ರಾಮನಗರ: ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು 38 ಮಂದಿ ವಿರುದ್ಧ ರಾಮನಗರದ ಐಜೂರು ಪೊಲೀಸ್ ಠಾಣೆಯಲ್ಲಿ ರಾಮನಗರ ತಹಸೀಲ್ದಾರ್ ವಿಜಯ್ ಕುಮಾರ್ ದೂರು ದಾಖಲಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೊದಲ ಆರೋಪಿಯಾನ್ನಾಗಿಸಲಾಗಿದೆ. ನಂತರದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಂಸದ ಡಿ.ಕೆ. ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್. ರವಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ, ಸಲೀಂ ಅಹಮ್ಮದ್, ಮೊಹಮ್ಮದ್ ನಲಪ್ಪಾಡ್ ಹ್ಯಾರಿಸ್, ಈಶ್ವರ ಖಂಡ್ರೆ, ರಾಮಲಿಂಗಾರೆಡ್ಡಿ, ಎಂ.ಬಿ. ಪಾಟೀಲ, ಯು.ಟಿ. ಖಾದರ್, ಕೆ.ಎಚ್. ಮುನಿಯಪ್ಪ, ಚಿತ್ರ ನಟರಾದ ಸಾಧುಕೋಕಿಲ, ನೆನಪಿರಲಿ ಪ್ರೇಮ್ ಮತ್ತಿತರರ ವಿರುದ್ಧ ರಾಮನಗರದ ಐಜೂರು ಠಾಣೆ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ.
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ 2ನೇ ಹಂತದ ಪಾದಯಾತ್ರೆ ಸೋಮವಾರ ಬಿಡದಿಯ ಬಾಲಗಂಗಾಧರನಾಥ ಸ್ವಾಮೀಜಿ ಸರ್ಕಲ್ ಬಳಿಯಿಂದ ಹೊರಟಿತು. ಕರ್ನಾಟಕ ಸಾಂಕ್ರಾಮಿಕ ರೋಗದ ಅಧಿನಿಯಮ ಅಡಿ 38 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಅನುಮತಿ ಪಡೆಯದೆ ಕೋವಿಡ್ ನಿಯಮಾವಳಿ ಗಾಳಿಗೆ ತೂರಿ ಮೇಕೆದಾಟು ಪಾದಯಾತ್ರೆ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಭಾನುವಾರದಿಂದ ಆರಂಭವಾದ ಪಾದಯಾತ್ರೆಯ ವಿಚಾರವಾಗಿ ಮೇಕೆದಾಟುನಲ್ಲಿ ಎಫ್ಐಅರ್ ಹಾಕಲಾಗಿದೆ ಎಂದು ತಿಳಿದುಬಂದಿದೆ.