ಎರಡು ಸಮಾಜ ವ್ಯವಸ್ಥೆಗಳ ನಡುವೆ ಊಹೆಗೂ ನಿಲುಕದ ವ್ಯತ್ಯಾಸ

ಪ್ರೊ. ಪ್ರಭಾತ್ ಪಟ್ನಾಯಕ್

ಅಸಮಾನತೆಗಳು ಮಾನವ ಇತಿಹಾಸದಲ್ಲಿ ಬೇರೆ ಯಾವುದೇ ಸಮಯಕ್ಕೆ ಹೋಲಿಸಿದರೂ ಇಂದು ಹೆಚ್ಚಾಗಿವೆ ಎಂದು ಈಗ ಬಹಳಷ್ಟು ವರದಿಗಳು ಹೇಳುತ್ತಿವೆ. ಆದರೆ, ಕೇವಲ ಮೂರು ದಶಕಗಳ ಹಿಂದೆ, ಮಾನವ ಇತಿಹಾಸದಲ್ಲಿ ಹಿಂದೆಂದಿಗಿಂತಲೂ ಅಸಮಾನತೆಯು ಅತಿ ಕಡಿಮೆ ಮಟ್ಟದಲ್ಲಿದ್ದ ಸಮಾಜಗಳೂ ಅಸ್ತಿತ್ವದಲ್ಲಿದ್ದವು ಎಂಬುದನ್ನೂ ನೆನಪಿಸಿಕೊಳ್ಳಬೇಕು. ಸೋವಿಯತ್ ಒಕ್ಕೂಟ ಮತ್ತು ಪೂರ್ವ ಯೂರೋಪಿನ ಕೆಲವು  ದೇಶಗಳಲ್ಲಿ ಸಮಾಜವಾದಿ ವ್ಯವಸ್ಥೆಯ ಕುಸಿತದ ನಂತರ,  ಅಸಮಾನತೆಗೆ ಸಂಬಂಧಿಸಿದಂತೆ ಈ ಬಂಡವಾಳಶಾಹಿ ಮತ್ತು ಸಮಾಜವಾದಿ ವ್ಯವಸ್ಥೆಗಳ ನಡುವಿನ ವ್ಯತ್ಯಾಸಗಳನ್ನು ಅಳಿಸಿಹಾಕುವ ಪ್ರಯತ್ನ ನಡೆದಿದೆ. ಇದೊಂದು ಅಪ್ರಾಮಾಣಿಕ ಸೈದ್ಧಾಂತಿಕ ತಂತ್ರಗಾರಿಕೆ. ಇದಕ್ಕೆ ವ್ಯತಿರಿಕ್ತವಾಗಿ, ಅಸಮಾನತೆಯ ವಿಷಯದಲ್ಲಿ ಈ ಎರಡು ವ್ಯವಸ್ಥೆಗಳ ನಡುವಿನ ವ್ಯತ್ಯಾಸವನ್ನು ಊಹಿಸಲೂ ಸಾಧ್ಯವಿಲ್ಲ.

ಆರ್ಥಿಕ ಅಸಮಾನತೆಗಳ ಅಗಾಧ ಹೆಚ್ಚಳದ ಬಗ್ಗೆ ಇತ್ತೀಚೆಗೆ ಬಹಳಷ್ಟು ಬರೆಯಲಾಗಿದೆ. ಆಕ್ಸ್‌ಫಾಮ್ ನಂತಹ ಸಂಸ್ಥೆಗಳು ಆಶ್ವರ್ಯಕರ ಅಂಕಿಅಂಶಗಳನ್ನು ಒದಗಿಸಿವೆ. ಆಕ್ಸ್‌ಫಾಮ್ Inequality Kills ( ಅಸಮಾನತೆ ಕೊಲ್ಲುತ್ತದೆ)ಎಂಬ ಶೀರ್ಷಿಕೆಯಡಿಯಲ್ಲಿ ಒಂದು ವರದಿಯನ್ನು ಇತ್ತೀಚೆಗೆ ಪ್ರಕಟಿಸಿದೆ. ಈ ವರದಿಯು ನಮ್ಮ ಸುತ್ತಲಿನ ಅಸಮಾನತೆಯ ಬಗ್ಗೆ ಚಕಿತಗೊಳಿಸುವ ಸಂಗತಿಗಳನ್ನು ಮತ್ತು ಅಂಕಿ-ಅಂಶಗಳನ್ನು ಹೊರಹಾಕಿದೆ. ಕೊರೊನಾ ಕಾಣಿಸಿಕೊಂಡ ನಂತರದ ಅವಧಿಯಲ್ಲಿ ವಿಶ್ವದ ಹತ್ತು ಅತಿ ಹೆಚ್ಚು ಶ್ರೀಮಂತರ ಸಂಪತ್ತು ದ್ವಿಗುಣಗೊಂಡಿದೆ. ಇದೇ ಅವಧಿಯಲ್ಲಿ, ವಿಶ್ವದ 99% ರಷ್ಟು ಜನರ ಆದಾಯದಲ್ಲಿ ಇಳಿಕೆಯಾಗಿದೆ. ವಿಶ್ವದ ಜನಸಂಖ್ಯೆಯ ಕೇವಲ 0.027% ಜನರು, 2020ರಲ್ಲಿ, ಒಟ್ಟು 45 ಟ್ರಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದ್ದರು ಎಂದು ಅಂದಾಜಿಸಲಾಗಿದೆ. ಅವರ ಈ ಸಂಪತ್ತು ಭಾರತದ ಪ್ರಸ್ತುತ ಜಿಡಿಪಿಯ 15 ಪಟ್ಟು ದೊಡ್ಡದು.

ನಮ್ಮ ಸಮಕಾಲೀನ ಜಗತ್ತು, ಮಾನವ ಇತಿಹಾಸದಲ್ಲಿ ಎಂದೂ ಕಂಡಿರದಷ್ಟು ಹೆಚ್ಚಿನ ಮಟ್ಟದ ಆರ್ಥಿಕ ಅಸಮಾನತೆಯ ಗುಣಲಕ್ಷಣಗಳನ್ನು ತೋರುತ್ತಿದೆ ಗುರುತಿಸಿಕೊಂಡಿದೆ ಎಂದೂ ಕೆಲವರು ಹೇಳುತ್ತಾರೆ (ಎಂಆರ್ ಆನ್‌ಲೈನ್, ಫೆಬ್ರವರಿ 12). ಈ ಹೇಳಿಕೆಯನ್ನು ತಳ್ಳಿಹಾಕುವಂತಿಲ್ಲ. ವಿಷಯಕ್ಕೆ ಬರುವುದಾದರೆ, ಪ್ರತಿಯೊಂದು ಸಮಾಜ ವ್ಯವಸ್ಥೆಗೂ ಹಲವು ಹತ್ತು ಬಳಕೆಯ ವಸ್ತುಗಳ ಅಗತ್ಯವಿರುತ್ತದೆ. ಈ ವಸ್ತುಗಳನ್ನು ಉತ್ಪಾದಿಸುವ ಜನರಿಗೆ, ಅವರ ಉತ್ಪಾದಕತೆಯ ಮಟ್ಟವು ಎಷ್ಟೇ ಕಡಿಮೆ ಇದ್ದರೂ ಸಹ, ಒಂದು ಕನಿಷ್ಠ ಮಟ್ಟದ ಆದಾಯವನ್ನು ನೀಡಬೇಕಾಗುತ್ತದೆ. ಇದೇನು ಹೊಸದಲ್ಲ. ಹಿಂದಿನ ಸಮಾಜ ವ್ಯವಸ್ಥೆಗಳೂ ಸಹ ಇದೇ ಕ್ರಮವನ್ನೇ ಅನುಸರಿಸಿದ್ದವು. ಆದಾಗ್ಯೂ, ಉತ್ಪಾದಕ ಶಕ್ತಿಗಳು ಅಭಿವೃದ್ಧಿ ಹೊಂದುತ್ತಾ ಹೋದಂತೆಲ್ಲಾ ಶ್ರಮಿಕರ ಉತ್ಪಾದಕತೆಯೂ ಹೆಚ್ಚುತ್ತಲೇ ಹೋಗುತ್ತದೆ. ಹಾಗಾಗಿ, ಉತ್ಪಾದನೆಯಲ್ಲಿ ಆರ್ಥಿಕ ಮಿಗುತಾಯದ ಪಾಲು (ಶ್ರಮಿಕರ ಉತ್ಪಾದಕತೆ ಮತ್ತು ಶ್ರಮಿಕರಿಗೆ ಸಿಗುವ ವೇತನ ದರ ಇವುಗಳ ನಡುವಿನ ವ್ಯತ್ಯಾಸವೇ ಆರ್ಥಿಕ ಮಿಗುತಾಯ) ಹೆಚ್ಚುತ್ತಲೇ ಹೋಗುತ್ತದೆ. ಬಂಡವಾಳಶಾಹಿಯು ಈವರೆಗೂ ಉತ್ಪಾದಕ ಶಕ್ತಿಗಳ ಅತ್ಯುನ್ನತ ಮಟ್ಟದ ಅಭಿವೃದ್ಧಿಯನ್ನು ಕಂಡಿರುವುದರಿಂದ, ಉತ್ಪಾದನೆಯಲ್ಲಿ ಆರ್ಥಿಕ ಮಿಗುತಾಯದ ಪಾಲು ಎಂಬ ಅರ್ಥದಲ್ಲಿ, ಬಂಡವಾಳಶಾಹಿಯ ಅಡಿಯಲ್ಲಿ ಆರ್ಥಿಕ ಅಸಮಾನತೆಗಳು ಹಿಂದಿನ ಯಾವುದೇ ಸಮಯಕ್ಕಿಂತಲೂ ಇಂದು ಹೆಚ್ಚಿನ ಮಟ್ಟದಲ್ಲಿದ್ದರೆ ಆಶ್ಚರ್ಯಪಡಬೇಕಾಗಿಲ್ಲ.

ಈ ದೃಷ್ಟಿಕೋನದ ವಿರುದ್ಧವಾಗಿ ಹೀಗೊಂದು ವಾದವನ್ನು ಮಂಡಿಸಬಹುದು: ಹಿಂದಿನ ಉತ್ಪಾದನಾ ವಿಧಾನಗಳಿಗೆ ಹೋಲಿಸಿದರೆ, ಬಂಡವಾಳಶಾಹಿಯ ಅಡಿಯಲ್ಲಿ ಉತ್ಪಾದಕ ಶಕ್ತಿಗಳ ಅಭಿವೃದ್ಧಿಯೊಂದಿಗೆ ಕಾರ್ಮಿಕರ ನಿಜ ವೇತನವೂ ಹೆಚ್ಚುವ ಕಾರಣದಿಂದಾಗಿ ಮತ್ತು ವೇತನ ಮಟ್ಟದ ಒಂದು ಕವಲಾಗಿ ಪ್ರಕಟಗೊಳ್ಳುವ ಅಸಮಾನತೆಗಳು ಬಂಡವಾಳಶಾಹಿಯ ಅಡಿಯಲ್ಲಿ, ಹಿಂದಿನ ಉತ್ಪಾದನಾ ವಿಧಾನಗಳಿಗೆ ಹೋಲಿಸಿದರೆ ಹೆಚ್ಚಬೇಕಾಗಿಯೇನೂ ಇಲ್ಲ. ಆದರೆ, ಬಂಡವಾಳಶಾಹಿಯ ಪ್ರವೃತ್ತಿಯನ್ನು ಅದರ ಅಂತರರಾಷ್ಟ್ರೀಯ ಸಂದರ್ಭ-ಸನ್ನಿವೇಶದಲ್ಲಿ ನೋಡಿದಾಗ ಅದು ತನ್ನ ಪರಿಧಿಯಲ್ಲಿ ಅಪಕೈಗಾರಿಕೀಕರಣವಾಗುವಂತೆ ನೋಡಿಕೊಳ್ಳುವ ಮೂಲಕ ಕಾರ್ಮಿಕರ ಒಂದು ಮೀಸಲು ಪಡೆಯನ್ನು ಸೃಷ್ಟಿಸುತ್ತದೆ. ಹಾಗಾಗಿ, ಕಾರ್ಮಿಕ ಉತ್ಪಾದಕತೆಯಲ್ಲಿ ಗಣನೀಯ ಹೆಚ್ಚಳವಿದ್ದರೂ ಸಹ, ಕಾರ್ಮಿಕರ ನಿಜ ವೇತನವನ್ನು ಬದುಕುಳಿಯಲಷ್ಟೇ ಸಾಕಾಗುವ ಮಟ್ಟಕ್ಕೆ ಬಹಳ ಹತ್ತಿರದಲ್ಲಿಡುತ್ತದೆ. ಅದೂ ಅಲ್ಲದೆ, ಹಿಂದಿನ ಯಾವುದೇ ಉತ್ಪಾದನಾ ವಿಧಾನಕ್ಕೆ ಹೋಲಿಸಿದರೂ ಬಂಡವಾಳಶಾಹಿ ಉತ್ಪಾದನಾ ವಿಧಾನದಲ್ಲಿ ಉತ್ಪಾದಕ ಶಕ್ತಿಗಳ ಅಭಿವೃದ್ಧಿಯು ಅತ್ಯುನ್ನತ ಮಟ್ಟದಲ್ಲಿರುವುದರಿಂದಾಗಿ, ಸೃಷ್ಟಿಯಾಗುವ ಆರ್ಥಿಕ ಮಿಗುತಾಯದ ಪಾಲೂ ಸಹ ದೊಡ್ಡದೇ ಇರುತ್ತದೆ. ಹಾಗಾಗಿ, ಇಡೀ ವಿಶ್ವದ ಬಂಡವಾಳಶಾಹಿ ಉತ್ಪಾದನೆಯಲ್ಲಿ ಸೃಷ್ಟಿಯಾಗುವ ಆರ್ಥಿಕ ಮಿಗುತಾಯದ ಪಾಲು ಎಂಬ ಅರ್ಥದಲ್ಲಿ, ಆರ್ಥಿಕ ಅಸಮಾನತೆಗಳು ಹಿಂದಿನ ಯಾವುದೇ ಸಮಯಕ್ಕಿಂತಲೂ ಇಂದು ಹೆಚ್ಚಿನ ಮಟ್ಟದಲ್ಲಿವೆ.

ಮೂರು ದಶಕಗಳ ಹಿಂದೆ…

ಈ ಅರ್ಥದಲ್ಲಿ ಅಸಮಾನತೆಗಳು ಮಾನವ ಇತಿಹಾಸದಲ್ಲಿ ಬೇರೆ ಯಾವುದೇ ಸಮಯಕ್ಕೆ ಹೋಲಿಸಿದರೂ ಇಂದು ಹೆಚ್ಚಾಗಿವೆಯಾದರೂ, ಕೇವಲ ಮೂರು ದಶಕಗಳ ಹಿಂದೆ, ಮಾನವ ಇತಿಹಾಸದಲ್ಲಿ ಹಿಂದೆಂದಿಗಿಂತಲೂ ಅಸಮಾನತೆಯು ಅತಿ ಕಡಿಮೆ ಮಟ್ಟದಲ್ಲಿದ್ದ ಸಮಾಜಗಳೂ ಅಸ್ತಿತ್ವದಲ್ಲಿದ್ದವು. ಅವುಗಳೆಂದರೆ, ಸೋವಿಯತ್ ಒಕ್ಕೂಟ ಮತ್ತು ಪೂರ್ವ ಯೂರೋಪಿನ ಕೆಲವು ಸಮಾಜವಾದಿ ದೇಶಗಳು. ಈ ದೇಶಗಳಲ್ಲಿ ಸಮಾಜವಾದಿ ವ್ಯವಸ್ಥೆಯ ಕುಸಿತದ ನಂತರ, ಅಸಮಾನತೆಯ ವಿಷಯದಲ್ಲಿ, ಈ ದೇಶಗಳು ಬಂಡವಾಳಶಾಹಿ ದೇಶಗಳಿಗಿಂತ ಭಿನ್ನವೇನಲ್ಲ ಎಂದು ಹೇಳುವುದೇ ಒಂದು ಫ್ಯಾಶನ್ ಆಗಿಬಿಟ್ಟಿದೆ. ಈ ದೇಶಗಳಲ್ಲಿಯೂ ಸಹ, ಬಂಡವಾಳಶಾಹಿ ವ್ಯವಸ್ಥೆಯಲ್ಲಿದ್ದಂತೆ, ಆರ್ಥಿಕ ಮಿಗುತಾಯವನ್ನೇ ಅವಲಂಬಿಸಿ ಬದುಕುತ್ತಿದ್ದ ಆಡಳಿತ ಯಂತ್ರದ ಭಾಗವಾಗಿದ್ದವರು (ಅಪಾರಾಟ್‌ಚಿಕ್) ಇದ್ದರು ಎಂದು ಹೇಳುತ್ತಾರೆ. ಆದರೆ, ಅಸಮಾನತೆಗೆ ಸಂಬಂಧಿಸಿದಂತೆ ಎರಡು ಸಮಾಜ ವ್ಯವಸ್ಥೆಗಳ ನಡುವಿನ ವ್ಯತ್ಯಾಸಗಳನ್ನು ಅಳಿಸಿಹಾಕುವ ಈ ಪ್ರಯತ್ನವು ಒಂದು ಅಪ್ರಾಮಾಣಿಕ ಸೈದ್ಧಾಂತಿಕ ತಂತ್ರಗಾರಿಕೆಯಾಗಿದೆ. ವಾಸ್ತವವಾಗಿ, ಇದು ತಪ್ಪು ಅಭಿಪ್ರಾಯ. ಇದಕ್ಕೆ ವ್ಯತಿರಿಕ್ತವಾಗಿ, ಅಸಮಾನತೆಯ ವಿಷಯದಲ್ಲಿ ಎರಡು ವ್ಯವಸ್ಥೆಗಳ ನಡುವಿನ ವ್ಯತ್ಯಾಸವನ್ನು ಊಹಿಸಲೂ ಸಾಧ್ಯವಿಲ್ಲ.

ಹೆಚ್ಚಿನ ಮಟ್ಟದ ಅಸಮಾನತೆಗಳಿರುವ ಅಮೆರಿಕಾವನ್ನು ಬದಿಗಿಟ್ಟು, ಪಶ್ಚಿಮ ಜರ್ಮನಿ, ಫ್ರಾನ್ಸ್ ಅಥವಾ ಡೆನ್ಮಾರ್ಕ್ ಇಂತಹ ದೇಶಗಳಿಗೆ ಹೋಲಿಸಿದರೂ ಸಹ, ಪೂರ್ವ ಯುರೋಪಿನ ದೇಶಗಳಲ್ಲಿ ಅಸಮಾನತೆ ಅತಿ ಕಡಿಮೆ ಇತ್ತು ಎಂಬುದನ್ನು ತೋರಿಸಲು ಆಕ್ಸ್‌ಫಾಮ್ ಸಂಸ್ಥೆಯ ಮ್ಯಾಕ್ಸ್ ಲಾಸನ್, ಯುಗೊಸ್ಲಾವಿಯಾ ಮೂಲದ ಅರ್ಥಶಾಸ್ತ್ರಜ್ಞ ಬ್ರಾಂಕೊ ಮಿಲಾನೊವಿಕ್ ಅವರನ್ನು ಉಲ್ಲೇಖಿಸುತ್ತಾರೆ. ಮಿಲಾನೊವಿಕ್ ಅವರ ಪ್ರಕಾರ, ಈ ಅತಿ ಕಡಿಮೆ ಅಸಮಾನತೆಯು ಕನಿಷ್ಠ ಮೂರು ಅಂಶಗಳಿಂದಾಗಿತ್ತು. ಮೊದಲನೆಯದು, ಬೋಲ್ಶೆವಿಕ್ ಕ್ರಾಂತಿಯ ನಂತರ ಖಾಸಗಿ ಆಸ್ತಿಯನ್ನು,ವಿಶೇಷವಾಗಿ ಪಾಳೇಗಾರೀ ಆಸ್ತಿಯನ್ನು, ಬೃಹತ್ ಪ್ರಮಾಣದಲ್ಲಿ ಸ್ವಾಧೀನಪಡಿಸಿಕೊಂಡು ಅದನ್ನು ರೈತರಿಗೆ ಹಂಚಿಕೆ ಮಾಡಲಾಗಿತ್ತು. ಇದೇ ರೀತಿಯಲ್ಲಿ, ಯುದ್ಧಾನಂತರದಲ್ಲಿ ಪೂರ್ವ ಯುರೋಪಿಯನ್ ದೇಶಗಳಲ್ಲೂ ಭೂ-ಮರುಹಂಚಿಕೆ ಮಾಡಲಾಗಿತ್ತು. ಎರಡನೆಯದು, ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯನ್ನು ಪ್ರತಿಯೊಬ್ಬರಿಗೂ ಉಚಿತವಾಗಿ ಒದಗಿಸಲಾಗಿತ್ತು. ಉಚಿತ ಶಿಕ್ಷಣ ಮಾತ್ರವಲ್ಲದೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಅಧ್ಯಯನಕ್ಕಾಗಿ ಸ್ಟೈಪೆಂಡ್ ಸಹ ಲಭ್ಯವಿತ್ತು. ಖಾಸಗಿ ಕಾಲೇಜುಗಳು ಮತ್ತು ಖಾಸಗಿ ವಿಶ್ವವಿದ್ಯಾಲಯಗಳು ಇಲ್ಲದ ಕಾರಣ, ಎಲ್ಲರೂ ಒಂದೇ ಗುಣಮಟ್ಟದ ಶಿಕ್ಷಣ ಪಡೆದರು. ತಮ್ಮ ಭವಿಷ್ಯವನ್ನು ಉತ್ತಮಗೊಳಿಸುವ ಮುಕ್ತ ಅವಕಾಶಗಳನ್ನು ಎಲ್ಲ ವಿದ್ಯಾರ್ಥಿಗಳೂ ಹೊಂದಿದ್ದರು. ಇತರ ವಿದ್ಯಾರ್ಥಿಗಳಿಗೆ ಹೋಲಿಸಿದರೆ “ಶ್ರೀಮಂತ” ಹಿನ್ನೆಲೆಯವರು ಎಂದು ಹೇಳಲಾದ ಕೆಲವು ವಿದ್ಯಾರ್ಥಿಗಳು ಮಾತ್ರ ಉತ್ತಮ ಸ್ಥಿತಿಯಲ್ಲಿದ್ದರು ಎನ್ನುವ ಪ್ರಶ್ನೆಯೇ ಇರಲಿಲ್ಲ. ಮೂರನೆಯ ಅಂಶವೆಂದರೆ, ಉದ್ಯೋಗದ ಖಾತರಿ. ಎಲ್ಲರಿಗೂ ಉದ್ಯೋಗ ದೊರಕುವ ಭರವಸೆ ಇತ್ತು. ಆದ್ದರಿಂದ, ಯಾರೂ ನಿರುದ್ಯೋಗಿಗಳಾಗಿ ಉಳಿಯುವ ಪ್ರಶ್ನೆಯೇ ಇರಲಿಲ್ಲ. ಹಾಗಾಗಿ, ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಸಂಭವಿಸುವಂತೆ ಕಾರ್ಮಿಕರ ಮೀಸಲು ಸೈನ್ಯ ಸೃಷ್ಟಿಯಾಗುವ ಪ್ರಶ್ನೆಯೇ ಇರಲಿಲ್ಲ.

ಭಿನ್ನವಾದ ಪ್ರೇರಕ ಶಕ್ತಿ

ಇವೆಲ್ಲವೂ ಮುಖ್ಯವಾದ ಅಂಶಗಳಾಗಿದ್ದರೂ ಸಹ, ಅವು ಸಮಾಜವಾದದ ಅಡಿಯಲ್ಲಿ ಹೆಚ್ಚಿನ ಸಮಾನತೆ ಇದ್ದುದಕ್ಕೆ ಪೂರ್ಣ ವಿವರಣೆಯಾಗುವುದಿಲ್ಲ. ಅವುಗಳ ಜೊತೆಗೆ ಪೂರಕವಾಗಿ, ಅಸಮಾನತೆಯ ಹೆಚ್ಚಳವನ್ನು ತಡೆಯುವ ಸಮಾಜವಾದಿ ವ್ಯವಸ್ಥೆಯ ತರ್ಕವನ್ನೂ ವಿವರಿಸಬೇಕಾಗುತ್ತದೆ. ಪೂರ್ಣ ಉದ್ಯೋಗ ಪರಿಸ್ಥಿತಿ ಶಾಶ್ವತವಾಗಿದ್ದ ಹಿಂದಿನ ಸಮಾಜವಾದಿ ಅರ್ಥವ್ಯವಸ್ಥೆಯು ಬಂಡವಾಳಶಾಹಿ ವ್ಯವಸ್ಥೆಗಿಂತ ಮೂಲಭೂತವಾಗಿ ಭಿನ್ನವಾದ ಪ್ರೇರಕ ಶಕ್ತಿಯನ್ನು ಹೊಂದಿತ್ತು. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕಾರ್ಮಿಕರು ಮತ್ತು ಬಂಡವಾಳಗಾರರ ನಡುವೆ ಒಂದು ಚೌಕಾಶಿಯ ಮೂಲಕ, ಆದಾಯ ವಿತರಣೆಯನ್ನು ಪ್ರತ್ಯೇಕವಾಗಿ ಮತ್ತು ಸ್ವತಂತ್ರವಾಗಿ ನಿರ್ಧರಿಸಲಾಗುತ್ತದೆ. ಕಾರ್ಮಿಕರ ಒಂದು ಮೀಸಲು ಪಡೆಯು ಯಾವತ್ತೂ ಅಸ್ತಿತ್ವದಲ್ಲಿರುವ ಕಾರಣದಿಂದಾಗಿ, ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕಾರ್ಮಿಕರು ಯಾವತ್ತೂ ಒಂದು ಅನನುಕೂಲದ ಪರಿಸ್ಥಿತಿಯಲ್ಲೇ ಇರುತ್ತಾರೆ: ಮೀಸಲು ಪಡೆಯ ಗಾತ್ರವು ಎಷ್ಟು ದೊಡ್ಡದಿರುತ್ತದೋ, ಕಾರ್ಮಿಕರು ತಮ್ಮ ಚೌಕಾಶಿಯ ಮೂಲಕ ಪಡೆಯಬಹುದಾದ ವೇತನ ಪಾಲು ಅಷ್ಟೇ ಕಡಿಮೆ ಇರುತ್ತದೆ.

ಕಾರ್ಮಿಕರು ಮತ್ತು ಬಂಡವಾಳಗಾರರ ನಡುವೆ ಆದಾಯದ ವಿತರಣೆಯು ಪ್ರತ್ಯೇಕವಾಗಿ ಮತ್ತು ಸ್ವತಂತ್ರವಾಗಿ ಈ ರೀತಿಯಲ್ಲಿ ನಿರ್ಧರಿಸಲ್ಪಡುವ ಕಾರಣದಿಂದಾಗಿಯೇ ಬಂಡವಾಳಶಾಹಿ ವ್ಯವಸ್ಥೆಯು ಅತಿ-ಉತ್ಪಾದನೆಯ ಬಿಕ್ಕಟ್ಟಿಗೆ ಒಳಗಾಗುತ್ತದೆ. ಈ ಅಂಶವನ್ನು ಒಂದು ಉದಾಹರಣೆಯ ಮೂಲಕ ಅರ್ಥಮಾಡಿಕೊಳ್ಳಬಹುದು: ಒಂದು ಅರ್ಥವ್ಯವಸ್ಥೆಯ ಒಟ್ಟು ಉತ್ಪಾದನಾ ಸಾಮರ್ಥ್ಯವು 100 ಎಂದು ಭಾವಿಸಿ, ಪೂರ್ಣ ಸಾಮರ್ಥ್ಯದ ಉತ್ಪತ್ತಿಯನ್ನು ಉತ್ಪಾದಿಸಿದರೆ ಮತ್ತು ಇದರಲ್ಲಿ ಕಾರ್ಮಿಕರಿಗೆ ಸಿಗುವ ಪಾಲು (ಅಂದರೆ, ಕಾರ್ಮಿಕರ ನಿಜ ವೇತನವನ್ನು ಕಾರ್ಮಿಕ ಉತ್ಪಾದಕತೆಯಿಂದ ಭಾಗಿಸಿದಾಗ ಸಿಗುವಂತದ್ದು) ಅರ್ಧದಷ್ಟು ಎಂದು ಭಾವಿಸಿದರೆ, ಆಗ, 50 ಕಾರ್ಮಿಕರಿಗೂ ಮತ್ತು 50 ಬಂಡವಾಳಗಾರರಿಗೂ ಬರುತ್ತದೆ. ತಮಗೆ ಬಂದದ್ದನ್ನು ಕಾರ್ಮಿಕರು ಹೆಚ್ಚು ಕಡಿಮೆ ಬಳಸಿಕೊಳ್ಳುತ್ತಾರೆ. ಆದರೆ, ಸ್ವತಂತ್ರವಾಗಿ ನಿರ್ಧರಿಸಿದ ತಮ್ಮ ಹೂಡಿಕೆಯೂ ಸೇರಿದಂತೆ ಬಂಡವಾಳಗಾರರು ಕೇವಲ 40ನ್ನು ಬಳಕೆಮಾಡಿಕೊಂಡರೆ, ಆಗ 40ರ ಹೆಚ್ಚುವರಿ ಮಾತ್ರ “ಸಾಕಾರಗೊಳ್ಳುತ್ತದೆ”. ಮಿಗುತಾಯದ ಪಾಲು ಅರ್ಧದಷ್ಟು ಇರುವುದರಿಂದ, ಕಾರ್ಮಿಕರು 50 ಅಲ್ಲ 40ನ್ನು ಪಡೆಯುತ್ತಾರೆ ಮತ್ತು “ಸಾಕಾರಗೊಂಡ” ಒಟ್ಟು ಉತ್ಪಾದನೆಯು 80 ಆಗಿರುತ್ತದೆ. ಅಂದರೆ, ಉತ್ಪಾದಿಸಬಹುದಾದ 20 ಉತ್ಪಾದನೆಯಾಗದೇ ಉಳಿದುಬಿಡುತ್ತದೆ ಮತ್ತು ಕಾರ್ಮಿಕ ಉತ್ಪಾದಕತೆಯು 1 ಆಗಿದ್ದರೆ, 100ಅನ್ನು ಉತ್ಪಾದಿಸಿದ್ದರೂ ನಿರುದ್ಯೋಗಿಗಳಾಗಿಯೇ ಉಳಿಯುತ್ತಿದ್ದವರಿಗಿಂತ ಇನ್ನೂ 20 ಹೆಚ್ಚು ಕಾರ್ಮಿಕರು ನಿರುದ್ಯೋಗಿಗಳಾಗುತ್ತಾರೆ.

