ರಿಯೊ ಡಿ ಜನೈರೊ : ಬ್ರೆಜಿಲ್ ನ ಪೆಟ್ರೋಪೊಲಿಸ್ ನಗರದಲ್ಲಿ ಭೀಕರ ಪ್ರವಾಹ ಮತ್ತು ಮಣ್ಣಿನ ಕುಸಿತದಿಂದ 94 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವುದನ್ನು ಸರಕಾರ ದೃಢಪಡಿಸಿದೆ. ಮಳೆ ಮತ್ತು ಪ್ರವಾಹದ ಬಳಿಕ ಮನೆಗಳು ಕುಸಿದಿದ್ದು,ಹಲವು ಕಾರುಗಳು ಕೊಚ್ಚಿ ಹೋಗಿದೆ.
ಪೆಟ್ರೋಪೊಲಿಸ್ ಸೇರಿದಂತೆ ಸುತ್ತಮುತ್ತಲ ನಗರಗಳಲ್ಲಿ ದಿಢೀರ್ ಅಂತ ಮಳೆ ಶುರುವಾಗಿದೆ. ಗುಡುಗು ಸಹಿತ ಭಾರೀ ಗಾಳಿಯೂ ಬೀಸುತ್ತಿದೆ. ಭಾರಿ ಮಳೆಯಿಂದಾಗಿ ನದಿಗಳೆಲ್ಲ ತುಂಬಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ತಲೆದೂರಿದೆ. ಕೇವಲ ಮೂರು ಗಂಟೆಗಳಲ್ಲಿ ದಾಖಲೆಯ ಪ್ರಮಾಣದ ಮಳೆಯಾಗಿದೆ. ಹವಾಮಾನ ಇಲಾಖೆ ತಜ್ಞರು ಹೇಳುವ ಪ್ರಕಾರ ಮೂರು ತಿಂಗಳು ಸುರಿಯುವಷ್ಟು ಮಳೆ ಮೂರೇ ಗಂಟೆಯಲ್ಲಿ ಬಂದಿದೆಯಂತೆ!
ಪ್ರವಾಹ ಪೀಡಿತ ಪ್ರದೇಶದಲ್ಲಿ ರಕ್ಷಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಸುಮಾರು 30ಕ್ಕೂ ಹೆಚ್ಚು ಜನರನ್ನು ಜೀವಂತವಾಗಿ ರಕ್ಷಿಸಲಾಗಿದೆ. ಹೆಲಿಕಾಪ್ಟರ್ ಬಳಸಿ, ರಕ್ಷಣಾ ಕಾರ್ಯಕರ್ತರು ಬಿರುಸಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸುಮಾರು 300 ಜನರನ್ನು ನಿರಾಶ್ರಿತರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.
ಪ್ರವಾಹ ಪೀಡಿತ ನಗರಗಳಲ್ಲಿ ಸುಮಾರು 180ಕ್ಕೂ ಹೆಚ್ಚು ಅಗ್ನಿಶಾಮಕ ದಳದವರು ಮತ್ತು ಇತರ ರಕ್ಷಣಾ ಕಾರ್ಯಕರ್ತರು ತುರ್ತು ಪರಿಸ್ಥಿತಿಗೆ ಸ್ಪಂದಿಸುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆಗಾಗಿ 400 ಸೈನಿಕರು ನಿಯೋಜನೆಗೊಂಡಿದ್ದಾರೆ.
ಕಣ್ಣೇದುರೆ ಕುಸಿಯುತ್ತಿರುವ ಮನೆಗಳು
ಬ್ರೇಜಿಲ್ನ ಹಲವು ನಗರಗಳಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ತಮ್ಮ ಪ್ರಾಣ ಉಳಿದರೆ ಸಾಕಪ್ಪ ಅಂತ ಜನರು ಸುರಕ್ಷಿತ ಪ್ರದೇಶಕ್ಕೆ ಹೋಗುತ್ತಿದ್ದಾರೆ. ಅದೆಷ್ಟೋ ಮಂದಿ ಪ್ರವಾಹದಲ್ಲೇ ಕೊಚ್ಚಿಕೊಂಡು ಹೋಗಿದ್ದಾರೆ. ಇನ್ನು ಕಣ್ಣೇದುರೇ ಮನೆ ಕುಸಿದು ಬಿದ್ದರೂ ಏನೂ ಮಾಡಲಾಗದ ಅಸಹಾಯಕ ಪರಿಸ್ಥಿತಿಯಲ್ಲಿದ್ದಾರೆ.
ಕಣ್ಣೆದುರೇ ಭೂಮಿಯಲ್ಲಿ ಹೂತು ಹೋದ ಹುಡುಗಿ
24 ವರ್ಷದ ವೆಂಡೆಲ್ ಪಿಯೊ ಲೌರೆಂಕೊ ಎಂಬಾತ ಪ್ರವಾಹದ ಭೀಕರ ಪರಿಸ್ಥಿತಿಯನ್ನು ವಿವರಿಸಿದ್ದಾನೆ. ಒಂದು ಹುಡುಗಿಯಂತೂ ನನ್ನ ಕಣ್ಣೆದುರೇ ಜೀವಂತವಾಗಿ ಭೂಮಿಯೊಳಗೆ ಹೂತು ಹೋದಳು ಎಂದಿದ್ದಾನೆ.
ನಾನು ಅವಳಿಗೆ ಸಹಾಯ ಮಾಡುವ ಪರಿಸ್ಥಿತಿಯಲ್ಲೇ ಇರಲಿಲ್ಲ. ಯಾಕೆಂದ್ರೆ ನಾನು ಅಪಾಯದ ಸ್ಥಳದಲ್ಲೇ ನಿಂತಿದ್ದೆ. ಹೀಗಾಗಿ ಸುರಕ್ಷಿತ ಸ್ಥಳಕ್ಕೆ ಓಡಿ ಬರುವುದು ನನಗೆ ಮುಖ್ಯವಾಗಿತ್ತು. ಆ ಬಾಲಕಿಯನ್ನು ರಕ್ಷಣೆ ಮಾಡಲು ಆಗದೇ ಇರುವುದಕ್ಕೆ ನನಗೆ ಈಗ ಅಪರಾಧಿ ಭಾವನೆ ಕಾಡುತ್ತಿದೆ ಎಂದಿದ್ದಾನೆ.