ನವದೆಹಲಿ: ರೈಲ್ವೇ ಇಲಾಖೆಯು ನೇಮಕಾತಿ ಪರೀಕ್ಷೆಗಳ ಆಯ್ಕೆ ಪ್ರಕ್ರಿಯೆಯ ಕುರಿತು ಉದ್ಯೋಗ ಆಕಾಂಕ್ಷಿಗಳಿಂದ ಹಿಂಸಾತ್ಮಕ ಪ್ರತಿಭಟನೆಯ ನಂತರ ತಾಂತ್ರಿಕೇತರ ಜನಪ್ರಿಯ ವರ್ಗಗಳ (ಎನ್ಟಿಪಿಸಿ) ಹಾಗೂ ಹಂತ 1ರ ಪರೀಕ್ಷೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ ಎಂದು ರಾಷ್ಟ್ರೀಯ ಸಾರಿಗೆಯ ವಕ್ತಾರರು ತಿಳಿಸಿದ್ದಾರೆ.
ದೆಹಲಿ-ಕೋಲ್ಕತ್ತಾ ಮಾರ್ಗದಲ್ಲಿ ಉದ್ಯೋಗಾಕಾಂಕ್ಷಿಗಳು ನಡೆಸಿದ ರೈಲ್ವೇ ತಡೆಯಿಂದ ಹಲವು ರೈಲುಗಳ ಸಂಚಾರದಲ್ಲಿ ವಿಳಂಬವಾದ ಘಟನೆ ನಡೆದ ಕೆಲವೇ ದಿನಗಳಲ್ಲಿ ಭಾರತೀಯ ರೈಲ್ವೇ ಇಲಾಖೆ ಮಹತ್ವದ ಕ್ರಮ ತೆಗೆದುಕೊಂಡಿದೆ.
ಪರೀಕ್ಷೆಗಳನ್ನು ಸ್ಥಗಿತಗೊಳಿಸಿರುವ ಬಗ್ಗೆ ರೈಲ್ವೆ ವಕ್ತಾರರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. ಪ್ರತಿಭಟನಾನಿರತ ಆಕಾಂಕ್ಷಿಗಳ ಕುಂದುಕೊರತೆಗಳನ್ನು ಪರಿಶೀಲಿಸಲು ಭಾರತೀಯ ರೈಲ್ವೇ ಸಮಿತಿಯನ್ನು ರಚಿಸಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಮಂಗಳವಾರ ಪ್ರತಿಭಟನಾಕಾರರಿಗೆ ರೈಲ್ವೆ ಇಲಾಖೆಯು ಎಚ್ಚರಿಕೆ ನೀಡಿತ್ತು. ರೈಲು ತಡೆ ಸೇರಿದಂತೆ ಯಾವುದೇ ರೀತಿ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದವರು ಶಾಶ್ವತವಾಗಿ ರೈಲ್ವೇ ಇಲಾಖೆ ಸೇರಿದಂತೆ ಯಾವುದೇ ಕೇಂದ್ರ ಸರ್ಕಾರದ ಉದ್ಯೋಗವನ್ನು ಪಡೆಯುವುದರಿಂದ ವಂಚಿತರಾಗಬೇಕಾಗುತ್ತದೆ ಎಂದು ಎಚ್ಚರಿಸಿದೆ.
ವಿವಿಧ ರೈಲ್ವೇ ನೇಮಕಾತಿ ಮಂಡಳಿಗಳ (ಆರ್ಆರ್ಬಿ) ಅಡಿಯಲ್ಲಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರು ಹಾಗೂ ಅನುತ್ತೀರ್ಣರಾದವರ ಕುಂದುಕೊರತೆಗಳನ್ನು ಪರಿಶೀಲಿಸುವ ಸಮಿತಿಯನ್ನು ಕೂಡ ರೈಲ್ವೇ ಇಲಾಖೆ ರಚಿಸಿದೆ. ಉಭಯ ಪಕ್ಷಗಳ ಮಾತುಗಳನ್ನು ಆಲಿಸಿದ ನಂತರ ಸಮಿತಿಯು ರೈಲ್ವೇ ಸಚಿವಾಲಯಕ್ಕೆ ವರದಿ ಸಲ್ಲಿಸಿದೆ.
ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಎನ್ಟಿಪಿಸಿ ರೈಲ್ವೇ ನೇಮಕಾತಿ ಮಂಡಳಿಯ ಎರಡು ಹಂತದ ಪರೀಕ್ಷೆಯ ವಿರುದ್ಧ ಬಿಹಾರದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಶಾಂತವಾಗಿರುವಂತೆ ಒತ್ತಾಯಿಸಿದರು. “ರೈಲ್ವೇ ನಿಮ್ಮ ಆಸ್ತಿ ಎಂದು ನಾನು ವಿದ್ಯಾರ್ಥಿಗಳನ್ನು ವಿನಂತಿಸುತ್ತೇನೆ, ದಯವಿಟ್ಟು ಅದನ್ನು ನಾಶಪಡಿಸಬೇಡಿ. ನಿಮ್ಮ ಸಮಸ್ಯೆಗಳನ್ನು ನಾವು ಪರಿಹರಿಸುತ್ತೇವೆ. ಪರೀಕ್ಷೆಗಳ ಫಲಿತಾಂಶಗಳು ಪಾರದರ್ಶಕ ಮತ್ತು ನ್ಯಾಯೋಚಿತವಾಗಿರುತ್ತದೆ” ಎಂದು ಹೇಳಿದರು.
2 ರಿಂದ 6ನೇ ಹಂತದವರೆಗಿನ ಉದ್ಯೋಗಗಳಿಗಾಗಿ 35,000 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ರೈಲ್ವೆ ಇಲಾಖೆಯು ಪ್ರಯತ್ನಿಸುತ್ತಿದೆ. ಈ ಹಂತದಲ್ಲಿ ಪ್ರಾರಂಭಿಕ ವೇತನವು ತಿಂಗಳಿಗೆ ರೂ 19,900 ರಿಂದ ರೂ 35,400 ರೂಪಾಯಿವರೆಗೆ ಇರುತ್ತದೆ. ಆಯಾ ಉದ್ಯೋಗಗಳಿಗೆ ತಕ್ಕಂತೆ ಕನಿಷ್ಠ ವಿದ್ಯಾರ್ಹತೆ ಭಿನ್ನವಾಗಿರುತ್ತವೆ. ನೇಮಕಾತಿ ಪ್ರಕ್ರಿಯೆಯಲ್ಲಿ ಹೆಚ್ಚಿನ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಕಡಿಮೆ ವಿದ್ಯಾರ್ಹತೆ ಹೊಂದಿರುವ ಉದ್ಯೋಗಗಳಿಗೂ ಸ್ಪರ್ಧಿಸುವುದಕ್ಕೆ ಅನ್ಯಾಯವಾಗಿ ದಾರಿ ಮಾಡಿಕೊಟ್ಟಿದೆ ಎಂಬುದು ಪ್ರತಿಭಟನಾಕಾರರ ಆರೋಪವಾಗಿದೆ.
ಬಿಹಾರದಲ್ಲಿ ರೈಲ್ವೆ ತಡೆ ನಡೆಸಿ ಪ್ರತಿಭಟನೆ
ಬಿಹಾರದಲ್ಲಿ ಸೋಮವಾರ ರೈಲ್ವೇ ನೇಮಕಾತಿ ಮಂಡಳಿಯು ನಡೆಸಿದ ತಾಂತ್ರಿಕವಲ್ಲದ ಜನಪ್ರಿಯ ವರ್ಗಗಳ ಸ್ಪರ್ಧಾತ್ಮಕ ಪರೀಕ್ಷೆ, 2021ರಲ್ಲಿ ಫಲಿತಾಂಶಗಳು ತಪ್ಪಾಗಿ ಬಂದಿವೆ ಎಂದು ಆರೋಪಿಸಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸಿದ್ದರು. ಮಂಗಳವಾರವೂ ಪ್ರತಿಭಟನೆ ಮುಂದುವರಿದಿದ್ದು, ಪಾಟ್ನಾ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು.
ರೈಲುಗಳನ್ನು ತಡೆಯುವ ಪ್ರಯತ್ನದ ಜೊತೆ ಪಾಟ್ನಾದಿಂದ ಪಶ್ಚಿಮಕ್ಕೆ 50 ಕಿಮೀ ದೂರದಲ್ಲಿರುವ ಭೋಜ್ಪುರ ಜಿಲ್ಲೆಯ ಪ್ರಧಾನ ಕಛೇರಿ ಅರಾದಲ್ಲಿ ನಿಂತಿದ್ದ ರೈಲಿನ ಕೋಚ್ಗೆ ಬೆಂಕಿ ಹಚ್ಚಲಾಯಿತು.
ವಿದ್ಯಾರ್ಥಿಗಳ ಮೇಲೆ ಹಲ್ಲೆ
ಮಂಗಳವಾರ ಪಾಟ್ನಾದಲ್ಲಿ ನಿರುದ್ಯೋಗದ ವಿರುದ್ಧ ಪ್ರತಿಭಟನೆ ನಡೆಸಿದ ಆರೋಪದ ಹಿನ್ನೆಲೆ ವಿದ್ಯಾರ್ಥಿಗಳ ಮೇಲೆ ಉತ್ತರ ಪ್ರದೇಶ ಪೊಲೀಸರು ಹಲ್ಲೆ ನಡೆಸಿದ್ದಾರೆ. ಪ್ರಯಾಗ್ ರಾಜ್ನಲ್ಲಿರುವ ಅವರ ಹಾಸ್ಟೆಲ್ ಅನ್ನು ಧ್ವಂಸಗೊಳಿಸಿದ್ದಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ದೂಷಿಸಿದ್ದಾರೆ. ಈ ಘಟನೆಯ ವೀಡಿಯೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಪ್ರಿಯಾಂಕಾ ಗಾಂಧಿ, “ಪ್ರಯಾಗ್ರಾಜ್ನಲ್ಲಿ ಪೊಲೀಸರು ವಿದ್ಯಾರ್ಥಿಗಳನ್ನು ಥಳಿಸುತ್ತಿರುವುದು ಮತ್ತು ಅವರ ಲಾಡ್ಜ್ಗಳು ಮತ್ತು ಹಾಸ್ಟೆಲ್ಗಳನ್ನು ಧ್ವಂಸಗೊಳಿಸುತ್ತಿರುವುದು ಅತ್ಯಂತ ಖಂಡನೀಯ” ಎಂದು ಹೇಳಿದ್ದಾರೆ.