ಕೆ.ಎಸ್. ವಿಮಲ
ಈಗಿನ ಸನ್ನಿವೇಶದಲ್ಲಿ ಯಾವುದೇ ಧಾರ್ಮಿಕ ಮೂಲಭೂತವಾದದ ಹಿಡಿತಕ್ಕೆ ಸಿಲುಕದಂತೆ ಹೆಣ್ಣು ಮಕ್ಕಳನ್ನು ಕಾಪಾಡುವ ಮತ್ತು ಅವರ ಶಿಕ್ಷಣದ ಹಕ್ಕು ಮತ್ತು ಆಯ್ಕೆಯ ಸ್ವಾತಂತ್ರ್ಯಕ್ಕೆ ಚ್ಯುತಿ ಬಾರದಂತೆ ಒಕ್ಕೊರಲಿನಿಂದ ಕೇಳಬೇಕಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದಲ್ಲಿ ದೇಶದ ಬಹುದೊಡ್ಡ ಮಹಿಳಾ ಸಂಘಟನೆಯಾದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಮೂಲಕ ಪ್ರವೇಶಿಸಿದೆ ಮತ್ತು ಉಚ್ಚ ನ್ಯಾಯಾಲಯಕ್ಕೆ ಫೆಬ್ರುವರಿ 05 ರಂದು ಹೊರಡಿಸಿದ ಸರಕಾರದ ಆದೇಶವನ್ನು ರದ್ದು ಮಾಡಲು ಕೋರಿಕೊಳ್ಳುತ್ತಿದೆ.
ಹೊಸತೊಂದು ವಿವಾದ
ಬತ್ತಳಿಕೆಯ ಬಾಣ ಖಾಲಿಯಾಗುವುದೇ ಇಲ್ಲದಷ್ಟು, ವಿವಾದಗಳ ಬಾಣಗಳು ಬಂದು ಬಂದು ಜನರ ಮೇಲೆ ಎರಗುತ್ತಿವೆ. ಒಂದರ ಹಿಂದೊಂದರಂತೆ ಲವ್ ಜಿಹಾದ್, ಮತಾಂತರ, ಮರ್ಯಾದೆಯ ಹೆಸರಿನ ಹತ್ಯೆಗಳು ಈಗ ಶಿರವಸ್ತ್ರ. ಯಾಕೆ ಇದು ಹೀಗೆ ಎಂದು ಯಾರೂ ಅಚ್ಚರಿಪಡುವ ಪ್ರಮೇಯವೇ ಇಲ್ಲ, ಪ್ರಭುತ್ವದ ಗುಣವಿದು. ಜನರ ಸಮಸ್ಯೆಗಳನ್ನು ಪರಿಹರಿಸಲಾಗದಾಗ ಜನರನ್ನೇ ಇನ್ನೊಂದು ರೀತಿಯ ಸಮಸ್ಯೆ ಕಡೆ ದೂಡಿಬಿಡುವುದು. ಅದರಲ್ಲಿಯೂ ಧರ್ಮ ದೇವರು ಭಾಷೆ ಇತ್ಯಾದಿ ಜನರ ಮನಸ್ಸಿಗೆ ತಟ್ಟುವ ಅಥವಾ ಭಾವುಕ-ಭ್ರಾಮಕ ವಿಷಯಗಳನ್ನು ಮುಂದೆ ಮಾಡಿಟ್ಟು ಅದರಿಂದ ಉರಿಯುವ ಬೆಂಕಿಯಲ್ಲಿ ಪ್ರಭುತ್ವ ಚಳಿ ಕಾಯಿಸಿಕೊಳ್ಳುವುದು. ಈಗ ನಮ್ಮ ಸುತ್ತಮುತ್ತ ನಡೆಯುತ್ತಿರುವ ಶಿರವಸ್ತ್ರ ವಿದ್ಯಮಾನಗಳು ಮತ್ತು ಅವುಗಳು ತೆಗೆದುಕೊಳ್ಳುತ್ತಿರುವ ತಿರುವುಗಳು ಕಮಟು ರಾಜಕಾರಣದ ವಾಸನೆಯನ್ನು ಬೀರುತ್ತಿವೆ ಎಂದು ಹೇಳದೇ ಗತ್ಯಂತರವಿಲ್ಲ.
ಘಟನೆಯ ವಿವರಗಳು ಈಗಾಗಲೇ ಎಲ್ಲರಿಗೂ ಗೊತ್ತಿದೆ. ಉಡುಪಿ ಸರಕಾರಿ ಪಿಯು ಕಾಲೇಜಿನ ನಾಲ್ಕಾರು ವಿದ್ಯಾರ್ಥಿನೀಯರು ಹಿಜಾಬ್ ಧರಿಸಿಯೇ ಕುಳಿತುಕೊಳ್ಳಲು ಬೇಡಿಕೆ ಇಟ್ಟರು. ಅದು ಮಾನ್ಯವಾಗಲಿಲ್ಲ, ಅವರ ಜೊತೆ ಮಾರನೇ ದಿನ ಇನ್ನಷ್ಟು ವಿದ್ಯಾರ್ಥಿನೀಯರು ಸೇರಿಕೊಂಡರು. ನಂತರ ಕಾಲೇಜು ಆಡಳಿತ ಉಳಿದವರ ಮನ ಒಲಿಸಿತು, ಕೆಲವರು ಹಠ ಹಿಡಿದರು. ಹೊತ್ತಿದ್ದು ಸಣ್ಣ ಕಿಡಿ, ಅಲ್ಲಿಯೇ ನೀರು ಸಿಗದಿದ್ದರೆ ಪಕ್ಕದ ಮರದಿಂದ ನಾಲ್ಕಾರು ಹಸಿ ಸೊಪ್ಪು ಹಾಕಿದ್ದರೂ ಅಲ್ಲಿಯೇ ತಣ್ಣಗಾಗುತ್ತಿತ್ತು. ಆದರೆ, ಕಿಡಿ ಹೊತ್ತಿಸಿದವರಿಗೆ ಅದರ ಬೆಂಕಿಯ ಶಾಖದಿಂದ ಮುಂದಿನ ಮತ್ತು ಬೆಂಕಿಗೆ ಪೆಟ್ರೊಲ್ ಸುರಿದವರಿಗೆ ಅದರ ಮುಂದಿನ ವರ್ಷದ್ದೂ ಸೇರಿದಂತೆ ಲಾಭ ಪಡೆಯಲಿತ್ತು. ಅದೀಗ ರಾಜ್ಯವ್ಯಾಪಿ ತನ್ನ ನೆಲೆ ಕಂಡುಕೊಳ್ಳುವತ್ತ ದಾಪುಗಾಲಿಟ್ಟಿದೆ.
