ಬಾಗಲಕೋಟೆ: ಅತೃಪ್ತ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಕಾಂಗ್ರೆಸ್ ಮತ್ತು ನನ್ನ ಸಂಪರ್ಕದಲ್ಲಿರುವುದು ನಿಜ. ಎಷ್ಟು ಜನ ಇದ್ದಾರೆ, ಯಾರ‍್ಯಾರು ಇದ್ದಾರೆ ಎಂದು ಹೇಳುವುದಿಲ್ಲ. ನಮ್ಮ ಪಕ್ಷದ ಸಿದ್ಧಾಂತ, ನಾಯಕತ್ವ ಒಪ್ಪಿಕೊಂಡು ಬರುವುದಾದರೆ ಬರಲಿ, ಸ್ವಾಗತ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನೆರಡು ವಾರಗಳಲ್ಲಿ ಸಚಿವ ಸಂಪುಟ ಪುನರ‍್ರಚನೆಯಾಗದಿದ್ದರೆ ಸಚಿವಾಕಾಂಕ್ಷಿಗಳು ಬಿಜೆಪಿ ಬಿಟ್ಟು ಹೋಗುವುದು ಗ್ಯಾರಂಟಿ. ಕೆಲ ಸಚಿವರು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಜತೆಗೆ ಸಂಪರ್ಕದಲ್ಲಿದ್ದಾರೆ. ಸ್ಥಾನ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ ಹೇಳಿಕೆ ಹಾಗೂ ಸಿದ್ದರಾಮಯ್ಯ ಅವರ ಇಂದಿನ ಹೇಳಿಕೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
ಹಲವು ಕ್ಷೇತ್ರಗಳಿಂದ ಸ್ಪರ್ಧೆಗೆ ಆಹ್ವಾನ
ತಾವು 2023ರ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರ ಅಥವಾ ಬೇರೆ ಕ್ಷೇತ್ರದಿಂದ ಸ್ಪರ್ಧಿಸುತ್ತೀರಾ ಎಂದು ಕೇಳಿದ ಪ್ರಶ್ನೆ ಸಿದ್ದರಾಮಯ್ಯ ಅವರು ಹಲವು ಕ್ಷೇತ್ರಗಳಿಂದ ನನಗೆ ಕರೆಯುತ್ತಿದ್ದಾರೆ. ಬಾದಾಮಿಯಲ್ಲಿ, ಚಾಮರಾಜಪೇಟೆಯಲ್ಲಿ, ಕೋಲಾರ, ಹುಣಸೂರು, ಚಿಕ್ಕನಾಯಕನಹಳ್ಳಿಯಲ್ಲಿ ಕರೆಯುತ್ತಾರೆ, ಅಂತಿಮವಾಗಿ ಹೈಕಮಾಂಡ್ ಎಲ್ಲಿ ನಿಲ್ಲಬೇಕು ಎಂದು ಸೂಚನೆ ನೀಡುತ್ತದೋ ಅಲ್ಲಿಂದ ಸ್ಪರ್ಧಿಸುತ್ತೇನೆ ಎಂದರು.
ಬಾದಾಮಿ ಚಾಲುಕ್ಯರ ಪ್ರಸಿದ್ಧ ದೊರೆ ಇಮ್ಮಡಿ ಪುಲಿಕೇಶಿ ಮತ್ತು ಹನ್ನೆರಡನೆ ಶತಮಾನದ ಸಾಮಾಜಿಕ ಕ್ರಾಂತಿಯ ಹರಿಕಾರ ಜಗಜ್ಯೋತಿ ಬಸವೇಶ್ವರರ ಪ್ರತಿಮೆ ಬಾದಾಮಿ ಪಟ್ಟಣದಲ್ಲಿ ಶೀಘ್ರವೇ ಸ್ಥಾಪನೆಯಾಗಲಿದ್ದು, ಈ ಸಂಬಂಧ ಪ್ರತಿಮೆಗಳ ಕೆತ್ತನೆ ಕೆಲಸ ನಡೆಯುತ್ತಿರುವ ಸ್ಥಳಕ್ಕೆ ಭೇಟಿನೀಡಿದ ಸಿದ್ದರಾಮಯ್ಯ ಕಾರ್ಯಕೆಲಸಗಳನ್ನು ವೀಕ್ಷಣೆ ಮಾಡಿದರು.
ಬಾದಾಮಿಯಲ್ಲಿ ಎಸ್.ಸಿ.ಪಿ / ಟಿ.ಎಸ್.ಪಿ ಯೋಜನೆಯಡಿ ರಸ್ತೆ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಹ ಚಾಲನೆ ನೀಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ
ಕಾಂಗ್ರೆಸ್ಸಿನಲ್ಲಿ ಇಬ್ಬರು ನಾಯಕರ ಮಧ್ಯೆ ಗುದ್ದಾಟವಿದೆ. ನನ್ನ ಜೊತೆ ಅವರು ಇದ್ದಾರೆ ,ನಿನ್ನ ಜೊತೆ ಇನ್ನೊಬ್ಬರು ಇದ್ದಾರೆ ಅಂತ ಹೇಳುತ್ತಿದ್ದಾರೆ. ಬಿಜೆಪಿಯಿಂದ ಯಾರು ಹೋಗುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಬೇಡ ಅಂತ ಹೇಳಿ ಈ ಕಡೆ ಬಂದಿದ್ದಾರೆ, ಆ ಕಡೆ ಹೋಗುವ ಪ್ರಶ್ನೆ ಎಲ್ಲಿಂದ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ನೀವೇ ಮುಂದೆ ನೋಡುತ್ತೀರಿ. ಕೆಲವೇ ದಿನಗಳಲ್ಲಿ ಬಿಜೆಪಿ ಯಾವ ರೀತಿ ಬಲವರ್ಧನೆ ಆಗುತ್ತದೆ ಅಂತ ಕಾಯಿರಿ ಎಂದು ಮುಖ್ಯಮಂತ್ರಿ ತಿರುಗೇಟು ನೀಡಿದ್ದಾರೆ.