ಆದರೆ, ಒಂದು ಸಮಾಜವಾದಿ ಅರ್ಥವ್ಯವಸ್ಥೆಯಲ್ಲಿ (ಇಲ್ಲಿ ಬಂಡವಾಳಗಾರರಿಲ್ಲ; ಬಂಡವಾಳಗಾರರ ಬಳಕೆಯೂ ಇಲ್ಲ) ಹೂಡಿಕೆಯ ಮೊತ್ತ ಮತ್ತು ವ್ಯವಸ್ಥಾಪಕರೂ ಸೇರಿದಂತೆ ಪ್ರಭುತ್ವದ ಸಿಬ್ಬಂದಿಯ ಬಳಕೆಯ ಒಟ್ಟು ಮೊತ್ತವು 40 ಆಗಿದ್ದರೆ, ಆಗ ಉತ್ಪಾದನೆಯು ಇನ್ನೂ 100 ರಲ್ಲೇ ಇರುತ್ತದೆ. ಅಂದರೆ, ಪೂರ್ಣ ಸಾಮರ್ಥ್ಯದ ಮಟ್ಟದಲ್ಲಿ ಉತ್ಪಾದನೆಯಾಗುತ್ತದೆ ಮತ್ತು ಸೃಷ್ಟಿಯಾಗುವ ಹೆಚ್ಚುವರಿಯ ಹಣವನ್ನು ಕಾರ್ಮಿಕರಿಗೇ ನೀಡಲಾಗುತ್ತದೆ. ಕಾರ್ಮಿಕರಿಗೆ ಸಿಗುವ ಹಣ-ವೇತನಕ್ಕೆ ಹೋಲಿಸಿದರೆ, ಬೆಲೆಗಳ ಕುಸಿತದ ಮೂಲಕ ಅವರು 60 ಪಡೆಯುವಂತೆ ಕಾರ್ಮಿಕರ ಪಾಲನ್ನು ಮೇಲ್ಮುಖವಾಗಿ ಸರಿಹೊಂದಿಸಲಾಗುತ್ತದೆ. ಇದನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಕಾರ್ಮಿಕರ ಪಾಲು ಸ್ವತಂತ್ರವಾಗಿರುವುದರ ಬದಲು, ಯಾವಾಗಲೂ ಪೂರ್ಣ ಸಾಮರ್ಥ್ಯದ ಉತ್ಪಾದನೆ ಸಾಕಾರಗೊಳ್ಳುವ ಮಟ್ಟದಲ್ಲಿ ಹೊಂದಿಕೊಳ್ಳುತ್ತದೆ, ಸ್ವತಃ ಹೊಂದಿಕೊಳ್ಳುತ್ತದೆ.

ಈ ರೀತಿಯಲ್ಲಿ, ಒಂದು ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಒಟ್ಟು ಬೇಡಿಕೆಯಲ್ಲಿ ಕೊರತೆ ಕಂಡುಬಂದ ಸಂದರ್ಭದಲ್ಲಿ ನಿರುದ್ಯೋಗ ಹೆಚ್ಚುತ್ತದೆ. ಆದರೆ, ಒಂದು ಸಮಾಜವಾದಿ ಅರ್ಥವ್ಯವಸ್ಥೆಯಲ್ಲಿ, ಒಟ್ಟು ಬೇಡಿಕೆಯಲ್ಲಿ ಕೊರತೆಯ ಸಮಸ್ಯೆ ಎಂದಿಗೂ ಕಾಡುವುದಿಲ್ಲ. ಏಕೆಂದರೆ, ಅಂತಹ ಯಾವುದೇ ಸಾಧ್ಯತೆಯನ್ನು ಸರಿದೂಗಿಸುವ ರೀತಿಯಲ್ಲಿ ವೇತನದ ಪಾಲನ್ನು ಹೊಂದಿಕೆ ಮಾಡಲಾಗುತ್ತದೆ. ಆದ್ದರಿಂದ, ಉತ್ಪತ್ತಿಗೆ ಹೂಡಿಕೆಯ ಅನುಪಾತವು ಲೌಕಿಕವಾಗಿ ಏರಿದಾಗ, ಉತ್ಪಾದನೆಯಲ್ಲಿ ಆರ್ಥಿಕ ಮಿಗುತಾಯದ ಪಾಲು ಲೌಕಿಕವಾಗಿ ಏರಬಹುದು, ಮತ್ತು ಅದಕ್ಕೆ ಅನುಗುಣವಾಗಿ ಉತ್ಪಾದನೆಯಲ್ಲಿ ವೇತನದ ಪಾಲು ಲೌಕಿಕವಾಗಿ ಕುಸಿಯಬಹುದು. ಆದರೆ, ಅಂತಹ ಸಂದರ್ಭದಲ್ಲಿಯೂ ಸಹ, ಉತ್ಪಾದನಾ ಸಾಧನಗಳ ಒಡೆತನದ ಖಾಸಗಿ ಬಂಡವಾಳಶಾಹಿಗಳು ಅಲ್ಲಿಲ್ಲದ ಕಾರಣ, ಆರ್ಥಿಕ ಮಿಗುತಾಯದ ಈ ಸಂಪೂರ್ಣ ಏರಿಕೆಯು ಪ್ರಭುತ್ವದ ಪಾಲಿಗೆ ಹೋಗುತ್ತದೆ. ಹಾಗಾಗಿ, ವ್ಯಕ್ತಿ ವ್ಯಕ್ತಿಗಳ ನಡುವೆ ಆದಾಯದ ಅಥವಾ ಸಂಪತ್ತಿನ ಅಸಮಾನತೆ ಹೆಚ್ಚುವುದೇ ಇಲ್ಲ.

ಹೀಗೆ ಸಮಾಜವಾದಿ ವ್ಯವಸ್ಥೆಯ ಕಾರ್ಯನಿರ್ವಹಣೆಯ ತರ್ಕವೇನೆಂದರೆ, ಅದು ಯಾವುದೇ ಅತಿಯಾದ ಉತ್ಪಾದನಾ ಬಿಕ್ಕಟ್ಟುಗಳು ಉಂಟಾಗದಂತೆ, ನಿರುದ್ಯೋಗ ಸೃಷ್ಟಿಯಾಗದಂತೆ ಮತ್ತು ವ್ಯಕ್ತಿ ವ್ಯಕ್ತಿಗಳ ನಡುವೆ ಆದಾಯ ಅಥವಾ ಸಂಪತ್ತಿನ ಅಸಮಾನತೆ ಉಂಟಾಗದಂತೆ ನೋಡಿಕೊಳ್ಳುತ್ತದೆ, ಅಂದರೆ, ಅಂತಹ ಪ್ರವೃತ್ತಿಗಳನ್ನು ಚಿವುಟಿ ಹಾಕುತ್ತದೆ. ಅಷ್ಟೇ ಅಲ್ಲದೆ, ಅಗಾಧ ಅಸಮಾನತೆಯಿಂದ ಕೂಡಿದ್ದ ಹಿಂದಿನ ವ್ಯವಸ್ಥೆಯಿಂದ ಸಮಾನತಾವಾದಿ ವ್ಯವಸ್ಥೆಗೆ ಹೊಂದಿದ ಪರಿವರ್ತನೆಯು ಒಂದು ಸಣ್ಣ ಅವಧಿಯಲ್ಲಿ ಸಂಭವಿಸಿತು. ಈ ಬಗ್ಗೆ, ಆಕ್ಸ್‌ಫಾಮ್ ಸಂಸ್ಥೆಯ ಮ್ಯಾಕ್ಸ್ ಲಾಸನ್ ಅವರ ಜೊತೆಯಲ್ಲಿ ಸಂವಾದದಲ್ಲಿ ತೊಡಗಿದವರೊಬ್ಬರು ಹೇಳುತ್ತಾರೆ: “ಹೆತ್ತವರು ಅನಕ್ಷರಸ್ಥರಾಗಿದ್ದರು ಮತ್ತು ಅವರ ಮಕ್ಕಳು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದರು”.

ಸಮಾನತೆಯ ಸಮಾಜದಲ್ಲಿ ಸೃಜನಶೀಲತೆ ಪ್ರಕಟಗೊಳ್ಳುವುದು ಸಾಧ್ಯವಿಲ್ಲ ಎಂದೇ ಕೆಲವರು ನಂಬುತ್ತಾರೆ ಮತ್ತು ಅಂತಹ ಸಮಾಜವು ಸೃಜನಶೀಲತೆಯನ್ನು ಪ್ರೋತ್ಸಾಹಿಸುವುದಿಲ್ಲ ಎಂದೂ ಹೇಳುತ್ತಾರೆ. ಈ ಅಭಿಪ್ರಾಯವು ಎರಡು ಸ್ಪಷ್ಟ ಕಾರಣಗಳಿಂದಾಗಿ ದೋಷಪೂರಿತವಾಗಿದೆ. ಮೊದಲನೆಯದು, ಹಣವೇ ಸೃಜನಶೀಲ ಪ್ರಯತ್ನಗಳ ಚಿಲುಮೆ ಎಂದು ನಂಬುವುದು ದೃಷ್ಟಿ ದೋಷವಾಗುತ್ತದೆ. ಈ ಅಂಶವನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಈ ವಾದವು, ಮನುಷ್ಯ ಸ್ವಭಾವವನ್ನು ಬೂರ್ಜ್ವಾ ವ್ಯವಸ್ಥೆಯಲ್ಲಿ ಅದು ಪ್ರಕಟಗೊಂಡ ಮಟ್ಟವೇ ಅದರ ಮಿತಿ ಎಂದು ಊಹಿಸಿಕೊಳ್ಳುವ ಮೂಲಕ ಬೂರ್ಜ್ವಾ ವ್ಯವಸ್ಥೆಯನ್ನು ಸಮರ್ಥಿಸುತ್ತದೆ. ಎರಡನೆಯ ಕಾರಣವೆಂದರೆ, ಬಹಳ ಮಂದಿ ಶಿಕ್ಷಣದಿಂದ ಮತ್ತು ಉದ್ಯೋಗಾವಕಾಶಗಳಿಂದ ವಂಚಿತರಾಗುವ ಮತ್ತು ರೋಗ ರುಜಿನಗಳಿಂದ ನರಳುವ ಪರಿಸ್ಥಿತಿಯಿಂದಾಗಿ ಅದೆಷ್ಟು ಅಗಾಧ ಪ್ರಮಾಣದ ಸೃಜನಶೀಲತೆ ನಾಶಗೊಳ್ಳುತ್ತದೆ ಎಂಬುದರ ಲೆಕ್ಕಾಚಾರವನ್ನೇ ಮಾಡುವುದಿಲ್ಲ.

ಅನು: ಕೆ.ಎಂ. ನಾಗರಾಜ್

Donate Janashakthi Media

Leave a Reply

Your email address will not be published. Required fields are marked *