ಮತಾಂಧರ ಕೈಗೆ ಸಿಕ್ಕ ಅಸ್ತ್ರ
ಈ ಶಿರವಸ್ತ್ರ, ಬುರ್ಖಾಗಳಂಥಹ ಹೆಣ್ಣುಮಕ್ಕಳ ಉಡುಗೆಯನ್ನೇ ಗುರಿಯಾಗಿಸಿ ಆಗಾಗ ಇಂತಹ ಕಿರಿಕಿರಿ ಕರ್ನಾಟಕದಲ್ಲಿ ನಡೆಯುತ್ತಲೇ ಇವೆ. ಎಲ್ಲೆಲ್ಲಿ ತಮ್ಮ ನೆಲೆಯನ್ನು ವಿಸ್ತರಿಸಬೇಕೋ ಹಾಗೂ ಬೇರಿಳಿಸಬೇಕೋ ಅಲ್ಲೆಲ್ಲ ಆಗಾಗ ಇಂಥಹ ಸಣ್ಣ ವಿಷಯಗಳನ್ನೇ ದೊಡ್ಡದು ಮಾಡಿ ಗದ್ದಲ ಎಬ್ಬಿಸುವುದು 2010-11 ರಿಂದಲೇ ನಡೆಯುತ್ತಿದೆ. ಪಡ್ಡೆ ಹುಡುಗರ ತಲೆಗೆ ಕೋಮುವಿಷ ತುಂಬಲು ಒಂದು ಒಳ್ಳೆಯ ಅಸ್ತ್ರ ಕೇಸರಿ ಶಾಲು ಎಂಬಂತೆ ಈ ವಿದ್ಯಮಾನಗಳು ನಡೆಯುತ್ತಿವೆ. ಚುನಾವಣೆಯ ಮೊದಲ ಮತದಾರರನ್ನು ತಮ್ಮತ್ತ ಸೆಳೆಯುವ ಮತ್ತು ಕೋಮುಧೃವೀಕರಣಕ್ಕೆ ಇದು ಒಂದು ತಂತ್ರವೂ ಹೌದು ಎಂಬುದು ಈಗಾಗಲೇ ಸ್ಪಷ್ಟವಾಗಿರುವ ಸಂಗತಿ. ಆದರೆ ಹೀಗೆ ಮೇಲ್ನೋಟಕ್ಕೆ ಕಾಣುವ ಸಂಗತಿಯಡಿ ಮಹಿಳೆಯರ ಅದರಲ್ಲಿಯೂ ಮುಸ್ಲಿಂ ಮಹಿಳೆಯರು ಮೂಲಭೂತವಾದೀ ಶಕ್ತಿಗಳ ಹಿಡಿತಕ್ಕೆ ಇನ್ನಷ್ಟು ಒಳಗಾಗುತ್ತಿರುವುದು ಸುಸ್ಪಷ್ಟ. ಯಾಕೆಂದರೆ, ಈ ನೆಲದಲ್ಲಿ ಬೇಕಷ್ಟು ಜನ ಮುಸ್ಲಿಂ ಮಹಿಳೆಯರು ಸ್ತ್ರೀ ಸ್ವಾತಂತ್ರ್ಯದ ಪರವಾಗಿ, ಸಮಾನ ಅವಕಾಶ ನೀಡಿದ ಸಂವಿಧಾನದ ಅಡಿಯಲ್ಲಿ ಬದುಕುವ ತಮ್ಮ ಹಕ್ಕನ್ನು ಸ್ಥಾಪಿಸಿಕೊಳ್ಳುವ ನಿಟ್ಟಿನಲ್ಲಿ ಕೋಮಿನ ಮತೀಯ, ಮೂಲಭೂತವಾದಿಗಳಿಗೆ ಸವಾಲೊಡ್ಡಿ ಅಪಾರ ಕಷ್ಟಗಳನ್ನು ಮೂದಲಿಕೆಗಳನ್ನೂ ಎದುರಿಸಿ ನಿಂತವರಿದ್ದಾರೆ. ಆದರೆ, ಆಂತರ್ಯದಲ್ಲಿ ಒಬ್ಬರಿಗೊಬ್ಬರು ಪೂರಕವಾಗಿಯೇ ನಡೆದುಕೊಳ್ಳುವ ಕೋಮುವಾದಿ ಮತ್ತು ಮೂಲಭೂತವಾದಿ ಶಕ್ತಿಗಳು ತಮ್ಮ ತಮ್ಮ ನೆಲೆಯನ್ನು ಭದ್ರಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಇಂತಹ ಪ್ರಯತ್ನಗಳನ್ನು ಕೈ ಬಿಡದೆಯೇ ಮುಂದುವರೆಸುತ್ತಿದ್ದಾರೆ. ಇದರ ಭಾಗವಾಗಿಯೇ ಇಂದು ಶಿರವಸ್ತ್ರದ ಪ್ರಕರಣದಲ್ಲಿ ಮೇಲಿಂದ ಮೇಲೆ ಅಗತ್ಯ ಧಾರ್ಮಿಕ ಆಚರಣೆ (ಎಸೆನ್ಸಿಯಲ್ ರಿಲಿಜಿಯಸ್ ಪ್ರಾಕ್ಟೀಸ್) ಚರ್ಚೆ ಬಂದಾಗೆಲ್ಲ ಎದೆ ನಡುಗುತ್ತದೆ. ಈ ಕ್ಷಣದಲ್ಲಿ ಮಕ್ಕಳ ಶಿಕ್ಷಣದ ಕಾರಣಕ್ಕಾಗಿ ಉಚ್ಛನ್ಯಾಯಾಲಯಕ್ಕೆ ವಾದ ಮಂಡಿಸಿ ಆದೇಶ ಪಡೆಯುವ ಈ ಒತ್ತಡದಲ್ಲಿ ಇದು ಮುಂದೆ ಸೃಷ್ಟಿ ಮಾಡಬಹುದಾದ ಪರಿಣಾಮಗಳು ಸ್ವಲ್ಪ ಸಮಸ್ಯೆಯೇ. ಇದೇ ಸಂದರ್ಭದಲ್ಲಿ ಯುವತಿಯರು ಹಿಜಾಬ್ ತಮ್ಮ ಹಕ್ಕು ಎಂದು ವಾದಿಸುತ್ತಿರುವುದು ಮತ್ತು ಉಡುಪಿ ಕುಂದಾಪುರಗಳ ಘಟನೆಯ ನಂತರ ಕಾಳ್ಗಿಚ್ಚಿನಂತೆ ಹಬ್ಬುತ್ತಿರುವುದು ಒಂದು ವಿಪರೀತ ಸನ್ನಿವೇಶ ಮತ್ತು ಭವಿಷ್ಯದ ಸೂಚನೆಯಾಗಿದೆ. ಆಯ್ಕೆಯ ಹಕ್ಕನ್ನು ಪ್ರತಿಪಾದಿಸುತ್ತಲೇ ನಾನು ತೊಡುವ ಉಡುಪು, ನಾನು ತಿನ್ನುವ ಆಹಾರ ನಾನು ಬಯಸುವ ಬಾಳ ಸಂಗಾತಿ ಹೀಗೆ ಆಯ್ಕೆಯ ಸ್ವಾತಂತ್ರ್ಯವನ್ನು ಎಷ್ಟೋ ವರ್ಷಗಳಿಂದ ಪ್ರತಿಪಾದಿಸಿಕೊಂಡು ಬಂದ ಮಹಿಳಾಪರ ಮತ್ತು ಮಹಿಳಾ ಚಳುವಳಿ ಈ ನಿಟ್ಟಿನಲ್ಲಿ ಒಂದಿಷ್ಟು ಮುನ್ನಡೆಯನ್ನು ಸಾಧಿಸಿತ್ತು ಮತ್ತು ಆ ವಾದಗಳ ಜೊತೆಯೇ ಮೂಲಭೂತ ಅಗತ್ಯವಾದ ಶಿಕ್ಷಣಕ್ಕೆ ವಸ್ತ್ರ ಎರವಾಗುವುದಾದಲ್ಲಿ ಅಲ್ಲಿ ವಸ್ತ್ರಧಾರಣೆಯ ಒತ್ತಡವನ್ನು ಪಾಲಿಸುತ್ತಲೇ ಶಿಕ್ಷಣ ಪಡೆಯಬೇಕು ಮತ್ತು ಆ ಶಿಕ್ಷಣವೇ ಮಾನವ ಸ್ವಾತಂತ್ರ್ಯದ ಹಕ್ಕುಗಳ ಪಾಲನೆಗೆ ಮೊದಲ ಮೆಟ್ಟಿಲಾಗಬೇಕು ಎಂದು. ಆದರೆ ಈಗಿನ ವಿದ್ಯಮಾನಗಳಿಂದ ಪ್ರಚೋದನೆಗೆ ಒಳಗಾಗಿರುವ ವಿದ್ಯಾರ್ಥಿನೀಯರು ಪ್ರತಿಕ್ರಿಯೆ ನೀಡುತ್ತಿರುವುದು ಅವರೊಳಗೆ ಹುಟ್ಟಿಸಿರುವ ಆಕ್ರೋಶದ ಕುರುಹೂ ಹೌದು. ಜೊತೆಗೇ ನಾಳೆಯ ತಮ್ಮ ಬದುಕು ಹೇಗೆ ನಿರಾಯಾಸವಾಗಿ ಮತೀಯ ಮೂಲಭೂತವಾದದ ಹಿಡಿತಕ್ಕೆ ಸಿಲುಕುತ್ತದೆ ಎಂಬ ಅರಿವಿಲ್ಲದೆಯೇ ಯಾರೋ ತೋಡಿರುವ ಖೆಡ್ಡಾದೊಳಗೆ ಬೀಳುತ್ತಿರುವುದೂ ಹೌದು. ಇದೊಂದು ಅತ್ತ ದರಿ ಇತ್ತ ಪುಲಿ ಎಂಬಂತೆ ನಡೆಯುತ್ತಿರುವ ಘಟನೆ. ಅತ್ತ ಅಲ್ಪಸಂಖ್ಯಾತ ಮೂಲಭೂತವಾದವೂ ಸ್ತ್ರೀ ಸ್ವಾತಂತ್ರ್ಯದ ಪರವಾಗಿಲ್ಲ ಇತ್ತ ನಸ್ತ್ರೀ ಸ್ವಾತಂತ್ರಮರ್ಹಸಿ ಎಂಬುದನ್ನು ಪ್ರತಿಪಾದಿಸುವ ಮನು ಪ್ರಣೀತ ಸಿದ್ದಾಂತವನ್ನು ಒಪ್ಪುವವರು ಕೂಡ ಸ್ತ್ರೀ ಸ್ವಾತಂತ್ರದ ಪರವಾಗಿಲ್ಲ.
ಅಸ್ಪಷ್ಟ ಸರಕಾರಿ ಆದೇಶ
ಉಡುಪಿ ಸರಕಾರಿ ಪಿಯು ಕಾಲೇಜಿನಲ್ಲಿ ನಡೆದ ಘಟನೆಯನ್ನು ಹೆಮ್ಮರ ಮಾಡದೇ, ಅಲ್ಲಿಯೇ ತಣ್ಣಗೆ ಮಾಡದೇ ಹರಿ ಬಿಟ್ಟು ನಂತರ ಕಾನೂನಿನ ಮಾನ್ಯತೆಯಿಲ್ಲದ ಆದರೆ ಅಗತ್ಯಕ್ಕೆಂದು ಸರಕಾರದ ಆದೇಶದನ್ವಯ ಅವಕಾಶ ಕಲ್ಪಿಸಿಕೊಂಡ ಕಾಲೇಜು ಅಭಿವೃದ್ಧಿ ಸಮಿತಿ ಎಂಬ ವ್ಯವಸ್ಥೆಯ ಅಧ್ಯಕ್ಷರಾಗಿರುವ ಸ್ಥಳೀಯ ಶಾಸಕರು ಮಧ್ಯಪ್ರವೇಶ ಮಾಡಿ ಅನುಕೂಲಕ್ಕಿಂತ ಹೆಚ್ಚು ಅನಾನುಕೂಲ ಮಾಡಿದ್ದು ಒಂದಾದರೆ, ದಿನಾಂಕ: 05-02-2022ರಂದು ಸರಕಾರ ಹೊರಡಿಸಿದ ಆದೇಶ ಇನ್ನಷ್ಟು ಗೊಂದಲವನ್ನು ಹುಟ್ಟಿ ಹಾಕಿದೆ.
ಸರಕಾರವನ್ನು ನಡೆಸುತ್ತಿರುವ ಪಕ್ಷದ ಸಂಸದರು ಶಾಸಕರು ಕೊಡುತ್ತಿರುವ ಹೇಳಿಕೆಗಳಿಂದಲೇ ದೃಢಪಟ್ಟಿರುವುದು ಕೇಸರಿ ಶಾಲುಗಳನ್ನು ಒದಗಿಸಿ ವಿದ್ಯಾರ್ಥಿಗಳನ್ನು ‘ಹಿಂದುತ್ವ’ ವಾದದ ಪ್ರತಿನಿಧಿಗಳನ್ನಾಗಿ ತೋರಿಸಿ, ವಿಚಿತ್ರ ಉನ್ಮಾದದ ಸನ್ನಿವೇಶವನ್ನು ನಿರ್ಮಿಸಲಾಯಿತು. ಬಹುತೇಕರು ಅದರಲ್ಲಿ ಹಿಂದುಳಿದ ಸಮುದಾಯಗಳೆಂದು ವರ್ಗೀಕರಿಸಲ್ಪಟ್ಟ ಕುಟುಂಬಗಳ ಮಕ್ಕಳೆಂಬುದನ್ನು ಗಮನಿಸಲೇಬೇಕು. ನಂತರ ಆದೇಶ ಹೊರಡಿಸಿ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ಬರದಂತೆ ಇರುವ ಉಡುಪುಗಳನ್ನು ಧರಿಸಬೇಕೆಂದು ತಿಳಿಸಲಾಗಿದೆ. ಇದು ಉದ್ದೇಶಪೂರ್ವಕವಾಗಿ ಅಲ್ಪಸಂಖ್ಯಾತರ ಮತ್ತು ಆ ಸಮೂಹದ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಎರವಾಗುವ ಕ್ರಿಯೆ ಎಂದು ಮೇಲ್ನೋಟಕ್ಕೇ ಗೊತ್ತಾಗುತ್ತದೆ.
ಯಾಕೆಂದರೆ ಹೆಣ್ಣು ಮಗಳೊಬ್ಬಳ ಶಿಕ್ಷಣಕ್ಕಾಗಿ ಅನಿವಾರ್ಯ ಅಗತ್ಯವಾಗಿರಬಹುದಾದ ಅಥವಾ ಆಕೆಯ ಆಯ್ಕೆಯ ಮೇರೆಗೇ ಆಕೆಯ ತಲೆಯ ಮೇಲೆ ಧರಿಸಬಹುದಾದ ಹಿಜಾಬ್ ಅಥವಾ ಶಿರವಸ್ತ್ರ ಹೇಗೆ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರಬಹುದು? ಸಮವಸ್ತ್ರದ ಭಾಗವಾಗಿಯೇ ಅದೇ ಬಣ್ಣದ ಅಥವಾ ಸಿ.ಡಿ.ಸಿ./ಸರಕಾರ ಸೂಚಿಸಿದ ಸಮವಸ್ತ್ರದ ಭಾಗವಾಗಿ ಎಲ್ಲ ವಿದ್ಯಾರ್ಥಿನೀಯರೂ ಚೂಡಿದಾರ್/ಸಲ್ವಾರ್ ಕಮೀಜ್ ಮೇಲೊಂದು ಕುತ್ತಿಗೆಯ ವರೆಗೆ ಧರಿಸುವ ದುಪ್ಪಟ್ಟಾ ಇನ್ನೂಸ್ವಲ್ಪ ಮೇಲೇರಿ ಆಕೆಯ ಶಿರವಸ್ತ್ರವಾದರೆ ಯಾರಿಗೆ ಅದರಿಂದ ತೊಂದರೆಯಾದೀತು. ಆಳುವ ಸರಕಾರದ ಆಡಳಿತ ಮತ್ತು ನೀತಿಚ್ಯುತಿಗಳಾದಗಲೆಲ್ಲ ಹೀಗೆ ವಿನಾಕಾರಣ ತಗಾದೆ ಎಬ್ಬಿಸಿ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವುದೇಕೆ ಎಂದು ಅರಿಯದಷ್ಟು ಅಜ್ಞಾನಿಗಳೇ ಈ ನಾಡಿನ ಜನರು?
ಇತ್ತೀಚಿನ ವಿದ್ಯಮಾನಗಳು
ಪ್ರಕರಣ ನ್ಯಾಯಾಲಯದ ಕಟಕಟೆಯಲ್ಲಿದೆ. ವಾದ ವಿವಾದಗಳು ನಡೆಯುತ್ತಿವೆ. ಮಧ್ಯಂತರ ಆದೇಶವೊಂದು ಬಂದಿದ್ದು ಅದರ ಪ್ರಕಾರ ಈಗಾಗಲೇ ಸಮವಸ್ತ್ರ ನೀತಿ ಇರುವ ಕಾಲೇಜುಗಳಿಗೆ ಅನ್ವಯವಾಗುವಂತೆ ಸೂಚಿಸಲಾಗಿದೆ. ಆದರೆ ಬೆರಳು ಕೊಟ್ಟರೆ ಹಸ್ತ ನುಂಗುವ ಜಾತಿಯ ಸರಕಾರ ಮತ್ತು ಆಡಳಿತ ಮಂಡಳಿಗಳ ಅನಗತ್ಯ ಬಿಗು ನಡೆಯಿಂದ ಇನ್ನಷ್ಟು ಮತ್ತಷ್ಟು ವಿದ್ಯಾ ಸಂಸ್ಥೆಗಳಲ್ಲಿ ಮುಸ್ಲಿಂ ಅಲ್ಪಸಂಖ್ಯಾತ ಸಮುದಾಯದ ಬಾಲಕಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾಲೇಜಿನ ಗೇಟಿನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕೆಲವು ಕಡೆ ಅವರ ಮೇಲೆ ಪ್ರಕರಣ ದಾಖಲಾಗಿದೆ. ಇನ್ನು ಕೆಲವು ಕಡೆ ಅವರನ್ನು ಕಾಲೇಜಿನಿಂದ ಹೊರ ಹಾಕಲಾಗಿದೆ. ದುರಂತವೆಂದರೆ ಇಡೀ ಪ್ರಕರಣ ಪಿ.ಯು. ಕಾಲೇಜಿಗೆ ಸಂಬಂಧಿಸಿದ್ದಾಗಿದ್ದರೂ ಶಾಲೆಯ, ಇಂಜಿನಿಯರಿಂಗ್ ಕಾಲೇಜುಗಳ, ಅಲ್ಪಸಂಖ್ಯಾತ ಕಲ್ಯಾಣ ಸಮಿತಿಗಳು ನಡೆಸುತ್ತಿರುವ ವಿದ್ಯಾಸಂಸ್ಥೆಗಳ, ಕೇವಲ ಉರ್ದು ಹೆಣ್ಣು ಮಕ್ಕಳ ಶಾಲೆಯ ಮಕ್ಕಳಿಗೂ ಈ ಆದೇಶವನ್ನು ಲಾಗು ಮಾಡಿ ಇನ್ನಷ್ಟು ಹದಗೆಡಿಸುತ್ತಿರುವುದರ ಮರ್ಮವೇನೆಂದು ಯಾರಿಗೆ ಅರ್ಥವಾಗಬಹುದು?
ಮುಸ್ಲಿಂ ಹೆಣ್ಣುಮಕ್ಕಳು ಶಿಕ್ಷಣದ ಕಕ್ಷೆಗೆ ಒಳಪಡುತ್ತಿರುವುದೇ ಇತ್ತೀಚೆಗೆ ಮತ್ತು ಅದರಲ್ಲಿ ಕೂಡಾ ಏರಿಳಿತಗಳಾಗುತ್ತಿವೆ ಎಂಬುದನ್ನು ಇತ್ತೀಚಿನ ಎನ್.ಎಸ್.ಎಸ್. ಓ. ವರದಿ ಹೊರಗೆಡಹಿದೆ. ಯಾವುದೇ ಉನ್ನತ ಹುದ್ದೆಗಳಲ್ಲಿ ಇರಬಹುದಾದ ಪ್ರಮಾಣ ಕೂಡಾ ಇದನ್ನು ಸಾಬೀತುಪಡಿಸುತ್ತದೆ. ಆದ್ದರಿಂದಲೇ ಈ ಸನ್ನಿವೇಶದಲ್ಲಿ ಯಾವುದೇ ಧಾರ್ಮಿಕ ಮೂಲಭೂತವಾದದ ಹಿಡಿತಕ್ಕೆ ಸಿಲುಕದಂತೆ ಹೆಣ್ಣುಮಕ್ಕಳನ್ನು ಕಾಪಾಡುವ ಮತ್ತು ಅವರ ಶಿಕ್ಷಣದ ಹಕ್ಕು ಮತ್ತು ಆಯ್ಕೆಯ ಸ್ವಾತಂತ್ರ್ಯಕ್ಕೆ ಚ್ಯುತಿ ಬಾರದಂತೆ ಒಕ್ಕೊರಲಿನಿಂದ ಕೇಳಬೇಕಾಗಿದೆ. ಮಕ್ಕಳ ಶಿಕ್ಷಣವನ್ನು ಪಣಕ್ಕಿಟ್ಟಾದರೂ ತಮ್ಮ ರಾಜಕಾರಣವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುವ ಯಾವುದೇ ರಾಜಕೀಯ ಪಕ್ಷದ ಕೆಲಸ ಒಪ್ಪುವಂತಹುದಲ್ಲ. ಸ್ವಾತಂತ್ರ ಹೋರಾಟದಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ದೊಡ್ಡದಿತ್ತು. ಆದರೆ ಅದು ದೇಶದ ಸ್ವಾತಂತ್ರ್ಯಕ್ಕಾಗಿ ಅಗತ್ಯವಾಗಿತ್ತು. ಆದರೀಗ ಶಿಕ್ಷಣದ ಕ್ಷೇತ್ರದಲ್ಲಿನ ಅನಾನುಕೂಲಗಳನ್ನು ಸರಿಪಡಿಸಲು ವಿದ್ಯಾರ್ಥಿಗಳು ಬೀದಿಗಿಳಿಯದಂತೆ ವಿದ್ಯಾರ್ಥಿ ಸಂಘಟನೆಗಳ ಚುನಾವಣೆಗಳನ್ನು ತೆಗೆದು ಹಾಕಿ ಅವರನ್ನು ರಾಜಕೀಯ ಶಕ್ತಿಗಳ ಆಟದ ದಾಳಗಳನ್ನಾಗಿ ಮಾಡಿಸಿಕೊಳ್ಳುತ್ತಿರುವುದು ಖಂಡನೀಯ.
ಹೆಣ್ಣು ಮಕ್ಕಳ ಆಯ್ಕೆ ಸ್ವಾತಂತ್ರ್ಯ ಮತ್ತು ಶಿಕ್ಷಣದ ಹಕ್ಕು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ. ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣದಲ್ಲಿ ದೇಶದ ಬಹುದೊಡ್ಡ ಮಹಿಳಾ ಸಂಘಟನೆಯಾದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಮೂಲಕ ಪ್ರವೇಶಿಸಿದೆ. ಮತ್ತು ಉಚ್ಚ ನ್ಯಾಯಾಲಯಕ್ಕೆ ಫೆಬ್ರುವರಿ 05-2022 ರಂದು ಹೊರಡಿಸಿದ ಸರಕಾರದ ಆದೇಶವನ್ನು ರದ್ದು ಮಾಡಲು ಕೋರಿಕೊಳ್ಳುತ್ತಿದೆ.