ಮಂಗಳೂರು: ಈ ವರ್ಷದ ಗಣರಾಜ್ಯೋತ್ಸವ ಪರೇಡ್ನಿಂದ ಸಮಾಜ ಸುಧಾರಕ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ತಿರಸ್ಕಾರ ಮಾಡಿರುವ ಕೇಂದ್ರ ಸರ್ಕಾರದ ನಿಲುವಿನ ವಿರುದ್ಧ ದಕ್ಷಿಣ ಕನ್ನಡ ಮತ್ತು ಉಡುಪಿಯ ಅವಳಿ ಜಿಲ್ಲೆಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಕೇರಳದಲ್ಲಿ ಬಿಜೆಪಿಗೆ ನೆಲೆ ಇಲ್ಲ. ಆದರೆ, ಸುಳ್ಳು ಆರೋಪಗಳನ್ನು ಮಾಡುತ್ತಿರುವ ರಾಜ್ಯದ ಕರಾವಳಿ ಜಿಲ್ಲೆಯ ಬಿಜೆಪಿಯವರು, ಬಿಲ್ಲವರು ಹೆಚ್ಚಿನ ಸಂಖ್ಯೆಯಲ್ಲಿರುವ ಕರಾವಳಿ ಜಿಲ್ಲೆಗಳಲ್ಲಿ ಸ್ತಬ್ಧ ಚಿತ್ರ ತಿರಸ್ಕಾರ ವಿವಾದಗಳನ್ನು ಸೃಷ್ಠಿಸಿದೆ. ಈ ಸಂಬಂಧ ಹಲವಾರು ಬಿಲ್ಲವ ಸಂಘಗಳು ಮತ್ತು ನಾರಾಯಣ ಗುರುಗಳ ಅನುಯಾಯಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ಬಿಜೆಪಿ ಸರ್ಕಾರ ಸಮಾಜ ಸುಧಾರಕನನ್ನು ‘ಅವಮಾನಿಸಿದೆ’ ಎಂದು ಆರೋಪಿಸಿವೆ. ಪ್ರತಿಪಕ್ಷಗಳು ಕೂಡಾ ಆಡಳಿತ ಪಕ್ಷವನ್ನು ಟೀಕಿಸಿವೆ.
ಕೇಂದ್ರವನ್ನು ಕಟುವಾಗಿ ಟೀಕಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಬಿಲ್ಲವ ನಾಯಕ ಬಿ ಜನಾರ್ದನ ಪೂಜಾರಿ ಜನವರಿ 26 ರಂದು ಮಂಗಳೂರಿನಲ್ಲಿ ನಾರಾಯಣ ಗುರುಗಳ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲು ನಿರ್ಧರಿಸಿದ್ದಾರೆ ಮತ್ತು ಅದಕ್ಕಾಗಿ ಅಂದು ಜನರು ಒಗ್ಗೂಡಿ ಪ್ರಾರ್ಥನೆಗಳನ್ನು ನಡೆಸಬೇಕೆಂದು ಕರೆ ನೀಡಿದ್ದಾರೆ.
ಈ ಮಧ್ಯೆ ಪರಿಸ್ಥಿತಿಯನ್ನು ಸುಧಾರಿಸಲು ಬಿಜೆಪಿ ತನ್ನ ಬಿಲ್ಲವ ನಾಯಕರ ಮೂಲಕ ಅಪಪ್ರಚಾರಕ್ಕೆ, ಇಲ್ಲಸಲ್ಲದ ಆರೋಪಗಳನ್ನು ಸೃಷ್ಠಿಸುವಂತೆ ಮಾಡುತ್ತಿದೆ. ಸ್ತಬ್ಧಚಿತ್ರ ತಿರಸ್ಕಾರದ ಹಿಂದೆ ಕೇರಳದ ಸಿಪಿಐ(ಎಂ) ಕಾಂಗ್ರೆಸ್ ಪಿತೂರಿಯಿದೆ ಎಂದು ಇಂಧನ ಸಚಿವ ವಿ ಸುನೀಲ್ ಕುಮಾರ್ ಮತ್ತು ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮತ್ತಿತರ ಬಿಜೆಪಿಯ ಬಿಲ್ಲವ ನಾಯಕರು ಹೇಳುತ್ತಿದ್ದಾರೆ.
ಈ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದ್ದರಲ್ಲದೆ, ಸುಳ್ಳುಗಳನ್ನು ಹೆಣೆದು ನಿಜ ವಿಚಾರಗಳನ್ನು ಮರೆ ಮಾಚಲು ಮುಂದಾಗಿದ್ದಾರೆ. ನಾರಾಯಣ ಗುರುಗಳು ಸ್ಥಾಪಿಸಿದ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೂ ಭೇಟಿ ನೀಡಿ ಸಮಸ್ಯೆಯ ಬಗ್ಗೆ ಸ್ಪಷ್ಟತೆ ಮೂಡಿಸುತ್ತಿದ್ದಾರೆ.