ಹಿಜಾಬ್ ವಿವಾದ: ತುರ್ತು ವಿಚಾರಣೆ ನಡೆಸಲು ಸಾಧ್ಯವಿಲ್ಲವೆಂದ ಸುಪ್ರೀಂ ಕೋರ್ಟ್

ನವದೆಹಲಿ: ಕರ್ನಾಟಕ ರಾಜ್ಯದಲ್ಲಿ ಹಿಜಾಬ್ ಪ್ರಕರಣದ ಬಗ್ಗೆ ಹೈಕೋರ್ಟ್ ವಿಚಾರಣೆ ನಡೆಸುತ್ತಿರುವಾಗ ಅದರಲ್ಲಿ ಮಧ್ಯಪ್ರವೇಶಿಸುವುದು “ತುಂಬಾ ಅವಸರ”ವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ.

ಕರ್ನಾಟಕ ಹೈಕೋರ್ಟ್‌ನಿಂದ ಹಿಜಾಬ್ ವಿವಾದಕ್ಕೆ ಸಂಬಂಧಿಸಿದ ಅರ್ಜಿಗಳನ್ನು ದೇಶದ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಲಾಗಿತ್ತು. ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, ಹಿಜಾಬ್ ವಿವಾದ ಕುರಿತಂತೆ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶ ಹಾಗೂ ತುರ್ತು ವಿಚಾರಣೆಗೆ ಆಗ್ರಹಿಸಿದ್ದರು.

ಬಾಲಕಿಯರ ಮೇಲೆ ಕಲ್ಲೆಸೆಯಲಾಗುತ್ತಿದೆ ಹಾಗೂ ಆ ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದೆ. ಈ ಪ್ರಕರಣವು ದೇಶಾದ್ಯಂತ ಹರಡುತ್ತಿದೆ.  ನ್ಯಾಯಾಲಯವು ತಕ್ಷಣವೇ ಪ್ರಕರಣವನ್ನು ಪಟ್ಟಿ ಮಾಡಬೇಕು ಎಂದು ಹಿರಿಯ ವಕೀಲ ಕಪಿಲ್‌ ಸಿಬಲ್‌ ಮನವಿ ಮಾಡಿದರು.

ಸಧ್ಯ ಕರ್ನಾಟಕ ಹೈಕೋರ್ಟ್‌‌ನಲ್ಲಿರುವ ಪೂರ್ಣ ಪೀಠ ವಿಚಾರಣೆಯನ್ನು ಕೈಗೆತ್ತಿಕೊಳ್ಳುತ್ತಿದೆ. ಈ ಹಂತದಲ್ಲಿ ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ ಎಂದಿರುವ ಸುಪ್ರೀಂ ಕೋರ್ಟ್, ಯಾವುದೇ ನಿರ್ದಿಷ್ಟ ದಿನಾಂಕವನ್ನು ಸೂಚಿಸಲು ನಿರಾಕರಿಸಿದೆ.

ಕರ್ನಾಟಕ ಹೈಕೋರ್ಟ್‌ ನಲ್ಲಿ ವಿಚಾರಣೆ ನಡೆಯುತ್ತಿದೆ. ನಿರ್ಧಾರ ತೆಗೆದುಕೊಳ್ಳಲು ಕನಿಷ್ಠ ಒಂದು ದಿನದ ಸಮಯವನ್ನು ನೀಡಬೇಕು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಹೇಳಿದರು.

”ಹೈಕೋರ್ಟ್ ಸಮಸ್ಯೆಯನ್ನು ಪರಿಶೀಲಿಸಲಿ. ತ್ರಿಸದಸ್ಯ ಪೀಠವು ಇಂದು ಪ್ರಕರಣದ ವಿಚಾರಣೆಯನ್ನು ನಡೆಸಲಿದೆ ಎಂದು ನಮಗೆ ತಿಳಿದಿದೆ. ಅವರಿಗೆ ಕನಿಷ್ಠ ಒಂದು ದಿನದ ಸಮಯವನ್ನು ನೀಡಿ. ನಾವು ಮಧ್ಯಪ್ರವೇಶಿಸಲು ಇದು ತುಂಬಾ ಅವಸರವಾಗುತ್ತದೆ” ಎಂದು ಸಿಬಲ್ ಅವರ ಮನವಿಗೆ ಮುಖ್ಯ ನ್ಯಾಯಮೂರ್ತಿ ಪ್ರತಿಕ್ರಿಯಿಸಿದರು.

ಹೈಕೋರ್ಟ್‌ನ ಪೂರ್ಣ ಪೀಠ ವಿಚಾರಣೆ ನಡೆಸಿ ಆದೇಶವನ್ನು ಹೊರಡಿಸಲಿ. ಅದರ ಬಳಿಕ ಅಗತ್ಯ ಬಿದ್ದರೆ ಮುಂದೆ ನೋಡೋಣ ಎಂದು ನ್ಯಾಯಪೀಠ ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *