ಐಎಎಸ್ ಕೇಡರ್ ನಿಯಮಗಳ ತಿದ್ದುಪಡಿ : ಕೇಂದ್ರ V/s ರಾಜ್ಯಗಳ ಜಟಾಪಟಿ

ಕೇಂದ್ರ ಸರ್ಕಾರ ಐಎಎಸ್ ಕೇಡರ್ ನಿಯಮಗಳಲ್ಲಿ ಬದಲಾವಣೆ ತರಲು ಹೊರಟಿದೆ. ಮೋದಿ ಸರ್ಕಾರ ಕೈಗೊಳ್ಳುತ್ತಿರುವ ಈ ನಿರ್ಧಾರದ ವಿರುದ್ಧ ಹಲವು ರಾಜ್ಯ ಸರ್ಕಾರಗಳು ಪ್ರತಿಭಟನೆಗೆ ಇಳಿದಿವೆ.

ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಕೇಂದ್ರ ಸರ್ಕಾರ ಐಎಎಸ್ (ಕೇಡರ್ ) ನಿಯಮಗಳು 1954ನ್ನು ತಿದ್ದುಪಡಿ ಮಾಡಲು ಬಯಸಿದೆ ಎಂದು ಜನವರಿ 12 ರಂದು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿತ್ತು. ಈ ಬಗ್ಗೆ ಜನವರಿ 25 ರೊಳಗೆ ಅಭಿಪ್ರಾಯ ತಿಳಿಸುವಂತೆ ರಾಜ್ಯಗಳಿಗೆ ಕೇಂದ್ರ ಸೂಚಿಸಿದೆ.

ಕೇರಳ ಎಡರಂಗ ಸರ್ಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಪ್ರಧಾನಿಯವರಿಗೆ ಪತ್ರ ಬರೆದಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಛತ್ತೀಸ್ ಗಢ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಮತ್ತು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್,  ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೂಡಾ ಆಕ್ಷೇಪ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಕರ್ನಾಟಕದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡಾ ಸಿಎಂ ಬೊಮ್ಮಾಯಿ ಅವರಿಗೆ ಪತ್ರ ಬರೆದು, ಕೇಂದ್ರ ಸರ್ಕಾರದ ನಿರ್ಧಾರವನ್ನು ಒಪ್ಪಿಕೊಳ್ಳದಂತೆ ಮನವಿ ಮಾಡಿಕೊಂಡಿದ್ದಾರೆ. ಎನ್‌ಡಿಎ ರಾಜ್ಯವಾದ ಬಿಹಾರ ಮತ್ತು ಬಿಜೆಪಿ ರಾಜ್ಯ ಮಧ್ಯ ಪ್ರದೇಶ ಕೂಡ ಹೊಸ ತಿದ್ದುಪಡಿಗೆ ಆಕ್ಷೇಪಣೆ ಸಲ್ಲಿಸಿದೆ.

ತಿದ್ದುಪಡಿ ನಿಯಮದಲ್ಲೇನಿದೆ?

ನಿಯಮ 6(1)ರಲ್ಲಿ ಬದಲಾವಣೆ ತರಲು ಮುಂದಾಗಿರುವ ಕೇಂದ್ರ ಸರಕಾರ, ರಾಜ್ಯಗಳಿಗೆ ಡಿ.20ರಂದು ಪತ್ರ ಬರೆದಿದೆ. ರಾಜ್ಯಗಳ ಕೇಡರ್‌ನಲ್ಲಿರುವ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ಕಳುಹಿಸುತ್ತಿಲ್ಲ. ಇದರಿಂದ ಕೇಂದ್ರ ಸೇವೆಯಲ್ಲಿ ಅಧಿಕಾರಿಗಳ ಕೊರತೆ ಕಂಡು ಬಂದಿದೆ. ಹೀಗಾಗಿ, ರಾಜ್ಯಗಳು ಅರ್ಹ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ಸಜ್ಜಾಗುವಂತೆ ನೋಡಿಕೊಳ್ಳಬೇಕು. ಎಷ್ಟು ಮಂದಿ ಕೇಂದ್ರ ಸೇವೆಗೆ ಬರಬೇಕು ಎಂಬ ಬಗ್ಗೆ ರಾಜ್ಯ ಸರಕಾರಗಳ ಜತೆ ಚರ್ಚಿಸಿ ಕೇಂದ್ರ ಸರಕಾರವೇ ನಿರ್ಧರಿಸುತ್ತದೆ. ಹಾಗೆಯೇ, ಒಂದು ವೇಳೆ ರಾಜ್ಯಗಳ ಒಪ್ಪಿಗೆ ಇಲ್ಲದೇ ಹೋದರೆ, “ನಿರ್ದಿಷ್ಟ ಸಮಯದಲ್ಲಿ’ ಮಾಹಿತಿ ನೀಡಬೇಕು ಎಂಬ ಹೊಸ ಪದವನ್ನು ಸೇರಿಸಲಾಗಿದೆ.

ಸದ್ಯ ಇರುವ ನಿಯಮವೇನು?

ಐಎಎಸ್‌(ಕೇಡರ್‌)ನಿಯಮ- 1954ರ ನಿಯಮ 6(1)ರಂತೆ, ಸಂಬಂಧಿತ ರಾಜ್ಯ ಸರಕಾರದ ಒಪ್ಪಿಗೆಯ ಮೇರೆಗೆ ಕೇಂದ್ರ ಸರಕಾರ ಐಎಎಸ್‌ ಅಧಿಕಾರಿಗಳನ್ನು, ಕೇಂದ್ರ ಸೇವೆಗೆ ಅಥವಾ ಇತರ ರಾಜ್ಯಗಳು, ಅಥವಾ ಒಂದು ಕಂಪೆನಿ ಅಥವಾ ಸಂಸ್ಥೆ ಅಥವಾ ಸಂಘಟನೆಯ ಸೇವೆಗೆ ನಿಯೋಜಿಸಬಹುದು. ಒಂದು ವೇಳೆ ರಾಜ್ಯಗಳು ಕಳುಹಿಸಲು ನಿರಾಕರಣೆ ಮಾಡಿದಲ್ಲಿ, ಆಗ ಕೇಂದ್ರ ಮತ್ತು ರಾಜ್ಯ ಸರಕಾರಗಳು ಚರ್ಚಿಸಿ ಇದನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಅಲ್ಲದೆ ಈಗ ಪ್ರತೀ ವರ್ಷವೂ ಕೇಂದ್ರ ಸರಕಾರ, ಕೇಂದ್ರ ಸೇವೆಗೆ ಬರಬಹುದಾದಂಥ ಅಧಿಕಾರಿಗಳ ಪಟ್ಟಿ ಮಾಡಿ ರಾಜ್ಯಗಳಿಗೆ ಕಳುಹಿಸುತ್ತದೆ. ಕೆಲವೊಮ್ಮೆ ರಾಜ್ಯಗಳು ಕಳುಹಿಸಲು ಒಪ್ಪುವುದಿಲ್ಲ. ಇಂಥ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಂಘರ್ಷವೇರ್ಪಡುತ್ತದೆ.

ರಾಜ್ಯಗಳ ವಿರೋಧವೇಕೆ?

ಕೇಂದ್ರ ಉದ್ದೇಶಿಸಿರುವ ತಿದ್ದುಪಡಿ ಪ್ರಕಾರ, ರಾಜ್ಯ ಸರ್ಕಾರಗಳ ಹಿಡಿತವನ್ನು ಬೈಪಾಸ್ ಮಾಡುವ ಮೂಲಕ ಯಾವುದೇ ಐಎಎಸ್ ಅಧಿಕಾರಿಯನ್ನು ಡೆಪ್ಯೂಟೇಶನ್ ಮೇಲೆ ಕೇಂದ್ರ ಸರ್ಕಾರ ಕರೆಯಬಹುದಾಗಿದೆ. ಹೊಸ ತಿದ್ದುಪಡಿಯಿಂದಾಗಿ ರಾಜ್ಯಗಳ ಅಧಿಕಾರಕ್ಕೆ ಕೊಕ್ಕೆ ಇಟ್ಟಂತಾಗುತ್ತದೆ. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬರುತ್ತದೆ ಎಂದು ಹಲವು ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿವೆ.

ಈ ಹಿಂದೆಯೂ ಕೇಂದ್ರ ಮತ್ತು ರಾಜ್ಯಗಳ ನಡುವೆ ಡೆಪ್ಯೂಟೇಶನ್ ವಿಚಾರವಾಗಿ ಸಂಘರ್ಷ ನಡೆದಿತ್ತು. ಮೇ 2021ರಲ್ಲಿ ಐಎಎಸ್ ಅಲಾಪನ್ ಬಂಡೋಪಾಧ್ಯಾಯ ಕುರಿತು ಕೇಂದ್ರ ಮತ್ತು ಪಶ್ಚಿಮ ಬಂಗಾಳದ ನಡುವೆ ಸಂಘರ್ಷ ಆಗಿತ್ತು.

ಬಂಗಾಳ ಸರ್ಕಾರ ಡಿಸೆಂಬರ್ 2020ರಲ್ಲಿ ಮೂವರು ಐಪಿಎಸ್ ಅಧಿಕಾರಿಗಳನ್ನು ಕೇಂದ್ರಕ್ಕೆ ಕಳುಹಿಸಲು ಒಪ್ಪಲಿಲ್ಲ. 2001ರಲ್ಲಿ ಅಟಲ್ ಸರ್ಕಾರ ತಮಿಳುನಾಡಿನ ಜಯಲಲಿತಾ ಸರ್ಕಾರದೊಂದಿಗೆ ಐಪಿಎಸ್ ಅಧಿಕಾರಿಗಳ ಬಗ್ಗೆ ವಿವಾದ ಮಾಡಿಕೊಂಡಿತ್ತು.

ಸದ್ಯ ಕೇಂದ್ರ ಸೇವೆಯಲ್ಲಿ ಎಷ್ಟು ಮಂದಿ ಅಧಿಕಾರಿಗಳಿದ್ದಾರೆ?
2021ರ ಜನವರಿ 1ರ ಪ್ರಕಾರ ದೇಶದಲ್ಲಿ ಒಟ್ಟು 5,200 ಐಎಎಸ್‌ ಅಧಿಕಾರಿಗಳಿದ್ದು, ಇವರಲ್ಲಿ 458 ಅಧಿಕಾರಿಗಳು ಕೇಂದ್ರ ಸೇವೆಗೆ ನಿಯೋಜನೆಗೊಂಡಿದ್ದಾರೆ.

ಪಿಣರಾಯಿ ವಿಜಯನ್‌ ಪತ್ರ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಕೇರಳ ಎಡರಂಗ ಸರ್ಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು, ನಿಯಮಗಳಿಗೆ ಬದಲಾವಣೆ ತರುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ. ‘ಕೇಂದ್ರ ಸರ್ಕಾರವು ಜಾರಿ ಮಾಡಲು ಉದ್ದೇಶಿಸಿರುವ ನಿಯಮಗಳಲ್ಲಿ ನಿಯೋಜನೆಯ ವಿಚಾರವೂ ಇದೆ. ಇದು ಐಎಎಸ್​ ಅಧಿಕಾರಿಗಳು ರಾಜ್ಯ ಸರ್ಕಾರದ ನೀತಿಗಳನ್ನು ಜಾರಿ ಮಾಡಲು ಪೂರ್ಣಪ್ರಮಾಣದಲ್ಲಿ ಪರಿಶ್ರಮ ಹಾಕಲು ಹಿಂಜರಿಯುವಂತೆ ಮಾಡುತ್ತವೆ. ಕೇಂದ್ರ ಸರ್ಕಾರದಲ್ಲಿ ಒಂದು ಪಕ್ಷ, ರಾಜ್ಯದಲ್ಲಿ ಮತ್ತೊಂದು ಪಕ್ಷದ ಅಧಿಕಾರ ಇದ್ದ ಸಂದರ್ಭಗಳಲ್ಲಿ ಅಧಿಕಾರಿಗಳಲ್ಲಿ ಹಿಂಜರಿಕೆ ಪ್ರವೃತ್ತಿ ಮತ್ತಷ್ಟು ಹೆಚ್ಚಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಸ್ತಾಪಿತ ನಿಯೋಜನಾ ನಿಯಮಗಳು ಕೇಂದ್ರ ಸರ್ಕಾರದ ಪರವಾಗಿದೆ. ಹೀಗಾಗಿ ಒಕ್ಕೂಟ ವ್ಯವಸ್ಥೆಗೆ ಇದರಿಂದ ಧಕ್ಕೆಯಾಗುತ್ತದೆ. ಈ ತಿದ್ದುಪಡಿ ಪ್ರಸ್ತಾವವನ್ನೇ ಕೈಬಿಡಬೇಕೆಂದು ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಸಂವಿಧಾನವು ಕೆಲ ವಿಚಾರಗಳಲ್ಲಿ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಅಧಿಕಾರ ನೀಡಿರುವುದು ನಿಜ. ಹಾಗೆಂದು ಕೇಂದ್ರ ಸರ್ಕಾರಕ್ಕಿಂತಲೂ ರಾಜ್ಯ ಸರ್ಕಾರಗಳು ಕಡಿಮೆಯಲ್ಲ. ಎರಡೂ ಸರ್ಕಾರಗಳನ್ನು ಜನರೇ ಚುನಾಯಿಸಿರುತ್ತಾರೆ ಎಂದು ಅವರು ನೆನಪಿಸಿದ್ದಾರೆ.

ನಾವು ಪ್ರಖರವಾಗಿರುವ ಪ್ರಜಾಸತ್ತಾತ್ಮಕ ಮತ್ತು ಒಕ್ಕೂಟ ನಿಯಮಗಳನ್ನು ಗುರುತಿಸಿ, ರೂಪಿಸಬೇಕಿದೆ. ಕೇಂದ್ರ ಮತ್ತು ರಾಜ್ಯಗಳಲ್ಲಿ ಎರಡು ಪ್ರತ್ಯೇಕ ರಾಜಕೀಯ ವಿಚಾರಧಾರೆ ಇರುವ ಪಕ್ಷಗಳು ಆಡಳಿತ ನಡೆಸಿದರೂ ದೈನಂದಿನ ಆಡಳಿತಕ್ಕೆ ಧಕ್ಕೆಯಾಗದ ರೀತಿಯಲ್ಲಿ ವ್ಯವಸ್ಥೆ ರೂಪುಗೊಳ್ಳಬೇಕಿದೆ ಎಂದು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಐಎಎಸ್ (ಕೇಡರ್) ನಿಯಮಗಳು, 1954 ಗೆ ತಿದ್ದುಪಡಿಯನ್ನು ಪ್ರಸ್ತಾಪಿಸಿದೆ, ಇದು ರಾಜ್ಯ ಸರ್ಕಾರಗಳ ಅಧಿಕಾರವನ್ನು ತಪ್ಪಿಸಲಿದೆ. ಕೇಂದ್ರ ಸರ್ಕಾರವು ಪ್ರಸ್ತಾಪಿಸಿದ ಕರಡು ತಿದ್ದುಪಡಿಗಳ ಬಗ್ಗೆ ಆಳವಾದ ಕಳವಳವನ್ನು ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, “ಇದು ನಮ್ಮ ಪ್ರಜಾಸತ್ತಾತ್ಮಕ ರಾಜಕೀಯ ವ್ಯವಸ್ಥೆ ಮತ್ತು ರಾಜ್ಯ ಸ್ವಾಯತ್ತತೆಯ ಮೂಲವನ್ನು ನಾಶಪಡಿಸಲಿದೆ” ಎಂದು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *