ಬೆಂಗಳೂರು : ರಾಜ್ಯದ ಬಜೆಟ್ ನಲ್ಲಿ ದಲಿತರ ಜನಸಂಖ್ಯೆ ಆಧಾರದಲ್ಲಿ ಅನುಧಾನ ನೀಡಬೇಕು, ಎಸ್.ಸಿ.ಎಸ್ಪಿ ಮತ್ತು ಟಿ.ಎಸ್.ಪಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು, ಭೂ ವಂಚಿತ ದಲಿತರಿಗೆ ಭೂಮಿ ನೀಡುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿಯಿಂದ ವಿಧಾನಸೌಧ ಚಲೋ ನಡೆಸಲಾಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಅರಳಹಳ್ಳಿ ಮಾತನಾಡುತ್ತಾ, ಸರ್ಕಾರ ದಲಿತರ ಪರ ಬಜೆಟ್ ಮಂಡಿಸಬೇಕು. ರಾಜ್ಯದ ಬಜೆಟ್ನಲ್ಲಿ ಪ್ರತಿ ವರ್ಷ ಸಕಾರ ದಲಿತರ ಅಭಿವೃದ್ಧಿಗೆ ಅನುಧಾನ ಒದಗಿಸುತ್ತದೆ.
2019-20 ರಲ್ಲಿ 27,558.60 ಕೋಟಿ ರೂ, 2020-21 ರಲ್ಲಿ 27,699.52 ಕೋಟಿ ರೂ, 2021-22 ರಲ್ಲಿ 26, 005.01 ಕೋಟಿ ಹಣ ಒದಗಿಸಿದೆ ಎಂದು ತಿಳಿಸಿದೆ. ಆದರೆ ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ಇತರೆ ನಿಗಮಗಳಿಗೆ ನೀಡಬೇಕಾದ ಹಣನ್ನೇ ನೀಡಿಲ್ಲ ಹಾಗಾಗಿ ನಿಗಮಗಳು ಸೊರಗುತ್ತಿವೆ ಎಂದರು.
12 ಸಾವಿರಕ್ಕೂ ಹೆಚ್ಚು ದಲಿತರು ಭೂಮಿಗಾಗಿ ಅರ್ಜಿ ಹಾಕಿಕೊಂಡು ಬಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ದಲಿತರಿಗೆ 2 ಎಕರೆ ಭೂಮಿ ನೀಡುವ ಭೂ ಒಡೆತನ ಯೋಜನೆಯಲ್ಲಿ ಎಷ್ಟು ಸಾವಿರ ಜನರಿಗೆ ಭೂಮಿ ನೀಡಿದ್ದಿರಿ. ಎಷ್ಡು ಸಾವಿರ ಜನರಿಗೆ ಬೋರ್ ವಲ್ ಒದಗಿಸಿದ್ದೀರಿ.ಕೊಳವೆ ಬಾವಿಗಾಗಿ 50 ಸಾವಿರ ಜನ ಅರ್ಜಿ ಹಾಕಿದ್ದಾರೆ. ಕಳೆದ ಮೂರು ವರ್ಷ ಹಿಂದೆ ಹಾಕಿದ ಬೊರ್ವೆಲ್ಗೆ ಕರೆಂಟ್ ಒದಗಿಸಿಲ್ಲ. ಅದರಲ್ಲಿ 94% ಪ್ರಗತಿ ಸಾಧಿಸಿದ್ದೇವೆಂದು ಮುಖ್ಯಮಂತ್ರಿ ಬೊಮ್ಮಾಯಿಯವರು ಹೇಳುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಶ್ವೇತ ಪತ್ರ ಹೊರಡಿಸಲಿ ಎಂದರು.
ಮತ್ತೋರ್ವ ಹಿರಿಯ ಮುಖಂಡ ನಿತ್ಯಾನಂದ ಸ್ವಾಮಿ ಮಾತನಾಡಿ, ಸಣ್ಣ ಮತ್ತು ಮಧ್ಯಮ ಸಣ್ಣ ಪ್ರಮಾಣದ ವ್ಯಾಪಾರಕ್ಕೆ ಕೋವಿಡ್ನಿಂದ ಸಂಪಾದನೆ ಇಲ್ಲವಾಗಿದೆ. ಸಣ್ಣ ಪ್ರಮಾಣದ ಸಾಲವು ಸಿಗಲಿಲ. ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ವಿದ್ಯಾರ್ಥಿ ವೇತನ ಸಿಗಬೇಕು, ಹಾಸ್ಟಲ್ಗಳಲ್ಲಿ ಮೂಲ ಭೂತ ಸೌಕರ್ಯಕ್ಕೆ ಆದ್ಯೆತೆ ನೀಡಬೇಕು. ಈ ಬಜೆಟ್ನಲ್ಲಾದರು ಜನರ ಬೇಡಿಕೆಗಳನ್ನು ಆದ್ಯತೆ ಮೇಲೆ ಅನುಧಾನ ಒದಗಿಸಿ ಜಾರಿಗೊಳಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಹಾಸನ ಜಿಲ್ಲಾ ಮುಖಂಡ ಪೃಥ್ವಿ ಎಂ.ಜಿ ಮಾತನಾಡಿ, ಅರಕಲಗೂಡು ತಾಲ್ಲೂಕಿನ ‘ಗಂಗೂರು ಜೀತವಿಮುಕ್ತ ದಲಿತರಿಗೆ ಉಳುಮೆ ಭೂಮಿ ಮಂಜೂರು ಮಾಡವಂತೆ ರಾಜ್ಯ ಸರಕಾರ ಕೂಡಲೇ ಕ್ರಮವಹಿಸಬೇಕು ಎಂದರು.
ಪ್ರತಿಭಟನೆಯಲ್ಲಿ CITU. ರಾಜ್ಯ ಉಪಾಧ್ಯಕ್ಷ ಡಾ.ಕೆ ಪ್ರಕಾಶ್, DHS ಮುಖಂಡರಾದ ಸುಧಾಮ್ ದಿನ್ನಿ, ಪಾಂಡುರಂಗ್, ರಾಜಣ್ಣ, ಕೃಷ್ಣ, ಎನ್. ನಾಗರಾಜ್ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪ್ರತಿಭಟನೆಕಾರರು ಆಗಮಿಸಿದ್ದರು.