ಹಿಜಾಬ್ – ಕೇಸರಿ ಶಾಲು ವಿವಾದದಿಂದ ಕೆಲವೆಡೆ ಕಾಲೇಜಿಗೆ ರಜೆ ಘೋಷಣೆ; ಹಲವೆಡೆ ಬಿಗುವಿನ ವಾತಾವರಣ

ಬೆಳಗಾವಿಯಲ್ಲಿ ಹಿಜಾಬ್ – ಕೇದರಿ ಶಾಲು ವಿವಾದದ ಕಿಚ್ಚು ಹೆಚ್ಚಾಗುತ್ತಿದ್ದು, ವಿಜಯಾ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸ್ ಕಾಲೇಜಿಗೆ ಅನಿರ್ದಿಷ್ಟಾವಧಿ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಮುಂದಿನ ಆದೇಶ ಬರುವವರೆಗೂ ಆಡಳಿತ ಮಂಡಳಿ ರಜೆ‌ ಘೋಷಣೆ ಮಾಡಿದೆ.

ಜಿಲ್ಲಾಡಳಿತ, ಪೊಲೀಸರು ಎಷ್ಟೇ ಪ್ರಯತ್ನಪಟ್ಟರೂ ವಿದ್ಯಾರ್ಥಿನಿಯರ ಮನವೊಲಿಸಲು ಸಾಧ್ಯವಾಗಲಿಲ್ಲ. ಹಿಜಾಬ್‌ಗೆ ಅನುಮತಿ ನೀಡಬೇಕೆಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು. ಹಿಜಾಬ್ ಧರಿಸಿಯೇ ನಾವು ತರಗತಿಯಲ್ಲಿ ಕುಳಿತುಕೊಳ್ಳುತ್ತೇವೆ ಎಂದು ಹಠಬಿದ್ದ ವಿದ್ಯಾರ್ಥಿನಿಯರಿಗೆ ಹಿಜಾಬ್ ತೆಗೆಯಬೇಕೆಂದು ಪ್ರಾಂಶುಪಾಲರು ಮನವಿ ಮಾಡಿದರು. ಆದರೆ ಹಿಜಾಬ್ ತೆಗೆಯುವುದಕ್ಕೆ ವಿದ್ಯಾರ್ಥಿನಿಯರು ಒಪ್ಪಲಿಲ್ಲ.

ಕಳೆದ ಮೂರು ದಿನಗಳಿಂದ ಹಲವು ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ಹಿಜಾಬ್ ಮತ್ತು ಬುರ್ಖಾ ಧರಿಸಿಕೊಂಡು ಬರುತ್ತಿದ್ದಾರೆ, ತರಗತಿಯೊಳಗೆ ಬರುವಾಗ ಬುರ್ಖಾ, ಹಿಜಾಬ್ ತೆಗೆದು ಬನ್ನಿ ಎಂದು ಕಾಲೇಜು ಆಡಳಿತ ಮಂಡಳಿ ಎಷ್ಟೇ ಕೇಳಿಕೊಂಡರೂ ಒಪ್ಪುತ್ತಿರಲಿಲ್ಲ.

ಹಿಜಾಬ್ ಧರಿಸಿಕೊಂಡು ಬಂದ ವಿದ್ಯಾರ್ಥಿಗಳು ನಾವು ಹೈಕೋರ್ಟ್ ಆದೇಶ ಬರುವವರೆಗೂ ಹಿಜಾಬ್ ಧರಿಸಿಕೊಂಡೇ ಬರುತ್ತೇವೆ. ಬೇರೆ ವಿದ್ಯಾರ್ಥಿಗಳು ಕುಂಕುಮ ಹಚ್ಚಿಕೊಂಡು ಬರಲಿ, ಬಿಡಲಿ ಅದು ನಮಗೆ ಬೇಡದ ವಿಷಯ. ನಾವು ನಮ್ಮ ಧರ್ಮ ಪಾಲನೆ ಮಾಡುವುದು ಮುಖ್ಯವಾಗಿದೆ. ಹಿಜಾಬ್ ತೆಗೆದು ತರಗತಿಗೆ ಬನ್ನಿ ಕಾಲೇಜಿನವರು ಹೇಳುತ್ತಾರೆ. ಆದರೆ ಮನೆಯಲ್ಲಿ ನಮಗೆ ಹಿಜಾಬ್ ಧರಿಸಿಕೊಂಡು ಹೋಗಿ ಎನ್ನುತ್ತಾರೆ ನಾವು ಯಾರ ಮಾತು ಕೇಳಬೇಕು. ಇದರಿಂದ ನಮಗೆ ಶಿಕ್ಷಣಕ್ಕೆ ತೊಂದರೆಯಾಗುತ್ತದೆ ಎಂದು ಅಲಳು ತೋಡಿಕೊಂಡರು.

ಎರಡು ದಿನಗಳ ಹಿಂದೆ, ಹಿಜಾಬ್ ಧರಿಸಿದ ಹುಡುಗಿಯರನ್ನು ತರಗತಿಯೊಳಗೆ ಬಿಡುವಂತೆ ಕಾಲೇಜು ಆಡಳಿತ ಮಂಡಳಿ ಮತ್ತು ಪೊಲೀಸರ ಮೇಲೆ ಒತ್ತಡ ಹೇರಲು ಯತ್ನಿಸಿದಾಗ ಬೆಳಗಾವಿ ಪೊಲೀಸರು ಆರು ಮಂದಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದರು.

ವಿದ್ಯಾರ್ಥಿನೀಯರು ಟಿಸಿ ಕೊಡಿ ಎನ್ನುತ್ತಿದ್ದಾರೆ

ಹಾಸನ ಜಿಲ್ಲೆಯಲ್ಲಿ ಹಿಜಾಬ್ ರಗಳೆ ಇನ್ನೂ ಮುಗಿಯದಂತ್ತಾಗಿದೆ. ಅರಸೀಕೆರೆ ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಪ್ರತಿಭಟನೆ ಮುಂದುವರೆದಿದ್ದು, ನಮಗೆ ಹಿಜಾಭ್ ಧರಿಸಲು ಅವಕಾಶ ಕೊಡಿ, ಇಲ್ಲವಾದ್ರೆ ಟಿಸಿ ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಲೇಜಿನ ಆವರಣದಲ್ಲಿ ಕುಳಿತು ವಿದ್ಯಾರ್ಥಿನಿಯರು ಅಸಮಾಧಾನ ಹೊರಹಾಕಿದ್ದು, ಅಲ್ಲಿಯೇ ಕೂತು ಓದಿನಲ್ಲಿ ನಿರತರಾಗಿದ್ದಾರೆ. ನೆನ್ನೆ ಕೂಡ ಹಿಜಾಬ್ ಧರಿಸಲು ಅವಕಾಶ ಕೋರಿ ವಿದ್ಯಾರ್ಥಿನಿಯರು ಪ್ರತಿಭಟನೆ ಮಾಡಿದ್ದರು.

ರಾಮನಗರ ಜಿಲ್ಲೆಯಲ್ಲಿ ಮುಂದುವರಿದ ಹಿಜಾಬ್ ಸಂಘರ್ಷ. ಕುದೂರು ಗ್ರಾಮದ ಕರ್ನಾಟಕ ಪಬ್ಲಿಕ್ ಕಾಲೇಜಿಗೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಆಗಮಿಸಿದ್ದಾರೆ. ತರಗತಿಯೊಳಗೆ ಹಿಜಾಬ್‌ಗೆ ಅನುಮತಿ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಕೊನೆಗೆ ಶಾಲೆಯ ಮೈದಾನದಲ್ಲಿ ಕುಳಿತು ವಿದ್ಯಾರ್ಥಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.

58 ವಿದ್ಯಾರ್ಥಿಗಳು ಅಮಾನತು

ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಕರ್ನಾಟಕ ಪಬ್ಲಿಕ್ ಶಾಲೆಯ 11ಮತ್ತು 12ನೇ ತರಗತಿಯ 58 ವಿದ್ಯಾರ್ಥಿಗಳನ್ನು ಶುಕ್ರವಾರ ಶಾಲೆಯಿಂದ ಹೊರ ಹಾಕಿದರು. ಆದರೆ, ವಿದ್ಯಾರ್ಥಿನಿಯರು ಇಂದು ಮತ್ತೆ ಪ್ರತಿಭಟನೆ ಮುಂದುವರಿಸಿದರು.  ಜೀವ ಬಿಟ್ಟೇವು ಹಿಜಾಬ್ ಧರಿಸದೇ ಶಾಲೆ ಪ್ರವೇಶಿಸುವುದಿಲ್ಲ ಎಂದು ಪಟ್ಟು ಹಿಡಿದು ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ೫೮ ಮಂದಿ ವಿದ್ಯಾರ್ಥಿನಿಯರನ್ನು ಅಮಾನತ್ತುಗೊಳಿಸಿ ಕಾಲೇಜು ಆಡಳಿತ ಮಂಡಳಿ ಕಠಿಣ ಕ್ರಮ ಕೈಗೊಂಡು ವಿದ್ಯಾರ್ಥಿಗಳು ಕಾಲೇಜಿನ ಆವರಣದೊಳಕ್ಕೆ ಪ್ರವೇಶಿಸಬಾರದು ಎಂದು ಆದೇಶಿಸಿದೆ.

ರೂ.200 ದಂಡ:

ಸಮವಸ್ತ್ರ ಧರಿಸದೆ ಬಂದರೆ 200 ರೂಪಾಯಿ ದಂಡ ಪಾವತಿಸಬೇಕು, ಮೊಬೈಲ್ ನ್ನು ಕೂಡ ಬಳಸುವಂತಿಲ್ಲ ಎಂದು ಹಾಸನದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮುಂಭಾಗ ಕಾಲೇಜು ಆಡಳಿತ ಮಂಡಳಿ ನೋಟೀಸ್ ಹಾಕಿದೆ.

ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಾಲ್ವರು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುತ್ತಿದ್ದಾರೆ. ವಿ ವಾಂಟ್ ಜಸ್ಟೀಸ್ ಪೋಸ್ಟರ್ ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಹಿಜಾಬ್ ಮತ್ತು ಶಿಕ್ಷಣ ನಮಗೆ ಅಪ್ಪ‌-ಅಮ್ಮನಂತೆ. ಇಬ್ಬರನ್ನೂ ಬಿಡಲು ನಮಗೆ ಆಗುವುದಿಲ್ಲ. ನಾವು ದೇವರನ್ನು ಬಿಟ್ಟು ಇನ್ನಾರಿಗೂ ಹೆದರುವುದಿಲ್ಲ. ಎಷ್ಟು ದಿನ ಅಂತ ಹೈಕೋರ್ಟ್ ಆದೇಶಕ್ಕೆ ನಾವು ಕಾಯಬೇಕು ಅಂತ ಪ್ರತಿಭಟನಾ ನಿರತ ವಿದ್ಯಾರ್ಥಿನಿಯರು ಪ್ರಶ್ನೆ ಮಾಡಿದ್ದಾರೆ. ಕಾಲೇಜು ಬಳಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದೆ.

ನಿಷೇಧಾಜ್ಞೆ ಜಾರಿ:

ಹಿಜಾಬ್ ವಿವಾದ ಮತ್ತಷ್ಟು ಭುಗಿಲೇಳುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣ ಸಂಸ್ಥೆಗಳ 200 ಮೀಟರ್ ವ್ಯಾಪ್ತಿಯಲ್ಲಿ ಫೆಬ್ರವರಿ 26 ಸಂಜೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಖಡ್ಗ ಹಿಡಿದು ಮೆರವಣಿಗೆ

ಹಿಜಾಬ್- ಕೇಸರಿ ಶಾಲು ವಿವಾದದ ಮಧ್ಯೆ ಬಳ್ಳಾರಿ ಜಿಲ್ಲೆಯ ಸರಳಾದೇವಿ ಕಾಲೇಜು ಮುಂಭಾಗದಲ್ಲಿ ಖಡ್ಗ ಹಿಡಿದು ಯುವಕರು ಮೆರವಣಿಗೆ ಮಾಡಿದ್ದಾರೆ. ನಿಷೇದಾಜ್ಞೆ ಜಾರಿ ಇರುವ ಪ್ರದೇಶದಲ್ಲಿ ಶಿವಾಜಿ ಜಯಂತಿ ಅಂಗವಾಗಿ ಹಿಂದೂ ಜಾಗರಣಾ ವೇದಿಕೆಯಿಂದ ಬೈಕ್ ಹಾಗೂ ಕಾರಿನಲ್ಲಿ ಮೆರವಣಿಗೆ ಮಾಡಿದ್ದಾರೆ.

ಮತ್ತೊಂದೆಡೆ ಸರಳಾದೇವಿ ಕಾಲೇಜು ಪಕ್ಕದ ಮೈದಾನದಲ್ಲಿ ವಿದ್ಯಾರ್ಥಿನಿಯರು ಜಮಾಯಿಸಿದ್ದರು, ಅವರನ್ನು ಮನೆಗೆ ಹೋಗಿ ಇಲ್ಲಾ ತರಗತಿಗೆ ಹೋಗುವಂತೆ ಪೊಲೀಸರು ಹೇಳಿದರು. ಪೊಲೀಸರ ಮನವಿಯನ್ನು ಲೆಕ್ಕಿಸದ ವಿದ್ಯಾರ್ಥಿನಿಯರು, ನಮಗೆ ಡಿಸ್ಟರ್ಬ್ ಮಾಡಬೇಡಿ ಹೋಗಿ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಆನ್‌ಲೈನ್‌ ತರಗತಿ

ಮೈಸೂರಿನ ಕಾಲೇಜೊಂದರಲ್ಲಿ ಹಿಜಾಬ್ ತೆಗೆಯಲು ಒಪ್ಪದ ವಿದ್ಯಾರ್ಥಿನಿಯರಿಗೆ ಆನ್‌ಲೈನ್‌ನಲ್ಲಿ ತರಗತಿ ನಡೆಸಲು ಡಿಡಿಪಿಐ ಶ್ರೀನಿವಾಸಮೂರ್ತಿ ಸೂಚನೆ ನೀಡಿದ್ದಾರೆ. ಮೈಸೂರಿನ ರಾಜೀವ್‌ ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಒಟ್ಟು 293 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದರಲ್ಲಿ 291 ವಿದ್ಯಾರ್ಥಿನಿಯರು ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ.

ತುಮಕೂರಿನಲ್ಲಿ ವಿದ್ಯಾರ್ಥಿನಿಯರ ವಿರುದ್ಧ ಎಫ್ಐಆರ್

ಫೆಬ್ರವರಿ 17ರಂದು ತುಮಕೂರಿನ ಬಾಲಕಿಯರ ಎಂಪ್ರೆಸ್ ಸರ್ಕಾರಿ ಪಿಯು ಕಾಲೇಜಿನ ಹೊರಗೆ ಹಿಜಾಬ್ ನಿಯಮವನ್ನು ವಿರೋಧಿಸಿದ ಮತ್ತು ಸಿಆರ್‌ಪಿಸಿಯ ಸೆಕ್ಷನ್ 144ರ ಅಡಿಯಲ್ಲಿ ಹೊರಡಿಸಲಾದ ನಿಷೇಧಾಜ್ಞೆ ಉಲ್ಲಂಘಿಸಿದ ಕನಿಷ್ಠ 10 ವಿದ್ಯಾರ್ಥಿನಿಯರ ವಿರುದ್ಧ ಐಪಿಸಿ ಸೆಕ್ಷನ್ 143, 145, 149 ಮತ್ತು 188 ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಕೊಪ್ಪಳ ಜಿಲ್ಲೆ ಗಂಗಾವತಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ಮಂಡಳಿ ಕೋರ್ಟ್ ಆದೇಶ ತೋರಿಸಿದರು. ಆದರೆ, ವಿದ್ಯಾರ್ಥಿಗಳು ಹಠಕ್ಕೆ ಬಿದ್ದರು. ಈ ವೇಳೆ ಕಾಲೇಜು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆಯಿತು. ಸ್ಥಳದಲ್ಲಿ ಬಿಗುವಿನ ನಿರ್ಮಾಣವಾಗಿದ್ದರಿಂದ ಬಿಗಿ ಪೊಲೀಸ್ ಬಂದೋ ಬಸ್ತ್ ಕೈಗೊಳ್ಳಲಾಗಿದೆ.

ಯಾದಗಿರಿ ನಗರದ ನ್ಯೂ ಕನ್ನಡ ಪಿಯು ಕಾಲೇಜಿಗೆ ಹಿಜಾಬ್ ಧರಿಸಿ ಇವತ್ತು ವಿದ್ಯಾರ್ಥಿನಿಯರು ಆಗಮಿಸಿದರು. ಹಿಜಾಬ್ ಧರಿಸಿಯೇ ತರಗತಿಯಲ್ಲಿ ಕುಳಿತುಕೊಳ್ಳುವುದಾಗಿ 10 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದಾರೆ. ಮಾತುಕತೆಗೆ ಕಾಲೇಜಿನ ಒಳಗೆ ಕರೆದುಕೊಂಡು ಹೋದ ಪ್ರಾಂಶುಪಾಲ, ವಿದ್ಯಾರ್ಥಿನಿಯರಿಗೆ ಮನವೋಲಿಸಲು ಪ್ರಯತ್ನಿಸಿದರು.

ದಾವಣಗೆರೆ ಜಿಲ್ಲೆಯ ಹರಿಹರದಲ್ಲಿರುವ ಎಸ್‌ಜೆವಿಪಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ತರಗತಿಯೊಳಗೆ ಹಿಜಾಬ್‌ಗೆ ಅನುಮತಿ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಪೊಲೀಸರು, ಕಾಲೇಜು ಸಿಬ್ಬಂದಿ ವಿದ್ಯಾರ್ಥಿಗಳ ಮನವೊಲಿಕೆಗೆ ಯತ್ನಿಸಿದ್ದಾರೆ. ಆದರೂ ಕೂಡ ಮನವೊಲಿಕೆಗೆ ಜಗ್ಗದ ಪದವಿ ಕಾಲೇಜಿನ ವಿದ್ಯಾರ್ಥಿಗಳು, ನಾವು ಕಾಲೇಜು ಶುಲ್ಕವನ್ನು ಪಾವತಿ ಮಾಡಿದ್ದೇವೆ. ನಮಗೆ ಪಾಠ ಕೇಳುವುದಕ್ಕೆ ಅವಕಾಶ ನೀಡಿ ಎಂದು ಪಟ್ಟು ಹಿಡಿದಿದ್ದಾರೆ.

ರಾಯಚೂರಿನಲ್ಲಿ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ವಿದ್ಯಾರ್ಥಿನಿಯರು ಸಮವಸ್ತ್ರದಲ್ಲೇ ಕಾಲೇಜಿಗೆ ಬಂದಿದ್ದಾರೆ. ಹೈಕೋಟ್ ಆದೇಶ ಪಾಲಿಸುವಂತೆ ಜಿಲ್ಲಾಧಿಕಾರಿ ಡಾ. ಅವಿನಾಶ್ ಮೆನನ್ ರಾಜೇಂದ್ರನ್ ಸೂಚಿಸಿದ್ದಾರೆ. ಹಿಜಾಬ್ ಬಿಟ್ಟು ಸಮವಸ್ತ್ರದೊಂದಿಗೆ ಕಾಲೇಜಿಗೆ ಬಂದಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *