ಅಳಂದ: ಪ್ರಾರ್ಥನಾ ಮಂದಿರವೊಂದರಲ್ಲಿರುವ ಶಿವಲಿಂಗ ಶುದ್ಧಿ ಮತ್ತು ಪೂಜೆಗೆ ಹಿಂದೂಪರ ಕಾರ್ಯಕರ್ತರಿಂದ ಆಳಂದ ಚಲೋ ಹಮ್ಮಿಕೊಂಡಿದ್ದರು. ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಲಬುರಗಿ ಹೊರವಲಯದ ಕೋಟನೂರು ಬಳಿ ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಆಂದೋಲ ಸಿದ್ದಲಿಂಗ ಸ್ವಾಮೀಜಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಕಲಬುರಗಿ ಜಿಲ್ಲೆ ಪ್ರವೇಶಿಸದಂತೆ ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರಗೆ ನಿರ್ಬಂಧ ವಿಧಿಸಲಾಗಿದೆ.
ಹಿಂದೂಪರ ಕಾರ್ಯಕರ್ತರಿಂದ ಆಳಂದ ಚಲೋ ಹಿನ್ನೆಲೆ ಕಲಬುರಗಿ, ಆಳಂದ ನಗರದಲ್ಲಿ ಪೊಲೀಸರು ಬಿಗಿ ಭದ್ರತೆಯನ್ನು ಕೈಗೊಂಡಿದ್ದರು. ಆಳಂದ ತಾಲೂಕು, ಕಲಬುರಗಿಯ ಕೆಲವೆಡೆ ನಿಷೇಧಾಜ್ಞೆ ಜಾರಿಯಲ್ಲಿದೆ. ಆಳಂದ ಪಟ್ಟಣದಾದ್ಯಂತ ಪೊಲೀಸರು ಹೆಚ್ಚಿನ ಕಟ್ಟೆಚ್ಚರ ವಹಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಎಲ್ಲಡೆ ಪೊಲೀಸರ ನಿಯೋಜನೆ ಮಾಡಲಾಗಿದೆ. ದರ್ಗಾ ಬಳಿ ಬರೋರನ್ನು ತಪಾಸಣೆ ಮಾಡುತ್ತಿರುವ ಪೊಲೀಸರು, ನಿಷೇದಾಜ್ಞೆ ಹಿನ್ನೆಲೆಯಲ್ಲಿ ಗುಂಪು ಗೂಡುವಿಕೆಗೆ ನಿರ್ಬಂಧ ವಿಧಿಸಿದ್ದಾರೆ.
ಆಳಂದನಲ್ಲಿರುವ ಲಾಡ್ಲೆ ಮಶಾಕ್ ದರ್ಗಾ ಬಳಿ ಇರುವ ರಾಘವ ಚೈತನ್ಯ ಶಿವಲಿಂಗಕ್ಕೆ ಪೂಜೆ ನಡೆಸಲು ಹಿಂದೂ ಕಾರ್ಯಕರ್ತರು ನಿರ್ಧರಿಸಿದ್ದರು. ದರ್ಗಾದ ಸಂದಲ ಕೂಡಾ ಇಂದೇ ಇರೋದರಿಂದ ಹೆಚ್ಚಿನ ಪೊಲೀಸ್ ನಿಯೋಜನೆ ಮಾಡಲಾಗಿದೆ. ರಾಘವ ಚೈತನ್ಯ ಲಿಂಗಕ್ಕೆ ಪೂಜೆ ಮಾಡಲು ಹಿಂದೂಪರ ಕಾರ್ಯಕರ್ತರು ಮುಂದಾಗಿದ್ದಾರೆ. ಆದರೆ ಜಿಲ್ಲಾಡಳಿತ ಕೇವಲ ಹತ್ತು ಜನರಿಗೆ ಮಾತ್ರ ಪೂಜೆಗೆ ಅವಕಾಶ ನೀಡಿದೆ. ಈಗಾಗಲೇ ಜಿಲ್ಲೆಗೆ ಪ್ರಮೋದ್ ಮುತಾಲಿಕ್, ಚೈತ್ರಾ ಕುಂದಾಪುರಗೆ ನಿರ್ಬಂಧ ವಿಧಿಸಲಾಗಿದೆ. ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಗೆ ಆಳಂದ ತಾಲೂಕು ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ಈ ಮೊದಲೇ ಆಳಂದ ಪ್ರವೇಶಕ್ಕೆ ಸ್ವಾಮೀಜಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು. ಜಿಲ್ಲೆಯ ಆಳಂದ ಪಟ್ಟಣದಲ್ಲಿ ಮಾರ್ಚ್ 3 ರವರೆಗೆ ನಿಷೇಧಾಜ್ಞೆ ಜಾರಿಯಾಗಿದೆ. ಹೀಗಿದ್ದರೂ ಮಹಾಶಿವರಾತ್ರಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಆದೇಶ ಉಲ್ಲಂಘಿಸಿ ಜಿಲ್ಲೆಗೆ ಪ್ರವೇಶಿಸಲು ಯತ್ನಿಸಿದ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಅವರನ್ನು ಶಹಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲಂದದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಇತ್ತ ದರ್ಗಾ ಪ್ರವೇಶ ಮಾಡದಂತೆ ಅಲ್ಪಸಂಖ್ಯಾತ ಯುವಕರ ಗುಂಪು ತಲವಾರ್ ಹಿಡಿದು ಕುಳಿತಿದ್ದರೆ, ಅತ್ತ ದರ್ಗಾ ಪ್ರವೇಶ ಮಾಡೇ ಮಾಡ್ತಿವಿ ಎಂದು ಕೇಸರಿ ನಾಯಕರು ಪಟ್ಟು ಹಿಡಿದು ಕುಳಿತಿದ್ದಾರೆ.
ಲಾಡ್ಲ್ ಮಶಕ್ ದರ್ಗಾದಲ್ಲಿ ಶಬ್-ಎ-ಬರಾತ್ ಹಬ್ಬವನ್ನು ಸಹ ಆಚರಿಸಲಾಗುತ್ತದೆ. ವಿಷಯದ ಸೂಕ್ಷ್ಮತೆಯನ್ನು ಪರಿಗಣಿಸಿ, ವಿಸ್ತಾರವಾದ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಆಳಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ರಾಘವ ಚೈತನ್ಯ ಲಿಂಗಕ್ಕೆ ಪೂಜೆಗೆ ಅವಕಾಶ ನೀಡಲು ಆಗ್ರಹಿಸಿ ಧರಣಿ ನಡೆಸಲಾಗಿದೆ. ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ಧರಣಿಯಲ್ಲಿ ಭಾಗಿಯಾಗಿದ್ದಾರೆ.