥಿ ನವೀನ್ ಗೆ ಸಂತಾಪವನ್ನು ಸೂಚಿಸಿ, ಅವರ ಕುಟುಂಬಕ್ಕೆ ಪರಿಹಾರ ನೀಡಲು ರಾಜ್ಯ ಸರಕಾರ ಮುಂದಾಗಬೇಕು ಎಂದರು.
ರಷ್ಯಾ ನಡೆಸುತ್ತಿರುವ ಈ ಏಕಪಕ್ಷೀಯ ಮಿಲಿಟರಿ ಆಕ್ರಮಣವನ್ನು ನಾವೆಲ್ಲರೂ ಉಗ್ರವಾಗಿ ಖಂಡಿಸಬೇಕು. ರಷ್ಯಾವು ಅಂತಾರಾಷ್ಟ್ರೀಯ ಮಾನವೀಯ ಕಾನೂನುಗಳನ್ನು ಉಲ್ಲಂಘಿಸಿ ಈ ಯುದ್ಧವನ್ನು ನಡೆಸುತ್ತಿದೆ. ವಾಸ್ತವವಾಗಿ ಉಕ್ರೇನ್ ದೇಶವು, ಒಂದೆಡೆ ಸಾಮ್ರಾಜ್ಯಶಾಹಿ ರಷ್ಯಾ ಮತ್ತು ಇನ್ನೊಂದೆಡೆ, ಯು.ಎಸ್. ನೇತೃತ್ವದ ನ್ಯಾಟೋ ನಡುವೆ ಸಿಲುಕಿಕೊಂಡಿದೆ. ಭಾರತದ ಹಲವು ಭಾಗಗಳಿಂದ ಅಲ್ಲಿ ಓದಲು ತೆರಳಿದ್ದ ಸಾವಿರಾರು ವಿದ್ಯಾರ್ಥಿಗಳು, ಈಗಿನ ಯುದ್ಧದ ಸನ್ನಿವೇಶದ ಹಿನ್ನೆಲೆಯಲ್ಲಿ ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಇತರೆ ದೇಶಗಳು ತಮ್ಮ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರಲು ಈಗಾಗಲೇ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಆದರೆ ಭಾರತ ಸರ್ಕಾರ, ಕ್ರಮ ತೆಗೆದುಕೊಳ್ಳುವ ಬಗ್ಗೆ ಹೇಳಿದೆಯದರು, ಕ್ರಿಯೆಯಲ್ಲಿ ಯಾವುದು ಕಾಣುತ್ತಿಲ್ಲ. ಉಕ್ರೇನಿನಲ್ಲಿ ಕರ್ನಾಟಕದ ವಿದ್ಯಾರ್ಥಿಯ ಸಾವು ಅತ್ಯಂತ ನೋವಿನ ಸಂಗತಿ ಮತ್ತು ಇದು ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ತೋರುತ್ತದೆ. ಮೃತರ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ‘ ಎಂದು ಅಜಯ್ ಕಾಮತ್ ಹೇಳಿದರು.
ಬೆಂಗಳೂರು ಜಿಲ್ಕಾಧ್ಯಕ್ಷೆ ಅಭಯಾ ದಿವಾಕರ್ ಮಾತನಾಡಿ,’ ಕಳೆದ ಎರಡು ದಿನಗಳಿಂದ ರಾಜ್ಯಾದ್ಯಂತ ವಿದ್ಯಾರ್ಥಿಗಳು, ಬಹುಮುಖ್ಯವಾಗಿ ವೈದ್ಯಕೀಯ ವಿದ್ಯಾರ್ಥಿಗಳು ನವೀನ್ ರ ಸಾವಿಗೆ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. ಈಗ ನಮ್ಮೆಲ್ಲರ ಕಾಳಜಿ ಇರುವುದು, ಯುದ್ಧಪೀಡಿತ ಉಕ್ರೇನ್ ನಲ್ಲಿ ಉಳಿದುಕೊಂಡಿರುವ ವಿದ್ಯಾರ್ಥಿಗಳನ್ನು ಕರೆತರಲು ಸರ್ಕಾರ ಈಗಲೇ ಕ್ರಮ ತೆಗೆದುಕೊಳ್ಳಬೇಕು. ಅವರೆಲ್ಲರೂ ಸುರಕ್ಷಿತವಾಗಿ ವಾಪಸ್ ಆಗಬೇಕು. ಅದರೊಂದಿಗೆ, ವಿದ್ಯಾರ್ಥಿಗಳು ಓದಲು ವಿದೇಶಕ್ಕೆ ತೆರಳುವುದು, ಅಲ್ಲಿ ಕಡಿಮೆ ವೆಚ್ಚದಲ್ಲಿ ವ್ಯಾಸಂಗ ಮಾಡಬಹುದು. ಅಂದರೆ, ರಾಜ್ಯದಲ್ಲಿ ವೈದ್ಯಕೀಯ ವೆಚ್ಚ ಅತ್ಯಂತ ದುಬಾರಿಯಾಗಿದೆ ಎಂದು ಅರ್ಥ. ಉಕ್ರೇನ್ ಗೆ ಹೋಲಿಸಿದರೆ ನಾಲ್ಕು ಪಟ್ಟು ಹೆಚ್ಚು. ಇಲ್ಲಿ ಸರ್ಕಾರದ ಜವಾಬ್ದಾರಿಯಿಂದ ವರ್ತನೆ ಮಾಡಬೇಕಿದೆ. ಶಿಕ್ಷಣ ಎಲ್ಲರಿಗೂ ದೊರಕುವಂತೆ ಮಾಡುವುದು, ಶುಲ್ಕಗಳನ್ನು ಕಡಿಮೆ ಮಾಡುವುದು. ಸರಕಾರದ ಕರ್ತವ್ಯವಾಗಬೇಕು ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು AIDSO ಜಿಲ್ಲಾ ಉಪಾಧ್ಯಕ್ಷರಾದ ಅಪೂರ್ವ ವಹಿಸಿದ್ದರು. ಸಂತಾಪ ಸಭೆಯಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು.