ಬೆಂಗಳೂರು : ಸಚಿವ ಕೆ. ಎಸ್. ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿರುವ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ವಿಧಾನಸಭೆ, ವಿಧಾನ ಪರಿಷತ್ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ನಾವು ಧರಣಿ ಮುಂದುವರಿಸಿದ್ದೇವೆ. ಈಶ್ವರಪ್ಪರನ್ನು ಅಮಾನತು ಮಾಡುವಂತೆ ಒತ್ತಾಯಿಸಿದ್ದೇವೆ. ಅವರು ನಮ್ಮ ಸಂವಿಧಾನಕ್ಕೆ ಅಗೌರವ ತೋರಿದ್ದಾರೆ. ರಾಜ್ಯಪಾಲರು ಡಿಸ್ಮಿಸ್ ಮಾಡೋಕೆ ಹೇಳಬೇಕಿತ್ತು. ಸಿಎಂ ಕೂಡ ಮಾಡಬೇಕಿತ್ತು. ಇದರ ಅರ್ಥ ಆರ್ಎಸ್ಎಸ್ ಮೂಲಕ ಮಾಡಿಸಿದ್ದಾರೆ. ಈಶ್ವರಪ್ಪ ಮೂಲಕ ಹೇಳಿಸಿದ್ದಾರೆ. ರಾಷ್ಟ್ರಧ್ವಜ ನಮ್ಮ ಸ್ವಾತಂತ್ರ್ಯದ ಸಂಕೇತ. ಧ್ವಜ ಹಿಡಿದಾಗ ಹೋರಾಟದ ಕಿಚ್ಚು ಬರುತ್ತೆ. ಯಾರೇ ಧ್ವಜದ ಬಗ್ಗೆ ಅಪಮಾನ ಮಾಡಿದ್ರೂ ದೇಶದ್ರೋಹದ ಕೇಸ್ ದಾಖಲಿಸಬೇಕು. ಅವರ ಮೇಲೆ ಕೇಸ್ ದಾಖಲಿಸಿಲ್ಲ. ನಡ್ಡಾ ತ್ರಿವರ್ಣದ ಧ್ವಜದ ಮೇಲೆ ಕೇಸರಿ ಬಾವುಟ ಹಾಕಿದ್ದಾರೆ. ಬಿಜೆಪಿಯವರು ರಾಷ್ಟ್ರಧ್ವಜಕ್ಕೆ ಗೌರವ ಕೊಡ್ತಿಲ್ಲ ಎಂದು ದೂರಿದರು.
ಮಧ್ಯಪ್ರದೇಶದ ಕಚೇರಿಯಲ್ಲಿ ರಾಷ್ಟ್ರ ಧ್ವಜದ ಮೇಲೆ ಬಿಜೆಪಿ ಬಾವುಟವನ್ನು ಹಾರಿಸ್ತಾರೆ. ಹಾಗಾಗಿ ನಾವು ಪ್ರತಿಭಟನೆ ನಡೆಸಿದ್ದೇವೆ. ಈಶ್ವರಪ್ಪ ಮಾಡಿರೋದು ಅಕ್ಷಮ್ಯ ಅಪರಾಧ. ಯಾವಾಗಲೂ ರಾಷ್ಟ್ರ ಧ್ವಜ ಹಾರಾಡಬೇಕು. ಒಬ್ಬ ಸಚಿವರಾಗಿ ಈಶ್ವರಪ್ಪ ಹೇಳುವುದು ಅಪರಾಧ. ಬಿಜೆಪಿ ರಾಷ್ಟ್ರಧ್ವಜಕ್ಕೆ ಗೌರವ ಕೊಡಲ್ಲ. ಹೀಗಾಗಿಯೇ ಆಹೋರಾತ್ರಿ ಧರಣಿ ಮಾಡ್ತೇವೆ ಎಂದರು.
ಇದನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಹಗಲು, ರಾತ್ರಿ ಧರಣಿ ಮಾಡ್ತೇವೆ. ಅವರು ಏನಾದ್ರೂ ಮಾಡಿಕೊಳ್ಳಲಿ. ರಾಷ್ಟ್ರಧ್ವಜಕ್ಕೆ ಅವರು ಅಪಮಾನಿಸಿದ್ದಾರೆ. ತಾರ್ಕಿಕ ಅಂತ್ಯ ಕಾಣಿಸಿಯೇ ತೀರ್ತೇವೆ ಎಂದು ತಿಳಿಸಿದ್ದಾರೆ.
ಸಚಿವಾಲಯದಿಂದ ಊಟದ ವ್ಯವಸ್ಥೆ : ಧರಣಿನಿರತ ಕೈ ಶಾಸಕರಿಗೆ ಭೂಜನ ಹಾಗೂ ಹಾಸಿಗೆ ವ್ಯವಸ್ಥೆಯನ್ನು ವಿಧಾನಸಭೆ ಸಚಿವಾಲಯವೇ ಕಲ್ಪಿಸಿದೆ. ಹಾಸಿಗೆ, ದಿಂಬು, ಬೆಡ್ ಶೀಟ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಸುಮಾರು 80 ಬೆಡ್ ಗಳನ್ನು ಪೂರೈಸಿಲಾಗಿದೆ. ಸದನದೊಳಗೆ ಆಸನದ ಮಧ್ಯೆ ಲಭ್ಯವಿರುವ ಜಾಗದಲ್ಲಿ ಹಾಸಿಗೆಗಳನ್ನು ಹಾಸಲಾಗಿದೆ. ಭೋಜನ ಸವಿದ ಕೈ ಶಾಸಕರು ಬಳಿಕ ವಿಧಾನಸಭೆ ಸಭಾಂಗಣದಲ್ಲೇ ಹಾಸಿಗೆ ಹಾಸಿ ಮಲಗಿದರು.
ಯಡಿಯೂರಪ್ಪ ಸಂಧಾನ ವಿಫಲ :
ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕಾಂಗ್ರೆಸ್ ನಾಯಕರೊಂದಿಗೆ ಸಂಧಾನ ಸಭೆ ನಡೆಸಿದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿದರು. ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಹ ಆಗಮಿಸಿದ ಮಾತುಕತೆ ನಡೆಸಿದರು. ಅಹೋರಾತ್ರಿ ಧರಣಿ ಕೈಬಿಡಿ ವಿಧಾನಸಭೆಯಲ್ಲಿ ಶುಕ್ರವಾರ ನಿಮ್ಮ ಹೋರಟ ಮುಂದುವರೆಸಿ ಎಂದು ಮನವಿ ಮಾಡಿದರು. ಆದರೆ ಕಾಂಗ್ರೆಸ್ ನಾಯಕರು ತಮ್ಮಪಟ್ಟು ಸಡಿಲಿಸಲಿಲ್ಲ.