ಮೇವು ಹಗರಣ: ಲಾಲೂ ಪ್ರಸಾದ್‌ ಯಾದವ್ ದೋಷಿ-ಫೆ.18ರಂದು ಶಿಕ್ಷೆ ಪ್ರಕಟ

ನವದೆಹಲಿ: ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯವು ಇಂದು ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ) ವರಿಷ್ಠ ಲಾಲೂ ಪ್ರಸಾದ್ ಯಾದವ್ ಅವರನ್ನು 139.35 ಕೋಟಿ ರೂಪಾಯಿಗಳ ದೊರಾಂಡಾ ಖಜಾನೆ ದುರ್ಬಳಕೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ನೀಡಿದೆ.

ಶಿಕ್ಷೆಯ ಪ್ರಮಾಣವನ್ನು ಫೆಬ್ರವರಿ 18ರಂದು ಪ್ರಕಟಿಸಲಾಗುತ್ತದೆ ಎಂದು ತಿಳಿಸಿರುವ ಸಿಬಿಐ ವಕೀಲರೊಬ್ಬರು, ಕಳೆದ ತಿಂಗಳು ವಿಶೇಷ ಸಿಬಿಐ (ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್) ನ್ಯಾಯಾಲಯದ ನ್ಯಾಯಾಧೀಶ ಎಸ್.ಕೆ. ಶಶಿ ಅವರು 99 ಆರೋಪಿಗಳ ವಿರುದ್ಧದ ವಿಚಾರಣೆಯನ್ನು ಪೂರ್ಣಗೊಳಿಸಿದ್ದರು.

ಮೇವು ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಐದನೇ ಮತ್ತು ಅಂತಿಮ ತೀರ್ಪು ನೀಡಿದ ರಾಂಚಿ ವಿಶೇಷ ಸಿಬಿಐ ನ್ಯಾಯಾಲಯ ಇತರ 75 ಆರೋಪಿಗಳೊಂದಿಗೆ ಲಾಲೂ ಪ್ರಸಾದ್‌ ಯಾದವ್ ದೋಷಿ ಎಂದು ತೀರ್ಪು ನೀಡಿದೆ. 6 ಮಹಿಳೆಯರು ಸೇರಿದಂತೆ 24 ಆರೋಪಿಗಳನ್ನು ಸಾಕಷ್ಟು ಸಾಕ್ಷ್ಯಾಧಾರಗಳಿಲ್ಲದ ಕಾರಣ ಖುಲಾಸೆಗೊಂಡಿದ್ದಾರೆ.

ಕಳೆದ ವರ್ಷದ ಫೆಬ್ರವರಿಯಿಂದ ಕೈಗೊಂಡ ವಿಚಾರಣೆಯು ಈಗ ಪೂರ್ಣಗೊಂಡಿದೆ. ಪ್ರಕರಣದಲ್ಲಿನ 170 ಮೂಲ ಆರೋಪಿಗಳ ಪೈಕಿ 55 ಮಂದಿ ಮೃತಪಟ್ಟಿದ್ದಾರೆ. ಏಳು ಜನರು ಸರ್ಕಾರಿ ಸಾಕ್ಷಿಗಳಾಗಿದ್ದಾರೆ. ಇಬ್ಬರು ತಮ್ಮ ವಿರುದ್ಧದ ಆರೋಪಿಗಳನ್ನು ಒಪ್ಪಿಕೊಂಡಿದ್ದಾರೆ ಮತ್ತು ಆರು ಮಂದಿ ತಲೆಮರೆಸಿಕೊಂಡಿದ್ದಾರೆ.

ಲಾಲೂ ಅವರಲ್ಲದೆ ಮಾಜಿ ಸಂಸದ ಜಗದೀಶ್ ಶರ್ಮಾ, ಅಂದಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಅಧ್ಯಕ್ಷ ಧ್ರುವ್ ಭಗತ್, ಪಶು ಸಂಗೋಪನಾ ಇಲಾಖೆ ಕಾರ್ಯದರ್ಶಿ ಬೆಕ್ ಜೂಲಿಯಸ್ ಮತ್ತು ಇದೇ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕೆ.ಎಂ. ಪ್ರಸಾದ್ ಅವರು ಪ್ರಮುಖ ಆರೋಪಿಗಳಾಗಿದ್ದಾರೆ.

ಲಾಲೂ ಪ್ರಸಾದ್‌ ಯಾದವ್‌ 14 ವರ್ಷಗಳ ಸೆರೆವಾಸ ಮತ್ತು 60 ಲಕ್ಷ ರೂ. ಜುಲ್ಮಾನೆ ಶಿಕ್ಷೆಗೆ ಗುರಿಯಾಗಿದ್ದವರು. ಅವರು ಡುಮ್ಕಾ, ದೇವಗಢ ಮತ್ತು ಚೈಬಾಸಾ ಖಜಾನೆಗಳಿಗೆ ಸಂಬಂಧಿಸಿದ ಮೇವು ಹಗರಣಗಳ ನಾಲ್ಕು ಪ್ರಕರಣಗಳಲ್ಲಿ ಜಾಮೀನು ಪಡೆದುಕೊಂಡಿದ್ದಾರೆ. ಬಹುಕೋಟಿ ಮೊತ್ತದ ಮೇವು ಹಗರಣದಲ್ಲಿ ಸಿಬಿಐ 64 ಪ್ರಕರಣಗಳನ್ನು ದಾಖಲಿಸಿದ್ದರೂ ಅವುಗಳ ಪೈಕಿ ಲಾಲೂ ಅವರನ್ನು ಆರು ಪ್ರಕರಣಗಳಲ್ಲಿ ಆರೋಪಿಯನ್ನಾಗಿಸಿದೆ.

ಅವುಗಳಲ್ಲಿ ಐದು ಪ್ರಕರಣಗಳನ್ನು ಬಿಹಾರ ವಿಭಜನೆ ಬಳಿಕ ಜಾರ್ಖಂಡ್‍ಗೆ ವರ್ಗಾಯಿಸಲಾಗಿದೆ ಮತ್ತು ಒಂದು ಪ್ರಕರಣದ ವಿಚಾರಣೆ ಬಿಹಾರದ ಪಾಟ್ನಾದಲ್ಲಿ ನಡೆಯುತ್ತಿದೆ. ಈ ಮುನ್ನ ಲಾಲೂ ಅವರು ಎಲ್ಲ ನಾಲ್ಕು ಪ್ರಕರಣಗಳಲ್ಲಿ ತಪ್ಪಿತಸ್ಥ ಎಂದು ಜಾರ್ಖಂಡ್ ಸಿಬಿಐ ನ್ಯಾಯಾಲಯ ತೀರ್ಪು ನೀಡಿದೆ.

ಐದನೇ ಮೇವು ಹಗರಣದ ಪ್ರಕರಣ 139.5 ಕೋಟಿ ರೂ.ಗಳ ಬೃಹತ್ ಮೊತ್ತವನ್ನು ಒಳಗೊಂಡಿರುವುದರಿಂದ ಅತಿ ಪ್ರಮುಖ ಪ್ರಕರಣವಾಗಿದೆ. 1990-91 ಹಾಗೂ 1995-96ರ ನಡುವೆ ದೊರಾಂಡಾ ಖಜಾನೆಯಿಂದ ನಕಲಿ ದಾಖಲೆಗಳನ್ನು ನೀಡಿ ಹಣ ಪಡೆದುಕೊಂಡ ಅತಿ ದೀರ್ಘ ಅವಧಿಯ ಪ್ರಕರಣವಾಗಿದೆ. ಈ ಪ್ರಕರಣದ 99 ಆರೋಪಿಗಳಲ್ಲಿ ಲಾಲೂ ಅವರೂ ಒಬ್ಬರಾಗಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *