ವಿದ್ಯಾರ್ಥಿಗಳಿಗೆ ನೀಡಬೇಕಾದ ಹೊದಿಕೆಗಳನ್ನು ಬಚ್ಚಿಟ್ಟ ನಿಲಯದ ಮೇಲ್ವಿಚಾರಕಿ

ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಗ್ರಾಮದ ಸಿದ್ದೇಶ್ವರ ವಿದ್ಯಾರ್ಥಿ ನಿಲಯದ ಮೇಲ್ವಿಚಾರಕಿ ವಿದ್ಯಾರ್ಥಿನಿಯರಿಗೆ ನೀಡಬೇಕಾಗಿದ್ದ ಹೊದಿಕೆಗಳನ್ನು ಬಚ್ಚಿಟ್ಟುರುವ ಆರೋಪ ಕೇಳಿ ಬಂದಿದೆ. ನಮ್ಮ ವಿದ್ಯಾರ್ಥಿ ನಿಲಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ಸಿಗಬೇಕಾದ ಸವಲತ್ತುಗಳು ಸರಿಯಾಗಿ ಸಿಗುತ್ತಿಲ್ಲ ಎಂದು ದೂರಿದ್ದಾರೆ.

ಆನಂದಪುರ ದೇವರಾಜ ಅರಸು ಹಿಂದುಳಿದ ವರ್ಗಗಳ ಬಾಲಕಿಯರ ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ಮಮತಾ ಎಂಬುವರು ಕಳೆದ ವರ್ಷ ಸರ್ಕಾರ ವಿದ್ಯಾರ್ಥಿಗಳಿಗೆ ವಿತರಿಸಲು ಹೊದಿಕೆಗಳನ್ನು ನೀಡಿತ್ತು. ಆದರೆ, ವಿದ್ಯಾರ್ಥಿ ನಿಯಲದ ಮೇಲ್ವಿಚಾರಕಿ ದುರುದ್ದೇಶದಿಂದ 30ಕ್ಕೂ ಅಧಿಕ ಹೊದಿಕೆಗಳನ್ನು ಮುಚ್ಚಿಟ್ಟಿದ್ದಾರೆ.

ಈ ಕುರಿತು ಅಲ್ಲಿನ ವಿದ್ಯಾರ್ಥಿನಿಯರು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಕುಮಾರಿ ಹಾಗೂ ಸಾಗರ ತಾಲೂಕು ಪಂಚಾಯತ್‌ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆಯವರ ಬಳಿ ದೂರು ‌ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ವಿದ್ಯಾರ್ಥಿಗಳು ಮೇಲ್ವಿಚಾರಕಿ ಮೇಲೆ ಆರೋಪಗಳ ಸುರಿಮಳೆ ಸುರಿದರು.

ಚಳಿಗಾಲದಲ್ಲಿಯೂ ಹೊದಿಕೆಗಳನ್ನು ನೀಡುವಂತೆ ಬೇಡಿಕೊಂಡರೂ ಸಹ ನೀಡಲಿಲ್ಲ. 52ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರತಿದಿನ ಟೀ ಮಾಡಲು ಕೇವಲ 1 ಲೀಟರ್ ಹಾಲನ್ನು ತರಿಸುತ್ತಿದ್ದಾರೆ. ಕೇವಲ 1 ಕೆಜಿ ಚಿಕನ್ ತರಿಸಿ ಉಣಬಡಿಸುತ್ತಿದ್ದಾರೆ. ಸಸ್ಯಹಾರಿ ವಿದ್ಯಾರ್ಥಿಗಳಿಗೆ ಅದು ಕೂಡ ಇಲ್ಲ. ನಮ್ಮ ಹಾಸ್ಟೆಲ್‌ನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ಸಿಗಬೇಕಾದ ಸವಲತ್ತು ಸಿಗುತ್ತಿಲ್ಲ ಎಂದು ದೂರಿದರು.

ಈ ಬಗ್ಗೆ ಮೇಲ್ವಿಚಾರಕಿಯನ್ನು ವಿಚಾರಿಸಿದಾಗ ಅವರು ಹಾರಿಕೆಯ ಉತ್ತರ ನೀಡಿದ್ದಾರೆ‌. ಬಳಿಕ ಅಧಿಕಾರಿಗಳ ಸಮ್ಮುಖದಲ್ಲಿ ಬಚ್ಚಿಟ್ಟಿದ್ದ ಹೊದಿಕೆಗಳನ್ನು ಹಂಚಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಮಾತ್ರ ಒಕ್ಕೊರಲಿನಿಂದ ವಾರ್ಡನ್ ಬದಲಿಸುವಂತೆ ಮನವಿ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *