ವಿಜಯಪುರ: ರಾಜ್ಯದಲ್ಲಿ ದಿನೇ ದಿನೇ ಭಾವೈಕ್ಯತೆಗೆ ಬೆಂಕಿ ಹಾಕುವ ಕೆಲಸ ನಡೆಯುತ್ತಲೇ ಇದೆ. ಹಿಜಾಬ್, ಕೇಸರಿ ಶಾಲು, ಟರ್ಬನ್ ವಿವಾದದ ಮೂಲಕ ಮಕ್ಕಳನ್ನು ಬಳಸಿಕೊಂಡು ಕೋಮು ದಳ್ಳುರಿ ಸೃಷ್ಟಿಸುವ ಕೆಲಸ ನಡೆಯುತ್ತಿದೆ. ಈಗ ಅಂತಹದ್ದೆ ಘಟನೆ ಮತ್ತೆ ನಡೆದಿದೆ.
ಹೌದು ವಿಜಯಪುರದ ಎಬಿವಿಪಿ ನಗರ ಪ್ರಮುಖರಾದ ಪೂಜಾ ವೀರಶೆಟ್ಟಿ ವಿವಾದಾತ್ಮಕ ಭಾಷಣ ಸಾಕ್ಷಿಯಾಗಿದೆ. ಆ ಭಾಷಣ ಎಲ್ಲೆಡೆ ವೈರಲ್ ಆಗಿದೆ.
ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಖಂಡಿಸಿ ವಿಜಯಪುರದಲ್ಲಿ ಇತ್ತೀಚಿಗೆ ಹಿಂದೂಪರ ಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ವಿವಾದಾತ್ಮಕ ಮಾತುಗಳನ್ನು ಆಡಿದ್ದಾರೆ. ಆ ಮಾತುಗಳು ಈ ಕೆಳಗಿನಂತಿವೆ
‘ಭಾರತವನ್ನು ಹಿಜಾಬ್‌ಮಯ ಮಾಡಲು ಬಂದರೆ ಛತ್ರಪತಿ ಶಿವಾಜಿ ಕೈಯಲ್ಲಿರುವ ಖಡ್ಗದಿಂದ ಇಂಚಿಂಚಾಗಿ ಕಡಿಯುತ್ತೇವೆ’ ‘ಹರ್ಷಾ ಕೊಲೆ ಆರೋಪಿಗಳನ್ನು ಪೊಲೀಸರು 24 ತಾಸುಗಳಲ್ಲಿ ಬಂಧಿಸಿರುವುದು ಖುಷಿ ನೀಡಿದೆ. ಆದರೆ, ಬರಿ ಆರೋಪಿಗಳ ಬಂಧನವಾದರೆ ಸಾಲದು, ಅವರಿಗೆ ತಕ್ಕ ಶಿಕ್ಷೆಯಾಗಬೇಕು. ನಿಮ್ಮ ಕೈಯಲ್ಲಿ ಆಗದಿದ್ದರೆ ನಮ್ಮ ಕೈಗೆ 24 ತಾಸು ಅಲ್ಲ, ಒಂದು ತಾಸು ಅಧಿಕಾರ ಕೊಟ್ಟು ನೋಡಿ, ಮಾಡಿ ತೋರಿಸುತ್ತೇವೆ’ ಎಂದು ಪ್ರಚೋದಿತ ಮಾತುಗಳನ್ನಾಡಿದ್ದಾರೆ.
ಇದು ಪೂಜಾ ವೀರಶೆಟ್ಟಿ ಆವೇಶಭರಿತವಾಗಿ ಆಡಿದ ಮಾತುಗಳಾ ಅಥವಾ, ಸೌಹಾರ್ದತೆ ಕದಡಬೇಕು ಎಂಬ ಉದ್ದೇಶದಿಂದ ಯಾರಾದರೂ ಹೇಳಿಕೊಟ್ಟು ಮಾತುಗಳಾ ಎಂಬುದು ಮುಖ್ಯವಾಗಿದೆ.
ಈ ವಿಡಿಯೊ ಇಷ್ಟೆಲ್ಲ ವೈರಲ್ ಆಗಿದ್ದರೂ ಪೊಲೀಸರು ಕನಿಷ್ಟ ವಿಚಾರಣೆ ನಡೆಸುವ ಕೆಲಸವನ್ನು ಮಾಡಿಲ್ಲ. ಬಹಿರಂಗವಾಗಿ ಒಂದು ಸಮುದಾಯವನ್ನು ಕೊಲ್ಲುವ ಹೇಳಿಕೆ ನೀಡಿರುವ ಪೂಜಾ ವಿರುದ್ದ ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂಬ ಕೂಗು ಕೇಳಿ ಬರುತ್ತಿದೆ.
ಎರಡು ಮತೀಯ ಸಂಘಟನೆಗಳ ಕೈಯಲ್ಲಿ ಸಿಕ್ಕಿರುವ ವಿದ್ಯಾರ್ಥಿಗಳನ್ನು ಹೇಗಂದರಂತೆ ಹಾಗೆ ಬಳಸಿಕೊಳ್ಳಲಾಗುತ್ತಿದೆ. ಪೋಷಕರು ಕೂಡಾ ಎಚ್ಚರಿಕೆ ವಹಿಸಬೇಕು ಎಂದ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಇಂತಹ ಪ್ರಚೋದಿತ ಪೋಸ್ಟ್, ಹೇಳಿಕೆ ನೀಡಿದರೆ ಬಂಧಿಸುವುದಾಗಿ ಪೊಲೀಸ್ ಇಲಾಖೆ ಹೇಳಿತ್ತು. ಚಿತ್ರನಟ, ಹಾಗೂ ಹೋರಾಟಗಾರ ಚೇತನ್ ವಿವಾದಾತ್ಮಕ ಪೋಸ್ಟ್ ಹಾಕಿದ್ದಾರೆ ‘ಸ್ವಯಂ ದೂರು’ ದಾಖಲಿಸಿಕೊಂಡ ಪೊಲೀಸರಿಗೆ ಪೂಜಾರವರು ಮಾತುಗಳು ಕಿವಿಗೆ ಬಿದ್ದಂತೆ ಕಾಣುತ್ತಿಲ್ಲ. ಈ ತಾರತಮ್ಯವನ್ನು ಪೊಲೀಸ್ ಇಲಾಖೆ ನಿಲ್ಲಿಸಬೇಕು. ಪ್ರಚೋದಿತ ಮಾತುಗಳನ್ನು ಯಾರೇ ಆಡಿದ್ದರು ಅವರ ಮೇಲೆ ಕ್ರಮ ಜರುಗಿಸುವ ಮೂಲಕ ಸೌಹಾರ್ದತೆಯನ್ನು ಕಾಪಾಡುವ ಕೆಲಸಕ್ಕೆ ಮುಂದಾಗಬೇಕಿದೆ.